ಕಲ್ಪತರು ನಾಡಲ್ಲಿ `ತೆಂತಾ' ಕಂಪು

7

ಕಲ್ಪತರು ನಾಡಲ್ಲಿ `ತೆಂತಾ' ಕಂಪು

Published:
Updated:
ಕಲ್ಪತರು ನಾಡಲ್ಲಿ `ತೆಂತಾ' ಕಂಪು

ತೆಂಗನ್ನು ಕೊಬ್ಬರಿ ಮಾಡುವವರು ಹಲವರು. ಆದರೆ ಕೊಬ್ಬರಿಗಿಂತ ಅದರ ಎಣ್ಣೆ ಮಾರಿದರೆ ದುಪ್ಪಟ್ಟು ಲಾಭಾಂಶ ಪಡೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಕೊಪ್ಪದ ನಾಗೇಶ್.ನುಸಿಯಿಂದ ನಲುಗಿ ಚೇತರಿಕೆಯಲ್ಲಿದ್ದ  ತೆಂಗಿಗೆ ಈಗ ಸುಳಿಕೊಳೆಯುವಿಕೆ, ಕಪ್ಪುತಲೆಹುಳು ಬಾಧೆ, ಅಣಬೆ ರೋಗ ಇನ್ನೂ ಹಲವು ರೋಗಗಳ ಆಕ್ರಮಣ.  ಹೀಗೆ ಸಂಕಷ್ಟಗಳಿಂದ ಪಾರಾಗಿ ಏರುತ್ತಿರುವ ಕೃಷಿ ವೆಚ್ಚದೊಂದಿಗೆ ದೊರೆಯುವ  ಅಲ್ಪ ತೆಂಗಿನ ಬೆಳೆಗೆ ಕಾಡುವುದು ಮಾರುಕಟ್ಟೆಯ ಬೆಲೆಗಳ ಅನಿಶ್ಚಿತತೆ.  ನಾಗೇಶ್ ಇದಕ್ಕೆ ಕಂಡುಕೊಂಡ ಪರಿಹಾರವೇ ತೆಂಗಿನಿಂದ ತೆಂಗಿನೆಣ್ಣೆ (ತೆಂತಾ ಎಣ್ಣೆ) ತಯಾರಿಕೆ. ಮೊದಲು ತೆಂಗಿನಕಾಯಿಯನ್ನು ತುರಿಯ ಬೇಕು.  ಇದಕ್ಕೆ ಮಾತ್ರ ವಿದ್ಯುತ್‌ನ ಅವಲಂಬನೆ.  ನಂತರ ಹದವಾದ ಉರಿಯಲ್ಲಿ ನೀರಿನಂಶ ಹೋಗುವವರೆಗೂ ಹುರಿಯಬೇಕು.  ತುರಿಯನ್ನು ಹುರಿಯಲು ನಾಗೇಶ್ ಬಳಸೋದು ಸೌದೆ ಒಲೆಯನ್ನು.  ಒಮ್ಮೆಗೆ ನಲವತ್ತು ಕಾಯಿಯ ತುರಿಯನ್ನು ಹುರಿಯುವಷ್ಟು ಸಾಮರ್ಥ್ಯದ್ದು.  ಉರುವಲು ಸಹ ತಮ್ಮ ತೋಟದ್ದೆ.ಹೀಗೆ ಹುರಿದ ತುರಿಯನ್ನು ಸರಳವಾದ ತೆಂತಾ ಉತ್ಪಾದನಾ ಯಂತ್ರದ ಕೊಳವೆಯೊಳಗೆ ತುಂಬುತ್ತಾರೆ. ನಂತರ ಹೈಡ್ರಾಲಿಕ್ ಜಾಕ್‌ನ ಸಹಾಯದಿಂದ ಒತ್ತಡ ಹೇರಿದಾಗ ಎಣ್ಣೆಯು ಒಂದೆಡೆ ಸಂಗ್ರಹವಾಗುತ್ತದೆ.  ಇದನ್ನು ಸೋಸಿದಾಗ ದೊರೆಯುವುದೇ ತಾಜಾ ತೆಂಗಿನೆಣ್ಣೆ.ಒಬ್ಬ ಕಾರ್ಮಿಕನ ಸಹಾಯದಿಂದ ನಾಗೇಶ್ ದಿನವೊಂದಕ್ಕೆ ಹದಿನೈದರಿಂದ ಇಪ್ಪತ್ತು ಲೀಟರ್‌ವರೆಗೆ ಎಣ್ಣೆ ತೆಗೆಯುತ್ತಾರೆ.  ಸಾವಯವ ತೆಂಗಾದರೆ ಒಂದು ಲೀಟರ್ ಎಣ್ಣೆ ಪಡೆಯಲು ಹನ್ನೆರಡರಿಂದ ಹದಿಮೂರು ಸಾಕಂತೆ.  ಇತರೆ ಆದರೆ ಹನ್ನೆರಡರಿಂದ ಹದಿನೈದರವರೆಗೂ ಬೇಕಂತೆ.  ಸದ್ಯ ಎಣ್ಣೆ ತೆಗೆಯಲು ಇವರ ತೋಟದ ತೆಂಗೇ ಸಾಲುತ್ತಿದೆ.  ಕೊನೆಗೆ ದೊರೆಯುವ ಹಿಂಡಿಯನ್ನು ಪಶುಆಹಾರದೊಂದಿಗೆ ಬೆರೆಸಿ ಹಸುಗಳಿಗೆ ನೀಡಲು ಸುತ್ತಲಿನ ರೈತರು ಕೊಂಡೊಯ್ಯುತ್ತಾರೆ.ಕುದುರಿದ ಮಾರುಕಟ್ಟೆ

ಈ ಕಿರು ಗೃಹ ಉದ್ಯಮಕ್ಕೆ ನಾಗೇಶ್ ಅವರ ಆರಂಭಿಕ ಹೂಡಿಕೆ ಐವತ್ತು ಸಾವಿರ ರೂಪಾಯಿಗಳು.  ಎರಡು ತಿಂಗಳ ಹಿಂದೆ ಕಾರ್ಯಾರಂಭ ಮಾಡಿದ ಈ ಘಟಕದಿಂದ ತಿಂಗಳಿಗೆ ಸರಾಸರಿ ಮುನ್ನೂರು ಲೀಟರ್‌ನಷ್ಟು ಎಣ್ಣೆ ತೆಗೆಯುತ್ತಾರೆ. `ಮೊದಲಿಗೆ ಪರಿಚಯದವರಿಗೆ ಉಚಿತವಾಗಿ ನೀಡಿದೆ.  ಬೆಲೆ ತುಸು ಹೆಚ್ಚು ಇರುವುದರಿಂದ ಕೊಳ್ಳುವವರೂ ಸ್ವಲ್ಪ ಯೋಚಿಸುತ್ತಾರೆ. ಬಳಕೆಯ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡ ನಂತರ ಬೆಲೆಯ ವಿಚಾರ ಲೆಕ್ಕಕ್ಕೆ ಬರಲಿಲ್ಲ. ಮುಂಚಿನಿಂದ ಇದ್ದ ನೈಸರ್ಗಿಕ, ಸಾವಯವ ಕೃಷಿಕರ ಒಡನಾಟವೂ ಈ ನಿಟ್ಟಿನಲ್ಲಿ ಸಹಕಾರಿಯಾಯ್ತು.  ತುಮಕೂರು ಬಳಿಯ ನೆಲಹಾಳದ ಕೃಷ್ಣಮೂರ್ತಿ ಕಳೆದ ಮೂರು ವರ್ಷದಿಂದ ಈ ಕ್ಷೇತ್ರದಲ್ಲಿ ಪಳಗಿದವರು.  ಇವರಿಂದಲೂ ನನಗೆ ಸಾಕಷ್ಟು ಸಹಕಾರ ಮಾರ್ಗದರ್ಶನ ದೊರೆಯುತ್ತಿದೆ' ಎಂದು ಆರಂಭದ ದಿನಗಳನ್ನು ನೆನೆದರು ನಾಗೇಶ್. ಸ್ಥಳೀಯವಾಗಿ ಸ್ವಲ್ಪ ಮಾರಾಟವಾದರೆ, ಹೆಚ್ಚಿನ ಗ್ರಾಹಕರು ದೂರದ ತುಮಕೂರು, ಬೆಂಗಳೂರು, ಮೈಸೂರು, ಮಂಗಳೂರಿನವರು. ಏಳನೇ ತರಗತಿಯಲ್ಲಿ ಓದುತ್ತಿರುವ ಮಗಳು ಜೀವಿತಾ ಮೊದಲು ತನ್ನ ಶಿಕ್ಷಕರಿಗೆ ತೆಂತಾ ಉಚಿತವಾಗಿ ನೀಡಿದ್ದಾಳೆ.  ನಂತರದಲ್ಲಿ ಶಿಕ್ಷಕರೇ ಕೊಂಡುಕೊಂಡರಂತೆ.  ಹೀಗೆ ಮಗಳಿಂದಲೂ ಮಾರುಕಟ್ಟೆ ಜಾಣ್ಮೆ.  `ಮೈಮೇಲಿನ ಗುಳ್ಳೆಗಳ ನಿವಾರಣೆಗೆ ವೈದ್ಯರು ನೀಡಿದ್ದು ಒಂದೂವರೆ ವರ್ಷದ ಕಾಲಾವಕಾಶ.  ಇಪ್ಪತ್ತು ದಿನ ಮೈಗೆಲ್ಲಾ ತೆಂತಾ ಎಣ್ಣೆ ಹಚ್ಚಿದ ನಂತರ ಗುಳ್ಳೆಗಳು ವಾಸಿಯಾಗಿವೆ' ಎನ್ನುತ್ತಾ ಹತ್ತು ತಿಂಗಳ ಮಗನನ್ನು ತೋರಿದರು ಪತ್ನಿ ಚಂದ್ರಕಲಾ.  ತೆಂತಾ ಬಳಸಲಾರಂಭಿಸಿದ ನಂತರ ನಾಗೇಶ್‌ಗೆ ಬೊಜ್ಜು ಹಾಗೂ ಗ್ಯಾಸ್ಟ್ರಿಕ್‌ನಿಂದ ಮುಕ್ತಿಯಂತೆ.  ನಾಗೇಶ್ ಅವರ ಸಂಪರ್ಕ ಸಂಖ್ಯೆ-94484 32809

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry