ಬುಧವಾರ, ಜೂನ್ 16, 2021
23 °C

ಕಲ್ಯಾಣ ಕ್ರಾಂತಿಕಾರರನ್ನು ಮರೆಯಲಾಗದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಸಾಮಾಜಿಕ ಪರಿವರ್ತನೆಗಾಗಿ ಬಲಿದಾನ ಕೊಟ್ಟು ಕಲ್ಯಾಣ ಕ್ರಾಂತಿಗೆ ಕಾರಣರಾದ 12 ನೇ ಶತಮಾನದ ಶರಣರಾದ ಸಮಗಾರ ಹರಳಯ್ಯ ಮತ್ತು ಬ್ರಾಹ್ಮಣರ ಮಧುವಯ್ಯನವರನ್ನು ಮರೆಯಲಾಗದು. ಇವರ ನೆನಪಿನಲ್ಲಿ ಪ್ರತಿವರ್ಷ ಕಾರ್ಯಕ್ರಮ ನಡೆಸಬೇಕು ಎಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯಪಟ್ಟರು.ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಸೋಮವಾರ ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕ ಮತ್ತು ಬಸವೇಶ್ವರ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡ ಹುತಾತ್ಮ ಸ್ಮರಣೋತ್ಸವದಲ್ಲಿ ಮಾತನಾಡಿದರು.ಶರಣರು ಸಮಾನತೆಯ ಹಾದಿ ತೋರಿದರು. ಆದರೆ ಇಂದು ಆದಿ, ಪಂಚಮಸಾಲಿ, ಬಣಜಿಗ ಎಂದು ನಮ್ಮನಮ್ಮಲ್ಲೇ ಕಚ್ಚಾಡುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ. ಒಳಜಾತಿ ಭೇದಭಾವ ಬಿಟ್ಟು ನಾವೆಲ್ಲ ಲಿಂಗಾಯತರೆಂದರೆ ಸಾಕಲ್ಲವೆ ಎಂದರು.ಅಂತರ್ಜಾತಿ ವಿವಾಹ ಮಾಡಿದಕ್ಕಾಗಿ ಶರಣರು ವೈಶಾಖದ ಸುಡು ಬಿಸಿಲಲ್ಲಿ ಹೋರಾಡಿ ಪ್ರಾಣವನ್ನು ಅರ್ಪಿಸಿದರು. ಮೈಜುಮ್ಮೆನ್ನುವ ಅಂದಿನ ಘಟನೆಯನ್ನಾದರೂ ನೆನಪಿಸಿಕೊಂಡು ಅವರಿಗೆ ಅಪಕಾರ ಆಗದಂತೆ ನಡೆದುಕೊಳ್ಳಬೇಕು. ಬಸವ ಜಯಂತಿ ಶತಮಾನೋತ್ಸವ ಎಲ್ಲೆಡೆ ಆಚರಿಸಬೇಕು ಎಂದು ಕೇಳಿಕೊಂಡರು.ಸಾಹಿತಿ ಮೀನಾಕ್ಷಿ ಬಾಳಿ ಮಾತನಾಡಿ ಬಸವಣ್ಣನನ್ನು ದೇವರನ್ನಾಗಿ ಮಾಡಿ ಕಟ್ಟಿಗೆಯ ಚೌಕಟ್ಟಿನಲ್ಲಿ ಹಾಕಿಡುವುದು ಸರಿಯಲ್ಲ ಎಂದರು. ಓಟ ಬ್ಯಾಂಕಿಗಾಗಿ ರಾಜಕೀಯದವರು ಜಾತಿ ಭಾವನೆ ಹುಟ್ಟಿಸುತ್ತಿದ್ದಾರೆ ಎಂಬುದು ತಿಳಿದಿರಬೇಕು. ದಲಿತರಿಗೆ ಬಹಿಷ್ಕಾರ ಹಾಕುವ ಘಟನೆಗಳು ನಿಲ್ಲಬೇಕು ಎಂದರು. ಮಾಜಿ ಸಚಿವ ಭೀಮಣ್ಣ ಖಂಡ್ರೆ, ಮಾಜಿ ಶಾಸಕ ಎಂ.ಜಿ.ಮುಳೆ, ಸಿದ್ಧಣ್ಣ ಲಂಗೋಟಿ, ಅನುಭವ ಮಂಟಪ ಕಾರ್ಯದರ್ಶಿ ವೈಜನಾಥ ಕಾಮಶೆಟ್ಟಿ ಮಾತನಾಡಿದರು.ಜಗದ್ಗುರು ಶಿವಯೋಗಿಶ್ವರ ಸ್ವಾಮೀಜಿ ಭಾತಂಬ್ರಾ, ಹುಲಸೂರ ಶಿವಾನಂದ ಸ್ವಾಮೀಜಿ, ಮುಚಳಂಬ ಪ್ರಣವಾನಂದ ಸ್ವಾಮೀಜಿ, ವಿ.ಸಿದ್ಧರಾಮಣ್ಣ, ದೇವಸ್ಥಾನ ಅಧ್ಯಕ್ಷ ಅನಿಲಕುಮಾರ ರಗಟೆ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಾಬುರಾವ ಗೌಡಗಾಂವೆ, ಕಾಂಗ್ರೆಸ್ ಅಧ್ಯಕ್ಷ ಶಂಕರರಾವ ಜಮಾದಾರ, ರಾಜೀವ ಮಂಠಾಳೆ, ಸಂಜೀವ ಜಾಧವ, ಸುಶೀಲಾದೇವಿ ಪಟೇಲ್, ಕಾಶಿನಾಥ ಹತ್ತರ್ಗಾ ಉಪಸ್ಥಿತರಿದ್ದರು.

ವೀರಶೈವ ಮಹಾಸಭೆ ತಾಲ್ಲೂಕು ಅಧ್ಯಕ್ಷ ಶಶಿಕಾಂತ ದುರ್ಗೆ ಸ್ವಾಗತಿಸಿದರು. ವಿಶ್ವನಾಥ ಮುಕ್ತಾ ನಿರೂಪಿಸಿದರು. ಗುರುನಾಥ ಗಡ್ಡೆ ವಂದಿಸಿದರು. ಈ ಸಂದರ್ಭದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದಕ್ಕಾಗಿ ಭೀಮಣ್ಣ ಖಂಡ್ರೆಯವರನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.