ಕಲಾವಿದರ ಅಭಿನಂದನೆಗಾಗಿ ಕಲಾ ಗ್ಯಾಲರಿ ಉದ್ಘಾಟನೆ

ಬೆಂಗಳೂರು: ‘ದಕ್ಷಿಣ ಭಾರತದ ಕಲಾವಿದರಿಗೆ ಕೇಂದ್ರ ಲಲಿತಕಲಾ ಅಕಾಡೆಮಿಯ ವಾರ್ಷಿಕ ಕಲಾ ಪ್ರಶಸ್ತಿ ಬರುವುದು ಅಪರೂಪ. ದೀರ್ಘ ಕಾಲದ ನಂತರ ಈ ಪ್ರಶಸ್ತಿ ಪಡೆದ ರಾಜ್ಯದ ಕಲಾವಿದರನ್ನು ಅಭಿನಂದಿಸುವ ನೆಪದಲ್ಲಿ ಕಲಾ ಗ್ಯಾಲರಿ ಉದ್ಘಾಟಿಸುತ್ತಿರುವುದು ಪ್ರಶಂಸನೀಯ’ ಎಂದು ಹಿರಿಯ ಕಲಾವಿದ ಎಸ್.ಜಿ. ವಾಸುದೇವ್ ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಲಲಿತಕಲಾ ಅಕಾಡೆಮಿಯ ೨೦೧೪ನೇ ಸಾಲಿನ ವಾರ್ಷಿಕ ಕಲಾ ಪ್ರಶಸ್ತಿ ಪಡೆದಿರುವ ರಾಜ್ಯದ ಕಲಾವಿದರನ್ನು ಅಭಿನಂದಿಸುವ ಸಲುವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಭವನದ ‘ವರ್ಣ’ ಕಲಾ ಗ್ಯಾಲರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡ ಭವನದಲ್ಲಿರುವ ಅಕಾಡೆಮಿಗಳ ವಾತಾವರಣ ಕಚೇರಿಯಂತಿರಬಾರದು. ಇಲ್ಲೆಲ್ಲಾ ಕಲೆ ಮತ್ತು ಸಂಸ್ಕೃತಿಯ ಅಂಶಗಳು ಪ್ರತಿಬಿಂಬಿಸಬೇಕು’ ಎಂದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಾ.ಎಂ.ಎಸ್. ಮೂರ್ತಿ, ‘ಸಾಂಪ್ರದಾಯಿಕ ಕಲಾ ಪ್ರಕಾರ ಮತ್ತು ಕಲಾ ಮಾಧ್ಯಮವನ್ನು ಹೊಸ ತಲೆಮಾರಿನ ಕಲಾವಿದರಿಗೆ ದಾಟಿಸುವಲ್ಲಿ ಹಿರಿಯ ಕಲಾವಿದರು ವಿಫಲರಾಗಿದ್ದೇವೆ. ಕಲೆಯ ಪರಿಕಲ್ಪನೆಗಳನ್ನು ಬಳಸಿಕೊಂಡು ಸಾಹಿತ್ಯ ಜನಸಾಮಾನ್ಯರನ್ನು ತಲುಪಿದ್ದರೂ, ಕಲೆ ಮಾತ್ರ ಗ್ಯಾಲರಿಗಳಲ್ಲೇ ಉಳಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ತಾವು ಏನನ್ನು, ಯಾವ ಕಾರಣದಿಂದ ಮತ್ತು ಯಾರಿಗಾಗಿ ಕಲಾಕೃತಿಗಳನ್ನು ರಚಿಸುತ್ತಿದ್ದೇವೆ ಎಂದು ಕಲಾವಿದರು ಚಿಂತಿಸಿದಾಗ ಮಾತ್ರ ಕಲೆಯನ್ನು ಜನರ ಬಳಿ ಕೊಂಡೊಯ್ಯಲು ಸಾಧ್ಯ’ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ, ‘ಕನ್ನಡ ಭವನದ ಒಳ ಆವರಣವನ್ನು ಚಿತ್ರ ಕಲಾಕೃತಿಗಳಿಂದ ಅಲಂಕರಿಸುವ ಮತ್ತು ಆವರಣದಲ್ಲಿ ಸದಾ ಸಂಗೀತ ಕೇಳಿಸುವ ವ್ಯವಸ್ಥೆ ಮಾಡಲಾಗುತ್ತದೆ’ ಎಂದರು.
ಕೇಂದ್ರ ಲಲಿತಕಲಾ ಅಕಾಡೆಮಿಯ ೨೦೧೪ನೇ ಸಾಲಿನ ವಾರ್ಷಿಕ ಕಲಾ ಪ್ರಶಸ್ತಿ ವಿಜೇತ ಕಲಾವಿದರಾದ ಮಹಮ್ಮದ್ ಅಯಾಜುದ್ದಿನ್ ಪಟೇಲ್, ಶ್ರೀನಿವಾಸ ರೆಡ್ಡಿ.ಎನ್ ಮತ್ತು ಸಂಜೀವ್ ರಾವ್ ಗುಪ್ತ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ವರ್ಣ ಗ್ಯಾಲರಿಯಲ್ಲಿ ಏರ್ಪಡಿಸಿರುವ ಈ ಮೂವರು ಕಲಾವಿದರ ಕಲಾಕೃತಿಗಳ ಪ್ರದರ್ಶನವು ಮೇ ೨೬ರವರೆಗೆ ನಡೆಯಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.