ಕಲ್ಲಿನ ಕೋಟೆ ಮಗ್ಗಲಲ್ಲಿ ಜಲಧಾಮ

7

ಕಲ್ಲಿನ ಕೋಟೆ ಮಗ್ಗಲಲ್ಲಿ ಜಲಧಾಮ

Published:
Updated:
ಕಲ್ಲಿನ ಕೋಟೆ ಮಗ್ಗಲಲ್ಲಿ ಜಲಧಾಮ

ಮನೆ ಎಂಬುದು ಕಲ್ಲು, ಇಟ್ಟಿಗೆ, ಮರಳು, ಕಬ್ಬಿಣ... ಮೊದಲಾದ ನಿರ್ಜೀವ ವಸ್ತುಗಳಿಂದ ನಿರ್ಮಿಸಿದ ಭೌತಿಕ ಸಂರಚನೆಯಷ್ಟೇ ಆಗಿರದೆ ಕುಟುಂಬವೊಂದರ ನೆಮ್ಮದಿಯ ನೆಲೆಯೂ ಆಗಬೇಕು ಎಂಬುದು ಈವರೆಗೆ ಇದ್ದಂತಹ ಸಿದ್ಧಾಂತ. ಆದರೆ, ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ವೈಜ್ಞಾನಿಕ ಮತ್ತು ವ್ಯಾವಹಾರಿಕ ಉಳಿತಾಯವೂ ಇರಬೇಕು ಎನ್ನುವುದು ಜಾಣತನದ ಸಮನ್ವಯ ಸಿದ್ಧಾಂತ.ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಮನೆ ನಿರ್ಮಿಸುವ ಆಲೋಚನೆ ಅಂದುಕೊಂಡಷ್ಟು ಸುಲಭವಾಗಿರದು. ಕಡಿಮೆ ವೆಚ್ಚ ಮತ್ತು ಬುದ್ಧಿವಂತಿಕೆಯ ಬಂಡವಾಳಕ್ಕೆ ಹತ್ತಾರು ಸೂಕ್ಷ್ಮ ಮತ್ತು ಕಾಳಜಿಯ ಅಗತ್ಯವಿರುತ್ತದೆ. ಚಿತ್ರದುರ್ಗದ ಜಲತಜ್ಞ ಎನ್.ಜೆ.ದೇವರಾಜ ರೆಡ್ಡಿ ನಿರ್ಮಿಸಿಕೊಂಡಿರುವ ಮನೆ `ಜಲಧಾಮ~ ಇಂಥ ವೈಜ್ಞಾನಿಕ ತಳಹದಿಯ ಮಾದರಿಯಾಗಿದೆ.ಎರಡು ವರ್ಷಗಳ ಹಿಂದೆ ಇಲ್ಲಿನ ಮೆದೇಹಳ್ಳಿಯಲ್ಲಿ ನಿರ್ಮಿಸಿದ `ಜಲಧಾಮ~ದ ಒಳಗೆ 40 ಸಾವಿರ ಲೀಟರ್ ಸಾಮರ್ಥ್ಯದ ಮಳೆ ನೀರಿನ ಸಂಗ್ರಹ ತೊಟ್ಟಿ ಇರುವುದೇ ಇದರ ವಿಶೇಷ. ಇದು ಹಳೆಕಾಲದ ಮನೆಯ ವಠಾರದೊಳಗಿನ ಬಾವಿ ರೀತಿ. ಈ ನೀರು 2 ವರ್ಷಗಳಿಂದಲೂ ಬಳಕೆಯಾಗುತ್ತಿದೆ.ಚಿತ್ರದುರ್ಗ ಹೇಳಿ ಕೇಳಿ ಬಂಡೆಗಳ ಹೊದಿಕೆ ಹೊದ್ದ ಊರು. ಬರ, ಬಿಸಿಲಿನ ತಾಪ; ಅಂತಿಮವಾಗಿ ಕುಡಿಯುವ ನೀರಿಗೆ ತತ್ವಾರ ತಲೆದೋರುವ ಈ ನಗರದ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ನಿರ್ಮಿಸಿದ `ಜಲಧಾಮ~ಕ್ಕೆ ತಗುಲಿರುವ ಖರ್ಚು ರೂ 20 ಲಕ್ಷ.`ಏನಪ್ಪಾ 20 ಲಕ್ಷ ಬಹಳವಾಯಿತಲ್ಲಾ~ ಎನಿಸಬಹುದು. ಆದರೂ ಇಂಥದೊಂದು ವೈಜ್ಞಾನಿಕ ಲೆಕ್ಕಾಚಾರದಲ್ಲಿ ನಿರ್ಮಿಸಿದ ಮನೆಗೆ ಇದು ಕಡಿಮೆ ಖರ್ಚೇ ಸರಿ.

4.5 ಮೀಟರ್ ಎತ್ತರ, 3 ಮೀಟರ್ ಅಗಲದ ಈ ಮಳೆ ನೀರಿನ ಸಂಗ್ರಹ ತೊಟ್ಟಿ 12 ಜನರ ಕುಡಿಯುವ ನೀರಿನ ಅಗತ್ಯ ದೀರ್ಘ ಕಾಲದವರೆಗೆ ಪೂರೈಸುತ್ತದೆ.`ಮನೆಯೊಳಗೆ ತೊಟ್ಟಿ ನಿರ್ಮಿಸಿರುವುದರಿಂದ ಕೊಠಡಿಯ ವಾತಾವರಣ ಹೊರಗಿನ ತಾಪಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತದೆ. 2010ರಲ್ಲಿ ಸಂಗ್ರಹಿಸಲಾದ ಮಳೆ ನೀರು ಇಂದಿಗೂ ಬಳಕೆಯಾಗುತ್ತಿದೆ. ಕಳೆದ ವರ್ಷ ಬರ. ಸಮರ್ಪಕವಾಗಿ ಮಳೆಯಾಗಿರಲಿಲ್ಲ. ಹೀಗಾಗಿ `ಜಲಧಾಮ~ಕ್ಕೆ ಅಗತ್ಯದಷ್ಟು ನೀರು ಹರಿದುಬಂದಿರಲಿಲ್ಲ.

10ರಿಂದ 15 ಮಿ.ಮೀ. ಮಳೆಯಾದರೆ ಮಾತ್ರ ಮಳೆ ನೀರು ಸಂಗ್ರಹಣೆಗೆ ಯೋಗ್ಯ~ ಎನ್ನುವ ದೇವರಾಜ್, ತಮ್ಮ ಮನೆಯಲ್ಲಿ ಎಲ್ಲೂ ಅಕ್ವಾಗಾರ್ಡ್ ಇಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.`ಮಳೆ ನೀರಿಗೆ ಕ್ಲೋರಿನೇಷನ್ ಶುದ್ಧೀಕರಣದ ಅಗತ್ಯವೂ ಇಲ್ಲ. ಮಳೆ ನೀರಿನ ಗುಣಮಟ್ಟ ತಿಳಿಯಲು `ಎಚ್2ಎಸ್~ ಸ್ಟ್ರಿಪ್ ಪರೀಕ್ಷೆ ನಡೆಸುತ್ತೇವೆ. ಇದು ಜೈವಿಕ ವಿಧಾನದ ಲಿಟ್ಮಸ್ ಟೆಸ್ಟ್. ಮುಖ್ಯವಾಗಿ ಸಂಪಿನೊಳಗೆ ಬೆಳಕು-ಗಾಳಿ ಪ್ರವೇಶಿಸದಂತೆ ಮುಚ್ಚಳ ಮುಚ್ಚಿರಬೇಕು~ ಎನ್ನುತ್ತಾರೆ.ಆದಷ್ಟೂ ಮುಕ್ತವಾಗಿ ಗಾಳಿ-ಬೆಳಕು ದೊರೆಯುವಂತಾಗಲಿ ಎಂಬ ಉದ್ದೇಶದಿಂದ ಮನೆಯಲ್ಲಿ ಎಲ್ಲೂ ಅನಗತ್ಯ ಗೋಡೆ ನಿರ್ಮಿಸಿಲ್ಲ. ಮನೆಗೆ ಬೇಕಾಗುವ ಶೇ. 40ರಷ್ಟು ವಿದ್ಯುತ್ತನ್ನು ಸೌರಶಕ್ತಿಯಿಂದ ಪಡೆಯಲಾಗುತ್ತದೆ ಎನ್ನುತ್ತಾರೆ ದೇವರಾಜರೆಡ್ಡಿ.`ಇತ್ತೀಚೆಗೆ ಮನೆ ಕಟ್ಟುವ ಮುನ್ನ ಜಲಮರುಪೂರಣ ಮತ್ತು ಮಳೆ ನೀರು ಸಂಗ್ರಹದ ಕಾಳಜಿ ಹೆಚ್ಚುತ್ತಿದೆ. ಗ್ರಾಮ, ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಹಳಷ್ಟು ಕಠಿಣವಾಗಲಿದೆ~ ಎಂಬುದು ದೇವರಾಜ್ ಅವರ ಆತಂಕ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry