ಸೋಮವಾರ, ಜನವರಿ 20, 2020
21 °C

ಕಲೆಯ ಒಡನಾಟದಲ್ಲಿ...

ನಿರೂಪಣೆ: ಹೇಮಾ ವೆಂಕಟ್ Updated:

ಅಕ್ಷರ ಗಾತ್ರ : | |

ನನ್ನದು ಕಲಾಕುಟುಂಬ. ತಂದೆ ರಾಜಾಚಾರ್‌ ಮತ್ತು ತಾಯಿ ಅನಸೂಯಮ್ಮ ಶಿಕ್ಷಕ ವೃತ್ತಿಯ ಜೊತೆ ಕಲಾಕೃತಿ ರಚನೆಯಲ್ಲೂ ಆಸಕ್ತಿ ಹೊಂದಿದ್ದವರು. ಗಣೇಶ, ದುರ್ಗಿಯ ವಿಗ್ರಹಗಳನ್ನು ಮಾಡುವುದರಲ್ಲಿ ನಿಷ್ಣಾತರು. ನಾನು ಅಪ್ಪನ ಕಲಾಸಕ್ತಿ­ಯನ್ನು ನೋಡಿಯೇ ಬೆಳೆದವನು. ತಂದೆ 40 ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ಪ್ರತಿ ವರ್ಷವೂ ನವರಾತ್ರಿಗೆ ದುರ್ಗಿಯ ವಿಗ್ರಹ, ಚೌತಿಗೆ ಗಣೇಶನ ವಿಗ್ರಹಗಳನ್ನು ಮಾಡುತ್ತಾರೆ. ಶಾಲೆಯಲ್ಲೂ ಮಕ್ಕಳಿಗೆ ಚಿತ್ರಕಲೆ ಹೇಳಿಕೊಡುತ್ತಿದ್ದರು. ಈಗ ನಿವೃತ್ತರಾದರೂ ಆಸಕ್ತ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.ನಾನು ಚಿಕ್ಕಂದಿನಲ್ಲೇ ಬಣ್ಣಗಳ ಜೊತೆ ಆಡುತ್ತಾ ಬೆಳೆದವನು. ಅಪ್ಪ ಮಣ್ಣಿನ ಮೂರ್ತಿಗಳನ್ನು ಮಾಡುವಾಗ ನಾನು ಪುಟ್ಟ ಪುಟ್ಟ ಕಲಾಕೃತಿಗಳನ್ನು ಮಾಡುತ್ತಿದ್ದೆ. ಶಾಲೆ, ಕಾಲೇಜುಗಳಲ್ಲಿ ನಿರಂತರವಾಗಿ ಅನೇಕ ಬಹುಮಾನಗಳನ್ನು ಪಡೆದಿದ್ದೇನೆ. 1995ರಲ್ಲಿ ಜಪಾನ್‌ನಲ್ಲಿ ನಡೆದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ನನ್ನ ನೆನಪಿನಲ್ಲಿ ಸದಾ ಉಳಿಯುವ ಸಂಗತಿ.ಅರಣ್ಯ ಇಲಾಖೆ ನಡೆಸಿದ ಸ್ಪರ್ಧೆಯಲ್ಲಿ 17 ಬಾರಿ ಪ್ರಥಮ ಬಹುಮಾನ, ಶಿಕ್ಷಣ ಇಲಾಖೆ ನಡೆಸಿದ ಸ್ಪರ್ಧೆಯಲ್ಲಿ 6 ಬಾರಿ ಪ್ರಥಮ ಬಹುಮಾನ ಪಡೆದಿದ್ದೇನೆ. ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿಯಲ್ಲಿ 4 ವರ್ಷ ವಿಟಿಯು ಪ್ರಶಸ್ತಿ ಪಡೆದಿದ್ದೇನೆ.ಪ್ರತಿವರ್ಷ ಮಣ್ಣಿನ ಗಣೇಶನ ದೊಡ್ಡ ಮೂರ್ತಿ ಮಾಡುವ ಮೂಲಕ ಪರಿಸರ ಜಾಗೃತಿಗೆ ನನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ. ಮಣ್ಣಿನ ಕಲಾಕೃತಿಗಳ ಜೊತೆಗೆ ಜಲವರ್ಣ, ತೈಲವರ್ಣ, ಆಕ್ರಿಲಿಕ್‌, ಪೆನ್ಸಿಲ್‌ ಸ್ಕೆಚ್‌, ತಂಜಾವೂರು ಶೈಲಿ ಇವೆಲ್ಲದರಲ್ಲೂ ಪ್ರಯೋಗ ಮಾಡಿದ್ದೇನೆ.ಬಾಲ್ಯದಲ್ಲೇ ಚಿತ್ರಕಲೆ ಬಗ್ಗೆ ತುಂಬಾ ಆಕರ್ಷಿತನಾಗಿದ್ದೆ. ಚಿತ್ರಕಲೆಯಲ್ಲಿ ಪದವಿ ಪಡೆಯುವ ಆಸೆ ಇದ್ದರೂ ಅಪ್ಪ ಅಮ್ಮನ ಆಸೆಗೆ ಎಂಜಿನಿಯರಿಂಗ್‌ ಓದಿದೆ. ಓದಿನ ನಡುವೆಯೂ ಆಗಾಗ್ಗೆ ಚಿತ್ರ ರಚಿಸುತ್ತಿದ್ದೆ. ಈಗ ಉಪನ್ಯಾಸಕನಾಗಿ ದುಡಿಯುತ್ತಾ ವಿರಾಮದ ವೇಳೆಯಲ್ಲಿ ಕಲಾಕೃತಿ ರಚನೆ ಮಾಡುತ್ತೇನೆ. ಇಲ್ಲಿಯವರೆಗೆ ಮಾಡಿದ ಕಲಾಕೃತಿಗಳ ಲೆಕ್ಕವಿಲ್ಲ. ಆದರೆ, ಇದಕ್ಕಾಗಿ ಯಾವುದೇ ತರಬೇತಿ ಪಡೆದಿಲ್ಲ, ನನ್ನ ತಂದೆಯೇ ನನಗೆ ಗುರು.ಚಿತ್ರಕಲೆಯಲ್ಲಿ ಶಿಕ್ಷಣ ಪಡೆಯಬೇಕಿತ್ತು, ನನ್ನ ಆಯ್ಕೆ ತಪ್ಪಾಗಿದೆ ಎಂದು ಆಗಾಗ ಅನ್ನಿಸುತ್ತಿದೆ. ಏಕೆಂದರೆ ಹಾಗೆ ಚಿತ್ರಕಲೆ­ಯಲ್ಲೇ ಮುಂದುವರಿದು ವೃತ್ತಿಯಾಗಿ ಸ್ವೀಕರಿಸಿದ್ದರೆ ಈಗಾಗಲೇ ಒಂದಷ್ಟು ಸಾಧನೆ, ಹೆಸರು ಮಾಡಬಹುದಿತ್ತು. ಆದರೆ ಉನ್ನತ ಶಿಕ್ಷಣದ ಅಷ್ಟೂ ವರ್ಷಗಳು ಓದಿನಲ್ಲೇ ಕಳೆದುಹೋಗಿದೆ. ಈಗ ದಿನದ ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ಕಲಾಕೃತಿ ರಚನೆಯಲ್ಲಿ ತೊಡಗುತ್ತೇನೆ.ಮೂಡಬಿದರೆಯ ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಕಾರಣ ಬಿಡುವು ಕಡಿಮೆ. ಪರೀಕ್ಷೆಗಳೆಲ್ಲ ಮುಗಿದು ಕೆಲ ದಿನಗಳು ಬಿಡುವು ಸಿಕ್ಕಾಗ ಮಣ್ಣಿನ ಮೂರ್ತಿ ರಚನೆಗೆ ತೊಡಗು­ತ್ತೇನೆ. ಉಳಿದ ದಿನಗಳಲ್ಲಿ ಸಂಜೆ 6 ಗಂಟೆಗೆ ಕಾಲೇಜಿನಿಂದ ಬಂದು ಚಿತ್ರ ರಚನೆಯಲ್ಲಿ ಕಾಲ ಕಳೆಯುತ್ತೇನೆ. ರಾತ್ರಿ 2 ಗಂಟೆಯವರೆಗೂ ಕೆಲಸ ಮಾಡುತ್ತೇನೆ. ಇದರಿಂದ ಇತ್ತೀಚೆಗೆ ಆರೋಗ್ಯ ಹದ­ಗೆಟ್ಟಿತ್ತು. ವೈದ್ಯರು ನಿದ್ದೆಗೆಡದಂತೆ ಎಚ್ಚರಿಸಿ­ದ್ದಾರೆ. ಆದರೆ ಚಿತ್ರಕಲೆ ಬಿಟ್ಟಿರಲು ಆಗುವುದಿಲ್ಲ. ಚಿತ್ರಕಲೆ ಬಿಟ್ಟು ನನಗೆ ಬೇರೆ ಯಾವುದೇ ಆಸಕ್ತಿಗಳಿಲ್ಲ. ಪ್ರತಿಕ್ಷಣ ಹೊಸ ಕಲಾಕೃತಿ ರಚನೆಯ ಬಗ್ಗೆಯೇ ಯೋಚಿಸುತ್ತೇನೆ. ಇದರಲ್ಲೇ ಸಾಧನೆ ಮಾಡಬೇಕೆಂಬ ತುಡಿತ. ಎಂಜಿನಿಯರಿಂಗ್ ಓದಿದರೂ ಮನಸು ಮಾತ್ರ ಚಿತ್ರಕಲೆಯತ್ತಲೇ ಸೆಳೆಯುತ್ತಿದೆ. ಇದರಲ್ಲಿಯೇ ಸಾಧನೆ ಮಾಡಬೇಕೆಂಬ ಬಯಕೆಯಿದೆ. ಈವರೆಗೂ ಅನೇಕ ಪ್ರದರ್ಶನಗಳಲ್ಲಿ ಭಾಗವಹಿಸಿದ್ದೇನೆ. ಈ ಕ್ಷೇತ್ರದಲ್ಲಿ ನನ್ನದೇ ಆದ ಛಾಪು ಮೂಡಿಸಬೇಕು ಎನ್ನುವುದು ನನ್ನ ಮಹತ್ವಾಕಾಂಕ್ಷೆ.ನಾನು ಕೇವಲ ಹವ್ಯಾಸಕ್ಕೆ ಕಲಾಕೃತಿ ರಚಿಸುವುದಿಲ್ಲ. ನನ್ನ ಕಲಾಕೃತಿಗಳಲ್ಲಿ ಸಾಮಾಜಿಕ ಕಾಳಜಿಯೂ ಅಡಗಿರುತ್ತದೆ. ಸ್ತ್ರೀ ಶೋಷಣೆ, ಸಾಮಾಜಿಕ ಪಿಡುಗು, ಆಧುನಿಕತೆಯ ದುಷ್ಪರಿಣಾಮ, ಗ್ರಾಮೀಣ ಬದುಕು, ಮಲೆನಾಡಿನ ಸುಂದರ ಪ್ರಕೃತಿ, ರಾಮಾಯಣ ಮತ್ತು ಮಹಾಭಾರತದ ಪಾತ್ರಗಳು ನನ್ನ ಕುಂಚದಲ್ಲಿ ರೂಪು ಪಡೆದಿವೆ. ಸಾಮೂಹಿಕ ಅತ್ಯಾಚಾರ, ಪ್ರಕೃತಿ ವಿಕೋಪ ಮುಂತಾದ ಘಟನೆಗಳು ನಡೆದಾಗ ಅದು ನನ್ನ ಕಲಾಕೃತಿಯ ವಸ್ತುವಾಗಿವೆ. ಸ್ಥಳೀಯ ಸಮ್ಮೇಳನ, ಉತ್ಸವಗಳಲ್ಲಿ ಕಲಾಕೃತಿಗಳ ಪ್ರದರ್ಶನವನ್ನೂ ನಡೆಸಿದ್ದೇನೆ. ಸದ್ಯದಲ್ಲಿಯೇ ನನ್ನ ಕಲಾಕೃತಿಗಳ ಪ್ರದರ್ಶನಕ್ಕೆಂದೇ ವೆಬ್‌ಸೈಟ್‌ ಆರಂಭಿಸಲಿದ್ದೇನೆ.ನಾನು ಆಡಿ ಬೆಳೆದಿದ್ದೆಲ್ಲ ಮಲೆನಾಡಿನಲ್ಲಿ. ಕುಪ್ಪಳ್ಳಿಯಲ್ಲಿ ನನ್ನ ಬಾಲ್ಯ ಕಳೆದಿದ್ದು. ಅಲ್ಲಿನ ಪ್ರಕೃತಿ ನನ್ನ ಮೇಲೆ ಗಾಢ ಪ್ರಭಾವ ಬೀರಿದೆ. ಮಲೆನಾಡಿನ ಸುಂದರ ಪ್ರಕೃತಿಯನ್ನು ಕ್ಯಾನ್ವಾಸ್‌ನಲ್ಲಿ ಮೂಡಿಸಿದ್ದೇನೆ. ಹಾಗೆಯೇ ಹಳ್ಳಿಯ ಸಾಮಾಜಿಕ ಪರಿಸರವನ್ನೂ ಕಲಾಕೃತಿಗಳಲ್ಲಿ ಮೂಡಿಸಿದ್ದೇನೆ. ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಮಡದಿಗೆ ಹೊಡೆಯುತ್ತಿದ್ದ ದೃಶ್ಯ, ಹಳ್ಳಿಗಳಲ್ಲಿ ನಡೆಯುತ್ತಿದ್ದ ಮಕ್ಕಳ ಜೀತ, ಮಲೆನಾಡಿನಲ್ಲಿ ಆಗುತ್ತಿದ್ದ ಅರಣ್ಯ ನಾಶ ಇವೆಲ್ಲಾ ಚಿಕ್ಕ ವಯಸಿನಲ್ಲೇ ನನ್ನ ಮೇಲೆ ಗಾಢ ಪರಿಣಾಮ ಬೀರಿತ್ತು. ಇದನ್ನೇ ಚಿತ್ರಗಳಿಗೆ ವಸ್ತುವಾಗಿಸುತ್ತಿದ್ದೆ.ನೈಸರ್ಗಿಕ ಬಣ್ಣಗಳ ಜೊತೆಗೆ ರಂಗೋಲಿ ಪುಡಿಗಳನ್ನು ಬಳಸಿ ಬಣ್ಣ ತಯಾರಿಸುವುದು, ಫಾಸ್ಟ್‌ ಪೇಂಟಿಂಗ್ ಮುಂತಾದ ಪ್ರಯೋಗಗಳನ್ನೂ ಮಾಡಿದ್ದೇನೆ. ಮೂಡಬಿದಿರೆಯಲ್ಲಿ ಕಲಾಸಕ್ತಿಗೆ ಪೂರಕವಾದ ವಾತಾವರಣವಿದೆ. ನಾನು ಆಸಕ್ತ ಮಕ್ಕಳಿಗೆ ಹೇಳಿಕೊಡುತ್ತಿದ್ದೇನೆ. ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಪ್ರದರ್ಶನ ನಡೆಸುವ ಸಿದ್ಧತೆಯಲ್ಲಿದ್ದೇನೆ. 

ಪ್ರತಿಕ್ರಿಯಿಸಿ (+)