ಕಲ್ಗಣೆ ಬಳಿ ಕಾಡಾನೆ ಬೀಡು

7

ಕಲ್ಗಣೆ ಬಳಿ ಕಾಡಾನೆ ಬೀಡು

Published:
Updated:

ಸಕಲೇಶಪುರ: ಪಟ್ಟಣದಿಂದ ಕೇವಲ 5 ಕಿ.ಮೀ ಅಂತರದ ಕಲ್ಗಣೆ ಗ್ರಾಮದ ರೈತರ ಜಮೀನಿನಲ್ಲಿ ನಾಲ್ಕು ಮರಿ ಆನೆಗಳು ಸೇರಿದಂತೆ ಒಟ್ಟು 8 ಕಾಡಾನೆಗಳು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿಗೆ ಹಾನಿ ಮಾಡಿವೆ.ಕಳೆದ ಬುಧವಾರದಿಂದ ಶುಕ್ರವಾರದ ವರೆಗೆ ಸುಳ್ಳಕ್ಕಿ, ಇಬ್ಬಡಿ, ಕೊಣ್ಣೂರು ಭಾಗದಲ್ಲಿ ಕಾಣಿಸಿಕೊಂಡಿದ್ದ ಆನೆಗಳು ಶನಿವಾರ ಬೆಳಿಗ್ಗೆ ಕಲ್ಗಣೆ ಗ್ರಾಮದ ಕಾಫಿ ತೋಟಗಳಿಗೆ ವಲಸೆ ಬಂದಿವೆ. ಸುಮಾರು 2 ಎಕರೆ ಪ್ರದೇಶದಲ್ಲಿನ ಬತ್ತದ ಬೆಳೆಯನ್ನು ತುಳಿದು ನಾಶಗೊಳಿಸಿವೆ. ಕಾಫಿ, ಬಾಳೆ, ಅಡಿಕೆ, ತೆಂಗಿನ ಮರಗಳನ್ನು ಮುರಿದು ಹಾನಿ ಮಾಡಿರುವುದಾಗಿ ತಿಳಿದು ಬಂದಿದೆ.ಗ್ರಾಮದ ಮನೆಗಳ ಪಕ್ಕದಲ್ಲಿಯೇ ಶನಿವಾರ ದಿನಪೂರ್ತಿ ಕಾಡಾನೆಗಳು ಸಂಚರಿಸಿದವು. ಇದರಿಂದ ತೋಟ, ಗದ್ದೆಗಳಿಗೆ ಹೋಗಲು ರೈತರಿಗೆ ಹಾಗೂ ಕಾರ್ಮಿಕರಿಗೆ ಪ್ರಾಣಭಯ ಉಂಟಾಗಿದೆ. ಕಾಡಾನೆಗಳಿಂದ ಪ್ರಾಣಹಾನಿ ಸಂಭವಿಸದಂತೆ ತಡೆಯಲು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೌದರಿ, ವಲಯ ಅರಣ್ಯ ಅಧಿಕಾರಿ ಚಂಗಪ್ಪ ಹಾಗೂ ಸಿಬ್ಬಂದಿ ಬೆಳಿಗ್ಗೆ 7ಗಂಟೆಯಿಂದಲೇ ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ.`ಜನ ಸಂದಣಿ ಇರುವಂತಹ ಗ್ರಾಮಗಳ ಮಧ್ಯದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಯಾವ ದಿಕ್ಕಿಗೆ ಓಡಿಸಿದರೂ ಅಪಾಯ. ಆದ್ದರಿಂದ ಕತ್ತಲೆಯಾದ ನಂತರ ಪಟಾಕಿಗಳನ್ನು ಸಿಡಿಸಿ ಬೇರೆಡೆಗೆ ಓಡಿಸಲಾಗುವುದು~ ಎಂದು ವಲಯ ಅರಣ್ಯಾಧಿಕಾರಿ ಚಂಗಪ್ಪ   `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry