ಬುಧವಾರ, ಜೂನ್ 16, 2021
27 °C

ಕಲ್ಕುಂಟೆ ರಂಗನಾಥಸ್ವಾಮಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಕುಂಟೆ ರಂಗನಾಥಸ್ವಾಮಿ ಉತ್ಸವ

ಹೊಸ ಕ್ಯಾಲೆಂಡರ್ ವರ್ಷ ಶುರುವಾಗುವುದರೊಂದಿಗೆ ಜಾತ್ರೆ, ಉತ್ಸವಗಳಿಗೆ ನಾಡು ಸಜ್ಜಾಗುತ್ತದೆ. ಪ್ರತಿ ತಿಂಗಳ ಪುಟದಲ್ಲೂ ತಮ್ಮ ನೆಚ್ಚಿನ ದೇವರ/ದೇವಸ್ಥಾನದ ಉತ್ಸವಗಳ ದಿನಾಂಕದ ಮೇಲೆ ಗೀರು ಗೆರೆ ಬೀಳುತ್ತದೆ. ಇತಿಹಾಸ/ಪುರಾಣದೊಂದಿಗೆ ಆ ದೇವಸ್ಥಾನಕ್ಕೆ ನಂಟಿದ್ದರಂತೂ ಅದೇ ಪರಂಪರೆಯ ಜಾಡಿನಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಶ್ರದ್ಧೆ, ಬದ್ಧತೆ. ಸುತ್ತಮುತ್ತಲ ಪ್ರದೇಶಗಳಲ್ಲೂ ಜಾತ್ರೆಯ ಝಲಕ್. ಹೊಸಕೋಟೆ ತಾಲೂಕಿನ (ಕಾಡುಗುಡಿ ಮಾರ್ಗ) ಕಲ್ಕುಂಟೆ ಅಗ್ರಹಾರ (ಜೋಡಿಗ್ರಾಮ)ದಲ್ಲಿಯೂ ಈಗ ಇಂತಹುದೇ ಶ್ರದ್ಧಾಭಕ್ತಿಯ ವಾತಾವರಣ. ಕಲ್ಕುಂಟೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಬ್ರಹ್ಮರಥೋತ್ಸವ ಸಂಭ್ರಮ.

ಬ್ರಹ್ಮರಥೋತ್ಸವದ ಅಂಗವಾಗಿ ಅಂಡಾಳಮ್ಮನಿಗೆ ಪೂಲಮಗಿ ಸೇವೆ, ನವರಂಕಣದ ಹೂವಿನ ಅಲಂಕಾರ, ರಥ ಪ್ರತಿಷ್ಠೆ, ತಮಟೆ ವಾದ್ಯ ಸೇವೆ, ರಥಾರೋಹಣ, ತೇರಡಿ ಉತ್ಸವ, ಚಿತ್ರಗೋಪುರ ಸೇವೆ ಏರ್ಪಾಡಾಗಿದ್ದು, ರಾತ್ರಿ 8.30ಕ್ಕೆ ಕಲ್ಕುಂಟೆ ರಂಗನಾಥ ಕೃಪಾಪೋಷಿತ ನಾಟಕ ಮಂಡಳಿ ಸದಸ್ಯರಿಂದ `ಕುರಕ್ಷೇತ್ರ~ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ. ಮಾ. 12ರವರೆಗೂ ತಿರುಬೀದಿ ಉತ್ಸವ, ಗರುಡೋತ್ಸವ ಮುಂತಾದ ಸೇವೆಗಳು ನಡೆಯಲಿವೆ.

ಮುನ್ನೂರು ವರ್ಷ ಹಳೆಯದಾದ ಈ ದೇವಸ್ಥಾನ ನಿರ್ಮಾಣಕ್ಕೆ ಒಂದು ಧಾರ್ಮಿಕ ಹಿನ್ನೆಲೆಯಿದೆ. ಅನ್ನದಾನಂ ಶ್ರೀನಿವಾಸಾಚಾರ್ ಎಂಬ ವೈಷ್ಣವ ವಿದ್ವಾಂಸರಿಗೆ ಕನಸಿನಲ್ಲಿ ಬಂದ ರಂಗನಾಥಸ್ವಾಮಿ, ತಾನು ಮಾಲೂರಿನ ಕೆರೆಯೊಂದರಲ್ಲಿ ಇರುವುದಾಗಿಯೂ, ತನ್ನನ್ನು ತಂದು ಜೋಡಿಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಿ ಪ್ರತಿಷ್ಠಾಪಿಸಿ ಪೂಜಿಸಬೇಕು ಎಂದು ಆಜ್ಞಾಪಿಸಿದರಂತೆ. ಅದರಂತೆ ಶ್ರೀನಿವಾಸಾಚಾರ್ ಮತ್ತು ಗ್ರಾಮಸ್ಥರೆಲ್ಲ ಮಾಲೂರಿನ ಕೆರೆಯಲ್ಲಿ ವಿಗ್ರಹವನ್ನು ಪತ್ತೆ ಹಚ್ಚಿ ತಂದು ಪೂಜಿಸಲಾರಂಭಿಸಿದರಂತೆ. ನಾಲ್ಕೂವರೆ ಅಡಿ ಎತ್ತರದ ಈ ಶಿಲಾವಿಗ್ರಹ ಹೆಡೆಯೆತ್ತಿದ ಆದಿಶೇಷನ ಮೇಲೆ ಪವಡಿಸಿರುವ ಭಂಗಿಯಲ್ಲಿದ್ದು, ಶ್ರೀದೇವಿ, ಭೂದೇವಿ ಸಹಿತವಾಗಿದೆ, ವಿಗ್ರಹದ ನಾಭಿಯಲ್ಲಿ ಬ್ರಹ್ಮನಿರುವುದು ವಿಶೇಷ. ಆರಂಭದಲ್ಲಿದ್ದುದು ಚಿಕ್ಕ ಗುಡಿ. ಈಗ ಬೃಹತ್ ದೇವಸ್ಥಾನವಾಗಿ ಅಭಿವೃದ್ಧಿ ಹೊಂದಿದೆ. 1911ರಿಂದಲೂ ಇಲ್ಲಿ ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ಬ್ರಹ್ಮರಥೋತ್ಸವ ಹಾಗೂ ತೇರು ಉತ್ಸವಗಳು ನಡೆದುಬಂದಿರುವುದು ಗಮನಾರ್ಹ.

ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಪ್ರತಿದಿನವೂ ರಂಗನಾಥಸ್ವಾಮಿಯ ಸುದರ್ಶನಚಕ್ರ ಮತ್ತು ಡಮರುಗದ ಪುರ ಮೆರವಣಿಗೆ ಕೈಗೊಳ್ಳಲಾಗುವುದು. ಇದು ಸುದರ್ಶನ ಪೆರುಮಾಳ್ ಉತ್ಸವ. ಧ್ವಜಾರೋಹಣದ ನಂತರ ವಿವಿಧ ವಾಹನ (ಪಲ್ಲಕಿ)ಗಳ ತಿರುಬೀದಿ ಉತ್ಸವ ನಡೆಯುತ್ತದೆ. ಗರುಡ ವಾಹನೋತ್ಸವ, ಮುತ್ತಿನ ಪಲ್ಲಕಿ ಉತ್ಸವ ಹಾಗೂ ಶಯನೋತ್ಸವ ಅಪಾರ ಜನಾಕರ್ಷಣೆ ಪಡೆದಿದೆ. ರಂಗನಾಥ ಸ್ವಾಮಿಯ ಉತ್ಸವಮೂರ್ತಿ ಚನ್ನಕೇಶವಸ್ವಾಮಿ. ಒಮ್ಮೆ ಭಕ್ತನೊಬ್ಬ ತನ್ನ ಕನಸಿನಲ್ಲಿ ಕಂಡ ಪ್ರಕಾರ ಟಿಪ್ಪೂಸುಲ್ತಾನನ ಅರಮನೆಯಲ್ಲಿ ಈ ಮೂರ್ತಿಯನ್ನು ಪತ್ತೆಹಚ್ಚಿ ತನ್ನ ಉತ್ತರೀಯದಲ್ಲಿ ಬಚ್ಚಿಟ್ಟುಕೊಂಡು ಅರಮನೆಯ ಗೋಡೆ ಹಾರಿ, ದೇವಸ್ಥಾನಕ್ಕೆ ಒಪ್ಪಿಸಿದನೆಂಬುದು ಪ್ರತೀತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.