ಗುರುವಾರ , ಫೆಬ್ರವರಿ 25, 2021
30 °C
ಹವ್ಯಾಸ ಹೊಂಗನಸು

ಕಲಿಯದಿದ್ದರೂ ಹಾಡುವ ಮೈತ್ರಿ

ನಿರೂಪಣೆ: –ಇ.ಎಸ್‌. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಕಲಿಯದಿದ್ದರೂ ಹಾಡುವ ಮೈತ್ರಿ

ಹಾಡು ಎಂದರೆ ನನಗೆ ಬಲು ಇಷ್ಟ. ಬಾಲ್ಯದಿಂದಲೇ ಸಂಗೀತದ ನಂಟು ಬೆಸೆಯಿತು. ತಂದೆಯ ಪ್ರೋತ್ಸಾಹ, ನನ್ನ ಉತ್ಸಾಹ ಎರಡೂ ಸೇರಿ ಸಾಕಷ್ಟು ಸ್ಪರ್ಧೆಯಲ್ಲಿ ಪಾಲ್ಗೊಂಡೆ. ಹಲವಾರು ಪ್ರಶಸ್ತಿಗಳನ್ನು ಪಡೆದೆ. ನಾನು ಮೈತ್ರಿ ಭಟ್‌.ಬಾಲ್ಯದಿಂದಲೂ ಸಂಗೀತವೆಂದರೆ ಪಂಚಪ್ರಾಣ. ನನ್ನ ತಂದೆಗೂ ಸಂಗೀತ, ಸಂಸ್ಕೃತಿಯಲ್ಲಿ ಅಪಾರ ಆಸಕ್ತಿ. ಪೌರೋಹಿತ್ಯ ಅವರ ವೃತ್ತಿಯಾಗಿತ್ತು. ಛಾಯಾಗ್ರಹಣವನ್ನು ಅವರು ವೃತ್ತಿ ಹಾಗೂ ಪ್ರವೃತ್ತಿಯಾಗಿ ಸ್ವೀಕರಿಸಿದ್ದರು. ಆರ್ಥಿಕವಾಗಿ ಅಷ್ಟಾಗಿ ಶಕ್ತಿವಂತರಲ್ಲದಿದ್ದರೂ ಕಲಾಸಕ್ತಿಯಲ್ಲಿ ಶ್ರೀಮಂತರಾಗಿದ್ದರು. ಅವರಿಗೆ ಕಲೆಯಲ್ಲಿ ಅಪಾರ ಆಸಕ್ತಿ ಇದ್ದಿದ್ದರಿಂದಲೇ ‘ಪಲ್ಲವಿ ಸಾಂಸ್ಕೃತಿಕ ವೇದಿಕೆ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.ಮನೆಯಲ್ಲೇ ಕಲೆಯ ವಾತಾವರಣ ಇದ್ದಿದ್ದರಿಂದ ನನ್ನ ಸಂಗೀತಾಭ್ಯಾಸ ನಿರಾಂತಕವಾಗಿ ನಡೆದಿದೆ. ಆದರೂ ಸಂಗೀತವನ್ನು ಪೂರ್ಣಪ್ರಮಾಣದಲ್ಲಿ ಶಾಸ್ತ್ರೀಯವಾಗಿ ಅಭ್ಯಾಸ ಮಾಡಲು ಸಾಧ್ಯವಾಗಿಲ್ಲ ಎಂಬ ಬೇಸರವಿದೆ. ಇದರ ಜತೆಗೆ ನೃತ್ಯ, ಯಕ್ಷಗಾನ ಮಾಡಿದ ಅನುಭವ ಇದೆ. ಆದರೆ ಸಂಗೀತವನ್ನೇ ಪ್ರಧಾನವಾಗಿಟ್ಟುಕೊಳ್ಳುವ ಮನಸ್ಸಾಯಿತು. ಹೀಗಾಗಿ ಹಾಡುಗಾರಿಕೆಯನ್ನೇ ಮುಂದುವರಿಸಿದೆ.ಹಾಡಲು ಆರಂಭಿಸಿದ್ದು ನಾನು ಐದನೇ ತರಗತಿಯಲ್ಲಿ ಇದ್ದಾಗ. ಭಾವಗೀತೆ, ಜನಪದಗೀತೆ, ದೇವರ ನಾಮ ಹೀಗೆ ಒಂದೊಂದು ಪ್ರಕಾರವನ್ನೇ ಕಲಿತು ಹಾಡಲು ಆರಂಭಿಸಿದೆ. ಸಂಗೀತವನ್ನು ಜೂನಿಯರ್‌ ಹಂತದವರೆಗೂ ಕಲಿತು ಮೊದಲ ದರ್ಜೆಯಲ್ಲಿ ತೇರ್ಗಡೆಯಾದೆ.ನಂತರ ನನಗೆ ಹಿಡಿಸುವ ಗುರುಗಳು ಸಿಗದ ಕಾರಣ ಹಾಗೂ ಮನೆಯ ಪರಿಸ್ಥಿತಿಯಿಂದಾಗಿ ಕಲಿಕೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೂ ಇರುವ ಆಸಕ್ತಿಯಿಂದಾಗಿ ಈವರೆಗೂ ಅದನ್ನು ಮುಂದುವರಿಸಿಕೊಂಡು ಬಂದಿದ್ದೇನೆ.

ನನ್ನ ಚಿಕ್ಕಮ್ಮ ಹಾಗೂ ಎಂ.ಎಸ್‌. ಗಿರಿಧರ್‌ ಅವರನ್ನು ನಾನು ಗುರುಗಳು ಎಂದು ನಂಬಿದ್ದೇನೆ.ನಾನು ನಂಬಿದ ಸಂಗೀತ ನನ್ನ ಕೈ ಬಿಡಲಿಲ್ಲ. ಬಾಲ್ಯದಿಂದ 500ಕ್ಕೂ ಹೆಚ್ಚಿನ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದೇನೆ. ಮನೆಯಲ್ಲಿ 375 ಸ್ಪರ್ಧೆಯಲ್ಲಿ ಗೆದ್ದ ಶೀಲ್ಡ್‌ಗಳಿವೆ. ‘ಬಾಲ ಪ್ರತಿಭೆ’ ಪ್ರಶಸ್ತಿಯನ್ನು ಸರ್ಕಾರದಿಂದ ಪಡೆದಿದ್ದೇನೆ. ಕಿಶೋರ ಪ್ರತಿಭೆ ಎಂಬ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದೇನೆ.ಸ್ಪರ್ಧೆ ಹೊರತುಪಡಿಸಿದರೆ, ಈವರೆಗೂ 300ರಿಂದ 350 ಕಾರ್ಯಕ್ರಮಗಳನ್ನು ನೀಡಿದ್ದೇನೆ. ತಂದೆಯ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ನಂತರವೂ ಅವರೂ ನನ್ನ ಕಲಾಸಕ್ತಿಗೆ ಸದಾ ನೆರಳಾಗಿ ನಿಂತಿದ್ದಾರೆ. ಎಲ್ಲೇ ಕಾರ್ಯಕ್ರಮವಿರಲಿ ಸ್ವತಃ ತಾವೇ ಕರೆದುಕೊಂಡು ಹೋಗುತ್ತಾರೆ. ನಮ್ಮ ಸಂಸ್ಥೆಯಂತೆಯೇ ಇರುವ ಹತ್ತಾರು ಸಣ್ಣ ಪುಟ್ಟ ಸಂಸ್ಥೆಗಳ ಒಕ್ಕೂಟದಿಂದ ಆಗಾಗ ಕಾರ್ಯಕ್ರಮಗಳಿಗೆ ಕರೆಯುತ್ತಾರೆ.ನಾನು ನೀಡುವ ಸಂಗೀತ ಕಾರ್ಯಕ್ರಮಗಳಿಂದಲೇ ಕಿರುತೆರೆಯಲ್ಲಿ ಕಾರ್ಯಕ್ರಮ ನೀರೂಪಣೆಯ ಅವಕಾಶವೂ ಲಭಿಸಿತು. ಈಟಿವಿಯ ‘ಮಿನುಗುತಾರೆ’ ಕಾರ್ಯಕ್ರಮವನ್ನು 30 ವಾರಗಳ ಕಾಲ ನಡೆಸಿಕೊಟ್ಟೆ. ಅದರಂತೆಯೇ ಭಾವಸಂಗಮ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದೇನೆ.ನ್ಯಾಷನಲ್‌ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಮುಗಿಸಿದ್ದೇನೆ. ಇದೀಗ ವೋಲ್ವೋ ಕಂಪೆನಿಯಲ್ಲಿ ಉದ್ಯೋಗಿಯಾಗಿ ಕಳೆದ ಎಂಟು ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ವಾರಾಂತ್ಯದಲ್ಲಿ ಮಾತ್ರ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದೇನೆ. ನನ್ನದೇ ಶೈಲಿಯಲ್ಲಿ ನಾನೂರು ಹಾಡುಗಳನ್ನು ಹಾಡುತ್ತೇನೆ.  ಹಾಡುಗಾರಿಕೆಯನ್ನೇ ಮತ್ತಷ್ಟು ಶಾಸ್ತ್ರೀಯವಾಗಿ ಕಲಿಯುವಾಸೆ. ಜತೆಗೆ ಕುಟುಂಬಕ್ಕೆ ನೆರವಾಗುವ ಬಯಕೆಯೂ ಇದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.