ಗುರುವಾರ , ಆಗಸ್ಟ್ 22, 2019
27 °C

ಕಲ್ಲಿನೊಂದಿಗೆ ಸವೆಯುವ ಬದುಕು

Published:
Updated:

ಗುಲ್ಬರ್ಗ: ನಗರದ ಜೇವರ್ಗಿ ಹೊಸ ರಸ್ತೆಯ ಕೋಠಾರಿ ಭವನದ ಬಳಿ ಕಲ್ಲುಕೆತ್ತುವ ಒಡ್ಡರ ಏಳೆಂಟು ಕುಟುಂಬಗಳು ಬೀಡುಬಿಟ್ಟಿವೆ. ನಗರದ ಬ್ರಹ್ಮಪುರ ಪ್ರದೇಶದಲ್ಲಿ ನೆಲೆಸಿರುವ ಈ ಕುಟುಂಬಗಳು ಇಲ್ಲಿನ ತಾತ್ಕಾಲಿಕ ಬಿಡಾರಗಳನ್ನು ಹಾಕಿಕೊಂಡು ಒರಳುಕಲ್ಲು, ಬೀಸುವಕಲ್ಲು ,ರುಬ್ಬುಕಲ್ಲು, ಗುಂಡು, ಕುಟ್ಟಣೆಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.ಆಧುನಿಕ ಜೀವನ ಶೈಲಿಯ ಭಾಗವಾಗಿರುವ ಮಿಕ್ಸರ್, ಗ್ರೈಂಡರ್‌ಗಳು ಬಹುತೇಕರ ಅಡುಗೆ ಮನೆಯನ್ನು ಆಕ್ರಮಿಸಿಕೊಂಡಿವೆ. ಇವುಗಳು ಸಾಂಪ್ರದಾಯಿಕ ರುಬ್ಬುವ-ಅರೆಯುವ ಕಲ್ಲುಗಳನ್ನು ಮನೆಯಿಂದ ಹೊರಕ್ಕೆ ಹಾಕಿವೆ. ಮಹಿಳೆಯರು ಮೈ ಅಲುಗದೆ ಆಹಾರ ಪಾನೀಯ ಸಿದ್ಧಪಡಿಸಲು ಇವುಗಳು ಅತ್ಯಗತ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಕುಟುಂಬಗಳ ಬದಲಾದ ಚಿತ್ರಣ ಹಾಗೂ ಮಹಿಳೆಯರೂ  ಉದ್ಯೋಗಿಗಳಾಗಿರುವುದರಿಂದ ಮಿಕ್ಸರ್, ಗ್ರೈಂಡರ್‌ಗಳು ಮನೆಗಳಲ್ಲಿ ಸ್ಥಳಪಡೆದುಕೊಂಡಿವೆ.ಆದರೆ ಇದೀಗ ಬದುಕು ಮತ್ತೊಮ್ಮೆ ಮಗ್ಗುಲು ಬದಲಿಸಿವೆ.  ರುಬ್ಬುವ, ಅರೆಯುವ ಯಂತ್ರಗಳಿಂದ ಆರೋಗ್ಯ ಸಮಸ್ಯೆ, ವ್ಯಾಯಾಮದ ಕೊರತೆ, ಬೊಜ್ಜುತನ ಇತ್ಯಾದಿ ಸಮಸ್ಯೆಗಳನ್ನು ಅರಿತ ಗೃಹಿಣಿಯರು ಮತ್ತೆ ಸಾಂಪ್ರದಾಯಿಕ ಕಲ್ಲುಗುಂಡುಗಳ ಕಡೆಗೆ ಗಮನಹರಿಸತೊಡಗಿದ್ದಾರೆ.`ಪ್ರತೀ ಮನ್ಯಾಗ್ ಒಂದು ಒಳ್ಳು (ಒರಳು), ಕಲಗಲ್ನ ಈಗ ಖರೀದಿ ಮಾಡ್ಹಾಕತ್ಯಾರ‌್ರೀ. ಇದು ಶುಭಾ ಅನ್ನೋ ನಂಬಿಕೆ, ಒಂದಷ್ಟ್ ಮಂದಿ ಅಡ್ಗೆ ಮನ್ಯಾಗೂ ಬಳಸ್ತ್ಯಾರ‌್ರೀ' ಎನ್ನುತ್ತಾರೆ  ಕೋಠಾರಿ ಭವನದ ಬಳಿ ಕಲ್ಲು ಕೆತ್ತುವ ನಾಗೇಶ ಧೋತ್ರಿ . ಚಿಂಚೋಳಿಯ ಚಂದಾಪುರದಿಂದ ಆಯ್ದ ಕಪ್ಪುಶಿಲೆಗಳನ್ನು ಖರೀದಿಸಿ ತಂದು ಅದರಿಂದ ಇಲ್ಲಿನ ಕುಟುಂಬಗಳು ಕೆತ್ತನೆ ಕೆಲಸಗಳನ್ನು ಮಾಡುತ್ತಾವೆ.ಆದರೂ ಸಾಮಾನ್ಯ ಜನರ ಕೈಗೆಟಕುವ ದರದಲ್ಲಿ  ಇರುತ್ತವೆ ಎಂಬುದು  ವಿಶೇಷ. ಈ ಪ್ರದೇಶದಲ್ಲಿ ಧಾನ್ಯಗಳನ್ನೇ ಬಳಸಿ ಅಡುಗೆ ಮಾಡುವುದರಿಂದ ಇಂತಹ ಕಲ್ಲುಗಳಿಗೆ ಬೇಡಿಕೆ ಇದೆ. ಈ ಕಲ್ಲುಗಳಿಂದ ತಯಾರಾದ ಹಿಟ್ಟು, ಮಸಾಲೆ ಹೆಚ್ಚು ಸ್ವಾದಿಷ್ಟವಾಗಿರುವುದು ಇನ್ನೊಂದು ಕಾರಣ. ಈಗ ಗುಟಕಾ ನಿಷೇಧದಿಂದ ಹಳೆ ಕಾಲದಂತೆ ಕವಳಪ್ರಿಯರಿಗೆ ಎಲೆ ಅಡಕೆ ನುರಿಯಲು ಕುಟ್ಟಣೆಗಳು ಬೇಕಾಗಿದೆ.`ಈಗ ಕಲ್ಲಿಗೆ ಬಂಗಾರದ್ ಬೆಲೆ ಬಂದೈತಿ. ಹಿಂದೆಲ್ಲಾ ಕುಟುಂಬ ಸಮೇತ ಊರಿಂದೂರಿಗೆ ಅಲೆದಾಡಿ ಮೂರ್ ತಿಂಗ್ಳಾ, ಆರ್ ತಿಂಗ್ಳಾ ಇದ್ದ್, ಅಲ್ಲಿನ ಬಂಡೆಯಿಂದ ಒಳ್ಳು, ಕಲಗಲ್ ಮಾಡ್ತಿದ್ದವ್ರೀ. ಈಗ ಹದ್ನೈದ್ ವರ್ಷದಿಂದ ಬರಂಪುರದಾಗ್ ನೆಲಸೀವ್ರೀ.. ಮನೆ ಜಮೀನ್ ಇಲ್ರೀ, ಸರ್ಕಾರದ್ ಹಣ, ಬ್ಯಾಂಕ್ ಸಾಲಾ ಸಿಗವೊಲ್ದು'  ಇದು ನಾಗೇಶ ಅವರ ನಿರಾಶೆಯ ಮಾತು.ಮನೆಮಂದಿಯೆಲ್ಲಾ ಕಲ್ಲಿನೊಂದಿಗೆ ಬದುಕು ಸವೆಸುತ್ತಿದ್ದಾರೆ. ಬೇರೆ ಕೆಲಸ ಗೊತ್ತಿಲ್ಲ. ಆದರೆ ಬದಲಾದ ಕಾಲಮಾನದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಬದುಕನ್ನು ಹಸನು ಮಾಡುವ ಕನಸು ಇವರಲ್ಲಿದೆ. `ನಾವೇ ಲಾಸ್ಟ್, ಮಕ್ಕಳು ಸಾಲೀಗ್ ಹೋಕ್ಕಾರ‌್ರೀ. ನಮ್ ಮಕ್ಳನ್ನ ಕಲ್ಲ ಮುಟ್ಟಾಕ್ ಬಿಟ್ಟಿಲ್ಲ ನೋಡ್ರೀ' ಇದು ನಾಗೇಶ ಅವರ ಭರವಸೆಯ ನುಡಿ. ಆದರೂ ಬದುಕು ಭದ್ರವಾಗಿಲ್ಲ.

Post Comments (+)