ಬುಧವಾರ, ಏಪ್ರಿಲ್ 21, 2021
33 °C

ಕಲಾಲಬಂಡಿ:ಅಧ್ಯಕ್ಷ- ಪಿಡಿಒ ಶೀತಲ ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ:  ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಮತ್ತು ಅಭಿವೃದ್ಧಿ ಅಧಿಕಾರಿಯ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು ಇಬ್ಬರ ನಡುವಿನ ಜಗಳದಿಂದಾಗಿ ತಾಲ್ಲೂಕಿನ ಕಲಾಲಬಂಡಿ ಗ್ರಾಮದ ಜನತೆ ಅನೇಕ ತಿಂಗಳುಗಳಿಂದಲೂ ಕುಡಿಯುವ ನೀರಿಗಾಗಿ ತೀವ್ರ ಪರದಾಟ ನಡೆಸಿರುವುದು ಬೆಳಕಿಗೆ ಬಂದಿದೆ.ಕಳೆದ ಎರಡು ವರ್ಷದಿಂದಲೂ ಈ ಗ್ರಾಮದಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ಇದ್ದು ಆಗಾಗ್ಗೆ ಜನ ರೊಚ್ಚಿಗೆದ್ದಾಗ ಕಾಟಾಚಾರದ ಕೆಲಸ ಕೈಗೊಳ್ಳಲಾಗುತ್ತ ಬರಲಾಗಿದೆ. ಆದರೆ ಶಾಶ್ವತ ಪರಿಹಾರಕ್ಕೆ ಯತ್ನಿಸಿಲ್ಲ. ಒಂದು ತಿಂಗಳಿನಿಂದಲೂ ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಚಳಗೇರಿ ಗ್ರಾಮ ಪಂಚಾಯಿತಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದಕ್ಕೆ ಜನ ಅಸಮಾಧಾನಗೊಂಡಿದ್ದಾರೆ.ನಾಲ್ಕು ಕೊಳವೆ ಬಾವಿಗಳಿದ್ದರೂ ಒಂದೇ ಚಾಲೂ ಇದ್ದು ಎರಡು ಸಾವಿರ ಜನಸಂಖ್ಯೆಗೆ ಸಾಲುವುದಿಲ್ಲ, ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷ, ಸದಸ್ಯರಿಗೆ ಹೇಳಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಯಾರಿಂದಲೂ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರಾದ ಶರಣಪ್ಪ ಹಿರೇಮನಿ, ಚಂದಪ್ಪ ಇತರರು ದೂರಿದರು.ಅಲ್ಲದೇ ವಿದ್ಯುತ್ ವ್ಯವಸ್ಥೆ ಇದ್ದೂ ಇಲ್ಲದಂತಿದೆ, ಪರಿವರ್ತಕ ಸುಟ್ಟು ಎಷ್ಟೋ ದಿನಗಳಾದರೂ ಬದಲಿಸಲು ಜೆಸ್ಕಾಂ ಗಮನಹರಿಸಿಲ್ಲ, ಒಂದೆಡೆ ಮಳೆ ಇಲ್ಲ ಇನ್ನೊಂದೆಡೆ ಜನ ಜಾನುವಾರುಗಳು ಸಂಕಷ್ಟದಲ್ಲಿ ತೊಳಲಾಡುತ್ತಿದ್ದರೂ ಕೇಳುವವರಿಲ್ಲ ಎಂದು ಗ್ರಾಮದ ಇತರರು ಗೋಳು ತೋಡಿಕೊಂಡರು.ಸಮನ್ವಯದ ಸಮಸ್ಯೆ: ಸದರಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಮಹಾಂತೇಶ ತುರಾಯಿ ಮತ್ತು ಕೆಲ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ಮಹೇಶಗೌಡ ಅವರ ಮಧ್ಯೆ ಹೊಂದಾಣಿಕೆ ಇಲ್ಲ, ತಮ್ಮ ಪ್ರತಿಷ್ಟೆಯನ್ನೇ ಮುಂದೆ ಮಾಡಿಕೊಂಡು ಅಭಿವೃದ್ಧಿ, ಜನರ ಸಮಸ್ಯೆಯನ್ನು ಕಡೆಗಣಿಸುತ್ತಿದ್ದಾರೆ. ಅಧ್ಯಕ್ಷರ ಮುಂದೆ ಸಮಸ್ಯೆ ಹೇಳಿದರೆ ಪಿಡಿಒನನ್ನು ಕೇಳಿ ಅಂತಾರೆ, ಅವರನ್ನು ಕೇಳಿದರೆ ಅಧ್ಯಕ್ಷರೇ ಅಡ್ಡಗಾಲಾಗಿದ್ದಾರೆ ಎನ್ನುತ್ತಾರೆ ಇವರ ತಿಕ್ಕಾಟದಲ್ಲಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂಬುದನ್ನು ಜನರು ಅಧಿಕಾರಿಗಳ ಬಳಿ ವಿವರಿಸಿದ್ದಾರೆ ಎಂದು ತಿಳಿದಿದೆ.ಅಲ್ಲದೇ ಅಧ್ಯಕ್ಷ ಮತ್ತು ಪಿಡಿಒ ನಡುವಿನ ಶೀತಲ ಸಮರ ಮುಂದುವರೆದಿದ್ದು ಕೆಲ ತಿಂಗಳ ಹಿಂದೆ ಪೊಲೀಸ್‌ಠಾಣೆ ಮೆಟ್ಟಿಲೇರಿದೆ. ಅಧ್ಯಕ್ಷರು ತಮ್ಮನ್ನು ಮಾನಸಿಕ ಹಿಂಸೆಗೊಳಪಡಿಸಿದ್ದಲ್ಲದೇ ಅಭಿವೃದ್ಧಿ ಕೆಲಸಕ್ಕೆ ಪ್ರಮುಖ ಅಡ್ಡಿಯಾಗಿದ್ದಾರೆ ಎಂದು ಜಿ.ಪಂ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದ ಅಭಿವೃದ್ಧಿ ಅಧಿಕಾರಿ ಮಹೇಶಗೌಡ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಧ್ಯಕ್ಷ ಮಹಾಂತೇಶ ತುರಾಯಿ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.     

 

ಚಳಗೇರಿ ಪಿಡಿಒ ಎತ್ತಂಗಡಿ

ಕುಷ್ಟಗಿ ತಾಲ್ಲೂಕು ಚಳಗೇರಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯನ್ನು   ಕ್ಯಾದಿಗುಪ್ಪಾ ಗ್ರಾ.ಪಂಗೆ ಎತ್ತಂಗಡಿ ಮಾಡಿರುವುದು ತಿಳಿದುಬಂದಿದೆ.ಈ ವಿಷಯ ಕುರಿತು ಸುದ್ದಿಗಾರರಿಗೆ ವಿವರಿಸಿದ ಕಾರ್ಯನಿರ್ವಹಣಾಧಿಕಾರಿ ಎಂ.ಜಯಪ್ಪ, ಪಿಡಿಒ ಮತ್ತು ಅಧ್ಯಕ್ಷರ ನಡುವಿನ ಜಗಳ ಇಂದಿನದಲ್ಲ, ಸಮನ್ವಯದ ಕೊರತೆಯಿಂದಾಗಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ, ಜನರ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಮಹೇಶಗೌಡ ಅವರನ್ನು ವರ್ಗ ಮಾಡಿ ಚಳಗೇರಿ ಗ್ರಾ.ಪಂಗೆ ಬಸವರಾಜ ಎಂಬುವವರನ್ನು ನೇಮಕ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

 

ಆದರೆ ತಮ್ಮನ್ನು ಬಲವಂತದಿಂದ ಎತ್ತಂಗಡಿ ಮಾಡುವುದನ್ನು ಒಪ್ಪದ ಪಿಡಿಒ ಮಹೇಶಗೌಡ ಹೊಸದಾಗಿ ಬಂದಿರುವ ಪಿಡಿಒ ಅವರಿಗೆ ಅಧಿಕಾರ ಹಸ್ತಾಂತರಿಸುತ್ತಿಲ್ಲ. ಹಾಗಾಗಿ ಸ್ವಯಂ ಅಧಿಕಾರ ವಹಿಸಿಕೊಳ್ಳುವಂತೆ ಪಿಡಿಒಗೆ ಸೂಚಿಸಲಾಗಿದೆ. ಅಲ್ಲದೇ ಸೋಮವಾರ ಚಾರ್ಜ್ ಕೊಡದಿದ್ದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಮಹೇಶಗೌಡ ಅವರಿಗೆ ಎಚ್ಚರಿಕೆ         ನೀಡಿರುವುದಾಗಿ   ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.