ಕಲಿಕಾ ಮಾಧ್ಯಮ: ಕೋರ್ಟ್‌ಗೆ ಮನವರಿಕೆ ಮಾಡಿ

7

ಕಲಿಕಾ ಮಾಧ್ಯಮ: ಕೋರ್ಟ್‌ಗೆ ಮನವರಿಕೆ ಮಾಡಿ

Published:
Updated:

ಕರ್ನಾಟಕ ಸರ್ಕಾರ ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ  ಪ್ರಾಥಮಿಕ ಶಾಲಾ ಹಂತ­ದಲ್ಲಿ ಮಾತೃಭಾಷೆಯೇ ಶಿಕ್ಷಣ ಮಾಧ್ಯಮ­ವಾಗಿರಬೇಕು  ಎಂಬ  ಆದೇಶ  ಹೊರಡಿಸಿತು. ಇದು ವಿವಾದವಾಗಿ ನ್ಯಾಯಾ­ಲಯ­ದ ಮೆಟ್ಟಿ­ಲೇರಿತು. ಈಗ ಸುಪ್ರೀಂ ಕೋರ್ಟ್‌­ನ ಸಂವಿಧಾನ ಪೀಠ ಇದೇ ಜನವರಿ ೨೧ರಂದು ವಿಚಾರಣೆ ಆರಂಭಿಸಲಿದೆ.ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ, ಎಂಬತ್ತರ ದಶಕದ ಗೋಕಾಕ್ ಚಳವಳಿ ಕಾಲ­ದಲ್ಲಿ ಮೂಡಿದ ಜನಾಭಿಪ್ರಾಯದ ಒತ್ತಡದ ಪರಿ­ಣಾಮವಾಗಿ ಕರ್ನಾಟಕ ಸರ್ಕಾರ ೧೯೯೪­ರಲ್ಲಿ ಕರ್ನಾಟಕದಲ್ಲಿ 1ರಿಂದ 5ನೇ ತರಗತಿ­ಯ­ವರೆಗೆ ಶಾಲಾ ಶಿಕ್ಷಣ ಕನ್ನಡದಲ್ಲಿಯೇ ನಡೆಯ­ಬೇಕೆಂಬ ಆಜ್ಞೆಯನ್ನು ಹೊರಡಿಸಿತು. ಅನತಿ ಕಾಲದಲ್ಲೇ ಇದನ್ನು ಪ್ರಶ್ನಿಸಿ ಕೆಲವು ಖಾಸಗಿ ಶಾಲೆಗಳು ಮತ್ತು ಪೋಷಕರ ಸಂಘಟನೆಗಳು ಹೈಕೋರ್ಟ್  ಮೆಟ್ಟಿಲೇರಿ ಸರ್ಕಾರದ ಆಜ್ಞೆಗೆ ತಡೆ ತಂದವು. ವಿವಿಧ ಸರ್ಕಾರಗಳ ಔದಾಸೀನ್ಯ ಮತ್ತು ನ್ಯಾಯಾಂಗದ ವಿಳಂಬ ಗತಿಯಿಂದಾಗಿ ಈ ಮೊಕದ್ದಮೆ ೨೦೦೯ರಲ್ಲಿ ಸರ್ಕಾರದ ವಿರುದ್ಧದ ತೀರ್ಪಿ­ನೊಂದಿಗೆ ಇತ್ಯರ್ಥವಾಯಿತು. ಶಿಕ್ಷಣ ಮಾಧ್ಯ­ಮದ ಹಕ್ಕು ವಿದ್ಯಾರ್ಥಿಗಳ ಪೋಷಕರ ಮೂಲ­ಭೂತ ಹಕ್ಕಾಗಿದ್ದು, ಸರ್ಕಾರದ ಆಜ್ಞೆ ಪ್ರಜೆಗಳ ಈ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾ­ಲಯ ತೀರ್ಪಿತ್ತಿತು. ಕನ್ನಡದ ಕೆಲವು ಹಿರಿಯ ಸಾಹಿತಿಗಳ ಒತ್ತಡಕ್ಕೆ ಕಟ್ಟುಬಿದ್ದ ರಾಜ್ಯ ಸರ್ಕಾರ, ರಾಜ್ಯ ಹೈಕೋರ್ಟ್‌  ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ  ಮೇಲ್ಮನವಿ ಸಲ್ಲಿಸಿತು. ಸಾಹಿತಿ­ಗಳು ಕೂಡ ಸರ್ಕಾರದ ಮೇಲ್ಮನವಿಗೆ ಬೆಂಬಲ­ವಾಗಿ ದಾವೆ ಹೂಡಿದರು.ಇದರ ವಿಚಾರಣೆ, ಮುಖ್ಯವಾಗಿ ರಾಜ್ಯ ಸರ್ಕಾರದ ವಿಳಂಬ ನೀತಿಯಿಂದಾಗಿಯೇ ಮೂರು ವರ್ಷಗಳ ಕಾಲ ಎಳೆದುಕೊಂಡು ಹೋಯಿತು. ಆದರೆ ಕಡೆಗೂ  ಕಳೆದ  ವರ್ಷ ಸುಪ್ರೀಂ ಕೋರ್ಟ್‌ ಒಂದು ರೀತಿಯಲ್ಲಿ ಮಾತೃಭಾಷಾ ಶಿಕ್ಷಣ ಮಾಧ್ಯಮವಾದಿಗಳಿಗೆ ಒಂದು ಬೆಳಕಿಂಡಿ ತೋರುವಂತಹ ತೀರ್ಪಿತ್ತಿತು.

ಶಿಕ್ಷಣ ಮಾಧ್ಯಮದ ಪ್ರಶ್ನೆ ಸಂಕೀರ್ಣ ಪ್ರಶ್ನೆ­ಯಾಗಿದ್ದು, ಅದು ಹಲವು ಸಾಂವಿಧಾನಿಕ ಪ್ರಶ್ನೆ­ಗಳನ್ನು ಒಳಗೊಂಡಿದ್ದು ಅವುಗಳಿಗೆ ಉತ್ತರ ಕಂಡು­ಕೊಂಡು ಅವುಗಳ ಆಧಾರದ ಮೇಲೆ ಅಂತಿಮ ತೀರ್ಪು ನೀಡಬೇಕಾಗಿದೆ ಎಂದು ಹೇಳಿದ ಈ ತೀರ್ಪು ಅದಕ್ಕಾಗಿ ಸಂವಿಧಾನ ಪೀಠ­ವೊಂದರ ರಚನೆಯನ್ನು ಶಿಫಾರಸು ಮಾಡಿತು.ಪೀಠದ ಮುಂದಿರುವ ನಾಲ್ಕು ಮುಖ್ಯ ಪ್ರಶ್ನೆಗಳೆಂದರೆ...

*ಮಾತೃ ಭಾಷೆ ಎಂದರೇನು?

*ಮಾತೃಭಾಷೆಯಲ್ಲಿ ಮಗುವಿನ ಕಲಿಕೆ ಹೆಚ್ಚು ಸುಲಲಿತ ಆಗುವುದೇ?

*ಮಗುವಿನ ಕಲಿಕಾ ಮಾಧ್ಯಮ ನಿರ್ಧರಿಸು­ವವರು ಯಾರು?

*ಸರ್ಕಾರದ ಕಲಿಕಾ ಮಾಧ್ಯಮ ನಿರ್ಧಾರ ಪ್ರಜೆಗಳು, ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕಿಗೆ ಧಕ್ಕೆ ತರುವುದೇ?ಹಾಗೆ ನೋಡಿದರೆ, ಮೊಕದ್ದಮೆಯ ಪ್ರಾಥ­ಮಿಕ ವಿಚಾರಣೆಯ ಹಂತದಲ್ಲೇ ಈ ಪ್ರಶ್ನೆಗಳು ಚರ್ಚೆಗೆ ಬಂದು ಉತ್ತರ ಕಂಡು­ಕೊಳ್ಳ­ಬೇಕಿತ್ತು. ಅವು­ಗಳ ಆಧಾರದ ಮೇಲೆ ತೀರ್ಪು ಮೂಡ­ಬೇಕಿತ್ತು. ಆದರೆ ಹಾಗಾಗಲಿಲ್ಲ. ಇದ­ರಿಂದಾಗಿ ಮೊಕ­ದ್ದಮೆ ಆರಂಭವಾದ ಈ ಇಪ್ಪತ್ತು ವರ್ಷ­ಗಳಲ್ಲಿ ಕನ್ನಡದ ಹಲವು ಪೀಳಿಗೆಗಳ ಮಕ್ಕಳು ಕನ್ನಡ ಶಿಕ್ಷಣದಿಂದ ವಂಚಿತವಾಗಿ ಹೋಗಿವೆ. ಅದರ ಪರಿಣಾಮಗಳನ್ನು ವಿವರಿಸಲು ಇದು ಸೂಕ್ತ ವೇದಿಕೆಯಲ್ಲ.ಅದೇನೇ ಇರಲಿ, ಈಗಲಾದರೂ ಸರ್ಕಾರ ಈ ಮೊಕ­ದ್ದಮೆಯನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಲಯ ಮುಂದಿಟ್ಟಿರುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಸಿದ್ಧಪಡಿಸಿಕೊಂಡು ಕನ್ನಡದ ಮಕ್ಕಳಿಗೆ ನ್ಯಾಯ ಒದಗಿಸಬೇಕಿದೆ. ಆದರೆ ವಿಚಾರಣೆಯ ದಿನಾಂಕ ಪ್ರಕಟವಾಗಿ ಹಲವು ದಿನಗಳೇ ಕಳೆದರೂ, ಇಂತಹ ಮುಖ್ಯ ವಿಷಯದ ಬಗ್ಗೆ ನಮ್ಮ ಸರ್ಕಾರದ ಕಾನೂನು ಇಲಾಖೆ ಮತ್ತು ಮುಖ್ಯವಾಗಿ ಪ್ರಾಥಮಿಕ ಶಿಕ್ಷಣ ಇಲಾಖೆ ಏನು ಸಿದ್ಧತೆ ನಡೆಸಿದೆ ಎಂಬುದರ ಯಾವ ಸೂಚನೆಯೂ ಸಾರ್ವಜನಿಕರಿಗೆ ದೊರೆತಿಲ್ಲ.ಸಾಹಿತಿಗಳ ಮೌನ: ಇನ್ನು, ಈವರೆಗೆ ಈ ವಿಷ­ಯದ ಬಗ್ಗೆ ಸಾರ್ವಜನಿಕವಾಗಿ ಗಟ್ಟಿಯಾಗಿ ಮಾತ­ನಾಡುತ್ತಿದ್ದ ನಮ್ಮ ಬಸವ ಪುರಸ್ಕಾರ, ಜ್ಞಾನ­ಪೀಠ, ನೃಪತುಂಗ, ಪಂಪ ಇತ್ಯಾದಿ ಪ್ರಶಸ್ತಿ­ಗಳನ್ನು ಪಡೆದಿರುವ ಹಿರಿಯ ಸಾಹಿತಿಗಳ ಮೌನ ಗಾಬರಿ ಹುಟ್ಟಿಸುತ್ತಿದೆ. ಹಾಗೇ ಮಠಮಾನ್ಯ­ಗಳು, ಕನ್ನಡ ಶಿಕ್ಷಣ ಪರವಾದ ಸಂಘಟನೆಗಳ ಮೌನ ಕೂಡ. ಮಠಮಾನ್ಯಗಳ ಬಗ್ಗೆ ಏಕೆ ಒತ್ತಿ ಹೇಳು­ತ್ತೇವೆಂದರೆ ಕಳೆದ ಶತಮಾನದಲ್ಲಿ ಅಕ್ಷರ ಮತ್ತು ಅನ್ನಗಳನ್ನು ನೀಡಿ ಇಡೀ ಶೂದ್ರವರ್ಗ­ವನ್ನು ಅಕ್ಷರ ಲೋಕಕ್ಕೆ ತೆರೆದಿಟ್ಟು ಮಹದುಪ­ಕಾರ ಮಾಡಿರುವುದನ್ನು ಇಲ್ಲಿ ಸ್ಮರಿಸಲೇಬೇಕು. ವಿಶ್ವದಲ್ಲೇ ಪ್ರಥಮ ಪ್ರಗತಿಗಾಮಿ ಸಾಹಿತ್ಯವೆಂದು ಪರಿಗಣಿತವಾದ ವಚನ ಸಾಹಿತ್ಯದ ಉಳಿವಿಗೆ ಕಂಟಕ ಬಂದಿರುವಾಗ, ಶರಣ ಸಾಹಿತ್ಯದ ಅನು­ಯಾಯಿಗಳೆಂದು ಹೇಳಿಕೊಳ್ಳುತ್ತಿರುವ ಈ ಮಠ­ಮಾನ್ಯಗಳ ಮೌನ ನಿಜವಾಗಿಯೂ ಆತಂಕಕಾರಿ­ಯಾಗಿದೆ.ಸಾಹಿತಿಗಳು ಮತ್ತು ಸಂಸ್ಥೆಗಳ ಮಾತು ಹಾಗಿರಲಿ, ಸರ್ಕಾರ ಈ ಕೂಡಲೇ ಈ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಭಾಷಾ ತಜ್ಞರು, ಶಿಕ್ಷಣ ತಜ್ಞರು ಮತ್ತು ಸಂಸ್ಕೃತಿ ಚಿಂತಕರೊಂದಿಗೆ ಸಮಾ­ಲೋಚಿಸಿ, ಮಾತೃಭಾಷಾ ಶಿಕ್ಷಣದ ಬಗೆಗೆ ಜಗತ್ತಿನ ಮಹಾ ಚಿಂತಕರು ಮಂಡಿಸಿರುವ ವಾದ­ಗಳು ಮತ್ತು ಆಧುನಿಕ ಕಾಲದಲ್ಲಿ ಮಾತೃ ಭಾಷಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಜಗತ್ತಿ­ನಾ­ದ್ಯಂತ ವಿವಿಧ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಶೋಧನಾ ಮತ್ತು ಸಂಸ್ಕೃತಿ ಅಧ್ಯಯನ ಸಂಸ್ಥೆ­ಗಳು (ಉದಾ: ಯುನೆಸ್ಕೊ) ನಡೆಸಿರುವ ಅಧ್ಯಯನ­ಗಳ ಸಾರಾಂಶಗಳನ್ನೂ ಶಿಫಾರಸು­ಗಳನ್ನೂ ಸಂಗ್ರಹಿಸಿ ತನ್ನ ವಾದವನ್ನು ವಿನ್ಯಾಸ­ಗೊಳಿಸಿಕೊಳ್ಳಬೇಕಿದೆ. ಮುಖ್ಯವಾಗಿ, ನ್ಯಾಯಾ­ಲಯಕ್ಕೆ ಕಾನೂನಿನ ತಾಂತ್ರಿಕ ವ್ಯಾಪ್ತಿಯಲ್ಲೇ ಎಲ್ಲ­ವನ್ನೂ ಗ್ರಹಿಸಿ ಅರ್ಥೈಸಿಕೊಳ್ಳುವ ಪರಿಪಾಠ­ವಿರು­ವುದರಿಂದ, ಶಿಕ್ಷಣ ಮಾಧ್ಯಮದ ಪ್ರಶ್ನೆ­ಯನ್ನು ಕಟ್ಟುನಿಟ್ಟಾಗಿ ಹಾಗೆ ನೋಡಲಾಗ­ದೆಂದೂ, ಶಿಕ್ಷಣ ವ್ಯವಹಾರಕ್ಕೆ ಮಾತ್ರವಲ್ಲದೆ ಜ್ಞಾನಕ್ಕೂ ಸಂಬಂಧಿಸಿದ ಪ್ರಶ್ನೆಯಾದುದರಿಂದ ಅದರ ಪ್ರಶ್ನೆಯನ್ನು ಕಾನೂನಿನ ಪರಿಭಾಷೆಯ ಮಿತಿ­ಗಳನ್ನು ಮೀರಿ ಅರ್ಥೈಸಿಕೊಳ್ಳುವ ಅಗತ್ಯವಿ­ದೆಯೆಂದೂ ಸೂಚಿಸಬೇಕಿದೆ.ದೇಶಿ ಭಾಷೆಗಳ ಪ್ರಬಲ ಪ್ರತಿಪಾದಕರಾಗಿದ್ದ  ರಾಮಮನೋಹರ ಲೋಹಿಯಾ ಅವರ ಅನುಯಾಯಿ ರಾಜ್ಯದ ಮುಖ್ಯಮಂತ್ರಿಯಾಗಿರು­ವಾಗ, ಜನಪರ ಚಳವಳಿಗಳ ಪ್ರತಿಪಾದಕಪ್ರೊ.ದಿ. ಎಂ.ಡಿ. ನಂಜುಂಡ­ಸ್ವಾಮಿ ­ಅವರ ಶಿಷ್ಯ ಅಡ್ವೊಕೆೋಟ್ ಜನರಲ್ ಆಗಿರುವಾಗ, ಆಡಳಿ­ತಾ­ತ್ಮಕ ಮತ್ತು ಕಾನೂನಿನ ತೊಡಕು­ಗಳನ್ನು ಪರಿ­ಹರಿ­ಸಿ­ಕೊಳ್ಳಲು ತೊಂದರೆಯಾಗ­ಲಾ­ರದು. ಉದಾಹರಣೆಗೆ ಮಾತೃಭಾಷೆ ಎಂದ­ರೇನು ಎಂಬ ಪ್ರಶ್ನೆಗೆ ಕಾನೂನಿನ ತಾಂತ್ರಿಕ ವ್ಯಾಪ್ತಿ­ಯಲ್ಲಿ ಪೂರ್ಣ ಉತ್ತರ ಸಿಗಲಾರದ ಸಾಧ್ಯತೆ­ಯನ್ನು ನ್ಯಾಯಾ­ಲಯಕ್ಕೆ ಮನದಟ್ಟು ಮಾಡಿ, ಈ ಅಪೂರ್ಣ ಉತ್ತರದ ಲಾಭವನ್ನು ಮಾತೃ­ಭಾಷಾ ಶಿಕ್ಷಣದ ವಿರೋಧಿಗಳು ಪಡೆಯಲು ಅವಕಾಶ ನೀಡಬಾರದೆಂದೂ ಮನವಿ ಮಾಡ­ಬೇಕು. ಹಾಗೇ, ಮಾತೃ ಭಾಷೆ ಮತ್ತು ಪರಿಸರದ ಭಾಷೆಗಳ ನಡುವೆ ಕೇವಲ ತಾಂತ್ರಿಕ ವ್ಯತ್ಯಾಸಗಳು ಇರುವೆಡೆ ಅದರ  ಲಾಭವನ್ನು ಪ್ರತಿವಾದಿಗಳು ಭಾಷಾ ಅಲ್ಪಸಂಖ್ಯಾತರ ಹೆಸರಿನಲ್ಲಿ ಪಡೆಯಲು ಅವಕಾಶ ನೀಡಬಾರದ ಬಗೆಗೂ ನ್ಯಾಯಾ­ಲಯಕ್ಕೆ ಒತ್ತಿ ಹೇಳಬೇಕು. ಹಾಗೆಯೆೇ, ಸಾಂವಿ­ಧಾ­ನಿಕ ಮೂಲಭೂತ ಹಕ್ಕುಗಳನ್ನು ಸಾರ್ವತ್ರಿಕ ರಾಜಕೀಯ ಅರ್ಥ ವ್ಯಾಪ್ತಿಯನ್ನು ಮೀರಿ, ಮನು­ಷ್ಯ­ನಿಗೆ ತನ್ನ ಹುಟ್ಟಿನ ಪರಿಸರ­ದಿಂದಾ­ಗಿಯೇ ದತ್ತವಾಗಿರುವ ಸಹಜ ಹಕ್ಕು­ಗಳೊಂದಿಗೆ ಸೇರಿಸಿ ಅರ್ಥೈಸುವ ಅಗತ್ಯ­ವಿದೆ­ಯೆಂದೂ, ಅದು ಪೋಷ­ಕರ ಹೆಸರಿನಲ್ಲಿನ ವಾರ­ಸು­ದಾರಿಕೆಯ ವ್ಯಾಪ್ತಿಗೆ ಬರಲಾಗದ್ದೆಂದೂ ವಾದಿಸಬೇಕು.

ಇದಕ್ಕೆಲ್ಲ ಪೂರಕವಾಗಿ, ಮಾತೃಭಾಷೆಗೂ, ಜ್ಞಾನದ ಮತ್ತು ಸಂಸ್ಕೃತಿಯ ಪರಿಕಲ್ಪನೆಗಳಿಗೂ ಇರುವ ಸಾವಯವ ಸಂಬಂಧಗಳನ್ನೂ ಮತ್ತು ಅವು­ಗಳು ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಸಮ­ಗ್ರ­ತೆಗಳೊಂದಿಗೆ ಹೊಂದಿರುವ ಆಂತರಿಕ ಸಂಬಂಧ­­ಗಳನ್ನು ನ್ಯಾಯಾಲಯಕ್ಕೆ ವಿವರಿಸಿ ಹೇಳ­ಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಮಾತೃ ಭಾಷಾ ಶಿಕ್ಷಣ ನೀತಿಯು ನಮ್ಮ ಮಕ್ಕಳನ್ನು ಇಂದಿನ ಅಗತ್ಯ­ಗಳಲ್ಲಿ ಒಂದಾದ ಇಂಗ್ಲಿಷ್ ಭಾಷಾ ಕಲಿಕೆ­ಯಿಂದ ಹೇಗೆ ವಂಚಿತಗೊಳಿಸುತ್ತಿಲ್ಲವೆಂದೂ ಮತ್ತು ಉನ್ನತ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯ­ಮ­ದಲ್ಲಿ ಕಲಿಯಲು ಹೇಗೆ ಅಡ್ಡಿಯಾ­ಗುತ್ತಿ­ಲ್ಲ­ವೆಂದೂ ನ್ಯಾಯಾಲಯಕ್ಕೆ ವಿವರಿಸಿ ಹೇಳಬೇಕು.ಕೂಡಲೇ ಈ ಮೊಕದ್ದಮೆಯ ಬಗೆಗೆ ತಾನು ಮಾಡಿಕೊಳ್ಳುತ್ತಿರುವ ಸಿದ್ಧತೆಯ ಬಗೆಗೆ ಕನ್ನಡ ಜನತೆಗೆ ಮಾಹಿತಿ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ.ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry