ಕಲ್ಲಡ್ಕ ರಾಜಕೀಯಕ್ಕೆ ಒಕ್ಕಲಿಗರ ಖಂಡನೆ

7

ಕಲ್ಲಡ್ಕ ರಾಜಕೀಯಕ್ಕೆ ಒಕ್ಕಲಿಗರ ಖಂಡನೆ

Published:
Updated:

ಪುತ್ತೂರು: ದ.ಕ.ಜಿಲ್ಲಾ ಪಂಚಾಯಿತಿ ಮತ್ತು ಪುತ್ತೂರು ಹಾಗೂ ಸುಳ್ಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾದಿಗೆ ಬ್ರಾಹ್ಮಣ ಸಮುದಾಯವನ್ನು ಆಯ್ಕೆ ಮಾಡುವ ಮೂಲಕ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್  ಜಾತಿ ರಾಜಕೀಯ  ನಡೆಸಿದ್ದಾರೆ ಎಂದು ಪುತ್ತೂರು ತಾಲ್ಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘ ಖಂಡಿಸಿದೆ.ಅನುಭವದ ಆಧಾರದ ಮೇಲೆ ಆಶಾ ತಿಮ್ಮಪ್ಪ ಗೌಡ ಅವರು ದ.ಕ.ಜಿಲ್ಲಾ ಪಂಚಾಯಿತಿ  ಅಧ್ಯಕ್ಷರಾಗಬೇಕಿತ್ತು. ಪುತ್ತೂರು ತಾಲ್ಲೂಕು ಪಂಚಾಯಿತಿನಲ್ಲಿ 8 ಮಂದಿ ಗೌಡ ಸಮುದಾಯದ ಸದಸ್ಯರಿದ್ದರೂ ಬ್ರಾಹ್ಮಣ  ಸಮುದಾಯದ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಪ್ರಭಾಕರ ಭಟ್ ಗೌಡ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ ಎಂದಿರುವ ಅವರು  ಪ್ರಭಾಕರ ಭಟ್ ಅವರದ್ದು ನಕಲಿ ಹಿಂದುತ್ವ ಎಂದು ಖಂಡಿಸಿದ್ದಾರೆ.ಪುತ್ತೂರು ತಾಲ್ಲೂಕು ಯುವ ಗೌಡ ಸೇವಾ ಸಂಘದ ಕಾರ್ಯದರ್ಶಿ ಪ್ರವೀಣ್ ಕುಂಟ್ಯಾನ, ಖಜಾಂಜಿ ಪ್ರವೀಣ್ ಪಾಂಬಾರು, ಪದಾಧಿಕಾರಿಗಳಾದ ಮಧು ನರಿಯೂರು, ಜಯಂತ ಗೌಡ, ತಾರಾನಾಥ ಕಾಯರ್ಗ, ಯಶವಂತ ಕಳುವಾಜೆ, ಸುಂದರ ಗೌಡ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಕ್ಯಾಂಪ್ಕೊ ಅಧ್ಯಕ್ಷರ ಆಯ್ಕೆ ವೇಳೆ ಸೇವಾ ಹಿರಿತನದಲ್ಲಿ ಗೌಡ ಸಮುದಾಯದ ಸಂಜೀವ ಮಠಂದೂರು ಅವರಿಗೆ ಸಿಗಬೇಕಾಗಿದ್ದ ಅಧ್ಯಕ್ಷತೆಯನ್ನು ತಪ್ಪಿಸಿ, ನಿರ್ದೇಶಕರೇ ಅಲ್ಲದ ಕೊಂಕೋಡಿಅವರನ್ನು ಅಧ್ಯಕ್ಷರನ್ನಾಗಿ  ಆಯ್ಕೆ ಮಾಡಲಾಯಿತು ಎಂದು ಆರೋಪಿಸಿರುವ ಅವರು,  ಜಾತಿ ರಾಜಕೀಯ ಮಾಡುತ್ತಿರುವ  ಪ್ರಭಾಕರ ಭಟ್  ಆರ್‌ಎಸ್‌ಎಸ್ ಬಿಟ್ಟು ಹೊರಬರಬೇಕೆಂದು ಆಗ್ರಹಿಸಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶಕುಂತಳಾ ಶೆಟ್ಟಿ  ಅವರಿಗೆ ಪಕ್ಷದ ಟಿಕೆಟ್ ತಪ್ಪಿಸಿ ಮೂಲೆಗುಂಪು ಮಾಡಿರುವ ಪ್ರಭಾಕರ ಭಟ್ ಅವರ ದುರ್ವರ್ತನೆ ಹೀಗೆಯೇ  ಮುಂದುವರಿದಲ್ಲಿ ಗೌಡ ಸಮುದಾಯ ಒಟ್ಟಾಗಿ ಶಕ್ತಿ ಪ್ರದರ್ಶಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.ಕೆಳವರ್ಗದ ಸಮುದಾಯವನ್ನು ಕೇವಲ ದುಡಿಮೆಗೆ, ಸೇವೆ ಮಾಡಿಸಿಕೊಳ್ಳಲು ಮತ್ತು ಕೇಸು ಹಾಕಿಸಿಕೊಳ್ಳಲು ಬಳಸಿಕೊಳ್ಳುತ್ತಿರುವ ಭಟ್ ಅವರು ತಾಕತ್ತಿದ್ದರೆ ಕೇವಲ ಬ್ರಾಹ್ಮಣರನ್ನು ಮಾತ್ರ ಕಟ್ಟಿಕೊಂಡು ಪ್ರಚಾರ ಮಾಡಲಿ ಎಂದು ಸವಾಲು ಹಾಕಿರುವ ಸಂಘದ ಮುಖಂಡರು ಗೌಡ ಸಮುದಾಯದ ತಾಳ್ಮೆಯನ್ನು ದೌರ್ಬಲ್ಯ ಎಂದು ಪರಿಗಣಿಸಿದರೆ ತಿರುಗೇಟು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಗಣಿಧಣಿಗಳ ನಾಡಲ್ಲಿ ಅಥವಾ ಉತ್ತರ ಕರ್ನಾಟಕದಲ್ಲಿ ಭಟ್ ಅವರು ಈ ರೀತಿ ವರ್ತಿಸುತ್ತಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಲುಪುತ್ತಿತ್ತು. ಜಿಲ್ಲೆಯಲ್ಲಿ  ಭಟ್ ಅವರು ಇದೇ ರೀತಿಯ ರಾಜಕೀಯ ಮಾಡಿದರೆ ನಮ್ಮ ಜಿಲ್ಲೆಯಲ್ಲಿಯೂ ಅದೇ ಪರಿಸ್ಥಿತಿ ನಿಮಾಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry