ಕಲುಷಿತ ನೀರು ಪೂರೈಕೆ: ಮಗು ಸಾವು

7

ಕಲುಷಿತ ನೀರು ಪೂರೈಕೆ: ಮಗು ಸಾವು

Published:
Updated:

ಯಾದಗಿರಿ: ತಾಲ್ಲೂಕಿನ ಚಿಂತನಹಳ್ಳಿಯಲ್ಲಿ ವಾಂತಿ-ಭೇದಿ ಉಲ್ಬಣಿಸಿದ್ದು, 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. 18 ತಿಂಗಳ ಮಗುವೊಂದು ವಾಂತಿ-ಭೇದಿಯಿಂದ ಮೃತಪಟ್ಟಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.ಕಲುಷಿತ ನೀರು ಸೇವನೆಯಿಂದಾಗಿ ಗ್ರಾಮದಲ್ಲಿ ವಾಂತಿ-ಭೇದಿ ಉಲ್ಬಣಿಸಿದೆ. ಬೋರ್‌ವೆಲ್‌ನಿಂದ ಟ್ಯಾಂಕ್‌ಗೆ ನೀರು ಪೂರೈಕೆ ಮಾಡಿ, ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತದೆ. ಆದರೆ ಬೋರ್ ವೆಲ್‌ನಿಂದ ಟ್ಯಾಂಕ್‌ಗೆ ನೀರು ಹರಿಸುವ ಮುಖ್ಯ ಪೈಪ್‌ಲೈನ್ ನಾಲ್ಕೈದು ಕಡೆಗಳಲ್ಲಿ ಒಡೆದಿದ್ದು, ಚರಂಡಿ ನೀರು ಮಿಶ್ರಣವಾಗುತ್ತಿದೆ. ಅಲ್ಲದೇ ಟ್ಯಾಂಕ್ ಕೂಡ ಬಹುದಿನಗಳಿಂದ ಸ್ವಚ್ಛಗೊಳಿಸಿಲ್ಲ. ಇದರಿಂದಾಗಿ ನೀರು ಕಲುಷಿತಗೊಂಡಿದ್ದು, ಜನರು ವಾಂತಿ-ಭೇದಿಯಿಂದ ಬಳಲುವಂತಾಗಿದೆ.ಕಳೆದ ನಾಲ್ಕು ದಿನಗಳಿಂದ ಕಲುಷಿತ ನೀರು ಪೂರೈಕೆ ಆಗುತ್ತಿದ್ದು, ಗುರುವಾರದಿಂದ ಗ್ರಾಮದಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಐದು ಜನರು ದಾಖಲಾಗಿದ್ದು, ಕೆಲವರಿಗೆ ಸಮೀಪದ ಕಂದಕೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕಂದಕೂರಿನ ಆರೋಗ್ಯ ಕೇಂದ್ರದಲ್ಲಿನ ವೈದ್ಯರು, ಸಿಬ್ಬಂದಿಗಳು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ರೋಗಿಗಳ ಸಂಬಂಧಿಕರು ದೂರಿದ್ದಾರೆ.ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಾಗರತ್ನಾ ಕುಪ್ಪಿ, ರೋಗಿಗಳನ್ನು ಭೇಟಿ ಮಾಡಿ, ಅವರ ಸಂಬಂಧಿಕರ ಜೊತೆ ಚರ್ಚಿಸಿದರು. ನಂತರ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ವಾಂತಿ-ಭೇದಿಯಿಂದಾಗಿ ವೈಷ್ಣವಿ ಎಂಬ 18 ತಿಂಗಳ ಮಗುವೊಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ಮಗುವಿನ ಪೋಷಕರು ತಿಳಿಸಿದ್ದಾರೆ.ಇಷ್ಟೆಲ್ಲ ಆವಾಂತರಕ್ಕೆ ಗ್ರಾಮ ಪಂಚಾಯಿತಿಯೇ ಕಾರಣ. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಜವಾಬ್ದಾರಿ ಹೊತ್ತಿರುವ ಗ್ರಾಮ ಪಂಚಾಯಿತಿ, ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಜನರು ತೊಂದರೆ ಅನುಭವಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿಗಳು ಭೇಟಿ ನೀಡುತ್ತಾರೆ ಎಂಬ ಹೆದರಿಕೆಯಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಶುಕ್ರವಾರ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿದ್ದು, ಗ್ರಾಮದ ಚರಂಡಿಯ ಅಕ್ಕಪಕ್ಕದಲ್ಲಿ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಿದ್ದಾರೆ.ಟ್ಯಾಂಕ್‌ನಲ್ಲಿ ಸತ್ತ ಚೇಳು: ಚಿಂತನಹಳ್ಳಿ ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಟ್ಯಾಂಕ್ ಅನ್ನು ಶುಕ್ರವಾರ ಸ್ವಚ್ಛಗೊಳಿಸಿದ್ದು, ಟ್ಯಾಂಕ್‌ನಲ್ಲಿ ಚೇಳು ಹಾಗೂ ಇನ್ನಿತರ ಕ್ರಿಮಿಕೀಟಗಳು ಸತ್ತಿರುವುದು ಪತ್ತೆಯಾಗಿದೆ.ಹಲವಾರು ತಿಂಗಳಿಂದ ಈ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿಲ್ಲ. ಟ್ಯಾಂಕ್‌ನಲ್ಲಿ ಪಾಚಿಗಟ್ಟಿದ್ದು, ನಳದ ನೀರಿನಲ್ಲಿ ಹುಳುಗಳು ಬರುತ್ತಿವೆ. ಈ ಬಗ್ಗೆ ಹಲವಾರು ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಮೊದಲೇ ಪೈಪ್‌ಲೈನ್ ಒಡೆದಿದ್ದು, ಚರಂಡಿ ನೀರು ಮಿಶ್ರಣವಾಗುತ್ತಿದೆ. ಅಲ್ಲದೇ ಟ್ಯಾಂಕ್‌ನಲ್ಲಿಯೂ ಸತ್ತ ಕ್ರಿಮಿಕೀಟಗಳು ಸಿಕ್ಕಿರುವುದು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇದಲ್ಲದೇ ಗ್ರಾಮದಲ್ಲಿ ಸ್ವಚ್ಛತೆಯೇ ಇಲ್ಲದಾಗಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ನೀಲಕಂಠರಾಯ ಯಲ್ಹೇರಿ, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವ ರಾಜುಗೌಡ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.ಜಿಲ್ಲಾ ಪಂಚಾಯಿತಿ ಸದಸ್ಯರ ಭೇಟಿ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಶುಕ್ರವಾರ ಭೇಟಿ ಮಾಡಿದ ಜಿಲ್ಲಾ ಪಂಚಾಯಿತಿ ಸದಸ್ಯರು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ, ಸದಸ್ಯರಾದ ಬಸವರಾಜ ಖಂಡ್ರೆ, ಶಂಕರಗೌಡ ಪಾಟೀಲ ಶಿರವಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಯಿಬಣ್ಣ ಬೋರಬಂಡ್ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ, ವಿಚಾರಿಸಿದರು.ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್, ಈಗಾಗಲೇ ತಾವು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಸೂಚನೆ ನೀಡಿದ್ದು, ಜನರಿಗೆ ಕೂಡಲೇ ಚಿಕಿತ್ಸೆ ಕೊಡಿಸಲು ತಿಳಿಸಿರುವುದಾಗಿ ಹೇಳಿದರು.ಸಿಗದ ಆರೋಗ್ಯಾಧಿಕಾರಿ: 18 ತಿಂಗಳ ಮಗು ಮೃತಪಟ್ಟಿರುವುದಾಗಿ ಗ್ರಾಮದ ಜನರು ಹೇಳುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಬೇಕಾದ ಜಿಲ್ಲಾ ಆರೋಗ್ಯಾಧಿಕಾರಿಗಳ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಅವರ ಒಂದು ನಂಬರ್ ಸ್ವಿಚ್ ಆಫ್ ಆಗಿದ್ದರೆ, ಇನ್ನೊಂದು ಮೊಬೈಲ್ ವ್ಯಾಪ್ತಿ ಪ್ರದೇಶದ ಹೊರಗಿದೆ ಎಂಬ ಉತ್ತರ ಸಿಗುತ್ತಿದೆ. ಹೀಗಾಗಿ ಗ್ರಾಮಸ್ಥರ ಹೇಳಿಕೆಗೆ ಸ್ಪಷ್ಟನೆ ಪಡೆಯುವುದು ಸಾಧ್ಯವಾಗಲಿಲ್ಲ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry