ಕಲಿಕೆಯ ಹಾದಿಯ ಗಳಿಕೆಯ ಹಿರಿದಾರಿ

7

ಕಲಿಕೆಯ ಹಾದಿಯ ಗಳಿಕೆಯ ಹಿರಿದಾರಿ

Published:
Updated:

ಮಕ್ಕಳಿಗೂ ಈಗ ‘ಮನಿ ಮ್ಯಾಟರ್‍ಸ್‌’. ಹಿಂದೆ ಅಪ್ಪ ತಿಂಗಳಿಗೊಮ್ಮೆ ಕೊಡುವ ಪಾಕೆಟ್‌ಮನಿ ನೆಚ್ಚಿಕೊಂಡು ನಗರದ ಎಲ್ಲಾ ಕಾಲೇಜು ಹೈಕಳು ಹಿತಮಿತವಾಗಿ ಖರ್ಚು ಮಾಡುತ್ತಿದ್ದರು. ಈಗ ‘ಬೇಕು’ಗಳ ಪಟ್ಟಿ ಉದ್ದವಾಗಿದೆ. ಬೈಕ್‌ ಇದ್ದ ಮೇಲೆ ಪೆಟ್ರೋಲ್‌, ಮೊಬೈಲ್‌ ಇದ್ದಾಗ ಕರೆನ್ಸಿ ಅನಿವಾರ್ಯ. ಮಕ್ಕಳ ಜೊತೆ ಕನೆಕ್ಟಿವಿಟಿಗೆ ಇವೆಲ್ಲಾ ಮಾತಾಪಿತೃಗಳಿಗೂ ಅಗತ್ಯ ಆಗಿಬಿಟ್ಟಿವೆ. ಆದರೆ, ನಗರದ ಅನೇಕ ಕಾಲೇಜು ಹುಡುಗ–ಹುಡುಗಿಯರು ಈಗ ತಮ್ಮ ಪಾಕೆಟ್‌ಮನಿ ಹೊಂದಿಸಿಕೊಳ್ಳುವ ದಾರಿಗಳಲ್ಲಿ ನಡೆಯತೊಡಗಿದ್ದಾರೆ. ಯಾವುದೋ ಉತ್ಪನ್ನದ ಪ್ರಚಾರಕ್ಕೆ ನಡೆಸುವ ಗುಂಪು ಚರ್ಚೆಯಲ್ಲಿ (ಜಿ.ಡಿ.) ಸಂಜೆಯ ಒಂದೆರಡು ಗಂಟೆ ಪಾಲ್ಗೊಂಡರೆ ಸಲೀಸಾಗಿ ಇನ್ನೂರು ಮುನ್ನೂರು ರೂಪಾಯಿ ಸಿಗುವ ಕಾಲವಿದು. ಕೆಲವರು ಡಿಸ್ಕೋ ಜಾಕಿಗಳಾಗಿ ಕೆಲವು ಗಂಟೆ ಕೆಲಸ ಮಾಡಿ, ತಮ್ಮ ಇನ್ಯಾವುದೋ ಹವ್ಯಾಸಕ್ಕೆ ಅಗತ್ಯವಿರುವ ಹಣ ಹೊಂದಿಸಿಕೊಳ್ಳುತ್ತಾರೆ.ನಗರದಲ್ಲಿ ಇಂದು ಪಾರ್ಟ್‌ ಟೈಂ ದುಡಿಮೆಗೂ ಸಾಕಷ್ಟು ದಾರಿಗಳಿವೆ. ನಗರದ ಯುವಕರು ಪಾಕೆಟ್‌ ಮನಿಗೆಂದು ಅಪ್ಪನ ಮುಂದೆ ಕೈಚಾಚಬೇಕಿಲ್ಲ. ಕಾಲೇಜು ಮುಗಿಸಿಕೊಂಡು ಸಂಜೆಯವರೆಗೂ ದುಡಿದು ತಮ್ಮ ಖರ್ಚುಗಳನ್ನು ಸರಿದೂಗಿಸುವುದು ಮಾತ್ರವಲ್ಲ ಮನೆಯ ಕಷ್ಟಕ್ಕೂ ನೆರವಾಗುವವರಿದ್ದಾರೆ.ನಗರದ ಹೆಚ್ಚಿನ ಕಾಲೇಜುಗಳಲ್ಲಿ ಮಧ್ಯಾಹ್ನ 2 ಗಂಟೆಗೆಲ್ಲ ತರಗತಿಗಳು ಮುಗಿಯುತ್ತವೆ. ಕಾಲೇಜು ಮುಗಿದ ನಂತರ ಯುವಕರು ಮಾಲ್‌ಗಳಲ್ಲಿ ಸೇಲ್ಸ್‌ಮನ್‌ಗಳಾಗಿ, ಕ್ಯಾಷಿಯರ್‌ಗಳಾಗಿ ದುಡಿಯುತ್ತಿದ್ದಾರೆ. ನಾಲ್ಕು, ಐದು ಗಂಟೆ ದುಡಿದು ತಿಂಗಳಿಗೆ ಐದಾರು ಸಾವಿರ ಸಂಪಾದಿಸುತ್ತಿದ್ದಾರೆ. ಕೆಲವರು ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದಾರೆ. ಇನ್ನು ಆನ್‌ಲೈನ್‌ನಲ್ಲಿ ದುಡಿಯುವವರೂ ಇದ್ದಾರೆ. ಒಂದರ್ಥದಲ್ಲಿ ಇವರದು ಸ್ವಾಭಿಮಾನದ ಬದುಕು. ಮಾಲ್‌ಗಳಲ್ಲಿ ಚಟಪಟ ಇಂಗ್ಲಿಷ್‌ ಮಾತನಾಡುತ್ತ ಗ್ರಾಹಕರನ್ನು ಆತ್ಮೀಯವಾಗಿ ಮಾತನಾಡಿಸುವ ಹದಿ ಹರೆಯದ ಯುವಕರು ಪಾರ್ಟ್‌ಟೈಂ ಸಿಬ್ಬಂದಿ.ನಗರದ ಮಾಲ್‌ಗಳು, ಕಾಫಿ ಡೇ, ಮೆಕ್‌ಡೊನಾಲ್ಡ್‌, ಕಂಪ್ಯೂಟರ್‌ ಸೆಂಟರ್‌ಗಳು ಇವೆಲ್ಲ ಯುವಕರ ನೆಚ್ಚಿನ ದುಡಿಮೆಯ ತಾಣಗಳಾಗಿವೆ. ಕಂಪ್ಯೂಟರ್‌ನಲ್ಲಿ ಹಿಡಿತವಿದ್ದವರು ಕಂಪ್ಯೂಟರ್‌ ಸರ್ವಿಸ್‌, ಸಾಫ್ಟ್‌ವೇರ್‌ ಇನ್‌ಸ್ಟಾಲೇಷನ್‌, ಡಾಟ ಎಂಟ್ರಿ ಹೀಗೆ ಹತ್ತಾರು ಕೆಲಸ ಮಾಡಿ ಹಣ ಸಂಪಾದಿಸುವವರಿದ್ದಾರೆ. ಕೆಲವರು ಪಿಜ್ಜಾ ಸೆಂಟರ್‌ಗಳಲ್ಲಿ ಹೋಮ್‌ ಡೆಲಿವರಿ ಮಾಡುವ ಕಾಯಕ ಮಾಡುತ್ತಿದ್ದಾರೆ. ಬೈಕ್‌ ಇದ್ದವರಿಗೆ ಇಂತಹ ಅವಕಾಶಗಳು ಹೆಚ್ಚು.ಕಂಪ್ಯೂಟರ್‌ ಕೊಡುಗೆ

ಹಣದ ಅವಶ್ಯಕತೆ ಹೆಚ್ಚಿದ ಈ ದಿನಗಳಲ್ಲಿ ಯುವಕರಲ್ಲಿ ಹಣ ಸಂಪಾದಿಸುವ ಉಮೇದು ಹೆಚ್ಚಿರುವುದು ಕೂಡ ನಗರ ಕಲಿಸಿದ ಪಾಠ. ಈಗಷ್ಟೇ ಕಾಲೇಜು ಮೆಟ್ಟಿಲೇರಿದ ಹುಡುಗ ‘ನಾನೂ ಪಾರ್ಟ್‌ಟೈಂ ಕೆಲಸಕ್ಕೆ ಸೇರಲೇ ಅಮ್ಮಾ’ ಎಂದು ಕೇಳುತ್ತಾನೆ. ಇದು ಕಂಪ್ಯೂಟರ್‌ ಕ್ರಾಂತಿ ತುಂಬಿದ ಆತ್ಮವಿಶ್ವಾಸ. ಕಂಪ್ಯೂಟರ್‌ ತಂತ್ರಜ್ಞಾನದ ಅರಿವಿರುವ ಯುವಕರಿಗೆ ಕೆಲಸ ಮಾಡುವ ಆತ್ಮವಿಶ್ವಾಸ ಹೆಚ್ಚಿದೆ. ಇಂಗ್ಲಿಷ್‌ ಭಾಷೆ ಮತ್ತು ಕಂಪ್ಯೂಟರ್‌ ಜ್ಞಾನ ಇದ್ದರೆ ಕೆಲಸ ಪಾರ್ಟ್‌ ಟೈಂ ಕೆಲಸ ಪಡೆಯುವುದು ಕಷ್ಟವೇನಲ್ಲ.

ಕಾಲೇಜಿನಿಂದಲೇ ಉದ್ಯೋಗ

ನಮ್ಮ ಕಾಲೇಜು ‘ವಾಲ್‌ ಮಾರ್ಟ್‌’ನ  ಟ್ರೈನಿಂಗ್‌ ಪ್ರಾಜೆಕ್ಟ್‌ ಜೊತೆ ಟೈಅಪ್‌ ಮಾಡಿಕೊಂಡಿದೆ. ‘ಸ್ಕಿಲ್‌ಔಟ್‌ ಪ್ಲೇಸ್‌ಮೆಂಟ್‌’ ಜೊತೆಯೂ ಕೈ ಜೋಡಿಸಿದೆ. ಈ ಮೂಲಕ ಎಲ್ಲೆಲ್ಲಿ ಕೆಲಸ ಖಾಲಿ ಇದೆ ಎಂಬ ಮಾಹಿತಿ ಪಡೆಯುತ್ತೇವೆ. ಜೂನ್‌ ತಿಂಗಳಲ್ಲಿ ಕಾಲೇಜು ಆರಂಭವಾಗುತ್ತಿದ್ದಂತೆ ತರಬೇತಿ ಹಮ್ಮಿಕೊಳ್ಳುತ್ತೇವೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕಂಪೆನಿಗಳಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದೇವೆ. 2000ನೇ ಇಸವಿಯಲ್ಲೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಈ ವರ್ಷ 25 ವಿದ್ಯಾರ್ಥಿಗಳು ಕೆಲಸಕ್ಕೆ ಸೇರಿಕೊಂಡಿದ್ದಾರೆ.

–ಸಂತೋಷ್‌, ಪ್ರಾಂಶುಪಾಲರು, ಯೂನಿವರ್ಸಲ್‌ ಕಾಲೇಜ್‌ಶಿಫ್ಟ್‌ನಲ್ಲಿ ಕೆಲಸ

ದ್ವಿತೀಯ ಬಿಕಾಂ ಓದುತ್ತಿದ್ದೇನೆ. ಇದರ ಜೊತೆಗೆ ವಿಜಯನಗರದ ರಿಲಯನ್ಸ್‌ ಮಾರ್ಟ್‌ನಲ್ಲಿ ಕಳೆದ ಒಂದುವರೆ ವರ್ಷಗಳಿಂದ ದುಡಿಯುತ್ತಿದ್ದೇನೆ. ತಿಂಗಳಿಗೆ ಆರೂವರೆ ಸಾವಿರ ದುಡಿಯುತ್ತೇನೆ. ಕಾಲೇಜು ಬಿಟ್ಟ ನಂತರ ಶಿಫ್ಟ್‌ನಲ್ಲಿ ದುಡಿಯುತ್ತೇನೆ. ರಜಾ ಇರುವಾಗ ಇಡೀ ದಿನ ಕೆಲಸ ಮಾಡುತ್ತೇನೆ. ಮಾಲ್‌ಗಳಲ್ಲಿ ಬೆಳಿಗ್ಗೆ 1ರಿಂದ 10 ಮತ್ತು 2ರಿಂದ 9 ಅಂತ ಶಿಫ್ಟ್‌ ಇರುತ್ತದೆ. ನಮಗೆ ಅನುಕೂಲವಾಗುವ ಶಿಫ್ಟ್‌ ಆಯ್ದುಕೊಳ್ಳುವ ಅವಕಾಶವಿದೆ. ಹೀಗೆ ದುಡಿಯುವುದರಿಂದ ಮನೆಗೂ ಸಹಾಯ ಮಾಡುತ್ತಿದ್ದೇನೆ.

–ಪ್ರಕಾಶ್, ಕಲ್ಯಾಣನಗರದುಡಿಮೆಯಿಂದ ಓದಿಗೆ ಅಡ್ಡಿಯಿಲ್ಲ

ನಾನು ಪ್ರಥಮ ಪಿಯುಸಿಯಲ್ಲಿದ್ದಾಗಲೇ ಕಲಿಕೆಯ ಜೊತೆಗೆ ದುಡಿಯಲು ಆರಂಭಿಸಿದ್ದೆ. ಮಂತ್ರಿ ಮಾಲ್‌ನಲ್ಲಿ ಮೂರು ವರ್ಷ ವಿವಿಧ ಮಟ್ಟದಲ್ಲಿ ದುಡಿದಿದ್ದೇನೆ. ಪಾರ್ಟ್‌ ಟೈಂ ಆದರೂ ಅಲ್ಲೂ ಬಡ್ತಿ ನೀಡುತ್ತಾರೆ. ಕ್ಯಾಡ್‌ ಸೆಂಟರ್‌ನಲ್ಲೂ ಕೆಲಸ ಮಾಡಿದ್ದೇನೆ. ಹೆಬ್ಬಾಳದ ಐಟಿ ಕಂಪೆನಿಯಲ್ಲೂ ಕೆಲ ಕಾಲ ಕೆಲಸ ಮಾಡಿದ್ದೇನೆ. ಈಗ ಯುನಿವರ್ಸಲ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿದ್ದೇನೆ. ಮಧ್ಯಾಹ್ನ ಒಂದು ಗಂಟೆಗೆ ಕಾಲೇಜು ಮುಗಿಯುತ್ತದೆ. ನಂತರ ಐಸಿಐಸಿಐ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳಿಗೆ ಸುಮಾರು 18ರಿಂದ 20 ಸಾವಿರ ದುಡಿಯುತ್ತೇನೆ. ಸ್ವಂತ ದುಡಿಮೆಯಿಂದ ಬೈಕ್‌, ಸೆಕೆಂಡ್‌ ಹ್ಯಾಂಡ್‌ ಕಾರು ಕೊಂಡಿದ್ದೇನೆ. ನನ್ನ ಕಾಲೆೇಜು ಫೀಸು, ಇನ್ನಿತರ ಖರ್ಚುಗಳನ್ನು ನಾನೇ ಹೊಂದಿಸಿಕೊಳ್ಳುತ್ತಿದ್ದೇನೆ. ಅಪ್ಪನಿಗೊಂದು ದ್ವಿಚಕ್ರ ವಾಹನ ಕೊಡಿಸಬೇಕೆಂದಿದ್ದೇನೆ. ದುಡಿಮೆಯ ಜೊತೆಗೆ ಓದುವುದು ಕಷ್ಟವಾಗಿಲ್ಲ.

–ವಿಕಾಸ್‌, ತುಂಗಾನಗರದುಡಿಯುವುದರಲ್ಲಿ ಖುಷಿ ಇದೆ

ಮೊದಲ ವರ್ಷದ ಬಿಕಾಂ ಓದುತ್ತಿದ್ದೇನೆ. ಜೊತೆಗೆ ಪಾರ್ಟ್‌ಟೈಂ ಕೆಲಸ ಮಾಡುತ್ತೇನೆ. ಮೊದಲು ಮಂತ್ರಿ ಮಾಲ್‌ನಲ್ಲಿ ಸೇಲ್ಸ್ ಗರ್ಲ್‌ ಆಗಿ ಕೆಲಸ ಮಾಡಿದ್ದೇನೆ. ಪಾರ್ಕ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಟೆಲಿ ಕಾಲಿಂಗ್‌ ಕೆಲಸ ಮಾಡಿದ್ದೇನೆ. ಕೆಎಫ್‌ಸಿಯಲ್ಲಿಯೂ ಗಂಟೆ ಲೆಕ್ಕದಲ್ಲಿ ಕೆಲಸ ಮಾಡಿದ್ದೇನೆ. ಬೆಳಗಿನ ಕ್ಲಾಸ್‌ ಮುಗಿಸಿದ ನಂತರ ಸಿಗುವ ಐದಾರು ಗಂಟೆಗಳನ್ನು ವ್ಯರ್ಥವಾಗಿ ಕಳೆಯುವ ಬದಲು ದುಡಿಯುವುದರಿಂದ ಆರ್ಥಿಕ ಶಕ್ತಿಯೂ ಬರುತ್ತದೆ. ಜೊತೆಗೆ ಪಾಕೆಟ್‌ ಮನಿಗೆ ಪೋಷಕರನ್ನು ಕೇಳುವ ಸಂದರ್ಭ ಬರುವುದಿಲ್ಲ. ಓದಿನ ಜೊತೆ ಹಣ ಸಂಪಾದಿಸುವುದರಲ್ಲಿ ಖುಷಿಯಿದೆ.

–ಅನಿತಾ, ರಾಜಾಜಿನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry