ಕಲುಷಿತ ನೀರಿನಿಂದ ಜನರು ಅಸ್ವಸ್ಥ ;ಪಿಡಿಒಗಳೇ ನೇರ ಹೊಣೆ: ಓಂಕಾರಪ್ಪ

7

ಕಲುಷಿತ ನೀರಿನಿಂದ ಜನರು ಅಸ್ವಸ್ಥ ;ಪಿಡಿಒಗಳೇ ನೇರ ಹೊಣೆ: ಓಂಕಾರಪ್ಪ

Published:
Updated:

ಮಳವಳ್ಳಿ: ತಾಲ್ಲೂಕಿನ ಯಾವುದೇ ಗ್ರಾಮಗಳಲ್ಲಿ ಕಲುಷಿತ ನೀರಿನ ಸೇವನೆಯಿಂದ ಜನರು ಬಳಲಿದರೆ ಅದಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳನ್ನೇ ನೇರಹೊಣೆ ಮಾಡಿ ಕಠಿಣ ಕ್ರಮಕೈಗೊಳ್ಳಲು ವರದಿ ನೀಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಚ್.ಓಂಕಾರಪ್ಪ ಎಚ್ಚರಿಸಿದರು.ತಾಲ್ಲೂಕಿನ ಬಿ.ಜಿ.ಪುರ ಹೋಬಳಿ ಹೊನಗಹಳ್ಳಿ ಯಲ್ಲಿ ಭಾನುವಾರ ಕಲುಷಿತ ನೀರು ಸೇವನೆಯಿಂದ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ತುರ್ತು ಸಭೆ ನಡೆಸಿ ಮಾತನಾಡಿದರು.ಗ್ರಾಮಗಳಲ್ಲಿರುವ ನೀರಿನ ಟ್ಯಾಂಕ್‌ಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕು, ವಾಲ್‌ಗೇಟ್‌ಗಳಲ್ಲಿ ನೀರು ನಿಲ್ಲದಂತೆ ಅಥವಾ ಆ ನೀರು ಚರಂಡಿಗೆ ಹೋಗುವಂತೆ ಮಾಡಲು ತುರ್ತು ಕ್ರಮ ತೆಗೆದುಕೊಳ್ಳುವಂತೆ ತಾಕೀತು ಮಾಡಿದರು. ಅಲ್ಲದೆ 13ನೇ ಹಣಕಾಸು ಅನುದಾನವನ್ನು ಸಂಪೂರ್ಣ ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಅಗತ್ಯವಾದ ಕೆಲಸಗಳಿಗೆ ಉಪಯೋಗಿಸಿಕೊಳ್ಳಿ, ಅದು ಸಾಲದಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದರು.ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಯಾಗದಿದ್ದರೆ ಅಥವಾ ಫ್ಲೋರೈಡ್‌ಯುಕ್ತ ನೀರು ಇದ್ದರೆ ಆ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಮುಂದಾಗಬೇಕೆಂದು ಸೂಚಿಸಿದರು.ತಹಶೀಲ್ದಾರ್ ಎಂ.ಆರ್.ರಾಜೇಶ್ ಮಾತನಾಡಿ, ಅಭಿವೃದ್ಧಿ ಅಧಿಕಾರಿಗಳು ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಿಲ್ಲ. ಇದರಿಂದ ನಿಮಗೆ ಗ್ರಾಮಗಳ ಸಮಸ್ಯೆ ತಿಳಿಯುವುದಿಲ್ಲ. ಕೇವಲ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ತೆರಳುವ ಬದಲು ಗ್ರಾಮಗಳಿಗೆ ಹೋಗಿ ಜನರ ಸ್ಥಿತಿಗತಿಗಳನ್ನು ತಿಳಿದು ಅವರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಚಂದ್ರಹಾಸ ಮಾತನಾಡಿ, ಕುಡಿಯುವ ನೀರಿಗೆ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತಂದರೆ ಬೋರ್‌ವೆಲ್ ಕೊರೆಸಲು ಅಥವಾ ಪೈಪ್ ಅಳವಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಒಟ್ಟಿನಲ್ಲಿ ಯಾವುದೇ ಸಮಸ್ಯೆ ಇದ್ದರೆ ಮೇಲಧಿಕಾರಿಯವರ ಗಮನಕ್ಕೆ ತಂದು ಬಗೆಹರಿಸುವಂತೆ ಸಲಹೆ ನೀಡಿದರು.ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸಿ.ಪುಟ್ಟಮಲ್ಲು, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ತಿಬ್ಬೇಗೌಡ ಹಾಜರಿದ್ದರು.ಭೇಟಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮರಿಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಸಂಜೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಚ್.ಓಂಕಾರಪ್ಪ ಅವರು ಗ್ರಾಮಕ್ಕೆ ಭೇಟಿ ನೀಡಿ ಖಾಸಗಿ  ಬೋರ್‌ವೆಲ್‌ನ ನೀರು ಪೂರೈಕೆ ಮಾಡಲು ಕ್ರಮಕೈಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry