ಕಲಾ ಮತ್ತು ವಾಣಿಜ್ಯ ವಿಭಜನೆ: ದೇಶಪಾಂಡೆ

6
ಮಹಾರಾಣಿ ಕಲಾ ಮತ್ತು ವಾಣಿಜ್ಯ ಮಹಿಳಾ ವಿದ್ಯಾಲಯ

ಕಲಾ ಮತ್ತು ವಾಣಿಜ್ಯ ವಿಭಜನೆ: ದೇಶಪಾಂಡೆ

Published:
Updated:

ಮೈಸೂರು: ಇಲ್ಲಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಮಹಿಳಾ ವಿದ್ಯಾಲಯವನ್ನು ವಿಭಜಿಸಿ ಎರಡೂ ವಿಭಾಗಕ್ಕೂ ಪ್ರತ್ಯೇಕ ಕಾಲೇಜು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.ನಗರದ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾಲೇಜು ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಮಾತನಾಡಿದರು.

ಈ ಕಾಲೇಜಿನ ಲ್ಲಿ ಕಲಾ ವಿಭಾಗದಲ್ಲಿ 2,800, ವಾಣಿಜ್ಯ ವಿಭಾಗದಲ್ಲಿ 2,300 ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದು, ಹೆಚ್ಚು ಒತ್ತಡ ಇದೆ.ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲು ಕಲಾ ಮತ್ತು ವಾಣಿಜ್ಯ ವಿಭಾಗಗಳನ್ನು ಪ್ರತ್ಯೇಕಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಆರು ತಿಂಗಳೊಳಗೆ ಜಾಗ ಕಲ್ಪಿಸುವಂತೆ ಜಿಲ್ಲಾಡಳಿತ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಕಂದಾಯ ಇಲಾಖೆಗೆ ಕೋರಲಾಗಿದೆ. ಸ್ಥಳ ಗುರುತಿಸಿದರೆ ತಕ್ಷಣವೇ ಕಾಲೇಜು ಮತ್ತು ಹಾಸ್ಟೆಲ್‌ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಮಹಾರಾಣಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರತಿ ವಿಭಾಗಕ್ಕೆ ತಲಾ ರೂ. 10 ಲಕ್ಷದಂತೆ 30 ಲಕ್ಷ ರೂಪಾಯಿ ಅನುದಾನವನ್ನು ಮೇಜುಗಳನ್ನು ಖರೀದಿಸಲು ನೀಡುವುದಾಗಿ ಘೋಷಿಸಿದರು. ರಾಜ್ಯದ 362 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲೂ ಮೂಲ ಸೌಕರ್ಯ, ಮಾನವ ಸಂಪನ್ಮೂಲ ಇತ್ಯಾದಿ ಕೊರತೆಗಳು ಇವೆ. ಕಾಲೇಜುಗಳಲ್ಲಿ ಮೇಜು–ಕುರ್ಚಿ, ಕುಡಿಯುವ ನೀರು, ಕೊಠಡಿ ಮುಂತಾದ ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು.ಮಹಿಳಾ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸಿದರೆ ರಾಷ್ಟ್ರ ಪ್ರಗತಿ ಸಾಧಿಸುತ್ತದೆ. ಮಹಿಳೆಯರು ಪ್ರಗತಿ ಪಥದಲ್ಲಿ ಸಾಗಲು ಸೂಕ್ತ ವಾತಾವರಣವನ್ನು ನಿರ್ಮಿಸುವ ಅಗತ್ಯ ಇದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣುಮಕ್ಕಳು ಎಲ್ಲ  ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.   ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಾಸು, ವಿಧಾನ ಪರಿಷತ್‌ ಸದಸ್ಯರಾದ ಗೋ. ಮಧುಸೂಧನ್, ಮರಿತಿಬ್ಬೇಗೌಡ, ಶಾಸಕ ಎಂ.ಕೆ. ಸೋಮಶೇಖರ್‌, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಟಿ.ಎನ್‌. ಪ್ರಭಾಕರ, ಜಿಲ್ಲಾಧಿಕಾರಿ ಸಿ. ಶಿಖಾ, ಮೇಯರ್‌ ಎನ್‌.ಎಂ. ರಾಜೇಶ್ವರಿ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry