ಕಲಿಯುವ ಕೈಗಳ ಕಲಾಗಾಳ

7

ಕಲಿಯುವ ಕೈಗಳ ಕಲಾಗಾಳ

Published:
Updated:
ಕಲಿಯುವ ಕೈಗಳ ಕಲಾಗಾಳ

ಅದು ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ಕಲೆ. ಪ್ರತಿ ಸಾಲಿನಲ್ಲಿ ಒಂದೊಂದು ಕತೆ ಹೇಳುವ ಚಿತ್ರಪಟಗಳು. ಹನ್ನೊಂದು ವಿದ್ಯಾರ್ಥಿಗಳು ಕುಂಚದ ಮೂಲಕ ಅಮೂರ್ತ ಭಾವನೆಗಳನ್ನು ಮೂಡಿಸಲು ಪಟ್ಟ ಶ್ರಮ ಅಲ್ಲಿ ಎದ್ದು ಕಾಣುತ್ತಿತ್ತು.ಬೆಳಗಾವಿಯ ಬೆನಾನ್-ಸ್ಮಿತ್ ಕಾಲೇಜಿನ ವಿದ್ಯಾರ್ಥಿಗಳು ಬೆಂಗಳೂರಿನ ಚಿತ್ರಕಲಾ ಪರಿಷತ್‌ನ ಗ್ಯಾಲರಿ ನಂ.2ನಲ್ಲಿ ತಮ್ಮ ಮೊದಲ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದರು.ಚಿಕ್ಕಮಕ್ಕಳು ತಮಗೆ ಇಷ್ಟವಾಗುವ ಬಲೂನ್‌ನಲ್ಲಿ ತಮ್ಮ ಮನದ ಇಂಗಿತವನ್ನು ಹೇಳಲು ತುಡಿಯುತ್ತಾರೆ. ಹಾಗಾಗಿ ಅವರಿಗೆ ಜಾತ್ರೆ ಅಂದರೆ ತುಂಬಾ ಇಷ್ಟ ಎಂಬ ಕಲ್ಪನೆಯನ್ನು ವಾಸ್ತವದ ಅಂಶಗಳೊಂದಿಗೆ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅವರ ಕನಸು ಹೇಗೆ ಅರಳುತ್ತಾ ಹೋಗುತ್ತದೆ ಎಂಬುದನ್ನು ಬಲೂನ್ ಊದುತ್ತಿರುವ ಹುಡುಗನ ಮೂಲಕ ಹೇಳಹೊರಟಿದ್ದಾರೆ ಬೆಳಗಾವಿಯ ಅಕ್ಷಯ್ ಸಪ್ಲೆ.ವೀರಣ್ಣ ಬಡಿಗಾರ್ ಕಲಾಕೃತಿಯಲ್ಲಿ  ವ್ಯಕ್ತವಾಗುತ್ತಿರುವ `ಹಸಿವು~ ನೋಡುಗರ ಕಣ್ಣನ್ನು ಸೆಳೆಯುವಂತಿತ್ತು. ಹಸಿವಿನಿಂದ ಬಳಲುತ್ತಿರುವ ವ್ಯಕ್ತಿ ಕೊಚ್ಚೆಯ ಮೇಲೆ ಬಿದ್ದ ಬಾಳೆಹಣ್ಣಿಗೆ ಕೈಚಾಚುತ್ತಿರುವ ಚಿತ್ರ ಮನಕಲಕುವಂಥದ್ದು. ಪರಿಸ್ಥಿತಿಯ ವ್ಯಂಗ್ಯದ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತಿರುವ ಈ ಕಲಾಕೃತಿ ಅನುಭವದಲ್ಲೂ ಮಾಗಿದಂತಿದೆ.ತುಂಬಿದ ಗರ್ಭಿಣಿ, ಸನಿಹದಲ್ಲಿರುವ ಮಗು, ಬದುಕಿನ ಆಸರೆಯ ಜ್ಯೋತಿ ಆರಿ ಹೋಗಿದೆ ಎಂಬುದನ್ನು ಹೇಳುತ್ತಿರುವ ಬಲ್ಬ್- ಎಲ್ಲವೂ ದುಃಖಭಾವದ ಸಂಕೇತಗಳು. ಅಲ್ಲಿರುವ ಸೇಬು ಹಣ್ಣು ಮುಂದಿನ ಸುಖದ ಪ್ರತೀಕವಾಗಿ ಗೋಚರಿಸುತ್ತಿತ್ತು. ವಿಶಾಲ್ ಕಿಲ್ಲೆಕರ್ ಅವರ ಮೂರು ಚಿತ್ರಕಲೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದು ತೊಳಲಾಟದಲ್ಲಿ ಬಂಧಿಯಾದ ಮನಸ್ಸಿನ ನೂರೆಂಟು ಮುಖಗಳು.ಆಯಿಲ್ ಪೇಂಟಿಂಗ್‌ನಲ್ಲಿ ಬಿಂಬಿತವಾದ ಚಿತ್ರಗಳಲ್ಲಿ ಬಸವರಾಜ ಮಾಹುರಕರ ಹೆಣ್ಣನ್ನೇ ಕೇಂದ್ರವಾಗಿಸಿಕೊಂಡು ಅವಳು ಸೂಸುವ ಪ್ರತಿ ಭಾವವನ್ನು ತನ್ನ ಕುಂಚದಲ್ಲಿ ತರುವಂತೆ ಮಾಡಿರುವ ಪ್ರಯತ್ನವೂ ಅದ್ಭುತವಾಗಿತ್ತು. ಒಂದೇ ಚೌಕಟ್ಟಿನಲ್ಲಿ ತಾಯಿ- ಮಗು, ಕುದುರೆಯನ್ನು ಹಿಡಿದಿಟ್ಟುಕೊಂಡ ಕಲಾಕೃತಿ ಮತ್ತಿನ್ನೇನನ್ನೋ ಹೇಳಲು ಹವಣಿಸುತ್ತಿತ್ತು. ಹಾಗೇ ಕಣ್ಣುಹಾಯಿಸಿದರೆ ಅಲ್ಲಿ ಕಾಣುವ ಬಿಂಬಗಳು ಅಸ್ಪಷ್ಟ ಅನಿಸಿದರೂ ಅಮೂರ್ತವಾದ ಏನನ್ನೋ ಹೇಳಲು ತುಡಿಯುತ್ತವೆ.ಧರ್ಮೇಂದ್ರ ಕುಮಾರ್ ಅವರ ಕುಂಚದಲ್ಲಿ ಮೂಡಿದ ಮಡಿಲಿನಲ್ಲಿ ಮಗು ಮಲಗಿಸಿಕೊಂಡ ತಾಯಿಯು ಆ ಮಗುವಿನಲ್ಲಿ ಕುದುರೆಯ ಕನಸು ಕಾಣುವ ಚಿತ್ರ ಬಯಕೆ ತೋಟದ ಬೇಲಿಯ ಅಗಲದ ಬಿಂಬ. ಭಾವ ಸಮುದ್ರದಲ್ಲಿ ಮುಳುಗಿರುವ ಮಹಿಳೆಯನ್ನು ಅವರು ತಮ್ಮ ಉಳಿದ ಮೂರು ಚಿತ್ರಗಳಲ್ಲಿ ಬಂಧಿಸಿದ್ದಾರೆ.ಹೆಣ್ಣು ಚೆಲುವೆಲ್ಲಾ ತಂದೆಂದಿತು ಎಂಬಂತೆ ರಾಜಶ್ರೀ ತಮ್ಮ ಚಿತ್ರಪಟದಲ್ಲಿ ಸೌಂದರ್ಯವತಿಯಾದ ಹೆಣ್ಣನ್ನು ಸಂಗೀತ, ಹೂವು, ಕಾಗದಕ್ಕೆ ಹೋಲಿಸಿ ಅವಳು ಶಾಂತ ಸ್ವಭಾವದವಳು ಎಂಬ ಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ. ಮೃದುತ್ವದಲ್ಲಿ ಅವಳನ್ನು ಈ ವಸ್ತುವಿನೊಂದಿಗೆ ತುಲನೆ ಮಾಡಿದ್ದಾರೆ.ವಿದ್ಯಾರ್ಥಿಗಳ ಪ್ರಯತ್ನದಲ್ಲಿ ಮೂಡಿಬಂದ ಈ ಚಿತ್ರಗಳು ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಫೆ.29 ಕೊನೆಯ ದಿನ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry