ಕಲಾವಿದರಿಗೆ ಪರಿಷತ್ತಿನಿಂದ ಪರಿಹಾರ

7

ಕಲಾವಿದರಿಗೆ ಪರಿಷತ್ತಿನಿಂದ ಪರಿಹಾರ

Published:
Updated:
ಕಲಾವಿದರಿಗೆ ಪರಿಷತ್ತಿನಿಂದ ಪರಿಹಾರ

ಡಾ.ದೇವೇಂದ್ರಕುಮಾರ ಹಕಾರಿ ವೇದಿಕೆ ಕುಷ್ಟಗಿ: ಸಾಹಿತ್ಯ ಸಮ್ಮೇಳನ ಸಂದರ್ಭಗಳಲ್ಲಿ ಅಕಾಲಿಕ ಮರಣ ಹೊಂದುವ ಕಲಾವಿದರಿಗೆ ಪರಿಷತ್‌ವತಿಯಿಂದ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರುಪ್ರಸಾದ್ ಹೇಳಿದರು.ಅವರು ಪಟ್ಟಣದಲ್ಲಿ ಶನಿವಾರ ಎರಡು ದಿನಗಳ 5ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಈಚೆಗೆ ಬೆಂಗಳೂರಿನಲ್ಲಿ ಜರುಗಿದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮೆರವಣಿಗೆ ನಡೆದ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಜಾನಪದ ಕಲಾವಿದ ಶಿವಪ್ಪ ಭಜಂತ್ರಿ ಮೃತಪಟ್ಟಿದ್ದು ನನಗೆ ನೋವುಂಟು ಮಾಡಿತು. ಕಲಾ ಸೇವೆ ಮಾಡುವ ಇಂತಹ ಕಲಾವಿದರು ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಅವರ ಸಹಾಯಕ್ಕೆ ಪರಿಷತ್ತು ಧಾವಿಸಬೇಕು ಎಂಬ ದೃಷ್ಟಿಯಿಂದ, ಕಲಾವಿದರಿಗೆ ಪರಿಹಾರ ಧನ ನೀಡಬೇಕು ಎಂಬ ವಿಷಯವನ್ನು ಸ್ವಾಗತ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿದೆ. ಅದಕ್ಕೆ ಸಮಿತಿ ಸಹಮತ ವ್ಯಕ್ತಪಡಿಸಿತು ಎಂದು ಅವರು ವಿವರಿಸಿದರು.ಈ ಹಿನ್ನೆಲೆಯಲ್ಲಿ ಮೃತ ಕಲಾವಿದ ಶಿವಪ್ಪ ಭಜಂತ್ರಿ ಅವರ ಕುಟುಂಬದ ಸದಸ್ಯರಿಗೆ ಪರಿಷತ್ತು ವತಿಯಿಂದ ಒಂದು ಲಕ್ಷ ರೂಪಾಯಿಗಳ ಚೆಕ್ಕನ್ನು ವಿತರಿಸುವುದಾಗಿ ಅವರು ಹೇಳಿದರಲ್ಲದೇ, ತಮ್ಮ ಭಾಷಣ ಮುಗಿದ ನಂತರ, ಚೆಕ್ಕನ್ನು ಸಚಿವ ಲಕ್ಷ್ಮಣ ಸವದಿ ಅವರಿಂದ ವಿತರಿಸಿದರು. ಪಕ್ಷ ರಾಜಕಾರಣವನ್ನು ಬದಿಗಿಟ್ಟು ಹೇಳುವುದಾದರೆ, ಸದ್ಯ ಪರಿಷತ್ತು ಆರ್ಥಿಕವಾಗಿ ಸದೃಢಗೊಂಡಿದೆ. ರಾಜ್ಯ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಅಲ್ಲದೇ, ಕನ್ನಡ ನುಡಿ ಸೇವೆಗಾಗಿ ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋಟ್ಯಂತರ ರೂಪಾಯಿಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.ಪರಿಷತ್ತಿನ ಕೇಂದ್ರ ಸಮಿತಿ ಆರ್ಥಿಕವಾಗಿ ಚೇತರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಾಹಿತ್ಯ ಸಮ್ಮೇಳನ ಮಾಡುವಂತೆ ಸೂಚನೆ ನೀಡಲಾಗಿದೆ. ಈಗಿರುವ ಅನುದಾನದಲ್ಲಿಯೇ ಈ ತಾಲ್ಲೂಕು ಸಮ್ಮೇಳನಗಳಿಗೆ ಹಣ ಒದಗಿಸುವುದಾಗಿ ಘೋಷಿಸಿದ ಅವರು, ಸ್ಥಳೀಯವಾಗಿ ಸಂಪನ್ಮೂಲ ಕ್ರೋಢಿಕರಿಸಿಕೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಕಿವಿಮಾತು ಹೇಳಿದರು. ನಿಘಂಟಿನ ಮರು ಮುದ್ರಣಕ್ಕೆ ಪರಿಷತ್ತು ಕ್ರಮ ಕೈಗೊಂಡಿದೆ ಎಂದ ಅವರು, ಬರುವ ದಿನಗಳಲ್ಲಿ ಇನ್ನೂ ಹಲವಾರು ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶವಿದೆ ಎಂದು ಹೇಳಿದರು.ಬೆಂಗಳೂರಿನಲ್ಲಿ ಜರುಗಿದ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಗಳಿಸಿತು. ಅದನ್ನು ಮೀರಿಸುವ ರೀತಿಯಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ 78ನೇ ಅಖಿಲ ಭಾರತ ಸಮ್ಮೇಳನವನ್ನು ನಡೆಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಅವರು ವೇದಿಕೆ ಮೇಲೆ ಉಪಸ್ಥಿತರಿದ್ದ ಸಚಿವ ಲಕ್ಷ್ಮಣ ಸವದಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭು ಕಿಡದಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಮೂರ್ತಿ, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ, ಶಾಸಕ ಸಂಗಣ್ಣ ಕರಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಶಾಸಕ ಅಮರೇಗೌಡ ಬಯ್ಯಾಪೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಕುಷ್ಟಗಿ ಪುರಸಭೆ ಅಧ್ಯಕ್ಷೆ ಮೋದಿನಬಿ ಜಂಗ್ಲಿಸಾಬ, ಉಪಾಧ್ಯಕ್ಷೆ ರೂಪಾ ಕೊನಸಾಗರ ಹಾಗೂ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry