ಮಂಗಳವಾರ, ಮೇ 17, 2022
24 °C

ಕಲ್ಲಿದ್ದಲು ಖಾಲಿ ಕಗ್ಗತ್ತಲ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಲಿದ್ದಲು ಖಾಲಿ ಕಗ್ಗತ್ತಲ ಭೀತಿ

ರಾಯಚೂರು: ಇಲ್ಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರದ 8 ಘಟಕಗಳಲ್ಲಿ ಐದು ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಮೂರು ಘಟಕಗಳು ಉತ್ಪಾದನೆ ಸ್ಥಗಿತಗೊಳಿಸಿವೆ. ಒಟ್ಟು ಸ್ಥಾವರದ ವಿದ್ಯುತ್ ಉತ್ಪಾದನೆ 700 ಮೆಗಾವಾಟ್‌ಗೆ ತಗ್ಗಿದೆ. ತಲಚೇರಿ ಮತ್ತು ವೆಸ್ಟ್‌ಕೋಲ್ ಮೈನ್‌ನಿಂದ ಕಲ್ಲಿದ್ದಲು ಪೂರೈಕೆಯೂ ಸ್ಥಗಿತಗೊಂಡಿದ್ದು, ಐದು ಘಟಕಗಳಿಗೆ ಇನ್ನೆರಡು ದಿನಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನು ಇದೆ.



ಎರಡು ದಿನದಲ್ಲಿ ಕಲ್ಲಿದ್ದಲು ಪೂರೈಕೆ ಆಗದಿದ್ದರೆ ಆರ್‌ಟಿಪಿಎಸ್‌ನ ಏಳೂ ಘಟಕಗಳು ಪೂರ್ಣ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಿವೆ ಎಂದು ಆರ್‌ಟಿಪಿಎಸ್ ಮೂಲಗಳು ಸ್ಪಷ್ಟಪಡಿಸಿವೆ.



ಈ ಮೊದಲು 3 ಮತ್ತು 8ನೇ ಘಟಕ ಮಾತ್ರ ದುರಸ್ತಿಯಲ್ಲಿದ್ದವು. ಮಂಗಳವಾರ ರಾತ್ರಿ 4ನೇ ಘಟಕದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಹೀಗಾಗಿ ವಿದ್ಯುತ್ ಉತ್ಪಾದನೆ ಪ್ರಮಾಣ 700 ಮೆಗಾವಾಟ್‌ಗೆ ತಗ್ಗಿದೆ.



ಈ ವಿದ್ಯುತ್ ಸ್ಥಾವರದಲ್ಲಿ ಎಂಟು ಘಟಕಗಳು ಇದ್ದರೂ ಎಂಟನೇ ಘಟಕ ಆರಂಭವಾದ ಲಾಗಾಯ್ತಿನಿಂದ ಒಂದು ಯೂನಿಟ್ ವಿದ್ಯುತ್ ಅನ್ನೂ ಉತ್ಪಾದನೆ ಮಾಡಿಲ್ಲ. ಅದು ದುರಸ್ತಿಯಲ್ಲಿ ಇದೆ ಎಂದೇ ಸದಾ ತೋರಿಸಲಾಗುತ್ತಿದೆ. ವಾಸ್ತವದಲ್ಲಿ ಏಳು ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಆಗುತ್ತಿದೆ.



ಒಂದು ಲಕ್ಷ ಮೆಟ್ರಿಕ್ ಟನ್‌ಗಿಂತ ಕಡಿಮೆ ಪ್ರಮಾಣದ ಕಲ್ಲಿದ್ದಲು ಆರ್‌ಟಿಪಿಎಸ್‌ನ ಸಂಗ್ರಹಾಗಾರದಲ್ಲಿದ್ದು, ಎರಡು ದಿನಕ್ಕೊಮ್ಮೆ ತಲಚೇರಿ, ವೆಸ್ಟ್ ಕೋಲ್ ಮೈನ್‌ನಿಂದ ಬರುತ್ತಿದ್ದ ಕಲ್ಲಿದ್ದಲು ಪೂರೈಕೆ ಆಗಿಲ್ಲ. ಇದೇ ಸ್ಥಿತಿ  ಇನ್ನೆರಡು ದಿನ ಮುಂದುವರಿದರೆ ವಿದ್ಯುತ್ ಸ್ಥಾವರದ 7 ಘಟಕಗಳೂ ಬಂದ್ ಆಗುವ ಗಂಭೀರ ಸ್ಥಿತಿ ಎದುರಾಗಲಿದೆ.



ಸೋಮವಾರ ತಾಂತ್ರಿಕ ತೊಂದರೆಯಿಂದ ಒಂದನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿತ್ತು. ಮಂಗಳವಾರ ರಾತ್ರಿ ಮತ್ತಷ್ಟು ಗಂಭೀರವಾಗಿತ್ತು. ತಾಂತ್ರಿಕ ತೊಂದರೆ ಕಾಣಿಸಿಕೊಂಡು 1, 2, 3 ಮತ್ತು 4ನೇ ಘಟಕ ಪೂರ್ಣ ಸ್ಥಗಿತಗೊಂಡಿದ್ದವು.



ಕೇವಲ 5, 6 ಮತ್ತು 7ನೇ ಘಟಕ ಮಾತ್ರ ಕಾರ್ಯನಿರ್ವಹಿಸಿದ್ದವು. ಬುಧವಾರ ರಾತ್ರಿ ಪರಿಸ್ಥಿತಿ ಸುಧಾರಿಸಿದ್ದು, 1, 2, 5, 6 ಮತ್ತು 7ನೇ ಘಟಕ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿವೆ. ಈ ಐದು ಘಟಕಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿದರೆ 1,050 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಬೇಕು. ಕಳಪೆ ಕಲ್ಲಿದ್ದಲು, ಕಲ್ಲಿದ್ದಲು ಕೊರತೆ, ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಘಟಕಗಳಿಗೆ ಹೆಚ್ಚಿನ `ಲೋಡ್~ ಕೊಟ್ಟಿಲ್ಲ. ಹೀಗಾಗಿ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆ ಆಗಿಲ್ಲ ಎಂದು ಆರ್‌ಟಿಪಿಎಸ್ ಮೂಲಗಳು ಹೇಳಿವೆ.



ಎರಡು ದಿನಕ್ಕೊಮ್ಮೆ ತಲಚೇರಿ, ವೆಸ್ಟ್ ಕೋಲ್ ಮೈನ್‌ನಿಂದ ಎರಡು ರೇಕ್ (ಒಂದು ರೇಕ್‌ನಲ್ಲಿ 3,500 ಮೆಟ್ರಿಕ್ ಟನ್) ಕಲ್ಲಿದ್ದಲು ಆರ್‌ಟಿಪಿಎಸ್‌ಗೆ ಪೂರೈಕೆ ಆಗುತ್ತಿತ್ತು. ಎರಡು ದಿನದಿಂದ ಕಲ್ಲಿದ್ದಲು ಪೂರೈಕೆಯಾಗಿಲ್ಲ. ಇದು ಘಟಕಗಳನ್ನು ನಿರ್ವಹಿಸುತ್ತಿರುವ ಆರ್‌ಟಿಪಿಎಸ್ ಎಂಜಿನಿಯರ್, ಆಡಳಿತ ವರ್ಗದ ಮೇಲೆ ತೀವ್ರ ಒತ್ತಡ ಹೇರಿದೆ.



ಬುಧವಾರ ರಾಜ್ಯದಲ್ಲಿ ಒಟ್ಟು 143.65 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಕೆಯಾಗಿದೆ. ಗರಿಷ್ಠ 6526 ಮೆಗಾವಾಟ್ ಮತ್ತು ಕನಿಷ್ಠ 5134 ಮೆಗಾವಾಟ್ ವಿದ್ಯುತ್ ಪೂರೈಸಲಾಗಿದೆ ಎಂದು ಮೂಲಗಳು ತಿಳಿಸಿವೆ.



ಕೊರತೆ ನೀಗಿಸಲು ಸರ್ಕಾರ ಖರೀದಿ ಮೊರೆ ಹೋಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಪೂರೈಕೆಯಲ್ಲಿ ಸುಧಾರಣೆಯಾಗಿಲ್ಲ. ಅನಿಯಮಿತ ಲೋಡ್‌ಶೆಡ್ಡಿಂಗ್ ಈಗಲೂ ಮುಂದುವರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.