ಬುಧವಾರ, ಮಾರ್ಚ್ 3, 2021
22 °C

ಕಲುಷಿತ ನೀರು: ಜನತೆ ಕಂಗಾಲು

ಪ್ರಜಾವಾಣಿ ವಾರ್ತೆ/ ದಯಾನಂದ Updated:

ಅಕ್ಷರ ಗಾತ್ರ : | |

ಕಲುಷಿತ ನೀರು: ಜನತೆ ಕಂಗಾಲು

ಬೆಂಗಳೂರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಕಂಗಾಲಾಗಿರುವ ನಗರದ ಜನತೆಗೆ ಈಗ ಕಲುಷಿತ ನೀರು ಪೂರೈಕೆಯು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.ನಗರದ ರಾಜಾಜಿನಗರ ಎರಡನೇ ಹಂತದ `ಡಿ~ ಬ್ಲಾಕ್‌ನ 12 ನೇ ಮುಖ್ಯರಸ್ತೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂಬುದು ಸ್ಥಳೀಯರ ದೂರು.`ನಾಲ್ಕೈದು ದಿನಗಳ ಹಿಂದೆ ನೀರಿನಿಂದ ಬರೀ ಕೆಟ್ಟ ವಾಸನೆಯಿಂದ ಬರ‌್ತಿತ್ತು. ಈಗ ಪೂರ್ತಿ ಗಬ್ಬು ನೀರೇ ನಲ್ಲಿಯಲ್ಲಿ ಬರ‌್ತಿದೆ. ಜಲಮಂಡಲಿ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿ ಆಗಿದೆ. ಆದರೆ ಪೈಪ್‌ಲೈನ್‌ಗಳು ಹಳೆಯದಾಗಿರೋದ್ರಿಂದ ಎಲ್ಲಿ ಪೈಪ್‌ಗಳು ಒಡೆದಿವೆ ಅನ್ನೋದು ಅವರಿಗೂ ಗೊತ್ತಾಗ್ತಿಲ್ಲ. ಗಲೀಜು ನೀರು ತುಂಬಿ ಮನೆಯ ಸಂಪ್ ಹಾಗೂ ಟ್ಯಾಂಕ್‌ಗಳು ವಾಸನೆ ಹೊಡೀತಿವೆ. ಎಲ್ಲ ಹಳೆಯ ಪೈಪ್ ಲೈನ್‌ಗಳನ್ನು ಜಲಮಂಡಲಿ ಬದಲಾಯಿಸಬೇಕು~ ಎಂಬುದು ಸ್ಥಳೀಯ ನಿವಾಸಿ ನಿರಂಜನ್ ಅವರ ಒತ್ತಾಯ.`ನಲ್ಲಿಯಲ್ಲಿ ಕೆಟ್ಟ ನೀರು ಬರ‌್ತಿರೋದು ನಮಗೆ ಗೊತ್ತೇ ಆಗಿಲ್ಲ. ವಾಸನೆ ಇದ್ದರೂ ಅದೇ ನೀರನ್ನ ಬಳಸಿ ಮನೆಯವರೆಲ್ಲರೂ ಕಾಯಿಲೆ ಬಿದ್ದಿದ್ದೀವಿ. ಈಗಂತೂ ಪೂರ್ತಿಯಾಗಿ ಚರಂಡಿ ನೀರೇ ನಲ್ಲಿಯಲ್ಲಿ ಬರ‌್ತಿದೆ.ಮಳೆಗಾಲದಲ್ಲಿ ಜಲಮಂಡಲಿಯವರು ಒಳಚರಂಡಿಯ ಮಾರ್ಗಗಳನ್ನ ಸರಿಯಾಗಿ ನಿರ್ವಹಣೆ ಮಾಡದಿರೋದೇ ಸಮಸ್ಯೆಗೆ ಕಾರಣ. ಮಾಡೋ ಕೆಲಸವನ್ನ ಜಲಮಂಡಲಿ ಸರಿಯಾಗಿ ಮಾಡಬೇಕು. ಈ ಬಗ್ಗೆ ಮಂತ್ರಿಗಳೂ ಸೂಕ್ತ ಕ್ರಮ ಕೈಗೊಳ್ಬೇಕು~ ಎನ್ನುತ್ತಾರೆ ಸ್ಥಳೀಯರಾದ ಗೋವಿಂದರಾಜು.`ಒಳಚರಂಡಿ ನೀರು ಕುಡಿಯುವ ನೀರಿನ ಜೊತೆಗೆ ಸೇರಿದ್ರೂ ಅದನ್ನ ಪತ್ತೆ ಹಚ್ಚೋ ವ್ಯವಸ್ಥೆ ನಮ್ಮಲ್ಲಿಲ್ಲ ಅಂದ್ರೆ ಕೋಟಿ ಕೋಟಿ ಖರ್ಚು ಮಾಡಿ ಬೆಂಗಳೂರು ಅಭಿವೃದ್ಧಿ ಮಾಡ್ತೀವಿ ಅನ್ನೋ ರಾಜಕಾರಣಿಗಳಿಗೆ ನಾಚಿಕೆ ಆಗ್ಬೇಕು.ಕಲುಷಿತ ನೀರು ಪತ್ತೆ ಮಾಡುವ ಸಾಧನಗಳನ್ನ ಅಳವಡಿಸೋಕೆ ಜಲಮಂಡಲಿ ಮುಂದಾಗ್ಬೇಕು. ಹಣ ಇದ್ರೂ ಹೊಸ ತಂತ್ರಜ್ಞಾನಗಳನ್ನ ಬಳಸೋಕೆ ಜಲಮಂಡಲಿ ಇನ್ನೂ ಮುಂದಾಗದಿರೋದು ಸರಿಯಲ್ಲ. ಕೆಟ್ಟ ನೀರು ಕುಡಿದು ಮನೆ ಮಂದಿಯ ಆರೋಗ್ಯ ಕೆಡ್ತಿದೆ~ ಎಂಬುದು ಸ್ಥಳೀಯ ನಿವಾಸಿ ಶ್ರೀವೇಣಿ ಅವರ ದೂರು.ಕೂಡಲೇ ಜಲಮಂಡಲಿ ಅಧಿಕಾರಿಗಳು  ಕಲುಷಿತ ನೀರು ಪೂರೈಕೆ ತಡೆಗಟ್ಟಬೇಕು. ಕಲುಷಿತ ನೀರು ಪೂರೈಕೆ ಪತ್ತೆ ಹಚ್ಚುವ ತಂತ್ರಜ್ಞಾನ ಅಳವಡಿಸಿಕೊಳ್ಳುವ ಆಲೋಚಿಸಬೇಕು ಎಂಬುದು ಸ್ಥಳೀಯರ ಒತ್ತಾಯ.ಶೀಘ್ರದಲ್ಲೇ ಕ್ರಮ


`ಒಳಚರಂಡಿಯ ನೀರು ಕುಡಿಯುವ ನೀರಿನ ಜೊತೆಗೆ ಸೇರುತ್ತಿರೋ ಬಗ್ಗೆ ಜಲಮಂಡಲಿಗೆ ದೂರುಗಳು ಬರ‌್ತಿವೆ. ಅಂತಹ ಪ್ರಕರಣಗಳು ನಮ್ಮ ಗಮನಕ್ಕೆ ಬಂದ ಕೂಡಲೇ ಸ್ಥಳೀಯ ಅಧಿಕಾರಿಗಳನ್ನು ಸ್ಥಳ ಪರಿಶೀಲನೆಗೆ ಕಳುಹಿಸುತ್ತೇವೆ. ಜನರು ದೂರು ನೀಡಿದ ನಂತರ ಆದಷ್ಟು ಬೇಗ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ ಮಾಡ್ತಿದ್ದೇವೆ. ಜಲಮಂಡಲಿ ವ್ಯಾಪ್ತಿಯ ಎಲ್ಲ ಸಮಸ್ಯೆಗಳ ಪರಿಹಾರಕ್ಕೂ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು~

- ಟಿ. ವೆಂಕಟರಾಜು, ಮುಖ್ಯ ಎಂಜಿನಿಯರ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.