ಶನಿವಾರ, ನವೆಂಬರ್ 23, 2019
17 °C
ಪಾನಕ ಸೇವನೆ: 50 ದಾಟಿದ ಅಸ್ವಸ್ಥರ ಸಂಖ್ಯೆ

ಕಲುಷಿತ ನೀರು ಕಾರಣ?

Published:
Updated:

ಬೆಂಗಳೂರು: ಶ್ರೀರಾಮ ನವಮಿಯಂದು ನಗರದಲ್ಲಿ ಪಾನಕ ಮತ್ತು ಮಜ್ಜಿಗೆ ಸೇವಿಸಿ ಅಸ್ವಸ್ಥರಾದವರ ಸಂಖ್ಯೆ ಐವತ್ತು ದಾಟಿದೆ.

ಈ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಪಾನಕ ಮತ್ತು ಮಜ್ಜಿಗೆ ಅಶುದ್ಧ ನೀರಿನಲ್ಲಿ ತಯಾರಾಗಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.ನಂಜು ಏರಿಸುವ ಬ್ಯಾಕ್ಟೀರಿಯಾ ಅಂಶದ ನೀರಿನ ಸೇವನೆಯಿಂದ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದ್ದು, ಕುಡಿಯುವ ನೀರಿನ ಅಭಾವದಲ್ಲೂ ಶುದ್ಧ ನೀರಿನ ಸೇವನೆಗೆ ಪ್ರಾಮುಖ್ಯ ನೀಡಬೇಕಿದೆ.ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಮಣಿಪಾಲ ಆಸ್ಪತ್ರೆಯ ಡಾ.ಭಾಸ್ಕರ್ ಶೆಣೈ, `ತುಕ್ಕು ಹಿಡಿದ ಪಾತ್ರೆಯಲ್ಲಿ ಸಂರಕ್ಷಿಸಿದ ನೀರಿನಿಂದ ಪ್ರಾಣಕ್ಕೆ ತೊಂದರೆಯಾಗುವುದು ಕಡಿಮೆ. ಕಲುಷಿತ ನೀರಿನಿಂದ ಮಾತ್ರ ಈ ರೀತಿಯ ಸಮಸ್ಯೆ ಉಂಟಾಗುತ್ತದೆ' ಎಂದರು.`ನೀರಿನಲ್ಲಿರುವ ಸಾಲೋಮನಿನ್ಲಾ ಬ್ಯಾಕ್ಟೀರಿಯಾ ಬಹಳಷ್ಟು ವಿಷದಿಂದ ಕೂಡಿರುತ್ತದೆ. ಇದರಲ್ಲಿ 2 ಬಗೆಯಿದ್ದು, ಒಂದು ಸಾಮಾನ್ಯ ವಿಷಮ ಜ್ವರಕ್ಕೆ ಕಾರಣವಾದರೆ ಇನ್ನೊಂದು ಏಕಾಏಕಿ ಪ್ರಾಣವನ್ನು ಕಸಿದುಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಪಾನಕ ಸೇವಿಸಿ ಮೃತಪಟ್ಟವರಲ್ಲಿ ಈ ಬ್ಯಾಕ್ಟೀರಿಯಾದ ಸೋಂಕು ತಗುಲಿರುವ ಸಾಧ್ಯತೆಯಿದೆ. ವಯಸ್ಸಾದಂತೆ ರೋಗನಿರೋಧಕ ಶಕ್ತಿ ಕುಂದುವುದರಿಂದ ಈ ಸೋಂಕಿನಿಂದ ಪ್ರಾಣಕ್ಕೆ ತೊಂದರೆಯಾಗುತ್ತದೆ' ಎಂದರು.ತಲುಪದ ಮರಣೋತ್ತರ ಪರೀಕ್ಷೆ ವರದಿ: `ಪಾನಕ ಸೇವಿಸಿ ಮೃತಪಟ್ಟವರ ಮರಣೋತ್ತರ ಪರೀಕ್ಷೆ ವರದಿ ಈವರೆಗೂ ತಲುಪಿಲ್ಲ' ಎಂದು ವಿಕ್ಟೋರಿಯಾ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಕಾಂತರಾಜು ತಿಳಿಸಿದರು.`ಏಕಾಏಕಿ 30ಕ್ಕೂ ಅಧಿಕ ಮಂದಿ ಪಾನಕ ಸೇವಿಸಿ ಅಸ್ವಸ್ಥರಾದ್ದರಿಂದ ಪಾನಕ ಸೇವನೆಯಿಂದಲೇ ಮೃತಪಟ್ಟಿರಬಹುದು ಎಂದು ಪ್ರಾಥಮಿಕವಾಗಿ ಕಂಡುಕೊಳ್ಳಲಾಗಿದೆ. ಆದರೆ, ವರದಿ ಬರದೇ ಏನನ್ನು ಹೇಳಲು ಸಾಧ್ಯವಿಲ್ಲ' ಎಂದರು.

ಪ್ರತಿಕ್ರಿಯಿಸಿ (+)