ಕಲಾವಿದರ ಕೊರತೆ ಇಲ್ಲ; ಹೆಚ್ಚಿನ ಅನುದಾನ ನೀಡಿ

7

ಕಲಾವಿದರ ಕೊರತೆ ಇಲ್ಲ; ಹೆಚ್ಚಿನ ಅನುದಾನ ನೀಡಿ

Published:
Updated:

ಶಿವಮೊಗ್ಗ: ಮೈಸೂರು ರಂಗಾಯಣವನ್ನು ವಿಭಜನೆ ಮಾಡುವ ಸರ್ಕಾರದ ನಿರ್ಧಾರಕ್ಕೆ ರಂಗಕರ್ಮಿಗಳ ಕಾಶಿ `ಶಿವಮೊಗ್ಗ~ದಲ್ಲಿ ಪ್ರಬಲ ವಿರೋಧಗಳು ಎದ್ದಿವೆ.ಇಲ್ಲಿನ ರಂಗಕಲಾವಿದರು, ಕಲಾವಿದರ ಒಕ್ಕೂಟಗಳು, ಮೈಸೂರು ರಂಗಾಯಣದ ಹಾಲಿ-ಮಾಜಿ ನಿರ್ದೇಶಕರು, ಶಿವಮೊಗ್ಗ ರಂಗಾಯಣದ ನಿರ್ದೇಶಕರು, ಇದು ವಿವೇಕದ ಕ್ರಮ ಅಲ್ಲ ಎಂದು ಟೀಕಿಸಿದ್ದಾರೆ. ಶಿವಮೊಗ್ಗದಲ್ಲೇ ಅದ್ಭುತ ಸಾಮರ್ಥ್ಯದ ಕಲಾವಿದರಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯಲ್ಲಿ ತರಬೇತಿ ಪಡೆದವರು ಇದ್ದಾರೆ. ನೀನಾಸಂನಲ್ಲಿ ಪಳಗಿದ ಪ್ರತಿಭೆಗಳಿವೆ. ಹೀಗಿದ್ದೂ ಮೈಸೂರಿನ ರಂಗಾಯಣದಲ್ಲಿ ನಿವೃತ್ತಿ ಅಂಚಿನಲ್ಲಿರುವ ಕಲಾವಿದರನ್ನು ಕರೆದು ತರುವಲ್ಲಿ ಯಾವ ಆದರ್ಶವಿದೆ? ಎಂದು ಪ್ರಶ್ನಿಸುತ್ತಿದ್ದಾರೆ.ಶಿವಮೊಗ್ಗದಲ್ಲಿ ರಂಗಾಯಣ ಸ್ಥಾಪನೆಯಾಗಿ ಒಂದು ವರ್ಷ ಸಮೀಪಿಸುತ್ತಿದೆ. ಆದರೆ, ಇದುವರೆಗೂ ರಂಗಾಯಣಕ್ಕೆ ನಿರ್ದಿಷ್ಟ ಕಚೇರಿ ಇಲ್ಲ. ರಂಗತಾಲೀಮಿಗೆ ರಂಗಮಂದಿರ ಇಲ್ಲ. ಸಿಬ್ಬಂದಿ ನೇಮಕವಾಗಿಲ್ಲ. ಅಗತ್ಯವಾದ ಜಾಗ ಮಂಜೂರು ಮಾಡಿಲ್ಲ. ಈ ಇಲ್ಲಗಳ ಮಧ್ಯೆ ಮೈಸೂರಿನಿಂದ ಬರುವ ಕಲಾವಿದರಿಗೆ ಇಲ್ಲೇನು ಕೆಲಸ ಎಂಬುದು ರಂಗಾಸಕ್ತರನ್ನು ಚಿಂತೆಗೀಡು ಮಾಡಿದೆ. 23 ವರ್ಷ ಸುದೀರ್ಘ ಅನುಭವ ಇರುವ ರಂಗಾಯಣ ಕಲಾವಿದರಿಗೆ ಶಿವಮೊಗ್ಗದಲ್ಲಿ ಯಾವ ಕೆಲಸ ಕೊಡಬೇಕು? ಸದ್ಯದ ಪರಿಸ್ಥಿತಿಯಲ್ಲಿ ಅವರನ್ನು ಕುವೆಂಪು ರಂಗಮಂದಿರದ ಕಟ್ಟೆ ಮೇಲೆ ಕೂರಿಸಬೇಕೆ ಹೊರತು, ಬೇರೆ ವ್ಯವಸ್ಥೆ ಇಲ್ಲ. ಸರ್ಕಾರ ಇಲ್ಲಿನ ರಂಗಾಯಣಕ್ಕೆ ಮೂಲಸೌಕರ್ಯ ನೀಡುವ ಬಗ್ಗೆ ಮೊದಲು ಯೋಚಿಸಬೇಕು. ಕಲಾವಿದರ ವರ್ಗಾವಣೆ ಮಾಡುವುದರಿಂದ ರಂಗಭೂಮಿ ಕಟ್ಟಲು ಸಾಧ್ಯವಿಲ್ಲ ಎನ್ನುತ್ತಾರೆ ಶಿವಮೊಗ್ಗ ರಂಗಾಯಣ ನಿರ್ದೇಶಕ ಹೊ.ನ. ಸತ್ಯ. ಈ ಕಲಾವಿದರ ಅನುಭವ ಬಳಸಿಕೊಳ್ಳಬೇಕು ಎನ್ನುವುದಕ್ಕೆ ಅರ್ಥವಿದೆ.ಇದು ಬಿ.ವಿ. ಕಾರಂತರ ಆಸೆ ಕೂಡ. ಆದರೆ, ಇದಕ್ಕೆ ವರ್ಗಾವಣೆ ಪರಿಹಾರ ಅಲ್ಲ. ಈ ಕಲಾವಿದರನ್ನು ಬೇಕಾದರೆ ಅತಿಥಿ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಬಳಸಿಕೊಳ್ಳುವುದಕ್ಕೆ ಯಾವುದೇ ಅಡ್ಡಿಗಳಿಲ್ಲ. ಇಲ್ಲಿರುವ ಎಲ್ಲಾ ಕಲಾವಿದರು ಮುಂದಿನ 10 ವರ್ಷದ ಒಳಗೆ ನಿವೃತ್ತಿಯಾಗುತ್ತಾರೆ. ಇಂತಹದೊಂದು ರಂಗ ತಂಡ ಇಡೀ ಭಾರತದಲ್ಲಿ ಸಿಗುವುದಿಲ್ಲ.ಇವರನ್ನು ಇಂತಹ ಸಮಯದಲ್ಲಿ ದಿಕ್ಕಾಪಾಲು ಮಾಡುವುದರಿಂದ ಉದ್ದೇಶಿತ ಸಾಧನೆ ಆಗುವುದಿಲ್ಲ ಎಂಬ ಸ್ಪಷ್ಟ ಅಭಿಪ್ರಾಯ ಮೈಸೂರು ರಂಗಾಯಣ ನಿರ್ದೇಶಕ ಡಾ.ಬಿ.ವಿ. ರಾಜಾರಾಂ ಅವರದ್ದು.ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಪ್ರಸನ್ನ ಈ ಹಿಂದೆ ವ್ಯಕ್ತಪಡಿಸಿದ ಅಭಿಪ್ರಾಯವನ್ನೇ ಮತ್ತೊಬ್ಬ ಮಾಜಿ ನಿರ್ದೇಶಕ ಚಿದಂಬರರಾವ್ ಜಂಬೆ ವ್ಯಕ್ತಪಡಿಸಿದ್ದಾರೆ.ಇನ್ನೆರಡು ವರ್ಷದಲ್ಲಿ ರಂಗಾಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ. ಇಂತಹ ಸಂದರ್ಭದಲ್ಲಿ ರಂಗಾಯಣ ಒಡೆಯುವ ಕ್ರಮ ವಿವೇಕವಲ್ಲ. ತಲಾ 6 ಕಲಾವಿದರನ್ನು ಹಂಚಿದರೆ, ಮೊದಲಿಗೆ ಮೈಸೂರು ಬರಡಾಗುತ್ತದೆ. ತದನಂತರ ಶಿವಮೊಗ್ಗ, ಧಾರವಾಡ ರಂಗಾಯಣಗಳು ಸೃಜನಶೀಲತೆ ಕಳೆದುಕೊಳ್ಳುತ್ತವೆ. ಕಲಾವಿದರ ಮೇಲೆ ಸರ್ಕಾರಕ್ಕೆ ಏಕೆ ಸೇಡು ಎಂಬ ಪ್ರಶ್ನೆ ಜಂಬೆ ಅವರದ್ದು.`ರಂಗಾಯಣದಲ್ಲಿ 23 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಒಬ್ಬೊಬ್ಬರೂ ಒಂದೊಂದು ರಂಗಾಯಣ ನಿರ್ದೇಶಕರಾಗುವ ಅರ್ಹತೆ ಹೊಂದಿದ್ದೇವೆ. ಈ ಹಿಂದೆ ಶಿವಮೊಗ್ಗ, ಧಾರವಾಡ ರಂಗಾಯಣಗಳನ್ನು ಸ್ಥಾಪಿಸುವ ಸರ್ಕಾರ ನಮ್ಮ ಅಭಿಪ್ರಾಯಗಳನ್ನು ಕೇಳಲಿಲ್ಲ. ಈಗಲೂ ಅಷ್ಟೇ.ನಮಗೆ ಯಾವುದಾದರೂ ನಿರ್ದಿಷ್ಟ ಯೋಜನೆ ನೀಡಿದರೆ  ಎಲ್ಲಿಗೆ ಬೇಕಾದರೂ ಹೋಗಿ ಅಚ್ಚುಕಟ್ಟಾಗಿ ಮಾಡಿಕೊಡುತ್ತೇವೆ. ಶಾಶ್ವತವಾಗಿ ವರ್ಗ ಮಾಡಬೇಕೆಂಬ ಸರ್ಕಾರದ ನಿರ್ಧಾರ ಸರಿ ಅಲ್ಲ~ ಎನ್ನುತ್ತಾರೆ ಮೈಸೂರು ರಂಗಾಯಣ ರಂಗಶಾಲೆ ಸಂಯೋಜಕ ಮಂಜುನಾಥ ಬೆಳಕೆರೆ.ಎನ್‌ಎಸ್‌ಡಿ, ನೀನಾಸಂ ತರಬೇತಿ ಪಡೆದ ನಮ್ಮ ಜಿಲ್ಲೆಯವರಿಗೇ ಸರಿಯಾದ ಕೆಲಸ ಸಿಗುತ್ತಿಲ್ಲ. ಅಂತಹದರಲ್ಲಿ ನಿವೃತ್ತಿ ಅಂಚಿನಲ್ಲಿರುವ ಕಲಾವಿದರು ಇಲ್ಲಿಗೆ ಬಂದರೆ, ಅವರು ಇಲ್ಲಿನ ವಾತಾವರಣಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದರ ಒಳಗೇ ನಿವೃತ್ತರಾಗುತ್ತಾರೆ. ಸ್ಥಳೀಯ ಪ್ರತಿಭೆಗಳೊಂದಿಗೆ ರಂಗಾಯಣ ಕಟ್ಟುವ ಕೆಲಸ ಆಗಬೇಕು ಎಂಬ ಅಭಿಪ್ರಾಯ ಸ್ಥಳೀಯ ರಂಗಕರ್ಮಿ ಡಾ.ಸಾಸ್ವೆಹಳ್ಳಿ ಸತೀಶ್ ಅವರದ್ದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry