ಕಲೆ-ವಿನ್ಯಾಸದ ಸಂಗಮ

7

ಕಲೆ-ವಿನ್ಯಾಸದ ಸಂಗಮ

Published:
Updated:
ಕಲೆ-ವಿನ್ಯಾಸದ ಸಂಗಮ

`ಹೊರರಾಜ್ಯದವರು ಪಾಲ್ಗೊಂಡ ಮಾತ್ರಕ್ಕೆ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುತ್ತಿಲ್ಲ. ಗ್ರಾಹಕರ ಮೇಲೆ ನಮಗೆ ನಂಬಿಕೆಯಿದೆ. ನಮ್ಮ ಮಳಿಗೆ ಎಲ್ಲೇ ಇದ್ದರೂ ಹುಡುಕಿ ಕೇಳಿ ಬರುತ್ತಾರೆ. ಎಲ್ಲರ ಉತ್ಪನ್ನಗಳಿಗೂ ಅವರದೇ ಆದ ವೈಶಿಷ್ಟ್ಯವಿದೆ. ಗ್ರಾಹಕರು ಕೊಳ್ಳುವುದು ಅವರಿಗಿಷ್ಟ ಬಂದಿದ್ದನ್ನು ಮಾತ್ರ...~ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆದ `ದಿ ಸೊಸೈಟಿ ಕಲೆಕ್ಷನ್~ನಲ್ಲಿ ಪಾಲ್ಗೊಳ್ಳಲು ಬಂದಿದ್ದ ಕೆ.ಕೆ ಕ್ರಿಯೇಷನ್ಸ್ ಮಾಲೀಕ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಕಳೆದ 20 ವರ್ಷಗಳಿಂದ ವಸ್ತ್ರೋದ್ಯಮದಲ್ಲಿ ತೊಡಗಿಕೊಂಡು ನೂರಕ್ಕೂ ಹೆಚ್ಚು ಪ್ರದರ್ಶನದಲ್ಲಿ ಭಾಗವಹಿಸಿದ ಅನುಭವಿರುವ ಅವರು `ಹೊರರಾಜ್ಯದವರ ಉತ್ಪನ್ನಗಳು ನಿಮಗೆ ಸ್ಪರ್ಧಿಯಾಗುವುದಿಲ್ಲವೇ~ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ರೀತಿ ಇದು.`ಅದು ಹೇಗೆ ಸಾಧ್ಯ. ನಾವೂ ಅವರ ರಾಜ್ಯಗಳಿಗೆ ಹೋಗಿ ಪ್ರದರ್ಶನ ಏರ್ಪಡಿಸುತ್ತೇವಲ್ಲಾ, ಆಗ ಅವರು ಬೇಡ ಎನ್ನುತ್ತಾರೆಯೇ. ನಮ್ಮ ಉತ್ಪನ್ನಗಳು ಗುಣಮಟ್ಟದಲ್ಲಿ ಶ್ರೇಷ್ಟವಿದ್ದಾಗ ಗ್ರಾಹಕರು ಬಂದೇ ಬರುತ್ತಾರೆ. ಫ್ಯಾಷನ್ ಪ್ರತಿ ಎರಡು ತಿಂಗಳಿಗೊಮ್ಮೆ ಬದಲಾಗುತ್ತಲೇ ಇರುತ್ತದೆ.ಹೊಸ ಹಿಂದಿ ಸಿನಿಮಾ ಬಿಡುಗಡೆಯಾದಾಗ ಅದರಲ್ಲಿ ನಾಯಕಿ ತೊಟ್ಟ ಉಡುಗೆಯ ಬಣ್ಣವೇ ಆ ತಿಂಗಳಿಡೀ ಓಡುತ್ತದೆ. ಫ್ಯಾಷನ್ ಲೋಕದಲ್ಲಾಗುವ ಬದಲಾವಣೆಗಳೊಂದಿಗೆ ಹೆಜ್ಜೆ ಹಾಕಿದರಷ್ಟೇ ನಮಗಿಲ್ಲಿ ಉಳಿಗಾಲ. ನಮ್ಮಲ್ಲೇ ಕಳಪೆ ಉತ್ಪನ್ನ ಇಟ್ಟುಕೊಂಡು ಹೊರರಾಜ್ಯದ ಕಲಾವಿದರಿಗೆ ಜಾಗ ನೀಡುವುದು ಸರಿಯಲ್ಲ ಎಂದು ವಾದಿಸುವುದು ತಪ್ಪು~ ಎಂಬುದು ಅವರ ನಿಲುವು. ಸೊಸೈಟಿ ಕಲೆಕ್ಷನ್ ಪ್ರದರ್ಶನದಲ್ಲಿ ಇಪ್ಪತ್ತು ರಾಜ್ಯಗಳ ನೂರಕ್ಕೂ ಅಧಿಕ ಮಳಿಗೆಗಳು ಪಾಲ್ಗೊಂಡಿದ್ದವು. ತಮ್ಮ ರಾಜ್ಯದ ಸಾಂಸ್ಕೃತಿಕ ಸಿರಿವಂತಿಕೆ-ವೈವಿಧ್ಯತೆ ಬಿಂಬಿಸುವ ಉತ್ಪನ್ನಗಳೊಂದಿಗೆ ಅವು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ರಸ್‌ಬೆರ‌್ರಿ ಸಾರಿ ಉತ್ಪನ್ನಗಳ ಮಾಲಕಿ ದೀಪಾ ಹೇಳುವಂತೆ `ಬೆಂಗಳೂರಿಗೆ ನಾವು ಬರುವುದು ಇದು ನಾಲ್ಕನೇ ಬಾರಿ. ಪ್ರತಿ ಬಾರಿಯೂ ಗ್ರಾಹಕರ ಪ್ರತಿಕ್ರಿಯೆ ಉತ್ತಮವಾಗಿಯೇ ಇರುತ್ತದೆ. ಈ ಬಾರಿಯೂ ಅಷ್ಟೇ, ಕಾಟನ್ ಹಾಗೂ ಎಥ್ನಿಕ್ ವಿನ್ಯಾಸದ ವಸ್ತ್ರಗಳಿಗೆ ಹೆಚ್ಚಿನ ಬೇಡಿಕೆ. ಬೆಂಗಳೂರಿಗರು ಅಲಂಕಾರ ಪ್ರಿಯರು ಎಂಬುದನ್ನು ಅರಿತು ಅವರಿಗೆ ಇಷ್ಟವಾಗುವ ವಿನ್ಯಾಸವನ್ನೇ ತಂದಿದ್ದೇವೆ.  ~ ಎನ್ನುತ್ತಾ ಕಾಟನ್ ಸೀರೆಯಲ್ಲಿ ಲಭ್ಯವಿರುವ ವೈವಿಧ್ಯತೆಗಳನ್ನು ಹರಡಿದರು.`ಇಲ್ಲಿ ಭೇಟಿ ನೀಡುತ್ತಿರುವವರಲ್ಲಿ ಹೆಚ್ಚಿನವರು ಮಹಿಳೆಯರು. ಅವರು ಉಡುಪು, ಆಭರಣ, ಅಲಂಕಾರಿಕ ವಸ್ತುಗಳತ್ತ ಹೆಚ್ಚು ಆಸಕ್ತಿ ತೋರುತ್ತಾರೆಯೇ ಹೊರತು ಕಲೆಯ ಕುರಿತಾದ ಅವರ ಅಭಿರುಚಿ ಇಲ್ಲಿ ಕಾಣಿಸುವುದಿಲ್ಲ. ಗೋಡೆಯ ಅಲಂಕಾರಕ್ಕೆ ಬಳಸಬಹುದಾದ ಗಣಪ, ಧ್ಯಾನಸ್ಥ ಬುದ್ಧ, ಏಸುಕ್ರಿಸ್ತ ಮೊದಲಾದ ಮೂರ್ತಿಗಳಿಗೆ ಬೇಡಿಕೆಯಿಲ್ಲ. ಟೆರ‌್ರಾಕೋಟ ಹಾಗೂ ಪೋಲಿಫೈರ್‌ನಿಂದ ತಯಾರಿಸಿದ ಅಪರೂಪದ ಮೂರ್ತಿಗಳಾದರೂ ಕೊಳ್ಳುವವರಿಲ್ಲ~ ಎಂದು ನೋವು ಹಂಚಿಕೊಂಡದ್ದು ಉತ್ತರಪ್ರದೇಶದ ರುಚಿರ್.ಇದರ ಹೊರತಾಗಿ ನೀರಿನಲ್ಲಿ ಉರಿಯುವ ಕ್ಯಾಂಡಲ್ ಪ್ರದರ್ಶನದ ವಿಶೇಷ. ದುಬಾರಿ ಹಣತೆತ್ತು ಹೋಟೆಲ್‌ನಲ್ಲಿ ರೂಂ ಬಾಡಿಗೆ ಪಡೆದು ಕ್ಯಾಂಡಲ್ ಲೈಟ್ ಡಿನ್ನರ್ ಆಚರಿಸಿಕೊಳ್ಳುವ ಬದಲು ಮನೆಯಲ್ಲೇ ಆ ವಾತಾವರಣ ಸೃಷ್ಟಿಸಿ ಎನ್ನುತ್ತದೆ ವಿವ್ಯಾಕ್ಸ್ ಕಂಪೆನಿ. ನೀರಮೇಲೆ ತೇಲುತ್ತಾ, ಬುಟ್ಟಿಯೊಳಗೆ, ಪಾತ್ರೆಯೊಳಗೆ, ಗ್ಲಾಸಿನೊಳಗೆ  ಉರಿಯುವ ಕ್ಯಾಂಡಲ್‌ಗಳು ಮನೆಯಲ್ಲೇ ಡಿನ್ನರ್ ಸೃಷ್ಟಿಸುವ ಅವಕಾಶ ನೀಡಲಿವೆ ಎನ್ನುತ್ತಾರೆ ಈ ಹೊಸ ಉತ್ಪನ್ನದ ಸೃಷ್ಟಿಕರ್ತ ಜಾವೇದ್.ಇದರೊಂದಿಗೆ ಕರಕುಶಲ ಉತ್ಪನ್ನಗಳು, ಮರದ ಕೆತ್ತನೆಗಳು, ಅಡುಗೆ ಮನೆಯಲ್ಲಿ ಬಳಸಬಹುದಾದ ಚಿಪ್ಪಿನಾಕಾರದ ಪಾತ್ರಗಳು, ಮಣ್ಣಿನ ಮೂರ್ತಿಗಳು, ಅಮೃತಶಿಲೆಯ ಕಲಾಕೃತಿಗಳು, ಬಳೆಯ ವಿನ್ಯಾಸ ಹೋಲುವ ವಾಚ್‌ಗಳು, ಹಳೇ ಗಡಿಯಾರಗಳು, ಅಲ್ಯೂಮಿನಿಯಂಗೆ ಸ್ಟೀಲ್‌ನ ಲೇಪಕೊಟ್ಟ ಸೆಟ್ ಪಾತ್ರೆಗಳು, ಬಿದಿರಿನ ಕುರ್ಚಿ, ಚಾಪೆ, ತೊಟ್ಟಿಲು, ಕುಷನ್, ಬೆಡ್, ಕೋಲ್ಕತ್ತಾದ ಕ್ವೀನೆಕ್ ವಸ್ತ್ರ, ಪರ್ಸ್, ಜೋಧ್‌ಪುರಿ ಚಪ್ಪಲಿಗಳು ಆಕರ್ಷಣೆಯ ಕೇಂದ್ರಬಿಂದುಗಳಾಗಿದ್ದವು.ಹೈದರಾಬಾದ್, ಮುಂಬೈ, ಚೆನ್ನೈ, ಅಹಮದಾಬಾದ್‌ಗಳಲ್ಲಿ ಪ್ರದರ್ಶನ ಮುಗಿಸಿ ಬಂದಿರುವ ಸೊಸೈಟಿ ಕಲೆಕ್ಷನ್ ನಗರಿಗರಿಗೂ ಹಲವು ರಾಜ್ಯಗಳ ಉತ್ಪನ್ನಗಳ ಆಯ್ಕೆಗೆ ಅವಕಾಶ ನೀಡಿತ್ತು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry