ಸೋಮವಾರ, ಜೂನ್ 21, 2021
30 °C

ಕಲಿಸದ ಶಿಕ್ಷಕರ ವಿರುದ್ಧ ಕಠಿಣ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಶಿಕ್ಷಕ ವೃತ್ತಿ ಪವಿತ್ರವಾದುದು. ಮಕ್ಕಳಿಗೆ ಪಾಠ ಕಲಿಸದೆ ಅವರ ಬದುಕಿನೊಂದಿಗೆ ಆಟವಾಡುವ  ಶಿಕ್ಷಕರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕ ವೆಂಕಟೇಶಯ್ಯ ತಿಳಿಸಿದರು.ಆಲಮಟ್ಟಿಯಲ್ಲಿ ಶುಕ್ರವಾರ ನಡೆದ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವೆಂಕಟೇಶಯ್ಯ ಅವರು ಅಧಿಕಾರಿಗಳು ಬೇಜವಾಬ್ದಾರಿ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ತಾವೇ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕಾನೂನು ಪ್ರಕಾರ ಕ್ರಮ ಜರುಗಿಸುವುದು ಅನಿವಾರ್ಯ ಎಂದು ಅವರು ಹೇಳಿದರು.ಕಲಿಕಾ ಗುಣಮಟ್ಟ ಕುರಿತು ಪರಿವೀಕ್ಷಣಾ ತಂಡ ಗುರುತಿಸಿದ ನ್ಯೂನತೆಗಳನ್ನು ಪರಿಶೀಲಿಸಿ ನಿಯಮ 12 ರ ಪ್ರಕಾರ ಕರ್ತವ್ಯ ಲೋಪವೆಸಗಿದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಿಂಜರಿಬೇಡಿ. ಎಲ್ಲಿಯವರೆಗೆ ಕಲಿಸದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವೆವೋ ಅಲ್ಲಿಯವರೆಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳ ಅಸಾಧ್ಯ ಎಂದರು.ಶಿಕ್ಷಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಕೆಲ ಶಿಕ್ಷಕರು ವೃಥಾ ರಾಜಕೀಯದಲ್ಲಿ ತೊಡಗುತ್ತಿದ್ದು, ಅವರೂ ಕಡ್ಡಾಯವಾಗಿ ಕಲಿಸುವುದರಲ್ಲಿ ತೊಡಗುವಂತೆ ಮಾಡಿ, ಕೇಳದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಅಂದಾಗ ಮಾತ್ರ ಎಲ್ಲಾ ಶಿಕ್ಷಕರು ಜಾಗೃತೆಯಿಂದ ಕಾರ್ಯನಿರ್ವಹಿಸುತ್ತಾರೆ ಎಂದರು.ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಕಲಿಕೆಯಾಗದಿದ್ದರೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ ನೇರ ಹೊಣೆಯನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.120 ದಿನಗಳಿಗಿಂತ ಹೆಚ್ಚು ಕಾಲ ಸತತ ಗೈರು ಹಾಜರಿರುವ ಶಿಕ್ಷಕರ ಮೇಲೆ ಕೆ.ಸಿ.ಎಸ್.ಆರ್ ಪ್ರಕಾರ ಕಠಿಣ ಶಿಸ್ತು ಕ್ರಮ ಜರುಗಿಸುವಂತೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆ: ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಗಮವಾಗಿ ಸಾಗಿಸಲು ಎಲ್ಲ ಶಿಕ್ಷಣ ಅಧಿಕಾರಿಗಳು ಶ್ರಮಿಸಬೇಕು, ಹಲವು ವಿಚಕ್ಷಣಾ ದಳಗಳನ್ನು ನೇಮಿಸಲಾಗಿದ್ದು, ಪರೀಕ್ಷಾ ಪಾವಿತ್ರ್ಯತೆ ಕಾಪಾಡಿ, ನಕಲು ಮುಕ್ತ ಪರೀಕ್ಷೆ ನಡೆಸಲು ಸನ್ನದ್ಧರಾಗಬೇಕು ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯ ನಿರ್ದೇಶಕರೂ ಆಗಿರುವ ವೆಂಕಟೇಶಯ್ಯ ಸೂಚಿಸಿದರು.ಎಸ್ಸೆಸ್ಸೆಲ್ಸಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಎಲ್ಲ ಪರಿಕ್ಷಾರ್ಥಿಗಳಿಗೆ ಮೇಜಿನ ಸೌಲಭ್ಯ ಒದಗಿಸಬೇಕು, ಈ ಸೌಲಭ್ಯ ಒದಗಿಸದ ಪರೀಕ್ಷಾ ಕೇಂದ್ರದ ಮುಖ್ಯಸ್ಥರ ವಿರುದ್ದ ಡಿಡಿಪಿಐ ಪರಿಶೀಲನೆ ನಡೆಸಿ, ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.ಮೂಲ ಸೌಲಭ್ಯ: ಸರಕಾರಿ ಶಾಲೆಗಳಿಗೆ ಮೂಲಸೌಲಭ್ಯಗಳಾದ ಕಟ್ಟಡ, ಶೌಚಾಲಯ, ಕುಡಿಯುವ ನೀರು ಒದಗಿಸಲು ಎಲ್ಲ ಅಧಿಕಾರಿಗಳು ಬದ್ಧರಾಗಬೇಕು. 2009-10ನೇ ಸಾಲಿನ ಅನುದಾನವನ್ನು ಬಳಸಿಕೊಳ್ಳದಿರುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, ಬಾಕಿ ಉಳಿದ ಕಾಮಗಾರಿಗಳನ್ನು ಮಾರ್ಚ್ 31ರ ಒಳಗೆ ಪೂರ್ಣಗೊಳಿಸಲು ಸೂಚಿಸಿದರು.ಪ್ರಸಕ್ತ ಸಾಲಿನ ಹೈಟೆಕ್ ಶೌಚಾಲಯ ಕಾಮಗಾರಿ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಬೇಕು. ಪೂರ್ಣಗೊಳ್ಳಲು ವಿಫಲರಾದ ಆಯಾ ಶಾಲೆಯ ಮುಖ್ಯಸ್ಥರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದರು.ಇಡೀ ದಿನ ನಡೆದ ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಜಾಪುರ ಡಿಡಿಪಿಐ ಬಿ.ಎನ್.ಹಕೀಂ, ಬಾಗಲಕೋಟೆ ಡಿಡಿಪಿಐ ಸಿದ್ದರಾಮ ಮನಹಳ್ಳಿ, ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ, ಅವಳಿ ಜಿಲ್ಲೆಯ ವಿವಿಧ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎಸ್.ಹತ್ತಳ್ಳಿ,  ಬೊಮ್ಮೆಗೌಡ, ಎನ್.ವೈ. ಕುಂದರಗಿ, ಎಸ್.ಎಸ್.ಬಿರಾದಾರ, ಎನ್.ವಿ. ಹೊಸೂರ, ಆರ್.ವೈ. ಕೊಣ್ಣೂರ, ಎಮ್.ವೈ. ಹೊನ್ನಕಸ್ತೂರಿ, ಜೆ.ಟಿ.ತಳಗೇರಿ, ಎಂ.ಜಿ.ದಾಸರ, ಎಸ್.ವೈ.ಬಾಡಗಂಡಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.ಡಿವೈಪಿಸಿಗಳಾದ ಬಿ.ಕೆ. ನಂದನೂರ, ಎಸ್.ಎನ್.ಹುಗ್ಗಿ, ಡಾ.ಅಶೋಕ ಲಿಮಕರ, ಜಿ.ಕೆ.ಮಠ, ಬಿ.ಎಸ್. ಅಂಬಣ್ಣವರ, ರಾಜು ಹಿರೇಮಠ, ಜಿಲ್ಲಾ ಬಿಸಿ ಊಟ ಅಧಿಕಾರಿ ಎನ್.ಬಿ. ಗೊರವರ, ಮಂಜುನಾಥ ಗುಳೇದಗುಡ್ಡ, ನಾಗೇಂದ್ರ ಸಿನ್ನೂರ ಸೇರಿದಂತೆ ಅವಳಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳು, ಬಿಸಿಯೂಟ ನಿರ್ದೇಶಕರು, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕರು, ಎಸ್.ಎಸ್.ಎ. ಅಧಿಕಾರಿಗಳು, ಆರ್.ಎಂ.ಎಸ್.ಎ. ಅಧಿಕಾರಿಗಳು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.