ಕಲಿಕಾ ಸಂಸ್ಥೆಗಳಾಗಿ ಶಾಲಾ ಕಾಲೇಜುಗಳು

7

ಕಲಿಕಾ ಸಂಸ್ಥೆಗಳಾಗಿ ಶಾಲಾ ಕಾಲೇಜುಗಳು

Published:
Updated:

ರಾ ಜ್ಯದ ಶಾಲೆಗಳ ಶೈಕ್ಷಣಿಕ  ಗುಣ­ಮಟ್ಟದ ಬಗ್ಗೆ ಮತ್ತೊಮ್ಮೆ ಚರ್ಚೆ­ಗಳಾಗುತ್ತಿವೆ. ರಾಜ್ಯ ಶಾಲಾ ಗುಣಮಟ್ಟ ಮಾಪನ ಮತ್ತು ಮಾನ್ಯತಾ ಮಂಡಳಿಯು ರಾಜ್ಯದ ೧,೦೨೦ ಸರ್ಕಾರಿ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆ­ಯಲ್ಲಿ  ಶಾಲೆಗಳ ಶೈಕ್ಷಣಿಕ ಗುಣ­ಮಟ್ಟ ನಮ್ಮ ನಿರೀಕ್ಷೆಯ ಮಟ್ಟ­ದಲ್ಲಿಲ್ಲ ಎಂದು ಹೇಳಿದುದರ ಬಗ್ಗೆ ಮಾಧ್ಯಮ­ಗಳಲ್ಲಿ ವರದಿ ಪ್ರಕಟ­ವಾಗಿದೆ.ಎನ್.ಸಿ.­ಇ.ಆರ್.ಟಿ., ಪ್ರಥಮ್ ಹಾಗೂ ಇನ್ನಿತರ ರಾಷ್ಟ್ರೀಯ  ಸಮೀಕ್ಷೆ­ಗಳಲ್ಲಿಯೂ ದೇಶದ ಶಾಲೆಗಳಲ್ಲಿ ಶೈಕ್ಷ­ಣಿಕ ಗುಣಮಟ್ಟವು ಉತ್ತಮ ವಾಗಿಲ್ಲ­ದಿ­ರುವ ಬಗ್ಗೆ ಇದೇ ರೀತಿಯ ಅಭಿಪ್ರಾಯ­ಗಳು ಪ್ರಕಟ­ಗೊಂಡಿವೆ. ವಿಶ್ವದ ಅತ್ಯು­ತ್ತಮ ೨೦೦ ವಿಶ್ವವಿದ್ಯಾ­ಲಯ­­ಗಳಲ್ಲಿ ನಮ್ಮ ದೇಶದ ಒಂದೂ ವಿಶ್ವವಿದ್ಯಾ­ಲಯ ಇಲ್ಲ­ದಿರುವುದು ಪ್ರಸ್ತುತ ಪರಿ­ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಶೈಕ್ಷಣಿಕ ಗುಣಮಟ್ಟವು ಆಶಾ­ದಾಯಕವಾಗಿಲ್ಲ­ವೆಂದು ಹೇಳಲು ಸಮೀಕ್ಷೆಗಳ ಅಗತ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ನಮ್ಮ ಕಣ್ಣಿಗೆ ಕಾಣು­ವಂತೆ ಶಾಲೆ ಮತ್ತು ಕಾಲೇಜುಗಳ ಶೈಕ್ಷ­ಣಿಕ ಗುಣಮಟ್ಟವು ಇರುವುದನ್ನು ಕಾಣ­ಬಹು­ದಾಗಿದೆ. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಮಾತ್ರ ಶಿಕ್ಷಣದ ಗುಣಮಟ್ಟ ಸಮರ್ಪಕ­ವಾಗಿಲ್ಲ­ವೆಂದು ಹೇಳು ವಂತಿಲ್ಲ. ಹೆಚ್ಚಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಒಳಗಿನ ಅಂತಃಸ್ಸತ್ವ­ಕ್ಕಿಂತ ಹೊರ ನೋಟದ ಭವ್ಯ ಆಡಂ­ಬರ­ವೇ ಹೆಚ್ಚಾಗಿದ್ದು, ವಿದ್ಯಾರ್ಥಿ­ಗಳ ಕಲಿಕೆಯ ಗುಣಮಟ್ಟವು  ಅತ್ಯು­ತ್ತಮ­ ವಾಗಿರುವುದಿಲ್ಲ.ಶಾಲೆಗಳಿಗೆ ಒದಗಿಸುವ ದೊಡ್ಡ ಮಟ್ಟದ ಅನುದಾನಗಳಾಗಲೀ, ಭವ್ಯ ಕಟ್ಟಡ ಅಥವಾ ಉತ್ತಮ ಭೌತಿಕ ಸಂಪನ್ಮೂಲ­ಗಳೇ ಆಗಲಿ ನಮ್ಮ ಶಿಕ್ಷಣದ ಗುಣಮಟ್ಟದ ಅಳತೆ­ಗೋಲು­ಗಳಾ­ಗ ಲಾರವು. ಶಾಲೆಯು ಉತ್ತಮ ಭೌತಿಕ ಸೌಲಭ್ಯ ಗಳನ್ನು ಹೊಂದಿದ್ದು ವಿದ್ಯಾರ್ಥಿ­ಗಳ ಪರಿಣಾಮ ಕಾರಿ ಕಲಿಕೆ, ಜೀವನ ಕೌಶಲ­ಗಳ ಮೈಗೂಡಿ ಸಿಕೊಳ್ಳು­ವಿಕೆಗೆ ಸಹಕಾರಿ­ಯಾಗುವ ಜೊತೆ ವಿದ್ಯಾರ್ಥಿ­­ಗಳು ಸಂತಸ ಹಾಗೂ ಸುರಕ್ಷತೆಯಿಂದ ಶಾಲೆ­­ಯನ್ನು ಪ್ರೀತಿಸುವಂತೆ ಮಾಡಿ­ದಲ್ಲಿ ಅದು ತನ್ನ ಕಾರ್ಯದಲ್ಲಿ ಯಶ ಕಂಡಿದೆ ಎನ್ನಬಹುದು.ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸು­ವುದರ ಜೊತೆ ನಿರಂತರವಾಗಿ ತಮ್ಮ ಜ್ಞಾನ ಮತ್ತು ಅನುಭವವನ್ನು ಪರಿ­ಷ್ಕರಿಸಿ­­ಕೊಳ್ಳುವ ಮೂಲಕ ಸಕ್ರಿಯ­ವಾಗಿ­ರುವುದೂ ಶಾಲೆಯ ಶೈಕ್ಷಣಿಕ ಗುಣ­ ಮಟ್ಟದ ಸೂಚಕ ಎನ್ನಲು ಅಡ್ಡಿ­ಯಿಲ್ಲ.ಶಿಕ್ಷಣದ ಗುಣಮಟ್ಟದ ಕುಸಿತಕ್ಕೆ ಕಾರಣ­ವಾದ ಅಂಶಗಳ ಕುರಿತಂತೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು  ದಾಖಲೆ (2005), ಉತ್ತಮ­ವಾದ ವಿಶ್ಲೇಷಣೆ­ಯನ್ನು ಮಾಡಿದೆ. ನಮ್ಮ ಶಾಲೆ ಮತ್ತು ಶಿಕ್ಷಕರಿಗೆ ತಮ್ಮ ಶಾಲೆಯ ಅವಶ್ಯಕತೆ­ಗಳಿಗೆ ತಕ್ಕಂತಹ ಕಾರ್ಯಕ್ರಮ ಮತ್ತು ಚಟು ವಟಿಕೆಗಳನ್ನು ರೂಪಿಸಲು ಅವಶ್ಯ­ವಾಗಿ ಇರ ಬೇಕಾದಂತಹ ಸ್ವಾತಂತ್ರ್ಯ ಇಲ್ಲ. ಶಾಲೆಗಳಿಗೆ ಅಗತ್ಯವಾದ ಕಾರ್ಯಕ್ರಮ ಅಥವಾ ಯೋಜನೆಗಳು ಬಹುಪಾಲು ಉನ್ನತ ಸ್ತರಗಳಲ್ಲಿಯೇ ನಿರ್ಧಾರ­­ವಾಗುತ್ತವೆ. ನಮ್ಮ ಎಲ್ಲಾ ಯೋಜನೆ­ಗಳು ಮೇಲಿ­ನಿಂದ ಕೆಳಗೆ ಚಲಿಸುತ್ತವೆಯೇ ಹೊರತು ಶಾಲಾ ಹಂತದಿಂದ ಮೇಲ್ಮುಖವಾಗಿ ಚಲಿಸು­ತ್ತಿಲ್ಲ. ಈ ಕುರಿತಂತೆ ಪ್ರಯತ್ನಗಳು ಜಾರಿ­ಯಲ್ಲಿ­ದ್ದರೂ ಹೆಚ್ಚು ಪರಿಣಾಮ­ಕಾರಿಯಾಗಿಲ್ಲ.  ಶಾಲಾ ಹಂತ­ದಲ್ಲಿನ ಅವಶ್ಯಕತೆಗಳ ಕುರಿತು ಚಿಂತಿಸಿ, ಅದಕ್ಕೆ ಪೂರಕವಾದ ಚಟು­ವಟಕೆ­ಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯೋ­ನ್ಮುಖ­ವಾಗು­ವಂತೆ ನಮ್ಮ ಶಿಕ್ಷಕರು ಹಾಗೂ ಸ್ಥಳೀಯ ಸಮು­­ದಾಯ­­ವನ್ನು ಸಜ್ಜುಗೊಳಿಸುವಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆ ಯಶಸ್ವಿಯಾಗಿಲ್ಲ. ಪ್ರತಿ ಶಾಲೆಯು ವಿಭಿನ್ನ ಮತ್ತು ವಿಶಿಷ್ಟ. ಪ್ರತಿ ಶಾಲೆಗೆ ಬರುವ ವಿದ್ಯಾರ್ಥಿಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಹಿನ್ನೆಲೆಯು ವಿಭಿನ್ನವಾಗಿದ್ದು, ಇದಕ್ಕೆ ತಕ್ಕಂತೆ ಸಮಸ್ಯೆ ಅಥವಾ ಸವಾಲುಗಳು ಇರುತ್ತವೆ. ಈ ಸ್ಥಳೀಯ ಸನ್ನಿವೇಶಗಳಿಗೆ ಸರಿ­ಹೊಂದು­ವಂತಹ ಚಟುವಟಿಕೆ ಮತ್ತು ಕಾರ್ಯ­ಕ್ರಮಗಳನ್ನು ಪ್ರತಿ ಶಾಲೆಯು ತನ್ನ ಸ್ಥಳೀಯ ನೆಲೆ­ಗಟ್ಟಿ­ನಲ್ಲಿ  ರೂಪಿಸುವ ಅಗತ್ಯ ಇರುತ್ತದೆ. ಇದಕ್ಕೆ ಬದಲಾಗಿ ಉನ್ನತ ಸ್ತರಗಳಲ್ಲಿ ರೂಪಿಸ­ಲ್ಪಟ್ಟ ಕಾರ್ಯಕ್ರಮ  ಅಥವಾ ಚಟು­ವಟಿಕೆಗಳು ಸ್ಥಳೀಯ ಶಾಲಾ ಸನ್ನಿವೇಶಕ್ಕೆ ಪೂರಕವಾಗದೇ ಅವಶ್ಯ­­ವಾದಷ್ಟು ಪರಿಣಾಮ ಬೀರದೆ ವಿಫಲ­ವಾಗು­ತ್ತವೆ. ತಮ್ಮ ಶಾಲೆಗೆ ಏನು ಅಗತ್ಯ ಹಾಗೂ ಇದಕ್ಕಾಗಿ ತಾವೇನು ಯೋಜನೆ ಅಥವಾ ಕಾರ್ಯ­ಕ್ರಮ ರೂಪಿಸಿ­­ಕೊಳ್ಳಬೇಕು ಎಂಬ ಬಗ್ಗೆ ನಮ್ಮ ಶಿಕ್ಷಕರು ಆಲೋಚಿಸಲು ಸಾಧ್ಯ­ವಾಗು­ತ್ತಿಲ್ಲ.ದೇಶದ  ಅಥವಾ ಪ್ರತಿ ಗ್ರಾಮ, ನಗರ­ಗಳ ಲ್ಲಿರುವ ಶಾಲೆಗಳ ವಿಶಿಷ್ಟ ಪರಿಸ್ಥಿತಿ­ಗಳಿಗನು­ಗುಣ ವಾಗಿ ಏಕ ರೀತಿಯ ಕಾರ್ಯ­­ಕ್ರಮ­ಗಳನ್ನು ವಿನ್ಯಾಸ ಗೊಳಿಸು­ವುದು ಸಾಧ್ಯವಾಗದು. ಹಾಗಾ­­ದಲ್ಲಿ ಪರಿಹಾರವೇನು? ಎಂಬ ಪ್ರಶ್ನೆ ಮೂಡ­­ಬಹುದು. ಪ್ರತಿ ಶಾಲೆ ಅಥವಾ ಕಾಲೇಜು  ವಿದ್ಯಾರ್ಥಿಗಳ ಶೈಕ್ಷಣಿಕ ಗುಣ­ಮಟ್ಟದ ಆದ್ಯತೆ­ಗಳನ್ನು ತಾವೇ ಗುರುತಿಸಿ, ಅದಕ್ಕೆ ಪೂರಕ­ವಾದ ಚಟು­­ವಟಿಕೆಗಳನ್ನು ಯೋಜಿಸಲು ಶಿಕ್ಷಕ­ರನ್ನು ಸಮರ್ಥ­ ರನ್ನಾಗಿ ಮಾಡ­ಬೇಕಿದೆ. ಈ ಹಿನ್ನೆಲೆ­­ಯಲ್ಲಿ ಪ್ರತಿ ಶಾಲೆ, ಕಾಲೇಜು ತನಗೆ ಬೇಕಾದ ಮಾಹಿತಿ,ತರಬೇತಿ, ಆರ್ಥಿಕ ಅಥವಾ ಭೌತಿಕ ಸಂಪನ್ಮೂಲ, ಕಾರ್ಯ­ಚಟುವಟಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಅಗತ್ಯವಾದ ಸ್ವಾತಂತ್ರ್ಯ ಇರಬೇಕು.ಶಾಲೆ, ಕಾಲೇಜು ಹೊರತುಪಡಿಸಿ ಇತರ ಎಲ್ಲ ಸ್ತರ­ಗಳು ಶಾಲೆ ಕೋರಿಕೊಳ್ಳುವ ಬೆಂಬಲವನ್ನು ಒದಗಿ­ಸಲು ಮಾತ್ರ ಪ್ರಯತ್ನಿಸಬೇಕು. ಇಲ್ಲಿಯ ವರೆಗೂ ನಾವು ಪೂರೈಕೆಯ  ದೃಷ್ಟಿ­ಯಿಂದ ನಮಗೆ ಬೇಕೆನಿಸಿದ್ದನ್ನೆಲ್ಲ ಶಾಲೆ­ಗಳಿಗೆ ನೀಡಿದ್ದೇವೆ ಯೇ ಹೊರತು ಶಿಕ್ಷಣ ಸಂಸ್ಥೆಗಳು ತಮಗೆ ಅಗತ್ಯವಾದ ಬೇಡಿಕೆ­ಯನ್ನು ಮುಂದಿಡುವ ವಾತಾ­­ವರಣದ ಸೃಷ್ಟಿ ಮಾಡಲು ಹೋಗಿಲ್ಲ.ನಮ್ಮ ಶಾಲೆ, ಕಾಲೇಜು ಹಾಗೂ ಇನ್ನಿತರ ಶೈಕ್ಷಣಿಕ ಸಂಸ್ಥೆಗಳಲ್ಲಿ  ಇನ್ನೊಂದು ಮಹತ್ವದ ಬದ­ಲಾವಣೆ­ಯಾಗ­­ಬೇಕಿದೆ. ನಮ್ಮ ಶಾಲೆ, ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳು ಕಲಿಕೆಯ ಸಂಸ್ಥೆ­­ಗಳಾಗಿ ರೂಪುಗೊಳ್ಳಬೇಕಿದೆ. ಶಾಲೆ­ಗಳು ತಮ್ಮ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕೆ ಹಾಗೂ ವ್ಯಕ್ತಿತ್ವ ರೂಪುಗೊಳ್ಳುವಂತೆ ಮಾಡಲು ಅಗತ್ಯ­ವಾದ ನಾವೀನ್ಯತೆ, ಪ್ರಯೋಗಶೀಲತೆ ಹಾಗೂ ನಿರಂತರ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕಿದೆ. ಕಾರ್ಪೊ­ರೇಟ್ ಮತ್ತು ವಾಣಿಜ್ಯ ಸಂಸ್ಥೆ­­ಗಳೂ ಒಳಗೊಂಡಂತೆ ಎಲ್ಲ ಸಂಸ್ಥೆಗಳು ಯಾವ ರೀತಿ ತಮ್ಮನ್ನು ತಾವು ಸಾಮೂಹಿಕವಾಗಿ ನಿರಂತರ­ವಾದ ಕಲಿಕೆ­ಯಲ್ಲಿ ತೊಡಗಿ­ಸಿಕೊಳ್ಳ­ಬೇಕೆಂಬ ಬಗ್ಗೆ ಪೀಟರ್ ಸೆಂಜೆ ಎಂಬ ಅಮೆರಿಕ­ದ ಎಂಜಿನಿ­ಯರ್ ಮತ್ತು ಉಪನ್ಯಾಸಕರು   ಸುಂದರ ವಾಗಿ ಪ್ರತಿ­ಪಾದಿಸಿ­ದ್ದಾರೆ. ಇಲ್ಲಿ ಕಲಿಕೆ ಎಂದಾ­ಕ್ಷಣ ಪುಸ್ತಕ ಅಥವಾ ಗ್ರಂಥಗಳನ್ನು ಓದುವ ಮೂಲಕ ಹೆಚ್ಚು ಮಾಹಿತಿ ಸಂಗ್ರಹದಲ್ಲಿ ತೊಡಗು­ವುದು ಎಂದು ಭಾವಿಸಬೇಕಿಲ್ಲ. ಯಾವ ಸಂಸ್ಥೆಯು ತನ್ನ ಭವಿಷ್ಯದ ನಿರ್ಮಾಣ­ಕ್ಕಾಗಿ ತನ್ನ ಸಾಮರ್ಥ್ಯವನ್ನು ನಿರಂತರ­ವಾಗಿ ವಿಸ್ತರಿಸಿ­ಕೊಳ್ಳು­ತ್ತದೋ ಅಂತಹ ಸಂಘಟನೆಯನ್ನು ಕಲಿಕಾ ಸಂಘ­ಟನೆ ಅಥವಾ ಕಲಿಕಾ ಸಂಸ್ಥೆ ಎನ್ನಬಹುದೆಂದು ಸೆಂಜೆ ಅಭಿಪ್ರಾಯಪಡುತ್ತಾನೆ.ವಾಸ್ತವವಾಗಿ ಹೆಚ್ಚಿನ ಶಾಲೆ ಮತ್ತು ಕಾಲೇಜುಗಳು ವಿದ್ಯಾರ್ಥಿ ಕೇಂದ್ರಿತ­ವಾದ ನಾವೀನ್ಯತೆ, ಪ್ರಯೋಗಶೀಲತೆಯ ಪ್ರಯತ್ನಗಳ ಕೊರತೆ­ಯಿಂದ ಬಳಲು­ತ್ತಿವೆ. ವಿದ್ಯಾರ್ಥಿಗಳನ್ನು ಪ್ರೇರೇಪಿಸುವ, ಸಾಧನೆಯ ಕಿಡಿ ಹೊತ್ತಿಸುವ ಶಿಕ್ಷಕರ ಸಂಖ್ಯೆ ಹೆಚ್ಚಿಲ್ಲ.ಶಾಲೆ ಮತ್ತು ಕಾಲೇಜುಗಳ ಕಥೆ ಈ ರೀತಿ ಯಾದರೆ ಇವುಗಳನ್ನು ಪೋಷಿಸ­ಬೇಕಾದ ಮೇಲಿನ ಸ್ತರದ ಸಂಸ್ಥೆಗಳು ಅನುದಾನ ಬಿಡುಗಡೆ ಮತ್ತು ಮಾಹಿತಿ ಸಂಗ್ರಹ, ರವಾನೆಯನ್ನು ಮಾಡುವ ಕಚೇರಿಗಳಾಗಿ ಮಾತ್ರ ಉಳಿದು ಕೊಳ್ಳುವ ಜೊತೆ ಶಾಲೆ ಮತ್ತು ಕಾಲೇಜು­ಗಳನ್ನೂ ಸಹ ಮಾಹಿತಿ ಸಲ್ಲಿಸುವ ಕಚೇರಿ­ಗಳ­ನ್ನಾಗಿ ಯಶಸ್ವಿಯಾಗಿ ಮಾರ್ಪಡಿ­ಸುವ ಕಾರ್ಯ­ವನ್ನು ಮಾಡುತ್ತಿವೆ.ಶಿಕ್ಷಕರು ಮತ್ತು ಅಧ್ಯಾಪಕರು ವಿದ್ಯಾರ್ಥಿ ಗಳಲ್ಲಿ ಕಲಿಕೆಯ ಗುಣಮಟ್ಟ ಹಾಗೂ ಜೀವನ ಕೌಶಲ­ಗಳ ಮೈಗೂ­ಡಿಸಿ­ಕೊಳ್ಳು­ವಿಕೆಗೆ ಅಗತ್ಯ­ವಾದ ನಿರಂತರ ಅಧ್ಯಯನಶೀಲತೆಯ ಮನೋ­ಧರ್ಮ ವನ್ನು ಹೊಂದುವ ಅವಶ್ಯಕತೆ ಇದೆ. ಇದರ ಜೊತೆ ತಮ್ಮ ಸಹವರ್ತಿ ಅಧ್ಯಾಪಕರ ಜೊತೆ ತಮ್ಮ ಜ್ಞಾನ ಮತ್ತು ಅನುಭವ­ಗಳನ್ನು ಪರಸ್ಪರ ಹಂಚಿ ಕೊಳ್ಳು­ವುದರ ಜೊತೆಗೆ ಸೃಜನ­ಶೀಲ ಪ್ರಯೋಗ­ಗಳಿಗೆ ತಮ್ಮನ್ನು ತಾವು ಮುಕ್ತ­ವಾಗಿ ತೆರೆದು­ಕೊಳ್ಳುವಂತೆ ಮಾಡುವ ಮೂಲಕ ಶಾಲೆ ಮತ್ತು ಕಾಲೇಜುಗಳಲ್ಲಿ ಕಲಿಕೆ­ಯ ಸಂಸ್ಕೃತಿ­ಯನ್ನು ಪಸರಿಸುವಂತೆ ಮಾಡುವ ತುರ್ತು ಅಗತ್ಯ ಇದೆ. ಶಾಲೆ ಮತ್ತು ಕಾಲೇಜುಗಳು ಒಂದು ತಂಡ­ವಾಗಿ ತಾವು ಸಾಗಬೇಕಾದ ದೃಷ್ಟಿ­ಯನ್ನು ತಾವೇ ಕಂಡು­ಕೊಂಡು, ಕಾರ್ಯೋನ್ಮುಖ ರಾಗಬೇಕಿದೆ.ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫) ದಾಖಲೆಯು ಹೇಳಿದಂತೆ ಗುಣಮಟ್ಟ ಎನ್ನು ವುದು ಸಾಮರ್ಥ್ಯದ ಅಳತೆ­ಗೋಲು ಮಾತ್ರ ಅಲ್ಲ, ಅದೊಂದು ಮೌಲ್ಯದ ಆಯಾಮ­ವಾಗಿದೆ. ಶೈಕ್ಷ ಣಿಕ ಗುಣಮಟ್ಟವನ್ನು ಅಭಿವೃದ್ಧಿ­ಗೊಳಿಸುವ ನಮ್ಮ ಪ್ರಯತ್ನವು ಸಮಾನತೆ ಮತ್ತು ಸಾಮಾ­ಜಿಕ ನ್ಯಾಯ­ಗಳನ್ನು ಬೆಳೆಸುವ ಕ್ರಮಗಳ ಜೊತೆ ಜೊತೆಗೆ ಸಾಗಿದಲ್ಲಿ ಮಾತ್ರ ಯಶ ಕಾಣಲು ಸಾಧ್ಯವಿದೆ.ಸಮಾನ ಶಿಕ್ಷಣ ವ್ಯವಸ್ಥೆಯ ಪರಿಣಾಮ­ಕಾರಿ ಜಾರಿಯಿಂದ ಮಾತ್ರ ಹೋಲಿಸ­­ಬಹುದಾದ ಗುಣ­ಮಟ್ಟದ ಶಿಕ್ಷಣ­ವನ್ನು ದೇಶದ ಎಲ್ಲಾ ವಿಧದ ಶಾಲೆ, ಕಾಲೇಜುಗಳಲ್ಲಿ ಒದಗಿಸುವಂತೆ ಮಾಡಲು ಸಾಧ್ಯವಿದೆ. ಇದಕ್ಕೆ ಪೂರಕ­ವಾಗಿ ನಮ್ಮ ಶಾಲೆ ಕಾಲೇಜುಗಳನ್ನು ನಿಜಾರ್ಥ­ದಲ್ಲಿ ಕಲಿ­ಕೆಯ ಸಂಸ್ಥೆಗಳಾಗಿ ಪರಿವರ್ತಿಸಿ­ದಲ್ಲಿ ಮಾತ್ರ ಜಾಗತಿಕ ಮಟ್ಟ­ದಲ್ಲಿ ನಮ್ಮ ಶಾಲೆ ಕಾಲೇಜುಗಳು ಸ್ಪರ್ಧೆಯೊಡ್ಡಲು ಸಾಧ್ಯವಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry