ಕಲಾವಿದನ ಕೈಯಲ್ಲಿ ಅರಳಿದ ದೇವರ ಕಲೆ

ಬುಧವಾರ, ಜೂಲೈ 17, 2019
26 °C

ಕಲಾವಿದನ ಕೈಯಲ್ಲಿ ಅರಳಿದ ದೇವರ ಕಲೆ

Published:
Updated:

ಹೊನ್ನಾಳಿ: ಹೊನ್ನಾಳಿಗೆ ಬರುವ ಕಲಾಸ್ತಕರನ್ನು ಪಟ್ಟಣದ ಟಿ.ಬಿ. ವೃತ್ತದ ಬಳಿ ಇರುವ ಶಾಂತಲಾ ಶಿಲ್ಪ ಕಲಾಮಂದಿರ ಕೈಬೀಸಿ ಕರೆಯುತ್ತದೆ. ಆ ಮಂದಿರವನ್ನು ಜನಾಕರ್ಷಣೆಯ ಕೇಂದ್ರವನ್ನಾಗಿಸಿದ ಕೀರ್ತಿ ಶಿಲ್ಪಿ ಎ. ಷಣ್ಮುಖಾಚಾರ್ಯ ಅವರಿಗೆ ಸಲ್ಲಬೇಕು.ಮೂಲತಃ ತಾಲ್ಲೂಕಿನ ಹಿರೇಬಾಸೂರು ಗ್ರಾಮದಎ. ಷಣ್ಮುಖಾಚಾರ್ಯ ಸಾಸ್ವೆಹಳ್ಳಿಯಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿದರು. ತಮ್ಮ ತಂದೆ ಅನಂತಾಚಾರ್ಯ ಅವರಿಂದ ಕೆತ್ತನೆ ಕಲೆ ಕರಗತ ಮಾಡಿಕೊಂಡ ಇವರು ಮೊದಲು ಗ್ರಾಮದಲ್ಲಿಯೇ ಕೆಲಸ ಮಾಡುತ್ತಿದ್ದರು. 1986ರಲ್ಲಿ ಹೊನ್ನಾಳಿಯಲ್ಲಿ ಶಾಂತಲಾ ಶಿಲ್ಪಕಲಾ ಮಂದಿರ ಸ್ಥಾಪಿಸಿ ಕಾರ್ಯ ಪ್ರವೃತ್ತರಾದರು.  ಕಲ್ಲು ಮತ್ತು ಮರದಲ್ಲಿ ವಿಗ್ರಹಗಳ ಕೆತ್ತನೆ, ಹಿತ್ತಾಳೆ, ಬೆಳ್ಳಿ, ಬಂಗಾರ ಮುಂತಾದ ಲೋಹಗಳಲ್ಲಿ ಮೂರ್ತಿಗಳ ಕುಸುರಿ ಕೆಲಸ, ವಿಗ್ರಹಗಳಿಗೆ ವರ್ಣವಿನ್ಯಾಸ, ಪ್ರಭಾವಳಿ, ಮನೆಗಳ ಕಲ್ಲಿನ ನಾಮಫಲಕ, ಉದ್ಘಾಟನೆ, ಶಂಕುಸ್ಥಾಪನೆ ಮುಂತಾದವುಗಳಿಗೆ ಶಿಲೆಯ ಫಲಕ ಮತ್ತಿತರ ಕೆಲಸಗಳಲ್ಲಿ ತೊಡಗಿದ್ದಾರೆ.ಎರಡು ನೂರಕ್ಕೂ ಹೆಚ್ಚು ಕಲ್ಲು ಹಾಗೂ ಮರದ ವಿಗ್ರಹಗಳು, ನೂರಕ್ಕೂ ಅಧಿಕ ದೇಗುಲದ ಬಾಗಿಲ ಚೌಕಟ್ಟುಗಳು, ಬೆಳ್ಳಿ-ಬಂಗಾರದ ಮಂಟಪಗಳು, ಪಂಚಕಳಸಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಶಿವಮೊಗ್ಗ ಶಾಂತಿನಗರದ ಗಣಪತಿ, ಈಶ್ವರ, ಬಸವಣ್ಣ ದೇವರಮೂರ್ತಿಗಳು, ಶಿವಮೊಗ್ಗ ತಾಲ್ಲೂಕು ಮಡಿಕೆ ಚೀಲೂರಿನ ಪಾರ್ವತಿದೇವಿ ಮೂರ್ತಿಗಳು ಸುಂದರವಾಗಿವೆ.ಕುಂದಾಪುರದ ಚನ್ನಕೇಶವ ದೇಗುಲದ ಬಾಗಿಲಿಗೆ ಹಿತ್ತಾಳೆ ಕವಚ, ಆಂಧ್ರಪ್ರದೇಶದ ರಾಯಚೋಟಿ ವೀರಭದ್ರೇಶ್ವರ ದೇವರಿಗೆ ಬೆಳ್ಳಿ ಕವಚ ನಿರ್ಮಿಸಿದ್ದಾರೆ. ಹರಿಹರ ತಾಲ್ಲೂಕಿನ ಗೋವಿನಹಾಳು ಗ್ರಾಮದ ಗಂಗಾಪರಮೇಶ್ವರಿ ವಿಗ್ರಹ, ಶಿಕಾರಿಪುರ ತಾಲ್ಲೂಕಿನ ಗೊಗ್ಗ ಗ್ರಾಮದ ಎಂಟು ಅಡಿ ಎತ್ತರದ ಆಂಜನೇಯಸ್ವಾಮಿ ಮೂರ್ತಿ, ಗುಡ್ಡದ ತುಮ್ಮಿನಕಟ್ಟೆಯ ಬಸವಣ್ಣ ದೇವರಮೂರ್ತಿ ನಿರ್ಮಿಸಿದ್ದಾರೆ.ಹೊನ್ನಾಳಿಯ ಗುರು ರಾಘವೇಂದ್ರಸ್ವಾಮಿ ದೇಗುಲ, ಹಿರೇಬಾಸೂರು ಆಂಜನೇಯಸ್ವಾಮಿ ದೇಗುಲಗಳ ಬಾಗಿಲುಗಳಿಗೆ ಹಿತ್ತಾಳೆ ಕವಚ ಅಳವಡಿಸಿದ್ದಾರೆ. ಸಾಸ್ವೆಹಳ್ಳಿಯ ಚನ್ನಪ್ಪಗೌಡರ ವಿಗ್ರಹವನ್ನು ಹಿತ್ತಾಳೆ ಲೋಹದಲ್ಲಿ ನಿರ್ಮಿಸಿದ್ದಾರೆ. ಅನೇಕ ಮರದ ದೇವಿ ವಿಗ್ರಹಗಳು ಇವರ ಪ್ರಮುಖವಾದ ಕೆತ್ತನೆಗಳಾಗಿವೆ.ಹರಿಹರ ತಾಲ್ಲೂಕು ಮಲೇಬೆನ್ನೂರಿನ ಬೀರಲಿಂಗೇಶ್ವರಸ್ವಾಮಿಯ ಪಲ್ಲಕ್ಕಿಗೆ ಎ. ಷಣ್ಮುಖಾಚಾರ್ಯ ನಿರ್ಮಿಸಿರುವ ರಾಜಕಳಸ ವಿಶೇಷ ವಿನ್ಯಾಸದ್ದಾಗಿದೆ. ಕಳಸದ ಪೀಠದಲ್ಲಿ ಅಷ್ಟದಿಕ್ಪಾಲಕರು, ಅದರ ಮೇಲೆ ಮೈಸೂರು ಮಹಾರಾಜರ ಗಂಡಭೇರುಂಡ, ನಂತರ ಕರ್ನಾಟಕ ರಾಜ್ಯ ಸರ್ಕಾರದ ಚಿಹ್ನೆ, ಅದರ ಮೇಲೆ ರಾಷ್ಟ್ರಚಿಹ್ನೆಯಾದ ಅಶೋಕ ಚಕ್ರದೊಂದಿಗೆ ಒಂಬತ್ತು ಕಳಸಗಳಿವೆ. ಪ್ರತಿ ಕಳಸವನ್ನು ಆನೆಯ ನೆತ್ತಿಯಲ್ಲೇ ನಿರ್ಮಿಸಲಾಗಿರುವುದು ಇದರ ವಿಶೇಷ.ಇವುಗಳಲ್ಲದೇ ಬೆಳ್ಳಿ-ಬಂಗಾರ ಮುಂತಾದ ಲೋಹಗಳಲ್ಲಿ ನವಿಲು, ಆನೆ ಸೇರಿದಂತೆ ಇತರ ಪ್ರಾಣಿ-ಪಕ್ಷಿಗಳ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಇವರಿಗೆ 2001ರಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ನೀಡಿದೆ. 2003ರಂದು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ಪೀಠಾಧೀಶ್ವರರು `ಶಿಲ್ಪಕಲಾ ರತ್ನ~ ಪದವಿ ನೀಡಿದ್ದಾರೆ.ಹೊನ್ನಾಳಿಯ ರಾಘವೇಂದ್ರ ಸೇವಾ ಟ್ರಸ್ಟ್ `ಅಪ್ರತಿಮ ಕಲಾವಿದ~ ಎಂಬ ಪ್ರಶಸ್ತಿ ನೀಡಿದೆ. ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ `ಶಿಲ್ಪಕಲಾ ಕೋವಿದ~ ಪ್ರಶಸ್ತಿ ನೀಡಿದ್ದಾರೆ. ಎಲೆಮರೆಯ ಕಾಯಿಯಂತೆ ಕಲಾಸೇವೆ ಮಾಡುತ್ತಿರುವಎ. ಷಣ್ಮುಖಾಚಾರ್ಯ ಅವರ ಸೇವೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿ, ಗೌರವಿಸುವ ಕೆಲಸ ಆಗಬೇಕಾಗಿದೆ ಎಂಬುದು ಕಲಾಸಕ್ತರ ಆಗ್ರಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry