ಕಲ್ಲಿನಾಥೇಶ್ವರ ಬೃಹ್ಮರಥೋತ್ಸವ

7

ಕಲ್ಲಿನಾಥೇಶ್ವರ ಬೃಹ್ಮರಥೋತ್ಸವ

Published:
Updated:
ಕಲ್ಲಿನಾಥೇಶ್ವರ ಬೃಹ್ಮರಥೋತ್ಸವ

ಗೌರಿಬಿದನೂರು: ತಾಲ್ಲೂಕಿನ ಕಲ್ಲೂಡಿ ಸಮೀಪದ ಗುಡ್ಡದ ಮೇಲಿರುವ ಕಲ್ಲಿನಾಥೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ಕಾರ್ತಿಕ ಸೋಮವಾರದ ಕೊನೆಯ ದಿನದ ಅಂಗವಾಗಿ ವಿಜೃಂಭಣೆಯಿಂದ ನೆರವೇರಿತು. ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ರಥವನ್ನು ಎಳೆದರು.ಕಲ್ಲಿನಾಥೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಸಂಪ್ರದಾಯದಂತೆ ಮಂಗಳವಾದ್ಯಗಳ ಸಮೇತ ಮೆರವಣಿಗೆಯಲ್ಲಿ ತಂದು ವಿಶೇಷವಾಗಿ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ಇಡಲಾಯಿತು. ಬಳಿಕ ರಥೋತ್ಸವಕ್ಕೆ ಕೋಲಾರ ವಿಶೇಷ ಜಿಲ್ಲಾಧಿಕಾರಿ ಬಾಬಣ್ಣ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಭಕ್ತಾದಿಗಳು ಬಾಳೆಹಣ್ಣನ್ನು ರಥದತ್ತ ಎಸೆದು ಭಕ್ತಿ ಸಲ್ಲಿಸಿದರು. ದೇವಾಲಯದ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಸುತ್ತಮುತ್ತಲಿನ ಮಳಿಗೆಗಳಲ್ಲಿ ಮಕ್ಕಳು ಬತ್ತಾಸು, ಖಾರ, ತಂಪು ಪಾನೀಯ, ಆಟಿಕೆಗಳನ್ನು ಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಮಹಿಳೆಯರು ಬಗೆಬಗೆಯ ಬಳೆಗಳನ್ನು ಕೊಂಡರು.ಪೆನುಗೊಂಡದ ಜಾನಪದ ಕಲಾವಿದರು ಚಕ್ಕಲ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ಜನರು ಸಾಲುಗಟ್ಟಿ ದೇವರ ದರ್ಶನ ಪಡೆದರು. ಗುಡ್ಡಕ್ಕೆ ಮೆಟ್ಟಿಲಿನ ಸೌಕರ್ಯ ಕಲ್ಪಿಸಿರುವ ಕಾರಣ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರೂ ಗುಡ್ಡವನ್ನು ಹತ್ತಿ ದೇವರ ದರ್ಶನ ಪಡೆದರು.ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯೆ ರಜನಿ ವೇಣುಗೋಪಾಲ ರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಗಂಗಾಧರಪ್ಪ, ಕಂದಾಯ ನಿರೀಕ್ಷಕಿ ಅಕ್ಕಮಹಾದೇವಿ, ಕಾರ್ಯದರ್ಶಿ ಜಯಪ್ರಕಾಶ್, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಂಜುಂಡೇಗೌಡ, ಪುರಸಭೆ ಮಾಜಿ ಉಪಾಧ್ಯಕ್ಷ ಕಾಂತರಾಜ್, ಧರ್ಮದರ್ಶಿ ಲಕ್ಷ್ಮಿಪತಿ, ಮುಖಂಡರಾದ ಪಳನಿಸ್ವಾಮಿ, ಪ್ರಮೀಳಮ್ಮ, ನರಸಿಂಹಯ್ಯ, ಸುರೇಶ್‌ಬಾಬು, ಕ್ಯಾಪ್ಟನ್ ಸತೀಶ್, ಆನಂದ್ ಇತರರು ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry