ಬುಧವಾರ, ಅಕ್ಟೋಬರ್ 16, 2019
21 °C

ಕಲ್ಯಾಣ ನಗರಿ

Published:
Updated:

 ಬೆಂಗಳೂರಿಗೆ ಇರುವ ಕಲ್ಯಾಣ ನಗರಿ ಎಂಬ ಹೆಸರು ಬಂದದ್ದು ಕಲ್ಯಾಣಪ್ಪನಿಂದ ಎಂಬುದು ಪ್ರತೀತಿ. ಇಷ್ಟಕ್ಕೂ ಈ ಕಲ್ಯಾಣಪ್ಪ ಯಾರು ಎಂಬುದು `ಇತಿಹಾಸ~ದಲ್ಲಿ ದಾಖಲಾಗಿಲ್ಲ. ಜನರ ಮಾತಿನಲ್ಲಿ ಈತನ ಕುರಿತ ವಿವರಗಳು ದೊರೆಯುತ್ತವೆ. ಕೆಂಪೇಗೌಡರಿಗೆ ಬೆಂದಕಾಳನ್ನು (ಅವರೆಕಾಳು ಉಪ್ಪಿಟ್ಟು?) ಕೊಟ್ಟ ಅಜ್ಜಿಯ ಮೊಮ್ಮಗ ಈತ ಎಂಬುದು ಒಂದು ಅನಧಿಕೃತ ಮಾಹಿತಿ.

 

ಈತ ಚಿರಂಜೀವಿಯಂತೆ. ತನ್ನ ಅಜ್ಜಿಯಿಂದ ಬೆಂದಕಾಳು ಪಡೆದ ಕೆಂಪೇಗೌಡರು ಬೆಂಗಳೂರಿಗೆ ಗಡಿಗಳನ್ನು ಗುರುತಿಸುವಂತೆ ಗೋಪುರಗಳನ್ನು ನಿರ್ಮಿಸಿದಾಗ ಕಲ್ಯಾಣಪ್ಪನಿಗೆ ಸಿಟ್ಟುಬಂದು ಬೆಂಗಳೂರು ಬಿಟ್ಟು ಹೊರ ಹೋದನಂತೆ. ಅವನ ದೃಷ್ಟಿಯಲ್ಲಿ ಬೆಂಗಳೂರಿಗೆ ಸೀಮೆಯಿಲ್ಲ.ಅದು ಸೀಮಾತೀತವಾಗಿ ಬೆಳೆಯಬೇಕಾದ ಊರು. ಅವನ ಅನಿಸಿಕೆಯೇ ನಿಜವಾಯಿತು. ಈ ಕಲ್ಯಾಣಪ್ಪ ವರ್ತಮಾನದಲ್ಲೂ ಕೆಂಪೇಗೌಡರು ನಿರ್ಮಿಸಿದ ಎಲ್ಲೆಯ ಹೊರಗೆ ಹಲವರಿಗೆ ಕಾಣಸಿಗುವುದುಂಟು. ಹೀಗೆ ಸಿಕ್ಕಾಗ ಅವನು ಹೇಳಿದ್ದು ಬಾಯ್ದೆರೆಯಾಗಿ ಬೆಂಗಳೂರಿಗರ ಮಧ್ಯೆ ಜನಜನಿತವಾಗಿದೆ. ಅವನ್ನು ಸಂಗ್ರಹಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.
                                          ===========

ಕಲ್ಯಾಣನಗರಿ ಅಲಿಯಾಸ್ ಬೆಂಗಳೂರಿಗೆ ಮಳೆಯೇ ಬಾರದೆ ತೀವ್ರವಾದ ಕ್ಷಾಮ ಕಾಡಿತ್ತು. ತರಗುಪೇಟೆ ಎಂಬುದು ಅಕ್ಷರಶಃ ತರಗಾಗಿತ್ತು. ಸುಲ್ತಾನ್ ಪೇಟೆಯ ಸುಲ್ತಾನರೆಲ್ಲಾ ಅಧಿಕಾರ ಕಳೆದುಕೊಂಡವರಂತೆ ಮಂಕಾಗಿದ್ದರು. ಚಿಕ್ಕಪೇಟೆ ಚಿಕ್ಕದಾಗಿ ಒಟ್ಟಿನಲ್ಲಿ ಎಲ್ಲೆಲ್ಲೂ ನೀರೂ ನೆರಳು ಇಲ್ಲದಂಥ ಕ್ಷಾಮವದು.

 

ನಗರದೇವತೆಗೆ ಮೊರೆಹೊಕ್ಕರೆ ಆಕೆ ಅವನನ್ನು ಕರೆಯಿಸಿ ಎಂದುಬಿಟ್ಟಳು. ಅವನು ಎಂದರೆ ಕಲ್ಯಾಣಪ್ಪ ಎಂದು ಅರಿತಿದ್ದ ಜನ ಅವನನ್ನು ಹುಡುಕಹೊರಟರು. ಅವನೆಲ್ಲಿದ್ದ ಎಂದು ಹುಡುಕುವುದು ಈಗಿನಷ್ಟು ಕಷ್ಟವಾಗಿರಲಿಲ್ಲ. ಕೆಂಪೇಗೌಡರು ನಿರ್ಮಿಸಿದ ಸೀಮೆಗಳಾಚೆ ಆತ ಇದ್ದ. ಜನರೆಲ್ಲಾ ಹೋಗಿ `ಮಳೆಯೇ ಬಂದಿಲ್ಲ. ನಗರ ದೇವತೆಯ ಮೊರೆಹೊಕ್ಕರೆ ಅವಳು ನಿನ್ನನ್ನು ಕರೆತರಲು ಹೇಳಿದಳು.ನೀರು ಬಾರದಿದ್ದರೆ ಕಲ್ಯಾಣನಗರಿಯ ಇತಿಹಾಸವೇ ಮುಗಿದುಹೋಗುತ್ತದೆ~ ಎಂದು ಅಲವತ್ತುಕೊಂಡರು. ಜನರ ಅಳಲನ್ನು ಕೇಳಿ ಕಲ್ಯಾಣಪ್ಪನ ಮನಸ್ಸು ಕರಗಿತು. ಆದರೆ ಗಡಿದಾಟಲಾರೆ ಎಂಬ ಶಪಥವನ್ನು ಮುರಿಯಲೂ ಅವನಿಗೆ ಸಾಧ್ಯವಿರಲಿಲ್ಲ. ಅವನಂದ, `ನಾನು ಬರುವ ಪ್ರಶ್ನೆಯೇ ಇಲ್ಲ. ನನಗೂ ದೇವತೆಗೂ ಜಗಳವಾಗಿದೆ. ಅವಳೇ ಬರಲಿ~.ಜನರು ಕಂಗಾಲಾಗಿ `ದೇವತೆಯನ್ನು ಒಲಿಸುವ ಕೆಲಸ ಹುಲು ಮಾನವರಾದ ನಮಗೆಲ್ಲಿ ಸಾಧ್ಯ ನೀನೇ ದಾರಿ ತೋರು~ ಎಂದರು. ಕಲ್ಯಾಣಪ್ಪ ತನ್ನ ಉತ್ತರೀಯ ಬಿಚ್ಚಿ ಹತ್ತಿರದಲ್ಲಿದ್ದ ಕೆರೆಯ ತಳದಲ್ಲಿದ್ದ ಸ್ವಲ್ಪವೇ ನೀರಿಲ್ಲಿ ಅದನ್ನು ಒದ್ದೆಯಾಗಿಸಿ ಹಿಂಡಿ ಒಣಗಲು ಹಾಕಿದ. ಕಲ್ಯಾಣಪ್ಪನ ಮೇಲೆ ಮುನಿಸಿಕೊಂಡಿದ್ದ ದೇವತೆ ಅವನ ಉತ್ತರೀಯ ಒಣಗದಿರಲಿ ಎಂದು ಮಳೆಸುರಿಸಿದಳು.

                                          ***

ಇತ್ತೀಚೆಗೆ ಒಂದು ದಿನ ಸ್ವಲ್ಪ ತಡವಾಗಿ ಎದ್ದು ನ್ಯಾಷನಲ್ ಹಿಲ್‌ವ್ಯೆ ಪಬ್ಲಿಕ್ ಸ್ಕೂಲ್‌ನ ಬಯಲಿನಲ್ಲಿ ಕಲ್ಯಾಣಪ್ಪ ವಾಕ್ ಆರಂಭಿಸಿದ್ದ. ಆ ಹೊತ್ತಿಗೆ ಬೆಳಿಗ್ಗೆ ತರಗತಿಗಳು ಆರಂಭವಾಗಿದ್ದವು. ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಲು ಕಟಿಬದ್ಧರಾಗಿದ್ದ ಆ ಮಿಸ್ಸು ಗಂಭೀರವಾಗಿ ಪಾಠ ಮಾಡುತ್ತಿದ್ದರು. `ಅರ್ಲೀ ಬರ್ಡ್ ಗೆಟ್ಸ್‌ದ ವರ್ಮ್~ ಎಂಬ ಸಾಲನ್ನು ವಿವರಿಸುತ್ತಿದ್ದ ಅವರು `ಮಕ್ಕಳೇ ದಿನಾ ಬೆಳಿಗ್ಗೆ ಬೇಗ ಎದ್ದು ಕೆಲಸ ಆರಂಭಿಸಬೇಕು. ಆಗ ಮಾತ್ರ ನಿಮಗೆ ಯಶಸ್ಸು ದೊರೆಯಲು ಸಾಧ್ಯ.ಬೆಳಿಗ್ಗೆ ಬೇಗ ಗೂಡು ಬಿಡುವ ಹಕ್ಕಿಗೆ ಹುಳು ಆಹಾರವಾಗಿ ಸಿಗುತ್ತದೆ. ತಡವಾಗಿ ಎದ್ದರೆ ಮೊದಲು ಎದ್ದುಬಂದ ಹಕ್ಕಿ ಆ ಹುಳುವನ್ನು ತಿಂದು ಮುಗಿಸಿಬಿಟ್ಟಿರುತ್ತದೆ...~ ಎಂದರು.

ಈ ಮಾತು ಕೇಳಿಸಿಕೊಂಡ ಕಲ್ಯಾಣಪ್ಪ ತಕ್ಷಣ ನೆಲದ ಮೇಲೆ ಹರಿಯುತ್ತಿದ್ದ ಹುಳುವೊಂದನ್ನು ಉದ್ದೇಶಿಸಿ ಹೇಳಿದ. `ಕೇಳಿಸಿಕೊಂಡೆಯಲ್ಲಾ... ಬೇಗ ಎದ್ದರೆ ಪ್ರಾಣಕ್ಕೇ ಅಪಾಯವಿದೆ. ದಿನಾ ತಡವಾಗಿ ಏಳು~. 

 

Post Comments (+)