ಕಲ್ಮಾಡಿ ಹುದ್ದೆ ತ್ಯಜಿಸಲಿ: ಮಾಕನ್

7

ಕಲ್ಮಾಡಿ ಹುದ್ದೆ ತ್ಯಜಿಸಲಿ: ಮಾಕನ್

Published:
Updated:

ನವದೆಹಲಿ (ಪಿಟಿಐ): ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಸುರೇಶ್ ಕಲ್ಮಾಡಿ ಜೊತೆಗಿನ ಎಲ್ಲ ರೀತಿಯ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಕ್ರೀಡಾ ಸಚಿವ ಅಜಯ್ ಮಾಕನ್ ಐಒಎ ಆಡಳಿತಕ್ಕೆ ತಿಳಿಸಿದ್ದಾರೆ. ಇಲ್ಲದಿದ್ದಲ್ಲಿ ಅವರ ವಿರುದ್ಧ ಸರ್ಕಾರವು ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.ಕಾಮನ್‌ವೆಲ್ತ್ ಕೂಟದ ಹಗರಣಕ್ಕೆ ಸಂಬಂಧಿಸಿದಂತೆ ಕಲ್ಮಾಡಿ ಅವರನ್ನು ಐಒಎ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಆದರೆ ಅವರು ಇನ್ನೂ ಹುದ್ದೆ ತ್ಯಜಿಸಿಲ್ಲ. ಹಂಗಾಮಿ ಅಧ್ಯಕ್ಷ ವಿ.ಕೆ. ಮಲ್ಹೋತ್ರ ಅವರು ಕಲ್ಮಾಡಿಗೆ ನೆರವು ನೀಡುತ್ತಿದ್ದಾರೆ ಎಂಬ ಆರೋಪವನ್ನೂ ಮಾಕನ್ ಮಾಡಿದ್ದಾರೆ.`ಕಲ್ಮಾಡಿ ಐಒಎ ಅಧ್ಯಕ್ಷರಾಗುವ ಸಂದರ್ಭ ಅವರ ಹೆಸರನ್ನು ವಿ.ಕೆ. ಮಲ್ಹೋತ್ರ ಸೂಚಿಸಿದ್ದರು. ಅದಕ್ಕೆ ಬದಲಾಗಿ ಮಲ್ಹೋತ್ರ ಅವರಿಗೆ ಉಪಾಧ್ಯಕ್ಷ ಸ್ಥಾನ ಲಭಿಸಿತ್ತು. ಇದೀಗ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವರು. ಆದ್ದರಿಂದ ಹಿಂದಿನಿಂದಲೂ ಇವರು ಪರಸ್ಪರರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಕಾರಣ ಐಒಎ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ. ಅದಕ್ಕಾಗಿ ನೀತಿ ಸಂಹಿತೆ ಸಮಿತಿಯನ್ನು ನೇಮಿಸಬೇಕು~ ಎಂದಿದ್ದಾರೆ.`ಕಲ್ಮಾಡಿ ಭ್ರಷ್ಟಾಚಾರ ಆರೋಪದಲ್ಲಿ ಹಲವು ತಿಂಗಳುಗಳ ಕಾಲ ಜೈಲಿನಲ್ಲಿದ್ದರು. ಆದ್ದರಿಂದ ಅವರು ಐಒಎ ಅಧ್ಯಕ್ಷರಾಗಿ ಮುಂದುವರಿಯುವ ಪ್ರಶ್ನೆಯೇ ಇಲ್ಲ~ ಎಂದು ಮಾಕನ್ ಹೇಳಿದ್ದಾರೆ.ಬಿಸಿಸಿಐ ವಿರೋಧ ಏಕೆ? (ಮುಂಬೈ ವರದಿ): ಬಿಸಿಸಿಐ ಕಾರ್ಯವೈಖರಿಯನ್ನು ಮತ್ತೆ ಟೀಕಿಸಿರುವ ಮಾಕನ್, `ಬಿಸಿಸಿಐ ಆಡಳಿತದಲ್ಲಿ ಪಾರದರ್ಶಕತೆ ಇರುವುದಾದರೆ, ಪ್ರಸ್ತಾವಿತ ಕ್ರೀಡಾ ಮಸೂದೆಯನ್ನು ವಿರೋಧಿಸುತ್ತಿರುವುದು ಏಕೆ?~ ಎಂದು ಪ್ರಶ್ನಿಸಿದ್ದಾರೆ. `ತಾನು ಮಸೂದೆಯನ್ನು ವಿರೋಧಿಸುತ್ತಿರುವುದು ಏಕೆ ಎಂಬ ಕಾರಣ ನೀಡಿ ಬಿಸಿಸಿಐ ಕ್ರೀಡಾ ಇಲಾಖೆಗೆ 26-27 ಪುಟಗಳ ಪತ್ರ ಬರೆದಿದೆ. ಆಡಳಿತದಲ್ಲಿ ಪಾರದರ್ಶಕತೆ ಇರುವುದಾದರೆ ಮಂಡಳಿಯು ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಕ್ಕೆ ಹಿಂಜರಿಯುವುದೇಕೆ~ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry