ಮಂಗಳವಾರ, ಅಕ್ಟೋಬರ್ 22, 2019
26 °C

ಕಲೆ ಮನಸ್ಸುಗಳನ್ನು ಬೆಸೆಯುತ್ತದೆ

Published:
Updated:

ಬೆಂಗಳೂರು: `ರಾಜಕೀಯ ಮನಸ್ಸುಗಳನ್ನು ಒಡೆದರೆ, ಕಲೆ ಮನಸ್ಸುಗಳನ್ನು ಬೆಸೆಯುತ್ತದೆ~ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಹೇಳಿದರು. ನಗರದ ಪುರಭವನದಲ್ಲಿ ಇತ್ತೀಚೆಗೆ ಶ್ರೀರಾಮಾಂಜನೇಯ ಸಾಂಸ್ಕೃತಿಕ ಹಾಗೂ ಯುವ ಕಲಾವೃಂದ ಏರ್ಪಡಿಸಿದ್ದ ಜಾನಪದ ಕಲಾಮೇಳ ಹಾಗೂ ರಂಗೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಮನುಷ್ಯತ್ವ ಬೆಳೆಯಲು ಕಲೆ ಸಹಕಾರಿ. ಕಲೆಗೆ ಎಲ್ಲವನ್ನೂ ವ್ಯಾಪಿಸುವ ಶಕ್ತಿ ಇದೆ. ಇಂತಹ ಕಲೆಯನ್ನು ಪ್ರದರ್ಶಿಸುವ ಕಲಾವಿದರ ಬದುಕು ಬಹುತೇಕ ಬಡತನದಲ್ಲಿ ಕಳೆದು ಹೋಗುತ್ತದೆ. ಕಲಾವಿದರ ಕಷ್ಟಗಳಿಗೆ ಸರ್ಕಾರ ಹಾಗೂ ಸಮಾಜ ಸ್ಪಂದಿಸಬೇಕು~ ಎಂದು  ನುಡಿದರು. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, `ಕಲಾವಿದರಿಗೆ ಜಾತಿ, ಭಾಷೆಗಳ ಬೇಧವಿಲ್ಲ. ಜಾನಪದ ಕಲಾವಿದರು ನಿತ್ಯವೂ ಬಡತನವನ್ನೇ ಬಾಳುವವರು. ಎಲ್ಲಾ ಜಾನಪದ ಕಲಾವಿದರನ್ನೂ, ಜಾನಪದ ಕಲಾ ಪ್ರಕಾರಗಳನ್ನೂ ಗುರುತಿಸಿ ಬೆಳೆಸುವ ಪ್ರಯತ್ನ ಹೆಚ್ಚಾಗಬೇಕು~ ಎಂದರು.ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, `ಭ್ರಷ್ಟಾಚಾರ ಇಂದು ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸಿದೆ. ಪ್ರಶಸ್ತಿಗಳಿಗಾಗಿ ಲಾಬಿ ಹೆಚ್ಚಾಗಿದೆ. ಭ್ರಷ್ಟರು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಪ್ರಾಮಾಣಿಕರು ಕಷ್ಟದಲ್ಲೇ ಬದುಕು ದೂಡುವಂತಾಗಿದೆ. ಹಿಂದೆ ಹಣ ಇರಲಿಲ್ಲ, ಶಾಂತಿ, ನೆಮ್ಮದಿ ಹಾಗೂ ಪರಸ್ಪರ ಆತ್ಮೀಯತೆ ಹೆಚ್ಚಾಗಿತ್ತು. ಆದರೆ ಇಂದು ಹಣ ಅವೆಲ್ಲವನ್ನೂ ಕಸಿದುಕೊಂಡಿದೆ~ ಎಂದು ವಿಷಾದಿಸಿದರು.ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಮಾತನಾಡಿ, `ಭಾರತೀಯ ಸಂಸ್ಕೃತಿಯನ್ನು ಸಂಘಟಿಸಿ, ಅದಕ್ಕೆ ಜೀವ ತುಂಬುವ ಕೆಲಸ ಕಲಾವಿದರಿಂದ ಆಗಬೇಕು. ಅಂತಹ ಶಕ್ತಿ ಜಾನಪದಕ್ಕೆ ಇದೆ~ ಎಂದರು.ಜಾನಪದ ಗಾಯಕ ಬಾನಂದೂರು ಕೆಂಪಯ್ಯ ಅವರನ್ನು ಸನ್ಮಾನಿಸಲಾಯಿತು. ಹಿರಿಯ ರಂಗಕರ್ಮಿಗಳಾದ ಆರ್.ಪರಮಶಿವನ್, ಪಿ.ವಜ್ರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಹಾಸ್ಯ ಕಲಾವಿದ ನಾಗರಾಜ್ ಕೋಟೆ, ಗಾಯಕ ರವೀಂದ್ರ ಸೊರಗಾವಿ, ಶ್ರೀರಾಮಾಂಜನೇಯ ಸಾಂಸ್ಕೃತಿಕ ಹಾಗೂ ಯುವ ಕಲಾವೃಂದದ ಅಧ್ಯಕ್ಷ ಎಚ್.ನರಸಿಂಹರಾಜು ಮತ್ತಿತರರು ಪಾಲ್ಗೊಂಡಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)