ಬುಧವಾರ, ನವೆಂಬರ್ 20, 2019
20 °C
ಥಳುಕು ಬಳುಕು

ಕಲಿಕೆಯ ಶಾಲೆಯಲ್ಲಿ...

Published:
Updated:

ಒಂದು ದಿನ ಇದ್ದಕ್ಕಿದ್ದಂತೆ ವಿಶಾಲ್ ಭಾರದ್ವಾಜ್ ಫೋನಾಯಿಸಿದರು. ಇಮ್ರಾನ್ ಖಾನ್ ಮುಖಭಾವವೇ ಅವರಿಗೆ ಅವಕಾಶ ಸಿಕ್ಕಿದ್ದನ್ನು ಹೇಳುತ್ತಿತ್ತು. ಜೊತೆಯಲ್ಲಿ ಸ್ನೇಹಿತರ ಗುಂಪು ಇತ್ತು. ಸುಮಾರು ಹತ್ತು ನಿಮಿಷ ಮಾತುಕತೆಯ ನಂತರ ಇಮ್ರಾನ್ ಫೋನ್ ಇಟ್ಟರು. ಜೀವನದಲ್ಲಿ ಮೊದಲ ಬಾರಿಗೆ ಹೆಸರು ಮಾಡಿದ ನಿರ್ದೇಶಕರೊಬ್ಬರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದರಿಂದ ಸಹಜವಾಗಿಯೇ ಅವರು ಮಾತೇ ಇಲ್ಲದಂತಾಗಿದ್ದರು.ಸ್ವಲ್ಪ ಹೊತ್ತಿನ ನಂತರ ಜ್ಞಾನೋದಯವಾಗಿ, ಮತ್ತೆ ಫೋನ್ ಮಾಡಿದರು. ತಮ್ಮ ಪಾತ್ರ ಎಂಥದ್ದು ಎಂಬುದನ್ನು ಕೇಳಿಕೊಂಡರು. ಹರಿಯಾಣದ ಯುವಕನ ಪಾತ್ರ ಎಂಬುದು ಗೊತ್ತಾದ ಮೇಲೆ ಚಿಂತೆ ಕಾಡತೊಡಗಿತು. ಯಾಕೆಂದರೆ, ಇಮ್ರಾನ್ ಗೆಳೆಯರ ಬಳಗದಲ್ಲಿ ಯಾರೊಬ್ಬರೂ ಹರಿಯಾಣ ಮೂಲದವರು ಇರಲಿಲ್ಲ.ಹರಿಯಾಣ ಯುವಕರ ಮಾತಿನ ವರಸೆ, ದೇಹಭಾಷೆ ಎಲ್ಲವನ್ನೂ ಕರಗತ ಮಾಡಿಕೊಳ್ಳಲು ವಿಶಾಲ್ ಒಂದಿಷ್ಟು ಕಾಲಾವಕಾಶ ಕೊಟ್ಟಿದ್ದರು. ಇಮ್ರಾನ್ ತಡ ಮಾಡಲಿಲ್ಲ. ದೆಹಲಿಗೆ ಹೋದರು. ಅಲ್ಲಿ ಅವರ ಇನ್ನೊಂದು ಗೆಳೆಯರ ಗುಂಪು ಇತ್ತು. ಅವರಲ್ಲೊಬ್ಬ ಹರಿಯಾಣದ ಯುವಕನಿದ್ದ. ಬಂದ ಕೆಲಸ ಆದೀತೆಂದುಕೊಂಡು ಇಮ್ರಾನ್, ಆ ಯುವಕನ ಜೊತೆ ಹೆಚ್ಚು ಮಾತನಾಡಲು ಆರಂಭಿಸಿದರು.ಹರಿಯಾಣದ ಯುವಕ ಮಾತಾಡುವಾಗ ಆಗಾಗ ಬೆಂಕಿಕಡ್ಡಿಯನ್ನು ಕಿವಿಯೊಳಗೆ ಇಟ್ಟು ಆಡಿಸುತ್ತಾ, ಮುಖ ಕಿವುಚುತ್ತಿದ್ದ. ಉಡಾಫೆಯ ದೇಹಭಾಷೆ ಅವನದ್ದು. ಇಮ್ರಾನ್ ಅದನ್ನು ಸೂಕ್ಷ್ಮವಾಗಿ ಗಮನಿಸಿದರು. ಮರುಕ್ಷಣವೇ ವಿಶಾಲ್ ಭಾರದ್ವಾಜ್‌ಗೆ ಫೋನಾಯಿಸಿ, ಇಂಥ ದೇಹಭಾಷೆ ಸೂಕ್ತವೇ ಎಂಬುದನ್ನು ಖಚಿತಪಡಿಸಿಕೊಂಡರು.`ಮಟ್ರೂ ಕಿ ಬಿಜಲೀ ಕಾ ಮಂಡೋಲಾ' ಹಿಂದಿ ಚಿತ್ರದ ಪಾತ್ರಕ್ಕಾಗಿ ಇಮ್ರಾನ್ ಇಷ್ಟೆಲ್ಲಾ ಹೋಂವರ್ಕ್ ಮಾಡಿಕೊಂಡು ತಯಾರಾದರು. ಮಾತು, ದೇಹಭಾಷೆ ತಿದ್ದಿಕೊಂಡ ಮೇಲೆ ಹರಿಯಾಣ ಶೈಲಿಯಲ್ಲಿ ಮಾತನಾಡುವುದನ್ನೂ ಕರಗತ ಮಾಡಿಕೊಳ್ಳಬೇಕಿತ್ತು. ಅದಕ್ಕೂ ಆ ಯುವಕನೇ ನೆರವಾದ. ಹಗಲು ರಾತ್ರಿ ಆ ಶೈಲಿಯಲ್ಲಿ ಮಾತನಾಡುವುದನ್ನು ಗೀಳಾಗಿಸಿಕೊಂಡ ಇಮ್ರಾನ್, ಸಂಪೂರ್ಣ ಸಿದ್ಧರಾದ ನಂತರ ವಿಶಾಲ್ ಅವರನ್ನು ಭೇಟಿಯಾದರು.ತಾವು ಕೊಟ್ಟ ಅವಕಾಶವನ್ನು ಕಣ್ಣಿಗೊತ್ತಿಕೊಂಡು, ಅಷ್ಟರ ಮಟ್ಟಿಗೆ ತಯಾರಾದ ನಟನ ಶ್ರದ್ಧೆ ಕಂಡ ವಿಶಾಲ್ ಶ್ಲಾಘಿಸಿದರು.

ಇಮ್ರಾನ್ ತಾಲೀಮು ಅಷ್ಟಕ್ಕೇ ಮುಗಿಯಲಿಲ್ಲ. ಚಿತ್ರೀಕರಣ ಶುರುವಾಯಿತು. ಪಂಕಜ್ ಕಪೂರ್ ಜೊತೆ ಹೆಚ್ಚು ಸನ್ನಿವೇಶಗಳಿದ್ದವು. ಸ್ಕ್ರಿಪ್ಟ್ ಓದಿಕೊಂಡ ಮೇಲೆ ಪಂಕಜ್ ಸಂಭಾಷಣೆಯನ್ನೆಲ್ಲಾ ತಮ್ಮದಾಗಿಸಿಕೊಳ್ಳುತ್ತಿದ್ದರು. ಕೆಲವು ದೃಶ್ಯಗಳನ್ನು ತಮ್ಮ ಮನಸೋಇಚ್ಛೆ ಲಂಬಿಸುತ್ತಿದ್ದರು.ಒಂದು ವಿಧದಲ್ಲಿ ಅದು ಗುಣಾತ್ಮಕ ಸೇರ್ಪಡೆ. ಪಂಕಜ್ ಪ್ರತಿಭೆಯ ಕುರಿತು ವಿಶಾಲ್ ಭಾರದ್ವಾಜ್‌ಗೆ ಅಪಾರ ವಿಶ್ವಾಸ. ಹಾಗಾಗಿ ಅವರು ಲಂಬಿಸಿದ ದೃಶ್ಯಗಳನ್ನು ಮೊದಲು ಚಿತ್ರೀಕರಿಸಿಕೊಳ್ಳುತ್ತಿದ್ದರು. ಆಮೇಲೆ ಅದು ಅನಗತ್ಯ ಎನ್ನಿಸಿದರೆ ಎರಡು ಸುತ್ತು ಚರ್ಚೆ. ಕೊನೆಗೆ ಪಂಕಜ್, ವಿಶಾಲ್ ಒಮ್ಮತಕ್ಕೆ ಬಂದು ಆ ದೃಶ್ಯವನ್ನು ಉಳಿಸಿಕೊಳ್ಳಬೇಕೋ ಬೇಡವೋ ಎಂದು ತೀರ್ಮಾನಿಸುತ್ತಿದ್ದರು.ಪಂಕಜ್‌ಗೆ ಅದು ಸಲೀಸು. ಎದುರಲ್ಲಿ ಇರುತ್ತಿದ್ದ ಇಮ್ರಾನ್‌ಗೆ ಸಂಕಷ್ಟ. ಸ್ಕ್ರಿಪ್ಟ್‌ನಲ್ಲಿ ಇಲ್ಲದ ಸಂಭಾಷಣೆ ಹೇಳಿ, ಪ್ರತಿಕ್ರಿಯೆಗಾಗಿ ಅವರು ನಿರೀಕ್ಷಿಸುತ್ತಾ ನಿಂತಾಗ ಇಮ್ರಾನ್‌ಗೆ ದಿಕ್ಕೇ ತೋಚುತ್ತಿರಲಿಲ್ಲ. ಮೂರ‌್ನಾಲ್ಕು ದಿನಗಳಾದ ಮೇಲೆ ಇಂಥ ಪರಿಸ್ಥಿತಿಗೆ ಇಮ್ರಾನ್ ಒಗ್ಗಿಕೊಂಡರು.`ಪಂಕಜ್ ಕಪೂರ್ ಅನುಭವಿ ನಟ. ಪಳಗಿದ ಹಿರೀಕ. ಅವರನ್ನು ಮೊದಲಿನಿಂದ ಸೂಕ್ಷ್ಮವಾಗಿ ಗಮನಿಸುತ್ತಾ ಇದ್ದೆ. ರಂಗಭೂಮಿಯಲ್ಲಿ ಕಲಿತ ವಿದ್ಯೆಯನ್ನು ಸಿನಿಮಾಗೆ ಹೇಗೆ ಹೊಂದಿಸಬೇಕು ಎಂಬುದನ್ನು ಅವರು ಸ್ಪಷ್ಟವಾಗಿ ಅರಿತಿದ್ದಾರೆ. ಮೊದಮೊದಲು ಅವರು ಸ್ಪಾಟ್‌ನಲ್ಲಿ ಮಾಡುತ್ತಿದ್ದ ಮಾರ್ಪಾಟುಗಳನ್ನು ಕಂಡು ದಂಗಾದೆ.ಅದಕ್ಕೆ ಹೇಗೆ ಹೊಂದಿಕೊಳ್ಳುವುದು ಎಂಬ ಗೊಂದಲ. ಆಮೇಲಾಮೇಲೆ ನಾನೂ ಒಗ್ಗಿಕೊಂಡೆ. ಅನುಷ್ಕಾ ಶರ್ಮ ಕೂಡ ಅಭಿನಯದ ವಿಷಯದಲ್ಲಿ ಮಾಗಿದವಳು. ಕಣ್ಣಲ್ಲಿ ಕಣ್ಣಿಡುವುದು, ತಬ್ಬಿಕೊಳ್ಳುವುದು, ಛೇಡಿಸುವುದು, ಕಣ್ಣೀರು ಹಾಕುವುದು, ಸಿಟ್ಟು ಮಾಡಿಕೊಳ್ಳುವುದು ಹೀಗೆ ಭಿನ್ನ ಭಾವದ ದೃಶ್ಯಗಳನ್ನು ಒಂದೇ ದಿನ ನಿರಾಯಾಸವಾಗಿ ನಿಭಾಯಿಸಬಲ್ಲ ಚತುರೆ. ಆ್ಯಕ್ಷನ್ ಅಂದಾಗ ಪಾತ್ರದ ಪರಕಾಯ ಪ್ರವೇಶ ಮಾಡುವ ಅವಳು, ಕಟ್ ಎಂದ ಮೇಲೆ ಬಲು ಬೇಗ ಸಹಜ ಸ್ಥಿತಿಗೆ ಮರಳುತ್ತಾಳೆ. ನನಗೆ ಅದು ಇನ್ನೊಂದು ಬೆರಗಿನಂತೆ ಕಂಡಿತು.`ಮಟ್ರೂ ಕಿ ಬಿಜಲೀ ಕಾ ಮಂಡೋಲಾ' ಸಿನಿಮಾ ನನಗೆ ಒಂದು ರೀತಿಯಲ್ಲಿ ಕಾರ್ಯಾಗಾರದ ರೀತಿ ಇತ್ತು. ಒಳ್ಳೆಯ ಸಿನಿಮಾ ಸುಖಾಸುಮ್ಮನೆ ಮೂಡುವುದಿಲ್ಲ. ವಿಶಾಲ್ ಭಾರದ್ವಾಜ್ ಚಿತ್ರಗಳಲ್ಲಿ ಅವರ ರುಜು ಇರುತ್ತದೆ. ಅದರ ಜೊತೆಗೆ ಪಂಕಜ್ ತರಹದ ನಟರ ಚಿಂತನೆಗಳೂ ಬೆರೆತಿರುತ್ತವೆ' ಎನ್ನುವ ಇಮ್ರಾನ್, ಹೊಸ ಬಗೆಯ ಸಾಣೆಗೆ ಒಡ್ಡಿಕೊಳ್ಳಲು ತಾವು ಸದಾ ಸಿದ್ಧ ಎಂದು ಆಹ್ವಾನವನ್ನು ನೀಡುತ್ತಾರೆ.ಬಾಲಿವುಡ್ ರನ್ನಿಂಗ್ ರೇಸ್ ಅಲ್ಲ. ರಣಬೀರ್ ಕಪೂರ್ ತಮ್ಮ ಸ್ಪರ್ಧಿ ಅಲ್ಲ. ಯಾರೇ ಸೋತರೂ ಇನ್ನೊಬ್ಬರಿಗೆ ಲಾಭವಿಲ್ಲ; ಗೆದ್ದರೆ ನಷ್ಟವೂ ಇಲ್ಲ ಎಂದು ತಾತ್ತ್ವಿಕವಾಗಿ ಮಾತನಾಡುವ ಇಮ್ರಾನ್, ಪ್ರತಿ ಚಿತ್ರವನ್ನೂ ಕಲಿಕೆಯ ಶಾಲೆ ಎಂದು ಭಾವಿಸಿದ್ದಾರಂತೆ.

 

ಪ್ರತಿಕ್ರಿಯಿಸಿ (+)