ಗುರುವಾರ , ನವೆಂಬರ್ 14, 2019
19 °C

`ಕಲೆ, ಸಂಸ್ಕೃತಿ ಬಿಂಬಿಸುವ ಚಿತ್ರಗಳು ಹೃದಯಕ್ಕೆ ಹತ್ತಿರ'

Published:
Updated:

ಉಡುಪಿ: `ನೈಸರ್ಗಿಕ ಬಣ್ಣಗಳಿಂದ ನಮ್ಮ ಕಲೆ, ಸಂಸ್ಕೃತಿ ಬಿಂಬಿಸುವ ಚಿತ್ರಕಲೆ ರಚಿಸಿದರೆ ಹೃದಯಸ್ಪರ್ಶಿಯಾಗಿರುತ್ತದೆ' ಎಂದು ವಿದ್ಯೋದಯ ಶಾಲೆಯ ಪ್ರಾಂಶುಪಾಲರಾದ ಸುಧಾರಾವ್ ತಿಳಿಸಿದರು.ಉಡುಪಿ ಕಲಾ ಶಾಲೆ ಏರ್ಪಡಿಸಿದ್ದ `ನಾನು ಮತ್ತು ಸಂಪ್ರದಾಯ' ವಿಷಯಾಧಾರಿತ ಜಾನಪದ ಮತ್ತು ಬುಡಕಟ್ಟು ಕಲಾಪ್ರಕಾರ ಬಿಂಬಿಸುವ ಚಿತ್ರಕಲೆಯ ಪ್ರದರ್ಶನವನ್ನು ಅವರು ಬುಧವಾರ ಉದ್ಘಾಟಿಸಿ ಮಾತನಾಡಿದರು.ಗುಡ್ಡಗಾಡು ಕಲೆ (ರಾಕ್ ಆರ್ಟ್), ರಂಗೋಲಿ ಕಲೆ, ಸೆರ್ಮನ್ ಕಲೆ ಸಹಿತ ಜಾನಪದ ಮತ್ತು ಬುಡಕಟ್ಟು ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳನ್ನು ಮಕ್ಕಳೇ ರಚಿಸಿರುವುದು ಹೆಮ್ಮೆಯ ಸಂಗತಿ. ಉತ್ತರಭಾಗದ ಬುಡಕಟ್ಟು ಕಲಾಪ್ರಕಾರದ ಬಗೆಗಿನ ಆಸಕ್ತಿ ಕರಾವಳಿ ಭಾಗದಲ್ಲಿ ಕಡಿಮೆಯಾಗಿದ್ದು ಇಂತಹ ಕಲಾಪ್ರದರ್ಶನದ ಮೂಲಕ ಬುಡಕಟ್ಟು ಕಲೆಯ ಬಗ್ಗೆ ಅರಿವು ಮೂಡಿಸಿ ಧನಾತ್ಮಕ ಚಿಂತನೆ ಆಗಬೇಕಾಗಿದೆ ಎಂದು ಹೇಳಿದರು.ಮಣಿಪಾಲ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಸಾಗರ ಮುಖ್ಯೋಪಾಧ್ಯಾಯ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಕಲೆ ಅಡಗಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಇಂತಹ ಕಲಾ ಪ್ರದರ್ಶನ ಸಹಕಾರಿ. ಮಕ್ಕಳನ್ನು ನಿಯಂತ್ರಿಸುವ ಬದಲು ಬೆಳೆಸುವ ಪ್ರಕ್ರಿಯೆ ಆಗಬೇಕು ಎಂದರು.ಕಲಾಶಾಲೆಯ ಸ್ಥಾಪಕ ಅಧ್ಯಕ್ಷ ವಸಂತ್ ರಾವ್ ಮಾತನಾಡಿ, ಕಲಾಪ್ರದರ್ಶನದ ಯಶಸ್ಸು ಚಿತ್ರಕಲೆ ರಚಿಸಿರುವ  ವಿದ್ಯಾರ್ಥಿಗಳಿಗೆ ಸಲ್ಲಬೇಕು ಎಂದರು.ಕಲಾ ಶಾಲೆಯ 14 ವಿದ್ಯಾರ್ಥಿಗಳು ರಚಿಸಿರುವ ಚಿತ್ರಕಲೆಯು 7 ದಿನಗಳ ವರೆಗೆ ಪ್ರದರ್ಶನಗೊಳ್ಳಲಿದೆ.ಉಡುಪಿ ಫೌಂಡೇಶನ್‌ನ ಸಿಇಒ ಕೆವಿನ್ ಮೊರಿಸನ್ ಡಿಮೆಲ್ಲೊ ಇದ್ದರು.

ಪ್ರತಿಕ್ರಿಯಿಸಿ (+)