ಮಂಗಳವಾರ, ಜೂನ್ 15, 2021
21 °C

ಕಲೆಯ ಬಲೆಯಲ್ಲಿ ನಿಸರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲೆಯ ಬಲೆಯಲ್ಲಿ ನಿಸರ್ಗ

ಘಟ್ಟದ ಮಗ್ಗುಲಿನಲ್ಲಿ ಸುರಿವ ಮುಂಗಾರಿನ ಮುಸಲಧಾರೆಗೆ ಆ ಮಳೆಯೇ ಸಾಟಿ, ಶರತ್ಕಾಲದ ಮೋಡಕ್ಕೆ ಆ ಮೋಡವೇ ಬಿಳುಪು. ಸುತ್ತ ಹಸಿರುಗಟ್ಟಿ ನಿಂತಿರುವ ನಿಸರ್ಗಕ್ಕೆ ಪ್ರಕೃತಿಯೇ ಬೆರಗು. ಇವುಗಳಲ್ಲಿ ಎಲ್ಲವೂ ಚೆಂದ. ಇವೆಲ್ಲವೂ ದೇವರ ಕಲಾಕೃತಿಗಳು. ಅದಕ್ಕೆ ಕೇರಳವನ್ನು `ಗಾಡ್ಸ್ ಓನ್ ಕಂಟ್ರಿ~ ಎಂದು ಕರೆಯುತ್ತಾರೆ.  ಮುಗಿಲು ಚುಂಬಿಸುವಂತಿರುವ ಹಸಿರು ಕಾಡು, ಎದೆ ಸೀಳಿಕೊಂಡು ನುಗ್ಗುವ ಚಳಿ, ಬಂಗಾರವೇ ರಾಶಿ ರಾಶಿಯಾಗಿ ಬಿದ್ದಿದೆಯೇನೋ ಎಂಬಂತಿರುವ ಮರಳಿನ ರಾಶಿ, ಪಕ್ಕದಲ್ಲಿರುವ ಹಾಲ್ನೊರೆ ಚಿಮ್ಮಿಸುವ ಕಡಲ ಕಿನಾರೆ.ಮನಸ್ಸು ಪ್ರಫುಲ್ಲಗೊಳ್ಳಲು ಮತ್ತಿನ್ನೇನು ಬೇಕು. ಇಲ್ಲಿ ಪ್ರಕೃತಿಯ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು. ಅದೆಲ್ಲವೂ ಮನಸಲ್ಲಿ ಅಚ್ಚೊತ್ತುತ್ತವೆ. ಅವನ್ನೇ ಮರುಸೃಷ್ಟಿಸುವ ಪ್ರಯತ್ನ ಕಲಾವಿದ ರಾಜಾ ಅವರದ್ದು. ಖ್ಯಾತ ಕಲಾವಿದ ಕಿಶೋರ್ ರಾಜಾ ಕೇರಳದ ಕೊಟ್ಟಾಯಂನವರು. ಕೇರಳದ ಪ್ರಾಕೃತಿಕ ಸಂಪತ್ತನ್ನೇ ಆಧಾರವಾಗಿರಿಸಿಕೊಂಡು  ಅಪರೂಪದ ಸರಣಿ ಕಲಾಕೃತಿಗಳನ್ನು ರಚಿಸಿದ್ದಾರೆ.

 

ನಿಸರ್ಗದ ಚೆಲುವನ್ನು ತಮ್ಮದೇ ದೃಷ್ಟಿಕೋನದಲ್ಲಿ ವಿಭಿನ್ನವಾಗಿ ಚಿತ್ರಿಸಿದ್ದಾರೆ.  ಫೋಟೋರಿಯಲಿಸಂ ಹಾಗೂ ಹೈಪರ್‌ರಿಯಲಿಸಂ ತಂತ್ರಜ್ಞಾನದಿಂದ ಈ ಕಲಾಕೃತಿಗಳೆಲ್ಲವೂ ಭಿನ್ನವೆನಿಸುತ್ತವೆ.ರಾಜಾಗೆ ಚಿಕ್ಕಂದಿನಿಂದಲೂ ನಿಸರ್ಗದ ಮೇಲೆ ವಿಪರೀತ ಒಲವು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಸಿಕ್ಕ ಸಿಕ್ಕ ಹಾಳೆಯ ಮೇಲೆಲ್ಲಾ ಪೆನ್ಸಿಲ್‌ನಲ್ಲಿ ಲ್ಯಾಂಡ್‌ಸ್ಕೇಪ್‌ಗಳನ್ನು ಬಿಡಿಸುತ್ತಿದ್ದರು.

 

ಅವರ ಕುಂಚದಲ್ಲಿ ನಿಸರ್ಗ ಜೀವತಳೆದಂತೆ ಕಾಣುತ್ತಿತ್ತು. ಚಿಕ್ಕಂದಿನಿಂದಲೇ ಪ್ರಕೃತಿಯನ್ನು ಆರಾಧಿಸುವ ಮನಸ್ಸು ರೂಪುಗೊಂಡಿದ್ದರಿಂದ ಮುಂದೆ ಕೂಡ ಅವರು ತಮ್ಮ ಕಲಾಕೃತಿಯ ವಸ್ತು ವಿಷಯಕ್ಕೆ ನಿಸರ್ಗವನ್ನೇ ಆಯ್ಕೆ ಮಾಡಿಕೊಂಡರು.

ಆಕ್ರ್ಯಾಲಿಕ್ ಹಾಗೂ ಆಯಿಲ್ ಪೇಟಿಂಗ್ ಬಳಸಿ ಚಿತ್ರಿಸಿರುವ ಇವರ ಕಲಾಕೃತಿಗಳಲ್ಲಿ ಪ್ರಕೃತಿಯ ಸಹಜ ಚೆಲುವಿದೆ.

 

ನೈಜತೆ ಇದೆ. ದೂರದಿಂದ  ನೋಡಿದರೆ ಕಲಾಕೃತಿ ಅಂತ ಖಂಡಿತ ಅನಿಸುವುದಿಲ್ಲ. ಕಣ್ಣಮುಂದೆ ಇರುವುದು ನಿಜವೇ ಎಂಬಂತೆ ಭಾಸವಾಗುತ್ತದೆ. ಈ ಕಲಾಕೃತಿಗಳನ್ನು ಅರ್ಥೈಸಿಕೊಳ್ಳಲು ಕಲಾವಿದರೇ ಆಗಬೇಕೆಂದೇನಿಲ್ಲ.ಗೊಂದಲಕ್ಕೆ ಅಲ್ಲಿ ಅವಕಾಶವಿಲ್ಲ. ಯಾರಿಗಾದರೂ ಅರ್ಥವಾಗುತ್ತವೆ. ಅಪ್ಪಟ ನಿಸರ್ಗದಂತೆ. ಕಲಾಕೃತಿಯ ಭಾವದ ಅರ್ಥವಿನಿಮಯಕ್ಕೆ ಯಾವ ಭಾಷಾಂತರಕಾರರು ಬೇಕಿಲ್ಲ.ಇವರ ಕಲಾಕೃತಿಗಳು ವೀಕ್ಷಕ ಹಾಗೂ ಕಲಾಕೃತಿ ನಡುವೆ ಸಂವಾದವನ್ನು ಹುಟ್ಟುಹಾಕುತ್ತವೆ. ಇದೇ ಇವರ ಕಲಾಕೃತಿಗಳ ಶಕ್ತಿ. ರಿನೈಸೆನ್ಸ್ ಗ್ಯಾಲರಿಯಲ್ಲಿ ಪ್ರದರ್ಶನಗೊಂಡಿರುವ ಇವರ ಎಲ್ಲ ಕಲಾಕೃತಿಗಳಲ್ಲೂ ಹಸಿರು ಢಾಳಾಗಿದೆ.ಕೇರಳದ ಕಡಲ ಕಿನಾರೆಗಳು, ಅಣೆಕಟ್ಟು, ನದಿ, ದೇವಾಲಯ, ಬೆಟ್ಟ ಗುಡ್ಡ, ಸೂರ್ಯೋದಯ, ಸೂರ್ಯಾಸ್ತ, ಪರಂಪರೆ, ಪ್ರಾಣಿ-ಪಕ್ಷಿ ಎಲ್ಲವೂ ಸುಂದರವಾಗಿ ಮೈದಳೆದಿದೆ. ಈ ಕಲಾಕೃತಿಗಳ ರಚನೆಯ ಮುಖ್ಯ ಉದ್ದೇಶ ನಿಸರ್ಗದ ಸಹಜ ಚೆಲುವನ್ನು ಸೆರೆಹಿಡಿದಿಟ್ಟುವುದು.ನಗರೀಕರಣ, ಪ್ರಕೃತಿ ವಿಕೋಪದಿಂದಾಗಿ ಇಂತಹ ದೃಶ್ಯಗಳು ಮುಂದಿನ ಪೀಳಿಗೆಗೆ ನೋಡಲು ದೊರೆಯದೇ ಹೋಗಬಹುದು ಎಂಬ ಆಶಯ ಕೂಡ ಕಲಾವಿದರಿಗೆ ಇದೆ. ಪ್ರದರ್ಶನ ಮತ್ತು ಮಾರಾಟ ಮಾರ್ಚ್ 17ರವರೆಗೆ ರಿನೈಸೆನ್ಸ್ ಗ್ಯಾಲರಿಯಲ್ಲಿ ನಡೆಯಲಿದೆ.ಸ್ಥಳ: ನಂ.104, ವೆಸ್ಟ್‌ಮಿನಿಸ್ಟರ್, 13, ಕನ್ನಿಂಗ್‌ಹ್ಯಾಂ ರಸ್ತೆ.

 ಮಾಹಿತಿಗೆ: 2220 2232.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.