ಸೋಮವಾರ, ಮೇ 17, 2021
31 °C

ಕಲ್ಯಾಣದ ಕ್ರಾಂತಿ ಪುರುಷನ ಪುಣ್ಯಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ~ ಎಂದು ಸಾರಿದ 12ನೇ ಶತಮಾನದ ಮಹಾನ್ ಮಾನವತಾವಾದಿ ಕ್ರಾಂತಿಕಾರಿ ಅಣ್ಣ ಬಸವಣ್ಣನ ಜಯಂತಿಯನ್ನು ನಗರದೆಲ್ಲೆಡೆ ಮಂಗಳವಾರ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ನಗರದಲ್ಲಿ ಹಲವು ಭಾಗಗಳಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು. ಎಲ್ಲಿ ನೋಡಿದರೂ ಬಸವಣ್ಣನ ಜೈ ಜೈಕಾರ, ಅವರ ಆದರ್ಶಗಳ ಸ್ಮರಣೆ.

ಬಸವೇಶ್ವರ ವೃತ್ತದಲ್ಲಿ ಬಸವಣ್ಣನ ಪುತ್ಥಳಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಮಾಲಾರ್ಪಣೆ ಮಾಡಿದರು. ಜನಪದ ಕಲೆಗಳಾದ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ನಂದಿಧ್ವಜ, ಪಟದ ಕುಣಿತಗಳೊಂದಿಗೆ ಬಸವಣ್ಣನ ಉತ್ಸವವು ಅದ್ದೂರಿಯಾಗಿ ನಡೆಯಿತು.

ವಚನ ಜ್ಯೋತಿ ಬಳಗವು ವಿಜಯನಗರದಲ್ಲಿ `ಬಸವಣ್ಣನವರೊಡನೆ ಹೆಜ್ಜೆ ಹಾಕೋಣ  ಬನ್ನಿ~ ಎಂಬ ಘೋಷ ವಾಕ್ಯದೊಂದಿಗೆ ಬಸವ ಜಯಂತಿಯನ್ನು ಆಚರಿಸಿತು. ವಸತಿ ಸಚಿವ ವಿ.ಸೋಮಣ್ಣ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, `ಇಂದಿನ ರಾಜಕೀಯಕ್ಕೆ ಬಸವಣ್ಣನವರು ಮಾರ್ಗದರ್ಶಕರಾಗಿದ್ದಾರೆ. ಬಿಜ್ಜಳನ ಮಹಾಮಂತ್ರಿಯಾಗಿ ಕಲ್ಯಾಣದ ಅನುಭವ ಮಂಟಪದಲ್ಲಿ ಎಲ್ಲ ವರ್ಗದವರಿಗೆ ಅವಕಾಶ ನೀಡಿದರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತ~ ಎಂದು ಹೇಳಿದರು.

ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಮಾತನಾಡಿ, `ಬಸವಣ್ಣ ವಚನ ಚಳವಳಿಯ ಮೂಲಕ ಶೋಷಿತ ವರ್ಗದವರಲ್ಲಿ ಸ್ವಾಭಿಮಾನವನ್ನು ಮೂಡಿಸಿದರು. ಅವರು ಹೇಳಿದ ಕಾಯಕವೇ ಕೈಲಾಸ ಎಂಬ ಮಾತು ಇಂದಿಗೂ ಸಹ ಆದರ್ಶವಾಗಿದೆ~ ಎಂದರು.

ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯು ವಿಜಯನಗರದ ಜಗಜ್ಯೋತಿ ಬಸವೇಶ್ವರ ವಿದ್ಯಾರ್ಥಿ ನಿಲಯದಲ್ಲಿ ಬಸವೇಶ್ವರ ಜಯಂತಿಯನ್ನು ಆಚರಿಸಿತು. ಅಟವೀ ಜಂಗಮ ಸುಕ್ಷೇತ್ರದ ಅಟವೀ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯವನ್ನು ವಹಿಸಿದ್ದು, `ಅಂದು 12 ನೇ ಶತಮಾನದಲ್ಲಿ ಬಸವೇಶ್ವರ ಸಾರಿದ ತತ್ವಗಳು, ಆದರ್ಶಗಳನ್ನು ಇಂದು ಎಲ್ಲರೂ ಅನುಸರಿಸಬೇಕು. ಅಣ್ಣ ಬಸವಣ್ಣ ನುಡಿದ ನುಡಿ ಮುತ್ತುಗಳನ್ನು ಅನುಸರಿಸುವ ಅವಶ್ಯಕತೆ ಇದೆ~ ಎಂದರು.

ಕರ್ನಾಟಕ ಇತಿಹಾಸ ಅಕಾಡೆಮಿ ಉಪಾಧ್ಯಕ್ಷ ಡಾ.ಎಂ.ಜಿ.ನಾಗರಾಜ್ ವಿಶೇಷ ಉಪನ್ಯಾಸವನ್ನು ನೀಡಿದರು. ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ಅಧ್ಯಕ್ಷತೆ ವಹಿಸಿದ್ದರು.

ಶಿವ ಬಸವ ಟ್ರಸ್ಟ್ ವತಿಯಿಂದ ಬಸವೇಶ್ವರರ ಮತ್ತು ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಗಳ ಮೆರವಣಿಗೆ ಮೂಲಕ ಬಸವ ಜಯಂತಿಯನ್ನು ಆಚರಿಸಲಾಯಿತು. ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು. ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ಅಧ್ಯಕ್ಷತೆ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.