ಬುಧವಾರ, ನವೆಂಬರ್ 13, 2019
24 °C

ಕಲ್ಲಿದ್ದಲು, ಚೀನಾ ಅತಿಕ್ರಮಣ: ಸಂಸತ್ ಕಲಾಪ 2ನೇ ದಿನವೂ ಸ್ಥಗಿತ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): ಸತತ 2ನೇ ದಿನವೂ ಸಂಸತ್ ಕಲಾಪ ಸ್ಥಗಿತಗೊಂಡಿದೆ. ಪ್ರಧಾನಿ ಹಾಗೂ ಕಾನೂನು ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಗದ್ದಲ ಎಬ್ಬಿಸಿದರೆ ಚೀನಾದ ಅತಿಕ್ರಮಣ ಕುರಿತಂತೆ ಸಮಾಜವಾದಿ ಪಕ್ಷ ಘೋಷಣೆಗಳನ್ನು ಕೂಗಿತು. ಪರಿಣಾಮ ಉಭಯ ಸದನಗಳ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಪ್ರಧಾನಮಂತ್ರಿ  ಮನಮೋಹನಸಿಂಗ್  ಹಾಗೂ ಕಾನೂನು ಸಚಿವ ಅಶ್ವಿನಿಕುಮಾರ್ ಅವರು ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಸಂಸತ್ತಿನ ಉಭಯ ಸದನಗಗಳಲ್ಲೂ  ಮಂಗಳವಾರ ಗದ್ದಲ ಎಬ್ಬಿಸಿದೆ.ಆದರೆ ಸರ್ಕಾರ ಈ ಒತ್ತಾಯವನ್ನು ಸಾರಾಸಗಟಾಗಿ ತಿರಸ್ಕರಿಸಿತು. ಪ್ರಮುಖ ಎಡಪಕ್ಷವಾದ ಸಿಪಿಐ ಕೂಡ ಬಿಜೆಪಿ ಒತ್ತಾಯಕ್ಕೆ ತನ್ನ ಬೆಂಬಲ ವ್ಯಕ್ತಪಡಿಸಿತು. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿಂತೆ ಪ್ರಧಾನಿ ಅವರು ತಪ್ಪೆಸಗಿದ್ದು ತಕ್ಷಣ ಅವರು ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಪಡಿಸಿದರು.ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರು ಕೇಂದ್ರ ತನಿಖಾ ಸಂಸ್ಥೆ ಸಿಬಿಐನ ಕಾರ್ಯಚಟುವಟಿಕೆಗಳಲ್ಲಿ ಪ್ರಧಾನಮಂತ್ರಿ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಪಾದಿಸಿ ಗದ್ದಲ ಎಬ್ಬಿಸಿದರು. ಇದರಿಂದ ಕಲಾಪವನ್ನು 12ಕ್ಕೆ ಮುಂದೂಡಲಾಯಿತು. 12ರ ನಂತರವೂ ಪರಿಸ್ಥಿತಿ ಶಾಂತವಾಗದೆ ಇದ್ದಾಗ ಕಲಾಪವನ್ನು ಮಧ್ಯಾಹ್ನ 2ಗಂಟೆಗೆ ಸಭಾಧ್ಯಕ್ಷರು ಮುಂದೂಡಿದರು.ಇದಲ್ಲದೆ ಸಮಾಜವಾದಿ ಪಕ್ಷದ ಸದಸ್ಯರು ಚೀನಾ ಲಡಾಖ್ ಗಡಿ ಪ್ರದೇಶದಲ್ಲಿ ಭಾರತದೊಳಗೆ ಅತಿಕ್ರಮಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪ್ರಧಾನಿ ಅವರ ರಾಜೀನಾಮೆಗೆ ಘೋಷಣೆಗಳನ್ನು ಕೂಗಲಾರಂಭಿಸಿದರು.ಈಮಧ್ಯೆ ಮಧ್ಯೆ ಡಿಎಂಕೆ ಸದಸ್ಯರು ಕೂಡ 2ಜಿ ಹಗರಣ ಸಂಬಂಧ ರಚಿಸದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಪಿ.ಸಿ. ಚಾಕೋ ಅವರ ರಾಜೀನಾಮೆಗೆ ಆಗ್ರಹಿಸಿದರು.ಎಡಪಕ್ಷಗಳ ಸದಸ್ಯರು ಪಶ್ಚಿಮಬಂಗಾಳದಲ್ಲಿ ಮಮತಾಬ್ಯಾನರ್ಜಿ ಅವರ ಸರ್ಕಾರವು  ಹಿಂಸಾಚಾರಕ್ಕೆ ಪ್ರೇರಣೆ ನೀಡುತ್ತಿದೆ ಎಂದು ಆಪಾದಿಸಿ ಘೋಷಣೆಗಳನ್ನು ಕೂಗಲಾರಂಭಿಸಿದರು.ಅಕ್ಷರಶ: ಉಭಯಸದನಗಳು ಕೋಲಾಹಲ, ಗದ್ದಲದಲ್ಲಿ ಮುಳುಗಿ ಯಾರೊಬ್ಬರ ಮಾತುಗಳು ಯಾರೊಬ್ಬರಿಗೂ ಕೇಳದಾಯಿತು. ಕೊನೆಗೆ ಉಭಯಸದನಗಳನ್ನು ದಿನದಮಟ್ಟಿಗೆ ಮುಂದೂಡಲಾಯಿತು.

ಪ್ರತಿಕ್ರಿಯಿಸಿ (+)