ಸೋಮವಾರ, ಜೂನ್ 21, 2021
29 °C

ಕಲಾವಿದ ಕುಂಚವನ್ನು ಬಿಟ್ಟು ಹೊರ ನಡೆದಾಗ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸಂಗೀತಗಾರ ವಿದಾಯ ಹೇಳುವುದಿಲ್ಲ. ಬದಲಾಗಿ ತನ್ನೊಳಗಿನ ಸಂಗೀತ ಖಾಲಿಯಾದಾಗ ಹಾಡುವುದನ್ನೇ ನಿಲ್ಲಿಸಿಬಿಡುತ್ತಾನೆ.~ಕಲಾವಿದೆಯ ಮಗನಾಗಿ ಜನಿಸಿ ಶ್ರೇಷ್ಠ ಆಟಗಾರ ಎನಿಸಿದ ರಾಹುಲ್ ದ್ರಾವಿಡ್ ಕೂಡ ಒಬ್ಬ ಕ್ರಿಕೆಟ್ ಕಲಾವಿದ. ಅವರ ಬ್ಯಾಟಿಂಗ್ ಶೈಲಿಯೇ ಅದಕ್ಕೆ ಸಾಕ್ಷಿ. ಆದರೆ ಅವರೊಳಗಿನ ಆ ಆಟದ ಶಕ್ತಿ ಈಗ ಮುಗಿದು ಹೋಗಿದೆ. ಈ ಮೂಲಕ ಕ್ರಿಕೆಟ್‌ನ ಮಹತ್ವದ ಅಧ್ಯಾಯವೊಂದಕ್ಕೆ ತೆರೆ ಬಿದ್ದಿದೆ.`ಎಲ್ಲಾ ಹುಡುಗರಂತೆ ನನಗಿದ್ದ ಒಂದು ಕನಸೆಂದರೆ ಭಾರತ ತಂಡ ಪ್ರತಿನಿಧಿಸಬೇಕು ಎಂಬುದು. ಮೊದಲ ಟೆಸ್ಟ್ ಆಡಿ 16 ಸಂವತ್ಸರಗಳು ಉರುಳಿ ಹೋಗಿವೆ. ಆದರೆ ನನ್ನ ಜೀವನ ಪಯಣ ಇಲ್ಲಿಗೆ ಬಂದು ತಲುಪುತ್ತೆ ಎಂದು ಯಾವತ್ತೂ ಯೋಚಿಸಿರಲಿಲ್ಲ. ನಾನೀಗ ಅಂತರಾಷ್ಟ್ರೀಯ ಹಾಗೂ ದೇಸಿ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ. ಇದು ನನ್ನ ಜೀವನದ ಮತ್ತೊಂದು ಕಠಿಣ ನಿರ್ಧಾರ~  -ದೇಶದ ನಾನಾ ಭಾಗಗಳಿಂದ ಬಂದಿದ್ದ ಕ್ರೀಡಾ ಪತ್ರಕರ್ತರಿಂದ ಕಿಕ್ಕಿರಿದು ತುಂಬಿದ್ದ ಕೆಎಸ್‌ಸಿಎ ಸಭಾಂಗಣದಲ್ಲಿ ಶುಕ್ರವಾರ ದ್ರಾವಿಡ್ ಭಾವುಕರಾಗಿ ಈ ಮಾತು ಹೇಳುತ್ತಿದ್ದಂತೆ ಒಂದು ಕ್ಷಣ ಮೌನ. ಕ್ರಿಕೆಟ್ ಜಗತ್ತು ಏನನ್ನೋ ಕಳೆದುಕೊಂಡ ಭಾವ. ಈ ಮೂಲಕ ಟೆಸ್ಟ್‌ಗೆ ಹೊಸ ಭಾಷ್ಯ ಬರೆದ ಆಟಗಾರನ ಕ್ರಿಕೆಟ್ ಬದುಕು ತವರಿನ ಅಂಗಳದಲ್ಲಿಯೇ ಅಂತ್ಯಗೊಂಡಿತು. ಗೋಡೆಯ ಗುಟ್ಟು ರಟ್ಟು ಮಾಡಿದ ದ್ರಾವಿಡ್...
ನೀವು ನನ್ನನ್ನು ಏಕೆ ಗೋಡೆ ಎಂದು ಕರೆಯುತ್ತೀರಿ ಎಂಬುದು ಗೊತ್ತು. ಅಕಸ್ಮಾತ್ ನಾನು ಚೆನ್ನಾಗಿ ಆಡದಿದ್ದಾಗ ಗೋಡೆ ಅಡಿಪಾಯ ಚೆನ್ನಾಗಿಲ್ಲ ಎಂದು ಬರೆಯಬಹುದು. ಗೋಡೆ ಬಿರುಕು ಬಿಟ್ಟಿದೆ ಎಂದು ಅದನ್ನು ಉರುಳಿಸಲೂಬಹುದು ಎಂದರು ದ್ರಾವಿಡ್.
ರಾಹುಲ್ ವಿದಾಯ ಹೇಳಬೇಡಿ...
ದ್ರಾವಿಡ್ ಅಭಿಮಾನಿಗಳು ರಾಜ್ಯ ಕ್ರಿಕೆಟ್ ಸಂಸ್ಥೆಯ ಮುಖ್ಯದ್ವಾರದ ಬಳಿ ಪೋಸ್ಟರ್ ಪ್ರದರ್ಶಿಸುತ್ತಾ ತಮ್ಮ ಅಭಿಮಾನ ವ್ಯಕ್ತಪಡಿಸಿದರು.`ದ್ರಾವಿಡ್ ಇಷ್ಟು ಬೇಗ ವಿದಾಯ ಹೇಳಬಾರದಿತ್ತು. ವಿದಾಯ ಹೇಳಲು ಬಿಸಿಸಿಐ ಒತ್ತಡ ಹೇರುತ್ತಿದೆ. ಇದಕ್ಕೆ ನಮ್ಮ ವಿರೋಧವಿದೆ. ಗೋಡೆ ಕಟ್ಟುವಾಗ ಯಾರೂ ಅವರನ್ನು ಹೊಗಳಲಿಲ್ಲ. ಈಗ ಗೋಡೆ ಬೀಳುವ ಹಂತದಲ್ಲಿದೆ ಎಂದಾಗ ಎಲ್ಲಾ ಕಲ್ಲು ಹೊಡೆಯಲು ಪ್ರಯತ್ನಿಸುತ್ತಿದ್ದಾರೆ~ ಎಂದು ತುಮಕೂರಿನಿಂದ ಬಂದಿದ್ದ ಆದರ್ಶ `ಪ್ರಜಾವಾಣಿ~ಗೆ ಹೇಳಿದರು.

 `ಆಸ್ಟ್ರೇಲಿಯಾದಲ್ಲಿ ಆಡಿದ ಕಳಪೆ ಆಟ ನನ್ನ ಈ ನಿರ್ಧಾರಕ್ಕೆ ಖಂಡಿತ ಕಾರಣವಲ್ಲ. ಒಂದು ವರ್ಷದಿಂದಲೇ ಈ ಬಗ್ಗೆ ನಾನು ಯೋಚಿಸುತ್ತಿದ್ದೆ. ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ನಾನು ಇದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ. ನನ್ನ ಈ ತೀರ್ಮಾನಕ್ಕೆ ಬೇರೆ ಯಾವುದೇ ಕಾರಣ ಹುಡುಕಬೇಡಿ~ ಎಂದು ದ್ರಾವಿಡ್ ಗದ್ಗದಿತ ಧ್ವನಿಯಲ್ಲಿ ನುಡಿದರು.ಟೆಸ್ಟ್‌ನಲ್ಲಿ ಸಚಿನ್ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ದ್ರಾವಿಡ್. ಅವರ‌್ಯಾಕೆ ಶ್ರೇಷ್ಠ ಆಟಗಾರ ಎಂಬುದಕ್ಕೆ ಇದು ಸಾಕ್ಷಿ. ವಿಶೇಷವೆಂದರೆ ಅವರಷ್ಟು ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್ ಮತ್ತೊಬ್ಬರಿಲ್ಲ (31,258 ಎಸೆತ). ಎದುರಾಳಿ ಬೌಲರ್‌ಗಳನ್ನು ರಾಹುಲ್‌ರಂತೆ ಸತಾಯಿಸಿದ ಬೇರೆ ಬ್ಯಾಟ್ಸ್‌ಮನ್‌ಗಳು ಇಲ್ಲವೇ ಇಲ್ಲ. ತೆಂಡೂಲ್ಕರ್ ಅವರಂತೆ ಪ್ರಕಾಶಮಾನವಾಗಿ ಹೊಳೆಯದಿದ್ದರೂ ಚಂದಿರನಂತೆ ತಣ್ಣಗಿದ್ದು ಹಿತವೆನಿಸುವ ಬೆಳದಿಂಗಳಾಗಿ ತಂಡಕ್ಕೆ ನೆರವಾಗಿದ್ದಾರೆ.`ಕನಸನ್ನು ಒಬ್ಬನೇ ಬೆನ್ನಟ್ಟಲು ಸಾಧ್ಯವಿಲ್ಲ. ಪೋಷಕರು, ಸಹೋದರರು, ಪತ್ನಿ, ಕೋಚ್‌ಗಳು, ಸಹ ಆಟಗಾರರು, ಅಭಿಮಾನಿಗಳು ಹಾಗೂ ಕ್ರಿಕೆಟ್‌ಗಾಗಿ ದುಡಿದ ಪ್ರತಿಯೊಬ್ಬರೂ ನನ್ನ ಯಶಸ್ಸಿನಲ್ಲಿ ಪಾಲುದಾರರು~ ಎಂದೂ ಅವರು ಹೇಳಿದರು.`ನನ್ನ ಈ ಕ್ರಿಕೆಟ್‌ನಿಂದಾಗಿ ಪತ್ನಿ ತುಂಬಾ ತ್ಯಾಗ ಮಾಡಬೇಕಾಯಿತು. ತನ್ನ ಕೆಲಸವನ್ನು ಬದಿಗೊತ್ತಬೇಕಾಯಿತು. ಪ್ರವಾಸಗಳಲ್ಲಿ ನಾನು ಹೆಚ್ಚು ಕಾಲ ಕಳೆಯಬೇಕಾಗಿದ್ದರಿಂದ ಆಕೆ ಸಿಂಗಲ್ ಮದರ್ ಆಗಿ ಕಾರ್ಯ ನಿರ್ವಹಿಸಬೇಕಾಯಿತು. ಮಕ್ಕಳನ್ನು ಬೆಳೆಸುವ ಸಂಪೂರ್ಣ ಹೊರೆ ಅವಳ ಮೇಲೆ ಬಿತ್ತು. ಆದರೆ ಆಕೆ ಯಾವತ್ತೂ ಗೊಣಗಲಿಲ್ಲ. ನಾನು ಕಷ್ಟ ಕಾಲದಲ್ಲಿದ್ದಾಗ ಧೈರ್ಯ ತುಂಬಿದಳು~ ಎಂದು ಮುಂದಿನ ಸಾಲಿನಲ್ಲಿ ಕುಳಿತಿದ್ದ ಪತ್ನಿ ವಿಜೇತಾರತ್ತ ನೋಡಿ ತಿಳಿಸಿದರು. ಮಕ್ಕಳಾದ ಸಮಿತ್ ಹಾಗೂ ಅನ್ವಯ್ ಅಲ್ಲಿಯೇ ಇದ್ದರು. ತಂದೆ ಶರದ್ ದ್ರಾವಿಡ್, ಅಣ್ಣ ವಿಜಯ್ ಕೂಡ ಬಂದಿದ್ದರು.`ಆದರೆ ಇನ್ನುಮುಂದೆ ಆಕೆಗೆ ಯಾವುದೇ ಸಮಸ್ಯೆ ಕೊಡುವುದಿಲ್ಲ. ನಾನೇ ಮಾರುಕಟ್ಟೆಗೆ ಹೋಗಿ ತರಕಾರಿ ತಂದುಕೊಡುತ್ತೇನೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತೇನೆ. ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತೇನೆ~ ಎಂದು ದ್ರಾವಿಡ್ ನುಡಿದಾಗ ಸಭಾಂಗಣದಲ್ಲಿ ನಗೆಯ ಹೊನಲು.`ಮುಖ್ಯವಾಗಿ ನಾನು ಅಭಿಮಾನಿಗಳು ಧನ್ಯವಾದ ಹೇಳಬೇಕು. ಏಕೆಂದರೆ ನಿಮ್ಮಂಥ ಅಭಿಮಾನಿಗಳನ್ನು ಹೊಂದಲು ಕ್ರಿಕೆಟ್ ಪುಣ್ಯ ಮಾಡಿದೆ. ನಿಮ್ಮ ಎದುರು ಆಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನಾನು ಈ ವರ್ಷ ಐಪಿಎಲ್‌ನಲ್ಲಿಆಡುತ್ತೇನೆ. ಜೂನ್‌ನಲ್ಲಿ ನನ್ನ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ~ ಎಂದು ತಮ್ಮ ರಾಹುಲ್ ವಿದಾಯದ ಮಾತು ಮುಗಿಸಿದರು.ದ್ರಾವಿಡ್ ತ್ಯಾಗಮಯಿ: `ಇನಿಂಗ್ಸ್ ಆರಂಭಿಸಿ ಎಂದಾಗ ದ್ರಾವಿಡ್ ಓಕೆ ಎಂದರು. ವಿಕೆಟ್ ಕೀಪಿಂಗ್ ಮಾಡಿ ಎಂದಾಗ ಅದಕ್ಕೂ ಹೂಂ ಎಂದರು. ಕೆಳ ಕ್ರಮಾಂಕದಲ್ಲಿ ಆಡಿ ಎಂದಾಗ ಅದಕ್ಕೂ ಸೈ ಎಂದರು. ಈ ದ್ರಾವಿಡ್ ತ್ಯಾಗಮಯಿ. ಇಂತಹ ಆಟಗಾರನ ಸ್ಥಾನ ತುಂಬಲು ಯಾರಿಗೂ ಸಾಧ್ಯವಿಲ್ಲ~ ಎಂದು ಒಂದೇ ಸಾಲಿನಲ್ಲಿ ಬಣ್ಣಿಸಿದ್ದು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್.`ದ್ರಾವಿಡ್, ನೀವು ಗಳಿಸಿದ ಪ್ರತಿ ರನ್ ನಮಗೆ ಖುಷಿ ನೀಡಿದೆ. ನಿಮ್ಮ ತದೇಕಚಿತ್ತತೆ ಅದ್ಭುತ. ನಿಮ್ಮ ಬದ್ಧತೆಗೆ ಯಾರೂ ಸರಿಸಾಟಿ ಇಲ್ಲ. ಸ್ಫೂರ್ತಿಗೆ ಇನ್ನೊಂದು ಹೆಸರು ದ್ರಾವಿಡ್. ನೀವು ಕರ್ನಾಟಕದ ಹೆಮ್ಮೆಯ ಪುತ್ರ. ಈಗ ನಿಮ್ಮ ಸೇವೆ ನಮ್ಮ ಆಡಳಿತಕ್ಕೆ ಬೇಕಿದೆ~ ಎಂದು ಹೇಳಿದ್ದು ಕೆಎಸ್‌ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ.ಇನ್ನು ಭಾರತ ಟೆಸ್ಟ್  ಕ್ರಿಕೆಟ್ ತಂಡ ದ್ರಾವಿಡ್ ಇಲ್ಲದೇ ಕಣಕ್ಕಿಳಿಯಬೇಕು! ಮೂರನೇ ಕ್ರಮಾಂಕವನ್ನು ಸಮರ್ಥವಾಗಿ ತುಂಬುವ ಆ ಬ್ಯಾಟ್ಸ್‌ಮನ್ ಯಾರು?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.