ಕಲೆ

7

ಕಲೆ

Published:
Updated:

ಬಣ್ಣ ಕಲೆಸುವ ಬಟ್ಟಲನ್ನು ಹಾಗೇ

ತೊಳೆಯದೇ ಬಿಟ್ಟರೆ

ವಿಧ ವಿಧ ಹದದಲ್ಲಿ ಒದಗಿ ಬಂದ ಅದೃಶ್ಯಗಳು

ಬಳಕೆಯಾಗದೆ ಉಳಿದ ಕೋಮಲ ಖಿನ್ನತೆ..

ಅದರಲ್ಲಿ ಬೆರಳದ್ದಿ ಸುಮ್ಮನೆ

ಉರುಳಿದ ಮರದ ಕಾಂಡಗಳಿಗೆ,

ಸುಣ್ಣವಿಲ್ಲದ, ಗೋಡೆಗಳಿಗೆ, ಧಾಬಾದಲ್ಲಿ ನಿಂತ

ಪರದೇಶಿ ಲಾರಿಗಳ ಹೆಡ್‌ಲೈಟ್ ಕಣ್ಣುಗಳಿಗೆ

ಅಥವಾ ಅತ್ತು ನಿದ್ದೆ ಹೋದ ಮಗುವಿನ ಹಾಲುಗಲ್ಲಕ್ಕೆ

ಬಣ್ಣದ ಬೊಟ್ಟಿಡಬಹುದು..

ಇವೆಲ್ಲ ತಾತ್ಕಾಲಿಕ ಶಮನಗಳು

ಆಗಾಗ ಕಿಟಕಿಯಲ್ಲಿ ನಮಗೇ ನಾವು

ಟಾಟಾ ಹೇಳಿದಂತೆ.

ನಂತರ ಚೊಕ್ಕವಾಗಿ ತೊಳೆದಿಡಬಹುದು

ಅಡಿಗೆಯೇ ನಡೆದಿರದ ಒಲೆಯಂತೆ

ಎಲ್ಲ ಸಾಫು ಸಪಾಟು ನೀಟು

ಆದರೂ ಬೆಚ್ಚಗಿನ ಬೇಜಾರು

ತುಂಬಾ ಬೇಕಾದವರೊಬ್ಬರ ಹೆಸರನ್ನು

ಆಭಾರ ಮನ್ನಣೆಯಲ್ಲಿ ಮರೆತಂತೆ

ಸಂಜೆ ಕರೆಕ್ಟು ಅದೇ ಸಮಯಕ್ಕೆ ಅದೇ

ವಿಷಣ್ಣ ಬಿಸಿಲು ಆಲದ ಎಲೆ ಎಲೆಗಳ ಮೇಲೆ ಕುಳಿತು

ಹಟದಿಂದ ಕತ್ತಲ ಕದಡುವಾಗ

ಎಲ್ಲೋ ನೋಡುತ್ತ, ತೊಳೆದರೂ ಹೋಗದ

ಬಣ್ಣದ ಬೆರಳುಗಳನ್ನು ಹಳೆ ಬನೀನಿಗೆ

ತಿಕ್ಕಿ ಒರೆಸಿಕೊಳ್ಳಬಹುದು...

ಗುಂಪಿನಿಂದ ಬೇರ್ಪಡುವುದಕ್ಕೆ, ಇಲ್ಲದ

ಮನೆಯನ್ನು ಬಿಡುವುದಕ್ಕೆ, ಹಿಂದೆ ಮುಂದೆ ನೋಡದೆ

ಉಕ್ಕಿ ಓಡುವುದಕ್ಕೆ ಪ್ರಶಸ್ತ ಸಮಯ ಇದು

ಸಲ್ಲದ ಆಟಕ್ಕಾಗಿ ಅಲ್ಲದ ಯಕ್ಷನೊಬ್ಬ

ಇಲ್ಲದ ಬಣ್ಣಗಳನ್ನು ಹಚ್ಚಿಕೊಳ್ಳುವ ಇರುಳು..

ನವಜಾತ ಶಿಶುಗಳಿಗೆ ಎಣ್ಣೆ ಮಾಲೀಶು ಮಾಡಿ ಬಂದ

ದುಗ್ಗಜ್ಜಿಯ ಬೆರಳುಗಳಲ್ಲಿ ಬೆಳಕಿನ ರೇಕುಗಳು

ಸಿಕ್ಕಿಕೊಂಡಿವೆ... ತಡವಾಗಿ ಬಂದವಳೇ ಒಲೆ ಪಕ್ಕ

ಡಬ್ಬಿಗಳ ಸಂದಿಯಲ್ಲಿ ಅಂದಾಜಿನ ಮೇಲೆ ಅದೇ

ಇಲ್ಲೇ ಇಟ್ಟಿದ್ದೆ ಇಲ್ಲೇ ಇಟ್ಟಿದ್ದೆ ಎಂದು

ಬೆಂಕಿಪೊಟ್ಟಣ ಹುಡುಕುತ್ತಿದ್ದಾಳೆ...

ನಸುಗತ್ತಲಲ್ಲೂ ಕಾಣಬಲ್ಲಳು ಆಕೆ

ಮಸಿಗಟ್ಟಿದ ಗೋಡೆಯ ಮೇಲೆ ಹೊಳೆವ

ಮಗನ ಹಳೆಯ ಎಣ್ಣೆ ತಲೆಯ ಕಲೆ..

ಹೊರಗೆ ಬೀದಿಯಲ್ಲಿ ಇಡೀ ದಿನ ಜಾಹೀರಾತು ಬರೆದ

ಪೋರರು ಈಗ ಕತ್ತಲಲ್ಲೆ ನಿಂತು ಕೇಳುತ್ತಾರೆ-

`ಅಜ್ಜೀ ಈ ಪೇಂಟು ಡಬ್ಬಿ ಇಲ್ಲೇ ನಿಮ್ಮನೇಲೇ ಬಿಡ್ತೇವೆ,

ನಾಳೆ ಮತ್ತೆ ಬರ್ತೇವೆ... ನಿಮ್ಮ ಬಾವಿಕಟ್ಟೆ ಹತ್ರ

ಸ್ನಾನ ಮಾಡಬಹುದೆ?~

ಬೆಳಕಿಲ್ಲದ ಹೊತ್ತಲ್ಲೆ ನಡೆಯುವುದು

ಕನ್ನಡಿಯ ಮಾನಭಂಗ.

ಯಾರೂ ಇಲ್ಲವೆ ಮನೆಯಲ್ಲಿ -

ಎಲ್ಲಿಗೋ ಹೊಂಟಿದ್ದ ಸ್ವಪ್ನಾರೋಹಿಯೊಬ್ಬ ಅಂಗಳದಲ್ಲಿ ಇಳಿದು

ಮಂಡಿಯೂರಿ ಬೊಗಸೆಯೊಡ್ಡಿ ನೀರು ಕೇಳುವಾಗ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry