ಕಲಿಕೆ ಎಂಬ ಆನಂದ

7

ಕಲಿಕೆ ಎಂಬ ಆನಂದ

Published:
Updated:

ಎಂ.ಎ. ಕನ್ನಡನಾ? ಯಾಕೆ ಎಂ.ಡಿ. ಓದಿದ್ದು ಸಾಲದಾ? ಅಷ್ಟಕ್ಕೂ ಕನ್ನಡ ಲಿಟರೇಚರ್ ಓದಿ ನೀವು ಮಾಡೋದಾದ್ರೂ ಏನು? ಆ ಹಳೆಗನ್ನಡ- ವ್ಯಾಕರಣ ಸದ್ಯ ಆಗ್ಲೇ ಮುಗೀತಲ್ಲಾ ಅಂತ ಶಾಲೆ ಮುಗಿದಾಗ್ಲೇ ಅಂದ್ಕೊಂಡಿದ್ದೆ ನಾನು. ಆದ್ರೆ ನಿಮಗೆ ಓದಿನ ಚಪಲ ಅಷ್ಟೆ!

***

ನೀವು ಡಾಕ್ಟ್ರಂತೆ? ಅದೇ ನಾವೆಲ್ಲ ಅಂದ್ಕೋತಿದ್ವಿ. ನಮಗಂತೂ ಹಣೆಬರಹ, ಟೀಚರ‌್ರಾಗಿ ಪ್ರೊಮೋಷನ್‌ಗೆ ಈ ಎಂ.ಎ. ಬೇಕಲ್ಲಾ. ಆದ್ರೆ ನಿಮಗ್ಯಾಕೆ ಈ ಡಿಗ್ರಿ?

***

ಅರೆರೆ ಎಂ.ಎ.ನಲ್ಲಿ ಫಸ್ಟ್ ರ‌್ಯಾಂಕ್, ಮೂರು ಗೋಲ್ಡ್ ಮೆಡಲ್ ಬೇರೆ! ಆದ್ರೆ ಇದೆಲ್ಲಾ ಇಟ್ಟೊಂಡು ಏನ್ ಮಾಡೋಕೆ? ಹೋಗ್ಲಿ ಬಿಡು ಗೋಲ್ಡ್ ಮೆಡಲ್‌ಗೆ ಕಟ್ಟು ಹಾಕ್ಸಿ ಇಟ್ಕೊ.

***

ಎಂ.ಎ. ಕನ್ನಡ ಕಟ್ಟಲು ಹೊರಟಾಗ ಮತ್ತು ಆ ಪದವಿಯನ್ನು ಪಡೆದಾಗ ನನಗೆ ಸಿಕ್ಕ ಸಾಮಾನ್ಯ ಪ್ರತಿಕ್ರಿಯೆಗಳು ಇವು. ಓದಿನ ಬದುಕಿನುದ್ದಕ್ಕೂ ಪ್ರಥಮ ರ‌್ಯಾಂಕ್ ಬಿಟ್ಟುಕೊಡದ, ಸ್ವಬುದ್ಧಿವಂತಿಕೆಯಿಂದ ಎಂ.ಬಿ.ಬಿ.ಎಸ್., ಎಂ.ಡಿ. ಸೀಟನ್ನು  ಖರ್ಚಿಲ್ಲದೇ ಗಿಟ್ಟಿಸಿಕೊಂಡಿದ್ದ ನನಗೆ, ಎಂ.ಎ. ಕನ್ನಡದ ಅಗತ್ಯವಿತ್ತೇ ಎಂಬುದು ಹಲವರಿಗೆ ಯಕ್ಷಪ್ರಶ್ನೆ! ನಾನಾದರೋ ಕನ್ನಡ ಎಂ.ಎ. ಕಟ್ಟಿದ್ದು ಕುತೂಹಲದಿಂದಲೇ ಹೊರತು ಅಗತ್ಯ- ಅವಶ್ಯಕತೆಗಳಿಂದ ಅಲ್ಲ.ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಓದಿದ್ದ ನಾನು `ಕನ್ನಡ'ವನ್ನು ತರಗತಿಯಲ್ಲಿ ಕಲಿತದ್ದು 10ನೇ ಕ್ಲಾಸಿಗೇ ಕೊನೆ. ಪುಸ್ತಕ ಓದುವ `ಚಟ' ಮಾತ್ರ ಬಿಟ್ಟಿರಲಿಲ್ಲ ಅಷ್ಟೆ! ಆದರೆ ಎಂ.ಎ. ಕಟ್ಟುವಾಗ ಇದ್ದ `ಕುತೂಹಲ' `ಕನ್ನಡ'ದೊಳಗೆ ಇಳಿಯುತ್ತಿದ್ದಂತೆ ಕಡಿಮೆಯಾಗದೆ ಇನ್ನಷ್ಟು ಹೆಚ್ಚೇ ಆಗಿದ್ದು ಮಾತ್ರ ನನಗೂ ಅನಿರೀಕ್ಷಿತವೇ.ನನ್ನ ಬೇರೆ ಯಾವ ಅಧ್ಯಯನಕ್ಕಿಂತಲೂ ಈ `ಸಾಹಿತ್ಯ'ದ ಅಧ್ಯಯನ ವಿಭಿನ್ನವಾಗಿತ್ತು. ಹೊಸ ಯೋಚನೆಗೆ, ಹೊಸ ಅರ್ಥಕ್ಕೆ, ಶೈಲಿಗೆ ಇಲ್ಲಿದ್ದ ಅವಕಾಶ ಅಪಾರವಾಗಿತ್ತು. ನನ್ನ ಆವರೆಗಿನ ವಿಭಿನ್ನ ಅಧ್ಯಯನಗಳು ವೈದ್ಯಕೀಯ, ಮನೋವೈದ್ಯಕೀಯ, ನೃತ್ಯ-ಸಂಗೀತ ಎಲ್ಲವೂ ಓದಿನ ಕ್ರಮದಲ್ಲಿ, ಒಳನೋಟದಲ್ಲಿ, ವಿಷಯ ಪ್ರಸ್ತಾವನೆಯಲ್ಲಿ ಒಂದಕ್ಕೊಂದು ಪೂರಕವಾದವು.ಕಾಂಟಾಕ್ಟ್ ತರಗತಿಗಳಿಗೆ ಬರುತ್ತಿದ್ದ ಉಪನ್ಯಾಸಕರಲ್ಲೂ ವಿಧ ವಿಧ. ಒಬ್ಬೊಬ್ಬರ ಪಾಠವೂ ನನ್ನಲ್ಲಿ ಹತ್ತು ಹಲವು ಚಿಂತನೆಗಳನ್ನು ಮೂಡಿಸುತ್ತಿದ್ದವು. ಪ್ರೊ. ಕೂಡಿಗೆ ಅವರ `ಕ್ರೈಸ್ತ ಮಿಷನರಿಗಳು ಕನ್ನಡಕ್ಕೆ ಮಾಡಿದ ಕೆಲಸ ಗೊತ್ತಿರುವ ಯಾರೂ ಚರ್ಚುಗಳಿಗೆ ಬಾಂಬ್ ಹಾಕಲಾರರು' ಎಂಬ ಜೀವನ ದೃಷ್ಟಿಯ ಪಾಠ, ಪ್ರೊ. ರಾಜಶೇಖರ್ ಅವರ ಜನಪದ ಪಾಠ, ಜನಪದ ಗೀತೆ ಎಲ್ಲವೂ ಬೇಗ ಬೇಗ ಒ.ಪಿ.ಡಿ. ಮುಗಿಸಿ ಕ್ಲಾಸಿನಲ್ಲಿ ಕುಳಿತು, ಮತ್ತೆ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮಯ ಹೊಂದಿಸಿಕೊಳ್ಳುವುದನ್ನು ಸಂತೋಷದಿಂದಲೇ ನಾನು ಮಾಡುವಂತೆ ಮಾಡಿದ್ದವು.ಈ ಎಂ.ಎ. ಎರಡು ವರ್ಷ ಮುಕ್ತಾಯವಾದದ್ದು ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಬಂಗಾರದ ಪದಕ ಪಡೆಯುವ ಮೂಲಕ. ಆದರೆ ನನಗೆ ವೈಯಕ್ತಿಕವಾಗಿ  ಪದಕಗಳಿಗಿಂತ ಹೆಚ್ಚು ಸಂತಸ ತಂದಿದ್ದು `ಸಾಹಿತ್ಯ'ದ ಹಿತಕರ ಅನುಭವ.ಪುಸ್ತಕವನ್ನು `ಪರೀಕ್ಷೆಯಲ್ಲಿ ಇಷ್ಟೇ ಅಂಕ ಗಳಿಸಬೇಕು' ಎಂದು ಒತ್ತಡವಿಲ್ಲದೇ ಓದುವ ಅನುಭವ, ಗೊತ್ತಿರುವ- ಓದಿರುವ ಪುಸ್ತಕವನ್ನೇ ಮತ್ತೆ ಮತ್ತೆ ಓದುವುದರಿಂದ ಸಿಗುವ ಹೊಸ ಒಳನೋಟ, ವಿಜ್ಞಾನದ ಅರಿವಿನಿಂದ ಸಾಹಿತ್ಯವನ್ನೂ ತೋಚಿದಂತೆ ಗೀಚದೆ ಕೇಂದ್ರೀಕೃತವಾಗಿ ಪ್ರಸ್ತುತಪಡಿಸುವ ಸಾಮರ್ಥ್ಯ, ನನ್ನ ಇತರ ಸಂಗೀತ- ನೃತ್ಯ- ವಿಜ್ಞಾನ ಕಲಿಕೆಗಳನ್ನೂ ಸಾಹಿತ್ಯಕ್ಕಾಗಿ ದುಡಿಸಿಕೊಳ್ಳುವ ಅವಕಾಶ, ಜೊತೆಗೆ 30ರ ಹರೆಯದಲ್ಲಿ ಹತ್ತು ವರ್ಷಗಳಷ್ಟು ಚಿಕ್ಕವಳಾಗಿ ಮತ್ತೆ ಪರೀಕ್ಷೆ ಬರೆಯುವ, ಸಾಮರ್ಥ್ಯ ಸಾಬೀತು ಪಡಿಸುವ ಸಂತಸ- ಇವೆಲ್ಲವೂ ಈ ಹಿತಕರ ಅನುಭವದ ಅಂಶಗಳು.ಆತ್ಮೀಯರೂ, ಹಿರಿಯರೂ ಆದ ಪ್ರೊ. ಜಿ.ವೆಂಕಟಸುಬ್ಬಯ್ಯ ನನಗೊಮ್ಮೆ ಹೇಳಿದ್ದರು `ಜೈನ ಸಾಹಿತ್ಯವನ್ನು ಓದಬೇಕು, ಅದನ್ನು ಓದಿದವರಿಗೆ ಸಾವಿನ ಹೆದರಿಕೆ ಇರಲಾರದು'. ಹಾಗೆಯೇ ಸಾಹಿತಿಯಾದ ನನ್ನಮ್ಮ ಯಾವಾಗಲೂ ಹೇಳುವ ಮಾತು `ಸಾಹಿತಿಗಳಲ್ಲಿ ಹೆಚ್ಚಿನವರು ದೀರ್ಘಾಯುಷಿಗಳು. ಅಷ್ಟೇ ಅಲ್ಲ, ವಯಸ್ಸಾದರೂ ಬುದ್ಧಿ ಮಂದವಾಗದೆ, ಸಂತೋಷದಿಂದ ಸಾಹಿತ್ಯ ಓದಿಕೊಂಡು- ಬರೆದುಕೊಂಡು ಇರುವವರು!'

ಇವೆರಡೂ ನಿಜವೇ ಎಂಬುದು ಗೊತ್ತಿಲ್ಲ. ಆದರೆ ಸಾಹಿತ್ಯದ ಓದು ಜೀವನಾನುಭವದ ಓದು, ಮನುಷ್ಯ ಸಂಬಂಧಗಳ ಕಲಿಕೆ, ಆಪ್ತ ಸಂಗಾತಿಯಂತೆ ಬುದ್ಧಿಯನ್ನು ಮನಸ್ಸು- ಮೆದುಳುಗಳಿಗೆ ನೋವಾಗದಂತೆ ತುಂಬುವಂಥದ್ದು. ಶಿಕ್ಷಣ ಕೇವಲ ಅಕ್ಷರ ಕಲಿಕೆಯಾಗದೆ, ಅಂಕ ಗಳಿಕೆಯಾಗದೆ ಜೀವನ ಕೌಶಲವಾಗಲು ಇದು ಅತ್ಯಗತ್ಯ.ನಮ್ಮ ನಡುವೆ ಓದನ್ನು ಅರ್ಧದಲ್ಲಿ ಬಿಟ್ಟ ಸಾವಿರಾರು ಮಂದಿ ಇದ್ದಾರೆ. ಅದರಲ್ಲೂ ಮಹಿಳೆಯರ ಪಾಲು ಇದರಲ್ಲಿ ಹೆಚ್ಚಾಗಿದೆ. ಓದಿಯೂ  `ಶಿಕ್ಷಿತ'ರಾಗದ ಅಕ್ಕ-ತಂಗಿಯರು, ಅಣ್ಣ- ತಮ್ಮಂದಿರು ಇದ್ದಾರೆ. ನಮಗೆ ಓದಿನಲ್ಲಿ ಸಂತಸವಿರದ ಹೊರತು, ಓದಿನಿಂದ ಅಂಕ ಗಳಿಕೆಯ ಜೊತೆಗೆ ಆನಂದ ಗಳಿಕೆಯು ಗುರಿಯಾಗದ ಹೊರತು ಸಾಕ್ಷರತೆ ಬರೀ `ಸಹಿ ಸಾಕ್ಷರತೆ' ಆಗುತ್ತದೆ ಅಷ್ಟೆ.ವಯಸ್ಸು- ಜಾತಿ- ವರ್ಗ- ಸ್ಥಳ ಭೇದವಿಲ್ಲದೆ ಕಲಿಕೆಗೆ ಅವಕಾಶವನ್ನು ಇಂದು ಹಲವು ವಿಶ್ವವಿದ್ಯಾಲಯಗಳು ಮುಕ್ತವಾಗಿ ಕಲ್ಪಿಸಿವೆ. ನಮ್ಮ ಮೈ- ಮನ- ಬುದ್ಧಿಗಳ ಆಲಸ್ಯವನ್ನು ಬಿಟ್ಟು ಕೇವಲ `ಸಹಿ ಸಾಕ್ಷರ'ರಾಗದೇ ಜೀವನ ಕಲೆಯ ಸಾಕ್ಷರತೆಯನ್ನು ನಾವು ಸಾಧಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry