ಕಲೆ, ಸಂಸ್ಕೃತಿ ವಿಚಾರದಲ್ಲಿ ಅಡ್ಡಿ ಸಲ್ಲ: ಸಿ.ಎಂ.

ಭಾನುವಾರ, ಜೂಲೈ 21, 2019
26 °C

ಕಲೆ, ಸಂಸ್ಕೃತಿ ವಿಚಾರದಲ್ಲಿ ಅಡ್ಡಿ ಸಲ್ಲ: ಸಿ.ಎಂ.

Published:
Updated:

ರಾಮನಗರ: `ಒಳ್ಳೆಯ ಕೆಲಸಗಳಿಗೆ ಅಧಿಕಾರಿಗಳು ಅಡ್ಡಿ ಮಾಡುವುದು ಸರಿಯಲ್ಲ. ಕಲೆ, ಸಂಸ್ಕೃತಿ ವಿಚಾರಗಳಿಗೆ ಅನಗತ್ಯವಾಗಿ ಕಾನೂನು ತೊಡಕುಗಳನ್ನು ತೋರಿಸಿ ಅಡ್ಡಿ ಮಾಡುವ ಕೆಲಸ ಅಧಿಕಾರಿಗಳಿಂದ ಆಗಬಾರದು~ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಜಾನಪದ ಲೋಕದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನ ಜಾನಪದ ವಸ್ತು ಸಂಗ್ರಹಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಲೋಕದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ನೀಡಿರುವ 13.38 ಎಕರೆ ಜಮೀನಿಗೆ ಖಾತೆಯಾಗಲಿ, ಪಹಣಿಯಾಗಲಿ, ಭೂ ಪರಿವರ್ತನಾ ಅನುಮತಿಯಾಗಿ ಅಧಿಕಾರಿಗಳು ನೀಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ಸಂಬಂಧ ಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ಜಮೀನಿನ ಹಕ್ಕು ಬಾಧ್ಯತೆಗಳನ್ನು ಸಕ್ರಮಗೊಳಿಸಿಕೊಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಜಿ.ನಾರಾಯಣ ಅವರು ಮಾಡಿದ ಮನವಿಗೆ ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿಯವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

`ಪುಣ್ಯ ಹಾಗೂ ಸತ್ಕಾರ್ಯದ ಕೆಲಸಗಳಿಗೆ ಅಧಿಕಾರಿಗಳು ವಿನಾಕಾರಣ ಅಡೆ-ತಡೆ ಹಾಕದೆ, ಮಂಜೂರಾತಿ ನೀಡಬೇಕು. ಇದು ಸರ್ಕಾರ ಮತ್ತು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ~ ಎಂದರು.

ಜಾನಪದ ಲೋಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಪರಿಷತ್ತಿನ ಅಧ್ಯಕ್ಷರು ಕೋರಿದ್ದಾರೆ. ಆದರೆ ಇದಕ್ಕೆ ಕಾನೂನಿನ ತೊಡಕಿದೆ. ಅಲ್ಲದೆ ನಾವೆಲ್ಲ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ತಲೆಭಾಗಬೇಕಿದೆ. ಇದರ ನಡುವೆಯೂ ದಿನಗೂಲಿ ಕಾರ್ಮಿಕರ ಸಮಸ್ಯೆ ಪರಿಹರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಸಂಪುಟ ಉಪ ಸಮಿತಿ ರಚಿಸಿ ಈ ಕಾರ್ಮಿಕರ ಸಮಸ್ಯೆ ಇತ್ಯರ್ಥಗೊಳಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಜಾನಪದ ಲೋಕದ ಸಮಸ್ಯೆಗಳು, ಬೇಡಿಕೆಗಳು ಹಾಗೂ ಯೋಜನೆಗಳ ಕುರಿತು ಚರ್ಚಿಸಿ ಕ್ರಮ ತೆಗೆದುಕೊಳ್ಳುವ ಸಲುವಾಗಿ 10ರಿಂದ 15 ದಿನದಲ್ಲಿ ಅದಿಕಾರಿಗಳ ಸಭೆ ಕರೆಯುತ್ತೇನೆ. ಈ ಸಭೆಯಲ್ಲಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸುವ, ಹಾಗೂ ಜಮೀನಿನ ಮಂಜೂರಾತಿಗೆ ಸಂಬಂಧಿಸಿದ ತೀರ್ಮಾನಗಳನ್ನು ತೆಗೆದುಕೊಳ್ಳುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry