ಕಲುಷಿತ ವಾತಾವರಣ ನಿರ್ಮಾಣ: ಆರೋಪ

7

ಕಲುಷಿತ ವಾತಾವರಣ ನಿರ್ಮಾಣ: ಆರೋಪ

Published:
Updated:

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಹೊರಬಿಡುತ್ತಿರುವ ಗಲೀಜು ನೀರಿನಿಂದ ಬೆಳಗಾನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮೂಗುಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ರೈತ ಸಂಘ-ಹಸಿರು ಸೇನೆಯ ಮುಖಂಡರು ಆರೋಪಿಸಿದ್ದಾರೆ. ಅಲ್ಲದೆ ಗಲೀಜು ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಅನೇಕ ರೀತಿಯ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ  ಆತಂಕ ವ್ಯಕ್ತಪಡಿಸಿದ್ದಾರೆ.ತ್ಯಾಜ್ಯದ ನೀರು ಪಕ್ಕದ ಕೆರೆಗೆ ಹೋಗುತ್ತಿರುವುದರಿಂದ ಅಲ್ಲಿನ ನೀರು ಮಲಿನವಾಗಿ ಜಾನುವಾರುಗಳು ಕುಡಿಯಲು ಆಗುತ್ತಿಲ್ಲ. ದುರ್ವಾಸನೆಯಿಂದ ರೇಷ್ಮೆ ಬೆಳೆಗಳಿಗೆ ಸೋಂಕು ತಗುಲಿದೆ.ಸಂಜೆ 6ರ ನಂತರ ಕ್ರಿಮಿ ಕೀಟಗಳ ಬಾಧೆಯಿಂದ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಲು ಆಗುತ್ತಿಲ್ಲ. ಗಲೀಜು ನೀರನ್ನು ತಡೆಯಬೇಕು ಹಾಗೂ ಅದನ್ನು ಶುದ್ಧೀಕರಿಸಿ ಕೆರೆಗೆ ಬಿಡಬೇಕು ಎಂದು ಅನೇಕ ಬಾರಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಲು ಒಕ್ಕೂಟದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.ಒಕ್ಕೂಟವು ಕೂಡಲೇ ಸೂಕ್ತ ಕ್ರಮ ಕೈಗೊಳ್ಳದ್ದರೆ ಹಾಲು ಒಕ್ಕೂಟದ ಮುಂದೆ ಬೆಳಗಾನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರೊಂದಿಗೆ ಧರಣಿ ನಡೆಸಲಾಗುವುದು ಎಂದು ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಮುಖಂಡರಾದ ಕೋಟಿಗಾನಹಳ್ಳಿ ಗಣೇಶಗೌಡ, ಮಂಜುನಾಥ್, ಬಿ.ಎಂ. ಚಲಪತಿ, ಬಿ.ಕೆ.ಮುರಳಿ, ಸುಶೀಲಮ್ಮ, ಕೃಷ್ಣಪ್ಪ, ಮುರಳಿ, ಸತೀಶ್, ಚಂದ್ರಪ್ಪ, ಮುನಿವೆಂಕಟಪ್ಪ, ಸಿ.ಎಂ.ನಾರಾಯಣಸ್ವಾಮಿ, ಸದಾಶಿವ, ಕೃಷ್ಣಪ್ಪ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry