ಸೋಮವಾರ, ಮಾರ್ಚ್ 8, 2021
29 °C

ಕಲ್ಯಾಣಿ ರಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಯಾಣಿ ರಾಗ

ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾಗೆ ಪ್ರಶಸ್ತಿ ಪಡೆದ ಪ್ರತಿಭಾವಂತೆ ಕಲ್ಯಾಣಿ. ಅದು `ಸೂಸೈಡ್~. ಸಿನಿಮಾ ಬಿಡುಗಡೆಯಾದಾಗ ಅವರ ನಟನೆ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿದ್ದವು. ಆದರೆ ಪ್ರಶಸ್ತಿ ಬರುತ್ತದೆ ಎಂಬ ನಿರೀಕ್ಷೆ ಅವರಿಗಿರಲಿಲ್ಲ.ಆದರೆ ಪ್ರಶಸ್ತಿ ಪ್ರಕಟವಾದಾಗ ತಮ್ಮ ಸಂತೋಷವನ್ನು ಗಂಟಲು ತುಂಬಿಬಂದ ಮಾತುಗಳಿಂದ ಹಂಚಿಕೊಂಡ ಅವರು ಪ್ರಶಸ್ತಿ ನೀಡಿದ ಆತ್ಮವಿಶ್ವಾಸದಿಂದ ಮತ್ತಷ್ಟು ಅಂಥ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.ಬೆಂಗಳೂರಿನವರಾದ ಕಲ್ಯಾಣಿಗೆ ಚಿಕ್ಕವಯಸ್ಸಿನಿಂದಲೂ ಬಣ್ಣಬಣ್ಣದ ಬಟ್ಟೆಗಳನ್ನು ತೊಡಬೇಕು, ಉಗುರಿಗೆ ಬಣ್ಣ ಹಚ್ಚಿಕೊಳ್ಳಬೇಕು, ತುಟಿಗೆ ರಂಗನ್ನು ತೀಡಿಕೊಳ್ಳಬೇಕು ಎಂಬಾಸೆ. ಅದಕ್ಕೆ ತಕ್ಕಂತೆ ಬಣ್ಣದ ಬದುಕಿನಿಂದ ಕರೆ ಬಂದಾಗ ಅವರು ಒಲ್ಲೆ ಎನ್ನದೇ ಒಪ್ಪಿಕೊಂಡರು. ರಘುವರನ್ ನಟಿಸಿದ್ದ `ಸಾರಿ~ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿಕೊಂಡರು.ಅದಾದ ನಂತರ `ಮಾನವೀಯತೆ~, `ಚದುರಂಗ, `ಅರ್ಧಸತ್ಯ~, ಅಂಬಿಕಾ~ ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದರು. ಅವರ ವೃತ್ತಿ ಬದುಕಿಗೆ ತಿರುವು ನೀಡಿದ ಪಾತ್ರ `ಕವಲುದಾರಿ~ ಚಿತ್ರದ ಕೆಟ್ಟ ಪತ್ನಿಯದು.  ಕೆಂಡದುಂಡೆಯಂಥ ಕೆಂಪು ಕಣ್ಣುಗಳನ್ನು ಬಿಟ್ಟುಕೊಂಡು `ಕವಲುದಾರಿ~ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ಕಲ್ಯಾಣಿ. ಅದಾದ ನಂತರ ತೆಲುಗು ಮತ್ತು ತಮಿಳು ಧಾರಾವಾಹಿಗಳ ಕಡೆ ಮುಖ ಮಾಡಿದ ಅವರು ಕನ್ನಡದಲ್ಲಿ ಮತ್ತೆ ನಟಿಸುವುದೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಅಲ್ಲಿ ಬಿಜಿಯಾಗಿ ಹೋಗಿದ್ದರು.ಇದೀಗ ಮತ್ತೆ ಉದಯಟಿವಿಯಲ್ಲಿ ಪ್ರಸಾರವಾಗುತ್ತಿರುವ ಅವರದೇ ಹೆಸರಿನ `ಕಲ್ಯಾಣಿ~ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿ 500 ಸಂಚಿಕೆಗಳನ್ನು ದಾಟಿ ಮುನ್ನೆಡೆಯುತ್ತಿದೆ.`ಇದುವರೆಗೂ ತ್ಯಾಗಜೀವಿ, ಕೆಟ್ಟ ಹೆಂಗಸು, ಬಾಡಿಗೆ ತಾಯಿ, ಕುಡುಕನ ಹೆಂಡತಿ ಮುಂತಾದ ಪಾತ್ರಗಳನ್ನು ನಿರ್ವಹಿಸಿರುವೆ. ಅಭಿನಯಕ್ಕೆ ಅವಕಾಶ ಇರುವ ಎಂಥದೇ ಪಾತ್ರವಾದರೂ ಸರಿ ನಟಿಸಲು ಸಿದ್ಧ~ ಎನ್ನುವ ಕಲ್ಯಾಣಿ ಇದೀಗ ಮಲಯಾಳಂ ಧಾರಾವಾಹಿಯಲ್ಲಿ ನಟಿಸಲು ಹೊರಟು ನಿಂತಿದ್ದಾರೆ.ತಮಗೆ ಪ್ರಶಸ್ತಿ ತಂದುಕೊಟ್ಟ `ಸೂಸೈಡ್~ ಚಿತ್ರದ ವಸುಂಧರಾ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತನಾಡುವ ಕಲ್ಯಾಣಿ, `ಗಂಡನ ಪ್ರೀತಿ ಬಯಸುವ ಪತ್ನಿಗೆ ಆತ ಕುಡಿದು ಬಂದು ಅಸಹ್ಯ ಹುಟ್ಟಿಸುತ್ತಿರುತ್ತಾನೆ. ಅದು ಎಲ್ಲರ ಮನೆಯ ಕತೆ ಎನಿಸಿದ ಕಾರಣ ಒಪ್ಪಿಕೊಂಡೆ.ಆ ಪಾತ್ರ ನಿರ್ವಹಿಸಬೇಕಾದರೆ ಭಾವನೆಗಳನ್ನು ಅತಿಹೆಚ್ಚು ಹೊರಹಾಕಬೇಕಿತ್ತು. ಚಿತ್ರ ಯಶಸ್ವಿಯಾಗಲಿಲ್ಲ. ಅದರಿಂದ ನನಗೆ ಅವಕಾಶಗಳೂ ಸಿಗಲಿಲ್ಲ~ ಎಂದು ಬೇಸರಿಸಿಕೊಳ್ಳುವ ಅವರು ಪ್ರಸ್ತುತ ಯೋಗರಾಜ ಭಟ್ ನಿರ್ದೇಶನದ `ಡ್ರಾಮಾ~ ಸಿನಿಮಾದಲ್ಲಿ ನಾಯಕನ ಸೋದರಿ ಪಾತ್ರ ನಿರ್ವಹಿಸುತ್ತಿದ್ದಾರೆ. `ನನಗೆ ಅಭಿನಯಿಸಬೇಕೆಂಬ ಹಸಿವು ಜಾಸ್ತಿ. ಎಲ್ಲೇ ಹೋದರೂ ಅದು ನಟಿಸಲು. ನಟನೆ ಬಿಡುವ ಮಾತೇ ಇಲ್ಲ~ ಎನ್ನುವ ಕಲ್ಯಾಣಿ ತಮಗೆ ಅವಕಾಶ ನೀಡಿದ ಎಲ್ಲರಿಗೂ ವಂದಿಸುವುದನ್ನು ಮರೆಯುವುದಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.