ಬುಧವಾರ, ಜೂನ್ 16, 2021
23 °C

ಕಲಾರಾಧನೆಯ ಕಳಾಮಂದಿರ್

ಆರ್.ಎಸ್. Updated:

ಅಕ್ಷರ ಗಾತ್ರ : | |

ಕಲಾರಾಧನೆಯ ಕಳಾಮಂದಿರ್

ಭಾರತೀಯ ಉಡುಗೆಗಳು ವಿದೇಶದಲ್ಲಿ ಗಮನ ಸೆಳೆಯುವುದು ಹೊಸತೇನಲ್ಲ. ಆದರೆ ಅಮೆರಿಕದಲ್ಲಿ ಯಶಸ್ವಿ ಉದ್ಯಮಿಯಾದ ನಂತರ ಮರಳಿ ದೇಶಕ್ಕೆ ಬಂದು, ಮುಂಚೂಣಿಯಲ್ಲಿ ನಿಲ್ಲುವುದು ಸವಾಲಿನ ಕೆಲಸ. ಒಂದು ವಿದೇಶಿ ಮೋಹ ಬಿಟ್ಟು ಬರುವುದು ಸುಲಭವೇನಲ್ಲ. ಇನ್ನೊಂದು ಎರಡೂ ಕಡೆ ವ್ಯವಹಾರ ನೀಗಿಸುವುದೂ ಸರಳವಲ್ಲ. ಇವೆರಡನ್ನೂ ನಿಭಾಯಿಸಿದ್ದೇ ಸವಾಲಿನ ಕೆಲಸ. ಇವೆರಡನ್ನು ನಿರ್ವಹಿಸುತ್ತಲೇ ಏಷ್ಯಾದ ಮುಂಚೂಣಿಯ ಮಳಿಗೆ ಎಂಬ ಮನ್ನಣೆಗೆ ಪಾತ್ರವಾಗಿದ್ದು ಖುಷಿತಂದಿದೆ. ಇದಿಷ್ಟೂ ನಡೆದಿದ್ದು ಏಳು ವರ್ಷಗಳ ಅವಧಿಯಲ್ಲಿ. ಹೀಗೆ ಸಂತೋಷ ವ್ಯಕ್ತ ಪಡಿಸಿದ್ದು ಎನ್. ಕಲ್ಯಾಣ್; ಕಳಾಮಂದಿರ್‌ನ ಸಿಇಒ. ಏಳು ವರ್ಷಗಳಲ್ಲಿ 14 ವಿಶಾಲ ಮಳಿಗೆಗಳಿಗೆ ಕಳಾಮಂದಿರ್ ವಹಿವಾಟನ್ನು ವಿಸ್ತರಿಸಿದ ಕಲ್ಯಾಣ್ ಅವರಿಗೆ ಇದು ಕೇವಲ ವ್ಯಾಪಾರವಲ್ಲ. ವಹಿವಾಟಲ್ಲ. ಶ್ರದ್ಧೆಯ ಕೆಲಸ. ಯೋಗ ಅಥವಾ ತಪಸ್ಸು ಎಂದರೂ ತಪ್ಪಲ್ಲ!

ಅದಕ್ಕೇ ತಮ್ಮ ಮಳಿಗೆಗೆ `ಕಳಾಮಂದಿರ್~ ಎಂದು ಹೆಸರಿಟ್ಟರು. ಇದು ದೇಗುಲದಷ್ಟೇ ಪವಿತ್ರ ಹಾಗೂ ಪಾರದರ್ಶಕ ಎಂಬುದು ಉದ್ಯಮದ ಮಂತ್ರ. ಅದೇ ಕಾರಣಕ್ಕೇ ಕಳಾಮಂದಿರ್ ಅಲ್ಪಾವಧಿಯಲ್ಲಿಯೇ ಬೆಳೆದು ಬಂದಿದೆ ಎನ್ನುತ್ತಾರೆ ಅವರು.

ಏಷ್ಯನ್ ರಿಟೇಲರ್ಸ್‌ ಅಸೋಸಿಯೇಷನ್ ಏರ್ಪಡಿಸುವ ಸ್ಪರ್ಧೆಯಲ್ಲಿ `ಬೆಸ್ಟ್ ರಿಟೇಲರ್~ ಎಂಬ ಪ್ರಶಸ್ತಿಯನ್ನೂ ಪಡೆದಿದೆ. ಈ ಪ್ರಶಸ್ತಿ ಪಡೆಯುವುದು ಸುಲಭವಾಗಿರಲಿಲ್ಲ. ಇದಕ್ಕೆ ಇದ್ದ ಮಾನದಂಡಗಳೂ ವಿಶೇಷವಾಗಿದ್ದವು. ಬ್ರಾಂಡ್ ಸ್ಥಾಪನೆ, ಜಾಹೀರಾತು, ಗ್ರಾಹಕರ ಸೇವೆ, ಸಮಾಜಮುಖಿ ಕಾರ್ಯಚಟುವಟಿಕೆ ಮುಂತಾದವುಗಳೊಡನೆ ಗುಣಮಟ್ಟವನ್ನೂ ಅಳೆಯಲಾಗುತ್ತದೆ.

ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದಾಗ ಪ್ರಶಸ್ತಿಯ ನಿರೀಕ್ಷೆಗೆ ಬದಲು ಜಾಗತಿಕ ಮಟ್ಟದಲ್ಲಿ ಮೌಲ್ಯಮಾಪನವಾಗಲಿದೆ ಎಂಬುದೇ ಹೆಮ್ಮೆಯ ವಿಷಯವಾಗಿತ್ತು. 36 ರಾಷ್ಟ್ರಗಳು ಪ್ರತಿಯೊಂದು ವಿಭಾಗದಲ್ಲಿಯೂ ಒಂದೇ ಪ್ರವೇಶವನ್ನು ಕಳುಹಿಸಬೇಕಾಗಿತ್ತು.

ಈ ಹಂತದಲ್ಲಿ ಆಯ್ಕೆಯಾದಾಗ ಪ್ರಶಸ್ತಿಯ ಬಗ್ಗೆ ಭರವಸೆ ಹುಟ್ಟಿತು ಎನ್ನುತ್ತಾರೆ ಕಲ್ಯಾಣ್.

ಕಳಾಮಂದಿರ್ ಕೇವಲ ಒಂದು ವರ್ಗದ ಮಳಿಗೆಯಲ್ಲ. ಇಲ್ಲಿ ಎಲ್ಲ ವರ್ಗದವರೂ ಬಂದು ಬಟ್ಟೆ, ಆಭರಣಗಳನ್ನು ಕೊಳ್ಳುತ್ತಾರೆ. ಹಬ್ಬ, ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಒಂದಾದರೂ ಕಳಾಮಂದಿರ್ ಸಂಗ್ರಹದ ಸೀರೆ ತಮಗಿರಲಿ ಎಂದು ಹೆಂಗಳೆಯರು ಬಯಸುವಂತಾಗಿದೆ. ಇದು ಸಹ ಯಶಸ್ಸಿನ ಮಾನದಂಡ ಅಲ್ಲವೇ? ಎಂಬುದು ಕಲ್ಯಾಣ್ ಪ್ರಶ್ನೆ.

2005ರಲ್ಲಿ ಹೈದರಾಬಾದ್‌ನ ಆಮೀರ್‌ಪೇಟ್‌ನಲ್ಲಿ ಮೊದಲ ಮಳಿಗೆ ಆರಂಭಿಸಿದೆವು. ಆಗಲೇ ಸೀರೆ ಅಂಗಡಿ ಎಂದರೆ ಕೇವಲ ಹೆಂಗಳೆಯರ ಶಾಪಿಂಗ್ ಕೇಂದ್ರ ಎಂಬಂತೆ ಆಗಬಾರದು. ಪತಿ ಮಕ್ಕಳನ್ನು ನಿಭಾಯಿಸುತ್ತ, ತನ್ನ ಜೇಬಿಗೆ ಬೀಳುವ ಕತ್ತರಿಯ ಬಗ್ಗೆ ಲೆಕ್ಕಾಚಾರ ಹಾಕುತ್ತ ಅಸಹನೆಯಿಂದ ಕಾಯುವ ಅನುಭವ ಇಲ್ಲಿ ಸಿಗಬಾರದು ಎಂಬುದೇ ಉದ್ದೇಶವಾಗಿತ್ತು. ಆಗಲೇ ಕೌಟುಂಬಿಕ ಖರೀದಿಯ ಪರಿಕಲ್ಪನೆಯನ್ನು ಸಿದ್ಧಪಡಿಸಿದೆವು.

ಒಮ್ಮೆ ಒಂದು ಕುಟುಂಬ ಅಂಗಡಿಯನ್ನು ಪ್ರವೇಶಿಸಿದರೆ ಎಲ್ಲರ ಖರೀದಿಯನ್ನೂ ಮುಗಿಸಲಿ ಎಂಬ ಆಶಯ ಕಳಾಮಂದಿರ್‌ನಲ್ಲಿ ಸಾಕಾರಗೊಂಡಿತು. ಮಹಿಳೆಯರು, ಪುರುಷರು ಮಕ್ಕಳ ಉಡುಗೆ ತೊಡುಗೆಗಳ ಮಾರಾಟದ ವ್ಯವಸ್ಥೆಯನ್ನು ಮಾಡಲಾಯಿತು.

ಹೆಚ್ಚಾಗಿ ಮಧ್ಯಮ ಶ್ರೇಣಿಯ ಸಂಗ್ರಹಕ್ಕೆ ಒತ್ತು ನೀಡಲಾಯಿತು. ಆದರೆ ಉನ್ನತ ಶ್ರೇಣಿಯ ವಸ್ತ್ರವೈಭವಕ್ಕೂ ಯೋಜನೆಯನ್ನು ಸಿದ್ಧಪಡಿಸಲಾಯಿತು. ಇದಕ್ಕಾಗಿ ದೇಶದ ವಿವಿಧ ನೇಕಾರರನ್ನು ಸಂಪರ್ಕಿಸಲಾಯಿತು. ಸ್ವಂತದ ವಿನ್ಯಾಸಕರನ್ನು ನೇಮಿಸಲಾಯಿತು. ಇದೇ ಕಾರಣಕ್ಕೆ ಕಳಾಮಂದಿರ್‌ನಲ್ಲಿ 8 ಸಾವಿರ ರೂಪಾಯಿಗಳಿಂದ ವಧುವಿನ ಸೀರೆ ಸಂಗ್ರಹವು ಆರಂಭವಾಗುತ್ತದೆ. 2 ಲಕ್ಷ ರೂಪಾಯಿಯ ಧಾರೆ ಸೀರೆಯೂ ದೊರೆಯುತ್ತದೆ.

ಅಪ್ಪಟ ರೇಷ್ಮೆ, ಅಪ್ಪಟ ಜರಿ ನಮ್ಮ ವಿಶೇಷ. ಈ ವಿನ್ಯಾಸಗಳು ಎಲ್ಲಿಯೂ ಸಿಗುವುದಿಲ್ಲ ಎಂಬುದೂ ಅಷ್ಟೇ ನಿಜ ಎನ್ನುತ್ತಾರೆ ಅವರು. 

ಇನ್ನು ಕಳಾಮಂದಿರ್ ಕ್ಲಬ್ ಸಹ ಗ್ರಾಹಕರೊಂದಿಗೆ ಮಾರಾಟಗಾರರ ಆಪ್ತ ಸಂಬಂಧವನ್ನು ಬೆಳೆಸುವ ಬಗೆಯಾಗಿದೆ. ಇಲ್ಲಿ ಗ್ರಾಹಕರು ಕಳಾಮಂದಿರ್‌ನಲ್ಲಿ ಖರೀದಿಸಿದ ಪ್ರತಿ ನೂರು ರೂಪಾಯಿಗಳಿಗೆ 4 ಅಂಕಗಳನ್ನು ಗಳಿಸುತ್ತಾರೆ. ಹೀಗೆ ಒಟ್ಟು 400 ಅಂಕಗಳನ್ನು ಗಳಿಸಿದಾಗ ಅವರು ವಿಶೇಷ ರಿಯಾಯಿತಿ, ಮಾರಾಟದಲ್ಲಿ ಮೊದಲ ಆದ್ಯತೆ, ವಿಶೇಷ ಬಹುಮಾನಗಳನ್ನು  ಪಡೆಯುತ್ತಾರೆ. ಅಷ್ಟೇ ಅಲ್ಲ, ಗ್ರಾಹಕರ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವಕ್ಕೆ ವಿಶೇಷ ಉಡುಗೊರೆಗಳನ್ನೂ ಪಡೆಯುತ್ತಾರೆ.

ಇಲ್ಲಿ ನಮ್ಮ ಪ್ರಯತ್ನ ಕೇವಲ ಮಳಿಗೆ ಮತ್ತು ಗ್ರಾಹಕರನ್ನು ಬಂಧಿಸಿಡುವ ತಂತ್ರವಿಲ್ಲ. ಗ್ರಾಹಕರಲ್ಲಿಯೇ ವಿಶೇಷ ಬಾಂಧವ್ಯ ಬೆಸೆಯುವ ಪ್ರಯತ್ನವನ್ನು ಮಾಡಲಾಗುತ್ತದೆ. ದಂಪತಿಗೆ ಊಟದ ವಿಶೇಷ ಆಹ್ವಾನ ನೀಡವುದು, ಸಿನೆಮಾ ಟಿಕೆಟ್‌ಗಳನ್ನು ವಿತರಿಸುವುದು, ಇವುಗಳ ಮೂಲಕ ಅವರಲ್ಲಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ ಕಳಾಮಂದಿರ್ ಎನ್ನುತ್ತಾರೆ ಕಲ್ಯಾಣ್.

ಸದ್ಯ ಬಿಗ್ ಬಜಾರ್, ಟೋಟಲ್ ಮಾಲ್ ಮುಂತಾದೆಡೆ ಹಲವಾರು ಮಳಿಗೆಗಳನ್ನು ಕಳಾಮಂದಿರ್ ಹೊಂದಿದೆ.

ಕೇವಲ ಸೀರೆ, ಶೇರ್ವಾನಿ ಇಂಥ ಸಾಂಪ್ರದಾಯಿಕ ಉಡುಗೆಗಳಷ್ಟೇ ಅಲ್ಲ, ಸಮಕಾಲೀನ ವಸ್ತ್ರಗಳ ಸಂಗ್ರಹವೂ ಇಲ್ಲಿ ದೊರೆಯುತ್ತದೆ. ವಸ್ತ್ರಗಳೊಂದಿಗೆ ವೈಭವ ಹಾಗೂ ಬಾಂಧವ್ಯ ಬೆಸೆದ ನಂತರ ಭರವಸೆಯ ಬೆಸುಗೆಯನ್ನು ಆಭರಣಗಳೊಂದಿಗೂ ತಳಕು ಹಾಕಿದರು. ಹೆಂಗಳೆಯರ ಸಂಪೂರ್ಣ ಶೃಂಗಾರಕ್ಕೆ ಅಗತ್ಯವಿರುವ ಎಲ್ಲ ಪರಿಕರಗಳೂ ಇಲ್ಲಿ ಲಭ್ಯ ಇವೆ ಎನ್ನುತ್ತಾರೆ ಕಲ್ಯಾಣ್.

ಸೀರೆಯೇ ಯಾಕೆ? ಸೀರೆಗಾಗಿ ಇಷ್ಟೆಲ್ಲ ಬ್ರ್ಯಾಂಡುಗಳಿದ್ದಾಗ ಮತ್ತೆ ಸೀರೆಯನ್ನೇ ಯಾಕೆ ಆಯ್ದುಕೊಂಡಿರಿ ಎಂಬ ಪ್ರಶ್ನೆಗೆ ಕಲ್ಯಾಣ್ ಸೀರೆ ಭಾರತೀಯ ನೀರೆಯರ ಬದಕಿನ ಒಂದು ಅವಿಭಾಜ್ಯ ಅಂಗ. ಇದರಲ್ಲಿ ಮಾಡಬಹುದಾದ ಪ್ರಯೋಗಗಳು ನಮ್ಮನ್ನು ಇತ್ತ ಸೆಳೆದವು ಎನ್ನುತ್ತಾರೆ. ತಮ್ಮ  ಜಾಹೀರಾತುಗಳನ್ನು ತಾವೇ ವಿನ್ಯಾಸಗೊಳಿಸುವ ಕಲ್ಯಾಣ್ ಎಂಬಿಎ ಪದವೀಧರರು. ಅವರ ಪರಿಕಲ್ಪನೆಗಳಿಗೆ ಮೂರ್ತ ರೂಪ ನೀಡಲು ತಾವೇ ಶ್ರಮಿಸುತ್ತಾರೆ. ಗ್ಲಾಮರ್‌ಗಿಂತ ಹೆಣ್ತನವೇ ಹೆಚ್ಚು ವಿಜೃಂಭಿಸುವ, ವಸ್ತ್ರ ವೈಭವಕ್ಕಿಂತ ಪರಂಪರೆಯೇ ಚಿತ್ರದಲ್ಲಿ ಕಾಣುವಂತೆ ಮಾಡುವುದು ಅವರಿಗಿಷ್ಟವಂತೆ. ಕಳಾಮಂದಿರ್ 20 ಚಲನಚಿತ್ರಗಳಿಗಾಗಿಯೂ ಸೀರೆ ವಿನ್ಯಾಸಗೊಳಿಸಿದೆ. ಈಗ ಅಂತರರಾಷ್ಟ್ರೀಯ ಖ್ಯಾತಿಯೊಂದಿಗೆ ಮತ್ತೆ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದೆ ಎಂದೂ ಅವರ ಹೇಳುತ್ತಾರೆ. ಎಲ್ಲಿಯೂ ಅಗ್ಗಳಿಕೆ ಹೆಗ್ಗಳಿಕೆ ಎಂಬ ಅಹಂಕಾರದಿಂದ ಹೇಳದೇ ಕಳಾಮಂದಿರ್ ಬಗ್ಗೆ ಅಭಿಮಾನದಿಂದಲೇ ಹೇಳುತ್ತಾರೆ ಕಲ್ಯಾಣ್. ಒಮ್ಮೆ ಕಳಾಮಂದಿರ್‌ಗೆ ಭೇಟಿ ನೀಡಿ ಎಂದು ಆಹ್ವಾನವನ್ನೂ ನೀಡುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.