ಶನಿವಾರ, ಅಕ್ಟೋಬರ್ 19, 2019
27 °C

ಕಲಿಕೆಗೆ ಸಂಪ್ರದಾಯ ಅಡ್ಡಿಯಾಗದಿರಲಿ

Published:
Updated:

ಕೋಲಾರ: ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಸಂಪ್ರದಾಯ ಅಡ್ಡಿಯಾಗಬಾರದು. ಮಕ್ಕಳ ಉನ್ನತ ಶಿಕ್ಷಣಕ್ಕೆ ಪೋಷಕರು ಸಾಧ್ಯವಾದಷ್ಟೂ ಬೆಂಬಲ, ಪ್ರೋತ್ಸಾಹ ನೀಡಬೇಕು ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್. ರಾಮೇಗೌಡ ಸಲಹೆ ನೀಡಿದರು.ಬೆಂಗಳೂರು ವಿಶ್ವವಿದ್ಯಾಲಯ ಕಳೆದ ಸಾಲಿನಲ್ಲಿ ನಡೆಸಿದ ಬಿ.ಎಸ್‌ಸಿ ಪರೀಕ್ಷೆಯಲ್ಲಿ ನಾಲ್ಕನೇ ರ‌್ಯಾಂಕ್ ಗಳಿಸಿದ ಕಾಲೇಜಿನ ವಿದ್ಯಾರ್ಥಿನಿ ಬಂಗಾರಪೇಟೆಯ ಜೀವಿತಾ ಅವರಿಗೆ ಕಾಲೇಜಿನ ವತಿಯಿಂದ ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.ವಿದ್ಯಾರ್ಥಿನಿ ಜಿಲ್ಲೆಗೆ ಖ್ಯಾತಿ ತರುವಂಥ ಸಾಧನೆ ಮಾಡಿದ್ದಾರೆ. ಇಡೀ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ರ‌್ಯಾಂಕ್ ಗಳಿಸಿರುವ ಏಕೈಕ ಕಾಲೇಜು ಎಂಬ ಖ್ಯಾತಿಯೂ ಆಕೆಯಿಂದಲೇ ದಕ್ಕಿದೆ. ಇಂಥ ಸನ್ನಿವೇಶದಲ್ಲಿ ಆಕೆಗೆ ಉನ್ನತ ಶಿಕ್ಷಣ ಪಡೆಯಲು ಸಂಪ್ರದಾಯವೇ ಅಡ್ಡಿಯಾಗಬಾರದು. ಪೋಷಕರು ಉದಾರವಾಗಿ ಮತ್ತು ಆಧುನಿಕ ಸಂದರ್ಭಕ್ಕೆ ತಕ್ಕಂತೆ ಆಕೆಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.ಶೈಕ್ಷಣಿಕ ವಾತಾವರಣ ಇಲ್ಲದಿರುವ ಕೌಟುಂಬಿಕ ಸನ್ನಿವೇಶದಲ್ಲಿ ಸಣ್ಣ ಸಾಧನೆ ಮಾಡುವುದೂ ಕಷ್ಟಕರ ಸಂಗತಿ. ಆದರೆ ಜೀವಿತಾ ಪರಿಶ್ರಮ ಪಟ್ಟು ರ‌್ಯಾಂಕ್ ಗಳಿಸಿರುವುದನ್ನು ಪೋಷಕರು ಗಂಭೀರವಾಗಿ ಪರಿಗಣಿಸಬೇಕು. ಆಕೆಯ ಉನ್ನತ ಶಿಕ್ಷಣಕ್ಕೆ ಅಗತ್ಯ ನೆರವನ್ನು ಕಾಲೇಜು ವತಿಯಿಂದಲೂ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಎಚ್. ಕೆ.ಕುಮಾರರಾಜ ಅರಸು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿನಿಗೆ ಶುಭ ಹಾರೈಸಿದರು. ಆಕೆಯನ್ನು ಮಾದರಿಯಾಗಿ ಭಾವಿಸಿ ಇತರೆ ವಿದ್ಯಾರ್ಥಿನಿಯರೂ ಪರಿಶ್ರಮ ಪಡಬೇಕು ಎಂದು ಸಲಹೆ ನೀಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ನಡುಪಳ್ಳಿ ಕೃಷ್ಣಮೂರ್ತಿ, ನಿವೃತ್ತ ಪ್ರಾಧ್ಯಾಪಕ ಮುನಿರೆಡ್ಡಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಕೆ.ಆರ್. ಜಯಶ್ರೀ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಹೇಮಮಾಲಿನಿ ನಿರೂಪಿಸಿದರು. ರಸಾಯನಶಾಸ್ತ್ರ ವಿಭಾಗದ ಸುಜಾತಾ ವಂದಿಸಿದರು. ಸಮಿತಿ ಸದಸ್ಯರೆಲ್ಲರೂ ವೇದಿಕೆಯಲ್ಲಿದ್ದರು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಥಳಾವಕಾಶ ಸಾಕಾಗದೆ ಹಲವು ಸಹಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ನಿಂತಿದ್ದರು.

Post Comments (+)