ಕಲಿತ ಶಾಲೆಯಲ್ಲಿ ಬಂಡಿ ಗುರುವಂದನೆ

7

ಕಲಿತ ಶಾಲೆಯಲ್ಲಿ ಬಂಡಿ ಗುರುವಂದನೆ

Published:
Updated:

ಶಿರಸಿ: ಇಲ್ಲಿನ ಮಹಾಲಿಂಗಪ್ಪ ಭೂಮಾ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ, ಹಾಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಕಳಕಪ್ಪ ಬಂಡಿ ತಾವು ಕಲಿತ ಶಾಲೆಯಲ್ಲಿ ಸನ್ಮಾನ ಸ್ವೀಕರಿಸಿದರು. ಹಾಗೆಯೇ ತಾವು ಕಲಿತ ಶಾಲೆಯ ಮುಖ್ಯ ಶಿಕ್ಷಕ ಎಚ್.ಬಿ.ನಂಜಾಮರಿ ಹಾಗೂ ಸಹ ಶಿಕ್ಷಕರನ್ನು ಸನ್ಮಾನಿಸಿದರು.ಶನಿವಾರ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯ ಪ್ರಮುಖರು ತಮ್ಮ ಶಾಲೆಯ ಹಳೆ ವಿದ್ಯಾರ್ಥಿಯಾಗಿ ಪ್ರಸ್ತುತ ರಾಜ್ಯ ಸರ್ಕಾರದ ಸಚಿವರಾಗಿರುವ ಕಳಕಪ್ಪ ಬಂಡಿ ಅವರಿಗೆ ಹೆಮ್ಮೆಯಿಂದ ಸನ್ಮಾನಿಸಿದರು.ನಂತರ ಭೂಮಾ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಕಳಕಪ್ಪ ಬಂಡಿ ನೇತೃತ್ವದಲ್ಲಿ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು 30 ವರ್ಷ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ಇದೇ ತಿಂಗಳು ನಿವೃತ್ತರಾಗಲಿರುವ ಎಚ್.ಬಿ.ನಂಜಾಮರಿ ಅವರನ್ನು ಆತ್ಮೀಯವಾಗಿ ಗೌರವಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು. ವಿದ್ಯಾರ್ಥಿ ದೆಸೆಯಲ್ಲಿ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ, ಸೂಕ್ತ ಮಾರ್ಗದರ್ಶನ ದೊರೆತರೆ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ. ಕಲಿತ ವಿದ್ಯೆ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನ ಪ್ರತಿ ವ್ಯಕ್ತಿಯ ಬದುಕಿನಲ್ಲೂ ಸದಾ ಸಿಹಿ ನೆನಪಾಗಿರುತ್ತದೆ. ಅಧಿಕಾರ, ದುಡ್ಡು ಗಳಿಸಿ ವ್ಯಕ್ತಿ ಎತ್ತರದ ಸ್ಥಾನಕ್ಕೆ ತಲುಪಿದರೂ ಬಾಲ್ಯದ ಸಿಹಿ ದಿನಗಳು ಮರುಕಳಿಸುವುದಿಲ್ಲ ಎಂದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಎಂ.ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮಂಗಲಾ ನಾಯ್ಕ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವರಾಮ ಹೆಬ್ಬಾರ, ನಗರಸಭೆ ಸದಸ್ಯ ಬಸವರಾಜ ಶಿವನಂಚಿ, ಸಾಮಾಜಿಕ ಕಾರ್ಯಕರ್ತ ಕೃಷ್ಣ ಎಸಳೆ,  ಗಿರೀಶ ಭಟ್ಟ, ವಸಂತ ಮಡಿವಾಳ, ಕೇಶವ ನಾಯ್ಕ, ಮಹೇಶ, ಪ್ರಭಾಕರ ದೇವಾಡಿಗ  ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ  ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry