ಸೋಮವಾರ, ಜೂನ್ 21, 2021
23 °C

ಕಲ್ಲಾದವರ ಮುಂದೆ ಕವಿತೆ

ಆರಿಫ್ ರಾಜಾ Updated:

ಅಕ್ಷರ ಗಾತ್ರ : | |

ಕಲ್ಲಾದವರ ಮುಂದೆ ಕವಿತೆಇಲ್ಲಿ ಮುಖದಿಂದ ಮುಖಕ್ಕೆ ನಗುವನು ದಾಟಿಸುವುದು ಎಷ್ಟೊಂದು ಕಷ್ಟ

ಇಲ್ಲಿ ಹೃದಯದಿಂದ ಹೃದಯಕ್ಕೆ ಭಾವನೆಯನು ದಾಟಿಸುವುದು ಎಷ್ಟೊಂದು ಕಷ್ಟ

ಜೀವನಪೂರ ಹೊತ್ತುಕೊಂಡು ಓಡಾಡಿದರೂ ನಮ್ಮದೇ ಶಿಲುಬೆಗಳ

ಇಲ್ಲಿ ಹೆಗಲಿನಿಂದ ಹೆಗಲಿಗೆ ಹೆಣವನು ದಾಟಿಸುವುದು ಎಷ್ಟೊಂದು ಕಷ್ಟ

ನಿದಿರೆಯಲಿ ನಡೆದಾಡುವವರ ತಡೆದು ನಗೆಪಾಟಲಿಗೀಡು ಮಾಡದಿರಿ

ಇಲ್ಲಿ ಕನಸಿನಿಂದ ಕನಸಿಗೆ ಹೂದೋಟವನು ದಾಟಿಸುವುದು ಎಷ್ಟೊಂದು ಕಷ್ಟ

ಸಾವಿರ ಬಾಯಾರಿದ ಮರುಭೂಮಿಗಳು ಮಲಗಿವೆ ನಿನ್ನ ಮೈಯೊಳಗೆ

ಇಲ್ಲಿ ನೆತ್ತರಿನಿಂದ ನೆತ್ತರಿಗೆ ನದಿಯನು ದಾಟಿಸುವುದು ಎಷ್ಟೊಂದು ಕಷ್ಟ

ಹಂಚಿಕೊಂಡಂತೆ ದುಃಖವನು ಹಂಚಿಕೊಳ್ಳಲಾರರು ಜನರು ಸುಖವನು

ಇಲ್ಲಿ ಕಣ್ಣಿನಿಂದ ಕಣ್ಣಿಗೆ ಬೆಳಕನು ದಾಟಿಸುವುದು ಎಷ್ಟೊಂದು ಕಷ್ಟ

ಹುಳುವೇನ ಬಲ್ಲದು ದೀಪವೆಂದರೆ ಬರೀ ಬೆಳಕಲ್ಲವೆಂಬುದ

ಇಲ್ಲಿ ಬೆಂಕಿಯಿಂದ ಬೆಂಕಿಗೆ ಪತಂಗವನು ದಾಟಿಸುವುದು ಎಷ್ಟೊಂದು ಕಷ್ಟ

ಬುದ್ಧ ಬಂದು ಹೋದರೂ ನಿನ್ನೊಂದಿಗೆ ನೀನೇ ಇರಬೇಕು ಕೊನೆಗಾಲದಲಿ

ಇಲ್ಲಿ ಮಾತಿನಿಂದ ಮಾತಿಗೆ ಸತ್ಯವನು ದಾಟಿಸುವುದು ಎಷ್ಟೊಂದು ಕಷ್ಟ

ಕುಡಿಯಲು ನೀರಿಲ್ಲದ ಊರಿನಲಿ ಶರಾಬಿನಂಗಡಿ ತೆರೆದು ಕುಂತವರು ನಾವು

ಇಲ್ಲಿ ತುಟಿಯಿಂದ ತುಟಿಗೆ ಬಟ್ಟಲನು ದಾಟಿಸುವುದು ಎಷ್ಟೊಂದು ಕಷ್ಟ

ಕಲ್ಲಾದವರ ಮುಂದೆ ಅದೇನ ಕವಿತೆ ಒದರುವಿಯೋ ಹುಚ್ಚಪ್ಪ

ಇಲ್ಲಿ ಕಲ್ಲಿನಿಂದ ಕಲ್ಲಿಗೆ ಸ್ಪಂದನವನು ದಾಟಿಸುವುದು ಎಷ್ಟೊಂದು ಕಷ್ಟ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.