ಭಾನುವಾರ, ಅಕ್ಟೋಬರ್ 20, 2019
27 °C

ಕಲಾ ಪೋಷಣೆಗೆ ರಾಜಾಶ್ರಯ ಅಗತ್ಯ

Published:
Updated:

ಬೆಂಗಳೂರು: `ರಾಜಾಶ್ರಯ ಇಲ್ಲದ ಶಾಸ್ತ್ರೀಯ ಕಲೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ~ ಎಂದು ವಾರ್ತಾ ಇಲಾಖೆ ನಿರ್ದೇಶಕ ಡಾ.ಮುದ್ದುಮೋಹನ್ ಹೇಳಿದರು.ಸಂಗೀತ ಸಂಭ್ರಮ ಸಂಸ್ಥೆಯು ನಗರದ ಮಲ್ಲೇಶ್ವರದಲ್ಲಿರುವ ಸೇವಾ ಸದನ ಹಾಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ `ನಿರಂತರ~ ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಉತ್ಸವದಲ್ಲಿ ಮಾತನಾಡಿದರು.`ಆಧ್ಯಾತ್ಮದ ಮೂಲ ಆಗಿರುವ ಶಾಸ್ತ್ರೀಯ ಕಲೆಗಳು ರಾಜಾಶ್ರಯ ಕಳೆದುಕೊಂಡಿವೆ. ಅಲ್ಲದೇ ಈ ಕಲೆಗಳ ಮೇಲೆ ನಿರಂತರವಾದ ದಾಳಿ ನಡೆಯುತ್ತಿದೆ. ಆದ್ದರಿಂದ ಈ ಕಲೆಗಳನ್ನು ಪೋಷಣೆ ಮಾಡುವ ಹೊಣೆ ಕಲಾವಿದರ ಮತ್ತು ಜನರ ಮೇಲಿದೆ~ ಎಂದರು.ಉತ್ಸವ ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, `ನೃತ್ಯ- ಸಂಗೀತದ ಉತ್ಸವ ಏರ್ಪಡಿಸುತ್ತಿರುವ ಸಂಗೀತ ಸಂಭ್ರಮ ಸಂಸ್ಥೆ ಶ್ಲಾಘನೀಯ ಕೆಲಸ ಮಾಡುತ್ತಿದೆ. ಈ ಉತ್ಸವದಲ್ಲಿ ಅಂಗವಿಕಲ ಮಕ್ಕಳಿಗೂ ಕಲೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸ್ತುತ್ಯಾರ್ಹ~ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಉದ್ಘಾಟನಾ ಕಾರ್ಯಕ್ರಮವಾಗಿ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಮತ್ತು ವಿ.ಕೆ.ರಾಮನ್ ಅವರ ಕೊಳಲು ಜುಗಲ್ ಬಂದಿ ಪ್ರದರ್ಶನ ನಡೆಯಿತು. ವಿದ್ವಾನ್‌ಗಳ ಕೊಳಲು ವಾದನ ಪ್ರೇಕ್ಷಕರ ಮನಸೂರೆಗೊಂಡಿತು.ಅನೂರ್ ಅನಂತಕೃಷ್ಣ ಮೃದಂಗ, ಉದಯ್‌ರಾಜ್ ಕರ್ಪೂರ್ ತಬಲ ನುಡಿಸಿದರೆ ಬಿ.ಎಸ್.ಅರುಣ್‌ಕುಮಾರ್ ಡ್ರಮ್ ಬಾರಿಸಿದರು. ಜ.10ರವರೆಗೆ ಈ ಉತ್ಸವ ನಡೆಯಲಿದ್ದು, ಖ್ಯಾತ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಇತಿಹಾಸ ತಜ್ಞೆ ಪ್ರೊ.ಚೂಡಾಮಣಿ ನಂದಗೋಪಾಲ್ ಮತ್ತು ಸಂಗೀತ ಸಂಭ್ರಮ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಪಿ.ರಮಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Post Comments (+)