ಕಲುಷಿತ ಕೆರೆ: ಬಳಕೆಗೆ ಬಾರದ ನೀರು

7

ಕಲುಷಿತ ಕೆರೆ: ಬಳಕೆಗೆ ಬಾರದ ನೀರು

Published:
Updated:
ಕಲುಷಿತ ಕೆರೆ: ಬಳಕೆಗೆ ಬಾರದ ನೀರು

ಚಿಕ್ಕನಾಯಕನಹಳ್ಳಿ: ಪಟ್ಟಣಕ್ಕೆ ಕುಡಿ­ಯುವ ನೀರು ಒದಗಿಸುವ ಉದ್ದೇಶ­ದಿಂದ ಚಿಕ್ಕನಾಯಕನಹಳ್ಳಿ ಕೆರೆಗೆ ನೀರು ಹರಿಸುತ್ತಿದ್ದರೂ; ಹೇಮಾವತಿ ನೀರು ಪುರಸಭೆಯ ನಿರ್ಲಕ್ಷ್ಯದಿಂದ ಕಲುಷಿತ­ಗೊಂಡಿದ್ದು ಬಳಕೆಗೆ ಬಾರದಂತಾಗಿದೆ.ಕೊಳವೆ ಮಾರ್ಗದ ಮೂಲಕ ಬರು­ತ್ತಿರುವ ನೀರನ್ನು ಕೆರೆ ತಲುಪುವ ಮುನ್ನವೇ ವಾಲ್ವ್ ಸಹಾಯದಿಂದ ಶುದ್ಧೀ­ಕರಣ ಯಂತ್ರಕ್ಕೆ ನೇರವಾಗಿ ಹಾಯಿ­ಸುವ ವ್ಯವಸ್ಥೆ ಮಾಡಿದ್ದು, ಹೆಚ್ಚು­ವರಿ ನೀರನ್ನು ಕೊಳವೆ ಮೂಲಕ ಕೆರೆಗೆ ಬಿಡಲಾಗುತ್ತಿದೆ.ಪಟ್ಟಣದ ಮನೆಗಳಿಗೆ ಸದ್ಯ ಹೇಮಾ­ವತಿ ನೀರನ್ನು ನೇರವಾಗಿ ಶುದ್ಧೀಕರಿಸಿ ಬಿಡಲಾಗುತ್ತಿದೆ. ಬೇಸಿಗೆಗಾಗಿ ಕೆರೆಯಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಿಸಲಾಗುತ್ತಿದೆ ಎಂದು ಪುರಸಭೆ ಸಿಬ್ಬಂದಿ ಹೇಳುತ್ತಾರೆ.ಆದರೆ ಸಂಗ್ರಹವಾಗುತ್ತಿರುವ ಅತ್ಯಲ್ಪ ನೀರೂ ನಿರ್ವಹಣೆಯಿಲ್ಲದೆ ಮಲಿನ ಗೊಳ್ಳುತ್ತಿರುವುದು ಪಟ್ಟಣದ ಜನತೆಯ ಆತಂಕಕ್ಕೆ ಕಾರಣವಾಗಿದೆ.ಊರಿನ ನಾನಾ ಬಡಾವಣೆಗಳಿಂದ ಕೆರೆಗೆ ಹರಿದು ಬರುವ ಕೊಳಚೆ ನೀರು ಹೇಮಾವತಿ ನೀರಿಗೆ ಸೇರದಂತೆ  ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೆರೆ ಮಧ್ಯದಲ್ಲಿ ಏರಿ ನಿರ್ಮಿಸಲಾಗಿದೆ. ಆದರೆ ಅನೇಕರು ಏರಿಯನ್ನೇ ಪಾಯಿ­ಖಾನೆ ಮಾಡಿಕೊಂಡಿದ್ದಾರೆ. ಪುರಸಭೆ ಪಕ್ಕದಲ್ಲೇ ಇರುವ ಕೆರೆಯಲ್ಲಿ ಇಷ್ಟೆಲ್ಲಾ ಕೊಳಕು ತುಂಬಿದ್ದರೂ ಪರಿಸರ ಎಂಜಿನಿಯರ್ ಸೇರಿದಂತೆ ಯಾವುದೇ ಅಧಿ­ಕಾರಿ ಈ ಕುರಿತು ಗಮನ ಹರಿಸದಿರು­ವುದು ವಿಪರ್ಯಾಸ ಎನ್ನುತ್ತಾರೆ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಗುರುಮೂರ್ತಿ.ಈ ಮೊದಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪುರಸಭೆಯೇ ಕೆರೆ ಅಂಗಳದಲ್ಲಿ ದೋಬಿಘಾಟ್ ನಿರ್ಮಿಸಿತ್ತು. ನಂತರ ಅದನ್ನು ಕಿತ್ತುಹಾಕಿ ಸಂತೆ ಮೈದಾನ ನಿರ್ಮಿಸಲು ಮುಂದಾ­ಯಿತು. ಈಗ ಸಂತೆ ಮೈದಾನ ಕಾಮ­ಗಾರಿಯೂ ನೆನೆಗುದಿಗೆ ಬಿದ್ದಿದೆ. ಬಟ್ಟೆ ಒಗೆಯಲು ಪ್ರತ್ಯೇಕ ಜಾಗ ಕಲ್ಪಿಸಿದ್ದರೆ ನಾವೇಕೆ ಇಲ್ಲಿಗೆ ಬರುತ್ತಿದ್ದೆವು? ಎಂದು ಗೃಹಿಣಿಯರು ಪ್ರಶ್ನಿಸುತ್ತಾರೆ.ಮನೆಗಳಿಗೆ ಪೂರೈಸುತ್ತಿರುವ ನೀರೂ ಅಶುದ್ಧ ಎಂಬ ಆರೋಪ ಕೇಳಿ ಬರು­ತ್ತಿವೆ. ನೀರು ಶುದ್ಧೀಕರಣ ಕೇಂದ್ರದಲ್ಲಿ­ರುವ ಹಲ ಯಂತ್ರಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಮನೆಗಳಿಗೆ ಸರಬರಾಜಾಗು­ತ್ತಿರುವ ನೀರಿನ ಶುದ್ಧೀ­ಕರ­ಣವೂ ಸರಿಯಾಗಿ ನಡೆಯುತ್ತಿಲ್ಲ ಎಂದು ಪುರಸಭೆ ಸಿಬ್ಬಂದಿ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry