ಮಂಗಳವಾರ, ನವೆಂಬರ್ 19, 2019
28 °C

ಕಲಿಯುವವರ ಕಲಾಲೋಕ

Published:
Updated:

ಪ್ರಕೃತಿ, ಸೌಂದರ್ಯ, ಸಂಬಂಧ, ಅಂತರಂಗದ ಅಲೆದಾಟ ಹೀಗೆ ಪ್ರತಿಯೊಂದು ವಸ್ತು, ಭಾವವೂ ಒಂದೊಂದು ಭಿನ್ನ ರೂಪದಲ್ಲಿ ಇಲ್ಲಿ ಬಿತ್ತರಗೊಂಡಿದೆ. ವಿದ್ಯಾರ್ಥಿಗಳ ಕಲ್ಪನೆಯಲ್ಲಿ ಮೈದಳೆದಿರುವ ಈ ಕಲೆಯ ಒನಪನ್ನು ನೋಡುವುದೇ ಸೊಗಸಾದ ಅನುಭವ.

ಈ ಭಿನ್ನ ಅನುಭವಕ್ಕೆ ವೇದಿಕೆಯಾಗಿರುವುದು ನಗರದ ಚಿತ್ರಕಲಾ ಪರಿಷತ್ತು. ಚಿತ್ರಕಲಾ ಪರಿಷತ್ತಿನಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಕಲಾ ನೈಪುಣ್ಯವನ್ನು ತೋರಲೆಂದೇ ಪ್ರದರ್ಶನವೊಂದು ಏರ್ಪಟ್ಟಿದೆ. ಕೇವಲ ಸಾಂಪ್ರದಾಯಿಕ ಶೈಲಿಯಲ್ಲದೆ ಆಧುನಿಕ ಕಲಾ ಪರಿಕರಗಳು ವಿದ್ಯಾರ್ಥಿಗಳ ಕೌಶಲವನ್ನು ಇಲ್ಲಿ ಬಿಂಬಿಸುತ್ತವೆ. ಪರಿಷತ್ತಿನ ಎಲ್ಲಾ ಗ್ಯಾಲರಿಗಳಲ್ಲೂ ಹರಡಿಕೊಂಡಿರುವ ಈ ಕಲಾ ಪರಿಕರಗಳಲ್ಲಿ ಸಮಕಾಲೀನತೆಯ ಸೊಬಗಿನೊಂದಿಗೆ ಅಲ್ಲಲ್ಲಿ ಮನುಷ್ಯನ ಸಂದಿಗ್ಧತೆಯೂ ಇಣುಕುತ್ತದೆ.ಕಲೆ ಎಂದಮಾತ್ರಕ್ಕೆ ಚಿತ್ರಗಳಲ್ಲಿಯೇ ಎಲ್ಲವೂ ಬಿಂಬಿತವಾಗಬೇಕೆಂದಿಲ್ಲ. ಇದಕ್ಕೆ ಪೂರಕವಾಗಿ ಶಿಲ್ಪಕಲೆಗಳು ನೋಡುಗರ ಕಣ್ಣನ್ನು ತುಂಬುತ್ತವೆ. ಚಿತ್ರ, ಶಿಲ್ಪವನ್ನು ನೋಡಿ ಸವಿಯುವ ಜತೆಗೆ ಕಲೆಯ ವಿಸ್ತಾರ, ಇತಿಹಾಸ ತಿಳಿಯಬಯಸುವವರಿಗೆಂದೇ ಕಲೆಗೆ ಸಂಬಂಧಪಟ್ಟ ಹಲವು ಪುಸ್ತಕಗಳನ್ನೂ ಪ್ರದರ್ಶನದಲ್ಲಿ ಇಡಲಾಗಿದೆ.ಪಾರಂಪರಿಕ ಕಲಾ ಮಾಧ್ಯಮದೊಂದಿಗೆ ಆಧುನಿಕ ಮಾಧ್ಯಮಗಳಾದ ಇನ್‌ಸ್ಟಲೇಷನ್, ವಿಡಿಯೋ ಇನ್‌ಸ್ಟಲೇಷನ್ ಅದ್ಭುತ ಅನುಭವವನ್ನು ವೀಕ್ಷಕರ ಮನಕ್ಕೆ ಮುಟ್ಟಿಸಲಿದೆ. ಸಮಕಾಲೀನತೆಯ ಜೊತೆ ಹೇಗೆ ಕಲೆ ತಳುಕು ಹಾಕಿಕೊಂಡಿದೆ ಎಂಬ ನಿರೂಪಣೆ ವಿದ್ಯಾರ್ಥಿಗಳ ಈ ಕಲಾ ಮಾಧ್ಯಮದಲ್ಲಿ ಬಿಂಬಿತವಾಗಿದೆ.ಅಶ್ವಿನಿ ಹೆಗಡೆ, ಪುನೀತ್, ಧನುಷ್, ಕಿರಣ್, ಸಾಯಿ ಸ್ವರೂಪ್, ರಂಜನಾ ನಾಗ್, ಅಮೀರ್ ಮೊಸ್ಲೆಮ್ ಅವರ ಬೃಹದಾಕಾರದ ಕೃತಿಗಳು ಶಿಲ್ಪ ಮತ್ತು ಚಿತ್ರಗಳೆರಡಲ್ಲೂ ಇದ್ದು, ಜಪಾನಿನ ಕಲಾವಿದೆ ಮೆಗುಮಿ ಸಕದ ಕನ್ನಡ ಪದಗಳನ್ನು ಬಳಸಿ ಬಿಡಿಸಿರುವ ಹಲವು ಕಲಾಕೃತಿಗಳು ಅಚ್ಚರಿ ತರಲಿದೆ.   ಅಷ್ಟೇ ಅಲ್ಲ, `ಲಿಂಗ ಶೋಷಣೆ'ಗೆ ಸಂಬಂಧಪಟ್ಟಂತೆ ಕಲಾವಿದರಾದ ಪೂಜಾ ಹಿರೇಲಾಲ್ ಗೋವಿಯಪ್ಪ ಅವರ `ಕವರ್ ಮಿ' ವಿಡಿಯೋ ತುಣುಕು ಹೇಗೆ ಸಾಮಾಜಿಕ ಚಿಂತನೆಗೆ ಕಲೆ ಎಡೆಮಾಡಿಕೊಡುತ್ತದೆ ಎಂಬುದನ್ನು ನಿರೂಪಿಸುತ್ತದೆ.ಕಲೆ ಬಣ್ಣಗಳನ್ನು ಮಾತ್ರ ಬಯಸುವುದಿಲ್ಲ. ಅದು ಬಯಸುವುದು ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಎಂಬುದನ್ನು ತಂತ್ರಜ್ಞಾನ ಕಲಾ ಮಾಧ್ಯಮಗಳು ತೋರಿಸಿಕೊಟ್ಟಿವೆ.ಪಾರಂಪರಿಕತೆ ನಮ್ಮ ಭವಿಷ್ಯವನ್ನು ಹೇಗೆ ಸೃಷ್ಟಿಸುತ್ತದೆ ಎಂಬ ಪರಿಕಲ್ಪನೆಯಲ್ಲೂ ಮೂಡಿದ ಕಲಾಕೃತಿಗಳು ಇಲ್ಲಿವೆ. ಸ್ಮಿತಾ ಪ್ರಕಾಶ್, ಸಿಂಧ್ ಭಟ್, ವರ್ಷ ಭಿಡೆ, ಸಮೀರ್ ಪಾಲ್ ಈ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ.ಏಪ್ರಿಲ್ 1ರಿಂದ ಆರಂಭಗೊಂಡಿರುವ ಈ ಪ್ರದರ್ಶನ ಏಪ್ರಿಲ್ 10ರವರೆಗೂ ಮುಂದುವರಿಯುತ್ತದೆ. 1ರಿಂದ 5ರವರೆಗೆ ಚಿತ್ರಕಲೆ, ಗ್ರಾಫಿಕ್, ಶಿಲ್ಪಕಲೆ ವಿದ್ಯಾರ್ಥಿಗಳ ಕಲಾ ಪ್ರದರ್ಶನವಿದ್ದರೆ, ಏಪ್ರಿಲ್ 6ರಿಂದ 10ರವರೆಗೂ ಅಪ್ಲೈಡ್ ಆರ್ಟ್ ವಿದ್ಯಾರ್ಥಿಗಳ ಕಲಾಪ್ರದರ್ಶನವಿರುತ್ತದೆ.ಏಪ್ರಿಲ್ 4ರ ಗುರುವಾರ ಕಲಾವಿದ ಗುರುದಾಸ್ ಶಣೈ, ಟೈಮ್ ಅಂಡ್ ಸ್ಪೇಸ್ ಆರ್ಟ್ ಗ್ಯಾಲರಿಯ ರೇಣು ಜಾರ್ಜ್, ಕಾಲೇಜ್ ಆಫ್ ಫೈನ್‌ಆರ್ಟ್ಸ್‌ನ ಪ್ರಾಂಶುಪಾಲರಾದ ತೇಜೇಂದ್ರ ಸಿಂಗ್ ಬೋನಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆಡಳಿತಾಧಿಕಾರಿ ಶಂಕರಲಿಂಗೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

 

ಪ್ರತಿಕ್ರಿಯಿಸಿ (+)