ಕಲ್ಯಾಣ ಕ್ರಾಂತಿಯ ಹೊಸ ಪುಟಗಳು

7

ಕಲ್ಯಾಣ ಕ್ರಾಂತಿಯ ಹೊಸ ಪುಟಗಳು

Published:
Updated:

ಕರ್ನಾಟಕದ ಇತಿಹಾಸದಲ್ಲಿ ಹನ್ನೆರಡನೇ ಶತಮಾನ ಸಂಕ್ರಮಣದ ಕಾಲ. ಸಮಾಜದ ತಾರತಮ್ಯಗಳ ವಿರುದ್ಧ ಜಾಗೃತಿ ಮೂಡಿ, ‘ಅನುಭವ ಮಂಟಪ’ದ ಮೂಲಕ ಸಮಾನತೆಯ ಆದರ್ಶವೊಂದು ಆಚರಣೆಗೆ ಬಂದ ಸಂದರ್ಭವದು. ಸಮಗಾರ ಸಮುದಾಯಕ್ಕೆ ಸೇರಿದ ಹರಳಯ್ಯನಂಥವರ ಅಭಿವ್ಯಕ್ತಿಗೆ ಬೆಲೆ ದೊರಕಿದ, ಅಂತರ್ಜಾತಿ ವಿವಾಹಕ್ಕೆ ಸಾಕ್ಷಿಯಾದ ಕಾಲವದು. ಈ ಕಥನವನ್ನು ಚಿತ್ರಿಸಿರುವ ‘ಮಹಾಶರಣ ಹರಳಯ್ಯ’ ಇಂದು (ಜ. 10)ನ ತೆರೆ ಕಾಣುತ್ತಿದೆ. ಹರಳಯ್ಯನ ಪಾತ್ರದಲ್ಲಿ ಅಭಿನಯಿಸಿರುವ ನಟ ಶ್ರೀಧರ್ ಚಿತ್ರ ಮತ್ತು ತಮ್ಮ ಪಾತ್ರದ ಬಗ್ಗೆ ‘ಸಿನಿಮಾ ರಂಜನೆ’ ಜೊತೆ ಮಾತನಾಡಿದ್ದಾರೆ.ಹರಳಯ್ಯನವರ ಪಾತ್ರ ಪ್ರವೇಶದ ಸವಾಲುಗಳೇನು?

ಬಹಳ ಸಂಕೀರ್ಣ ಮತ್ತು ಬಹು ಆಯಾಮದ ಪಾತ್ರವಿದು. ಅಸ್ಪೃಶ್ಯತೆ – ಜಾತಿಯ ವೈಷಮ್ಯಗಳ ನಡುವೆಯೇ ಮಹಾಶರಣರಾದವರು ಹರಳಯ್ಯ. ಬದುಕಿನ ಅಸ್ತಿತ್ವವೇ ಕಷ್ಟವಾದ ಸಮಯದಲ್ಲಿ ಆಧ್ಯಾತ್ಮಿಕವಾಗಿ ಬೆಳೆಯುವ ಛಲ ಬಹಳ ದೊಡ್ಡದು. ಅಂಥಹಾ ವ್ಯಕ್ತಿತ್ವವನ್ನು ನಾನು ಪ್ರವೇಶ ಮಾಡಿದ್ದು ನಿಜಕ್ಕೂ ಸವಾಲು. ಭಕ್ತಿ, ಆಶಯ ಹಾಗೂ ಶರಣರ ತತ್ವಗಳನ್ನು ಮೈಗೂಡಿಸಿಕೊಂಡಿರುವ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕಾದ್ದರಿಂದ ಮೈ ಮತ್ತು ಮನಕ್ಕೆ ನಾನು ಪಾತ್ರವನ್ನು ತೆಗೆದುಕೊಳ್ಳಲೇಬೇಕು. ಹರಳಯ್ಯನವರ ಹೆಜ್ಜೆ ಕಲ್ಯಾಣ ಕ್ರಾಂತಿಗೆ ನಾಂದಿಯಾಯಿತು ಎನ್ನುವ ಕಾರಣಕ್ಕೆ ಬಹಳ ಸೂಕ್ಷ್ಮವಾದ ಗಟ್ಟಿಪಾತ್ರವಿದು. ಪ್ರತಿ ಹಂತದಲ್ಲೂ ಸವಾಲುಗಳಿದ್ದವು. ನಿಮ್ಮನ್ನು ಕಾಡಿದ ಪಾತ್ರಗಳಲ್ಲಿ ಇದೂ ಒಂದೇ?

ಖಂಡಿತಾ ಇಲ್ಲ. ಒಬ್ಬ ಕಲಾವಿದನ ವೃತ್ತಿ ಜೀವನದಲ್ಲಿ ಕಾಡುವ ಪಾತ್ರಗಳು ಸಾಮಾನ್ಯವಾಗಿ ಮೂರ್‍ನಾಲ್ಕು ಇರಬಹುದು. ಆದರೆ ಈ ಪಾತ್ರ ಕಾಡುವ ಪಾತ್ರವಲ್ಲ, ಪರಿವರ್ತನೆಯಾಗುವ ಪಾತ್ರ.  ಪಾತ್ರದಲ್ಲಿ ತೊಡಗುವ ಮನ್ನ ಯಾವ ಸಿದ್ಧತೆ ಮಾಡಿಕೊಂಡಿದ್ದೀರಿ?

ನೃತ್ಯದ ಕಾರಣದಿಂದಾಗಿ 20 ವರುಷಗಳಿಂದ ಶರಣರು ಮತ್ತು ಅವರ ವಚನಗಳನ್ನು ಅಧ್ಯಯನ ಮಾಡುತ್ತಿದ್ದೇನೆ. ಬಹಳ ವಚನಗಳನ್ನು ನೃತ್ಯರೂಪಕ್ಕೆ ಅಳವಡಿಸಿಕೊಂಡಿದ್ದೇನೆ. ಶರಣ ಸಾಹಿತ್ಯ ನನ್ನ ಮೇಲೆ ಪ್ರಭಾವ ಬೀರಿದೆ. ಒಬ್ಬ ತಳ ಸಮುದಾಯದ ವ್ಯಕ್ತಿ ಜಾತೀಯ ಕಾಠಿಣ್ಯದ ನಡುವೆ ಮಹಾಶರಣನಾಗುವುದು ದೊಡ್ಡ ವಿಚಾರ. ಆಗಾಗಿ ಅವರ ಬದುಕು, ನಡೆ–ನುಡಿ, ಅಂದಿನ ಸ್ಥಿತಿಗತಿಗಳ ಆಧ್ಯಯನ ಅಗತ್ಯವಾಗಿತ್ತು.ಬಿಡುಗಡೆಗೆ ಮೊದಲೇ ಚಿತ್ರಕ್ಕೆ ಆರ್ಥಿಕವಾಗಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾದಂತಿದೆ...

ಮಹಾಶರಣ ಹರಳಯ್ಯ ಟ್ರಸ್ಟ್‌ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರದರ್ಶಿಸಲು ಚಿತ್ರದ ಹಕ್ಕುಗಳನ್ನು ಖರೀದಿಸಿದೆ. ಹಾಗಾಗಿ ಬಂಡವಾಳ ವಾಪಸ್‌ ಬಂದಿದೆ. ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳನ್ನು ಬಿಡುಗಡೆ ಮಾಡುವುದು ಇಂದು ಕಷ್ಟವಾಗುತ್ತಿದೆ. ನಮ್ಮ ವ್ಯವಸ್ಥೆಯಲ್ಲಿರುವ ಸಮಸ್ಯೆ ಇದು.

ಈ ಪಾತ್ರಕ್ಕೆ ನೀವು ಆಯ್ಕೆಯಾಗಲು ಕಾರಣ ಶಿಶುನಾಳ ಷರೀಫನ ಪಾತ್ರವೇ?

ಚಿತ್ರವನ್ನು ಹರಳಯ್ಯನ ಸಮಾಜದವರು ತೆಗೆದಿರುವುದು. ಶಿಶುನಾಳ ಷರೀಫರ ಪಾತ್ರ ನೋಡಿಯೂ ನನ್ನ ಆಯ್ಕೆ ಮಾಡಿರಬೇಕು. ಈಗಾಗಲೇ ವೀರಶೈವ ಸಮಾಜದ ಕೆಲವು ಐತಿಹಾಸಿಕ ವ್ಯಕ್ತಿಗಳ ಪಾತ್ರಗಳಲ್ಲಿ ನಟಿಸಿದ್ದೆ. ಷರೀಫನ ಪಾತ್ರದಷ್ಟೇ ತೃಪ್ತಿಯನ್ನು ಈ ಪಾತ್ರ ಕೊಟ್ಟಿದೆ.ಷರೀಫರ ನಂತರ ನಿಮಗೆ ಸಿಕ್ಕ ಒಳ್ಳೆಯ ಪಾತ್ರ ಯಾವುದು?

ನಾಗಾಭರಣ ನಿರ್ದೇಶನದ ‘ಕಂಸಾಳೆ ಕೈಸಾಳೆ’ ಚಿತ್ರ. ಅದು ವೈಯಕ್ತಿಕವಾಗಿ ಬಹಳ ಸಂತೋಷ ಕೊಟ್ಟ ನಟನೆ.ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದೀರಿ ಆ ಅನುಭವ ಹೇಗಿದೆ?

ಈ ರೀತಿಯ ಪಾತ್ರಗಳು ನನಗೆ ಇಷ್ಟ. ಅಪರೂಪಕ್ಕೆ ಈ ಅವಕಾಶಗಳು ಸೃಷ್ಟಿಯಾಗುತ್ತವೆ. ಶಿವನ ಪಾತ್ರಗಳು ನನಗೆ ಒಪ್ಪುತ್ತದೆ ಎನ್ನುವ ನಂಬಿಕೆ ಇದೆ. 12 ಬಾರಿ ಶಿವನ ಪಾತ್ರ ಮಾಡಿದ್ದೇನೆ. ಹೀಗೆ ಒಂದೇ ಪಾತ್ರವನ್ನು ಹಲವು ಬಾರಿ ಮಾಡಿದ ಕೆಲವೇ ಕಲಾವಿದರಲ್ಲಿ ನಾನೂ ಒಬ್ಬ.ನೀವು ಗುರ್ತಿಸಿರುವಂತೆ ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳ ಸವಾಲುಗಳು ಏನು?

ಈ ಪಾತ್ರಗಳ ಬಗ್ಗೆ ಈಗಾಗಲೇ ಒಂದು ಕಲ್ಪನೆ ಇರುತ್ತದೆ. ಗಾಂಧಿ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುವೆ ಅಂದರೆ ಇಷ್ಟಬಂದ ರೀತಿ ಮಾಡಲು ಸಾಧ್ಯವಿಲ್ಲ. ಆ ಪಾತ್ರದ ಕಲ್ಪನೆಗೆ ಸಾಕಾರ ರೂಪು ಕೊಡಬೇಕಾಗುತ್ತದೆ, ಅದು ಸವಾಲಿನ ಕೆಲಸ. ಆ ಪಾತ್ರಗಳು ಮಹನೀಯರಾದ ಕಾರಣ ಎಲ್ಲೂ ಎಚ್ಚರ ತಪ್ಪಬಾರದು. ಅಧ್ಯಯನ, ಅಂದಿನ ಸಮಾನದ ಸ್ಥಿತಿ–ಗತಿ ಎಲ್ಲವೂ ಪಾತ್ರಧಾರಿಯು ಮನಸ್ಸಿನಲ್ಲಿ ಇಟ್ಟುಕೊಂಡು ಪಾತ್ರ ನಿರ್ವಹಿಸಬೇಕು.ನೃತ್ಯ ಹೊರತಾಗಿ ಏನು ಮಾಡುತ್ತೀರಿ?

ಬೆಳಿಗ್ಗೆ ಎರಡು ಗಂಟೆ ನೃತ್ಯಾಭ್ಯಾಸ ಮಾಡುತ್ತೇನೆ. ಬಿಡುವಿನ ವೇಳೆಯಲ್ಲಿ ಅಧ್ಯಯನದಲ್ಲಿ ತೊಡಗುತ್ತೇನೆ. ‘ಭಾರತೀಯ ನೃತ್ಯ ಕ್ಷೇತ್ರದಲ್ಲಿ ನರ್ತಕ’ ಎನ್ನುವ ವಿಷಯದ ಕುರಿತು ಹಂಪಿ ವಿ.ವಿ.ಯಲ್ಲಿ ಡಿ.ಲಿಟ್ ಪ್ರಬಂಧ ಸಲ್ಲಿಸಿದ್ದೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry