ಕಲ್ಲುನೆಲದಲ್ಲಿ ಕೃಷಿ ಸಾಹಸ

7

ಕಲ್ಲುನೆಲದಲ್ಲಿ ಕೃಷಿ ಸಾಹಸ

Published:
Updated:
ಕಲ್ಲುನೆಲದಲ್ಲಿ ಕೃಷಿ ಸಾಹಸ

“ಬರಡು ನೆಲದ ರೈತೂಗೆ ಎರಡು ಕಾಳು ಅಕ್ಕಿನೂ ಸಿಕ್ಕಲ್ಲ~ ಎಂಬ ನಾಣ್ಣುಡಿ ಮಲೆನಾಡಿನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಬರಡು ನೆಲದಲ್ಲಿ ಬೆಳೆ ಬೆಳೆಯಲಾರದೇ ರೈತ ಸೋಲುತ್ತಾನೆ ಎಂಬ ನಿಲುವು ಗಾದೆ ಮಾತು ಹುಟ್ಟಲು ಕಾರಣವಾಗಿರಬಹುದು. ಆದರೆ ತಾಲ್ಲೂಕಿನ ಕುನ್ನಹಳ್ಳಿ ಸಮೀಪದ ಅಂಬೇಡ್ಕರ್ ನಗರದ ರೈತ ಧರ್ಮಪಾಲ್ ಪತ್ನಿ ಗಾಯತ್ರಿ ಜೊತೆಗೂಡಿ  ಒಂದು ಎಕರೆ ಕಲ್ಲು ನೆಲದಲ್ಲಿ ಒಂದಿಂಚೂ ಜಾಗವನ್ನು ವ್ಯರ್ಥವಾಗಿ ಬಿಡದೇ ಬಾಳೆ, ಅಲಸಂಡೆ, ಬದನೆ, ಮೂಲಂಗಿ, ಸೋರೆಕಾಯಿ, ಸೌತೆಕಾಯಿ ಮುಂತಾದ ಹಲವು ಬಗೆಯ ತರಕಾರಿಗಳನ್ನು ಬೆಳೆದು ಲಾಭಗಳಿಸುತ್ತಿದ್ದಾರೆ.ಮಲೆನಾಡಿನಲ್ಲಿ ಹೊಸದಾಗಿ ಕಾಫಿ ತೋಟ ಮಾಡಲು ಕನಿಷ್ಠ ಮೂರರಿಂದ ನಾಲ್ಕು ವರ್ಷ ಕಾಫಿ ಗಿಡ ನೆಟ್ಟು ಕಾಯಬೇಕಾಗುತ್ತದೆ. ಕಾಫಿ ಗಿಡಗಳು ನಾಲ್ಕು ವರ್ಷದಾದ ಮೇಲೆ ಫಸಲು ನೀಡಲು ಪ್ರಾರಂಭಿಸುತ್ತದೆ. ಆದರೆ ಅಲ್ಲಿಯವರೆಗೂ ರೈತನಿಗೆ ಯಾವುದೇ ಆದಾಯವಿರುವುದಿಲ್ಲ. ಅದಕ್ಕಾಗಿ ಕಾಫಿ ತೋಟ ಮಾಡುವ ರೈತರು ಕಾಫಿ ಗಿಡವನ್ನು ನೆಟ್ಟು ಉಳಿಯುವ ಮಧ್ಯ ಜಾಗದಲ್ಲಿ ಬಾಳೆಗಳನ್ನು ನೆಟ್ಟು ಅದರ ಮಧ್ಯೆ ಉಳಿಯುವ ಖಾಲಿ ಜಾಗದಲ್ಲಿ ತರಕಾರಿ ಬೆಳೆಗಳನ್ನು ಬೆಳೆಯಬಹುದು. ಇದರಿಂದ ಕಾಫಿ ಗಿಡಗಳಿಗೆ ಮಾಡುವ ಆರೈಕೆಯ ಮೂಲಕ ಮಿಶ್ರಬೆಳೆಯ ಲಾಭ ಪಡೆಯಬಹುದು ಎಂಬುದನ್ನು ಧರ್ಮಪಾಲ್ ತಿಳಿಸಿಕೊಟ್ಟಿದ್ದಾರೆ.ಧರ್ಮಪಾಲ್ ಅವರ ಒಂದು ಎಕರೆ ಕಲ್ಲು ಜಾಗದಲ್ಲಿ ಬಾಳೆ ಗುಂಡಿ ತೋಡಲು ಒಂದು ಗುಂಡಿಗೆ 15 ರೂಪಾಯಿ ನೀಡಿದ್ದು, ಬಾಳೆತೋಟದಲ್ಲಿ ಬೆಳೆದಿರುವ ಅಲಸಂಡೆಯಿಂದ ಬಾಳೆಗುಂಡಿ ನಿರ್ಮಾಣದ ಖರ್ಚು ಆದಾಯ ರೂಪದಲ್ಲಿ ಬಂದಿದೆ. ಇನ್ನೂ ಈಗ ಫಲ ನೀಡಲು ಸಿದ್ಧವಾಗಿರುವ ಬದನೆಯಿಂದ ಬಾಳೆ ಕೃಷಿಯ ಖರ್ಚು ನೀಗಬಹುದಾಗಿದ್ದು, ಬಾಳೆಯನ್ನು ಉಚಿತವಾಗಿ ಬೆಳೆದಂತಾಗುತ್ತದೆ. ಬಾಳೆ ಫಸಲು ಬರುವ ವೇಳೆಗೆ ಇದರ ನಡುವೆ ನೆಟ್ಟಿರುವ ಕಾಫಿ ಮತ್ತು ಸಿಲ್ವರ್ ಗಿಡಗಳು ಬೆಳವಣಿಗೆ ಸಾಧಿಸುವುದರಿಂದ ನಿರಂತರವಾಗಿ ಆದಾಯ ದೊರೆಯುತ್ತದೆ.“ಅನಾದಿ ಕಾಲದಿಂದಲೂ ಇಲ್ಲಿ ಕಲ್ಲು ಬಂಡೆಯ ಜಾಗವಾದ್ದರಿಂದ ಖಾಲಿ ಬಿಡಲಾಗಿತ್ತು. ಈ ಸಾಲಿನಲ್ಲಿ ಯಂತ್ರೋಪಕರಣ ಬಳಸಿ ಉಳುಮೆ ಮಾಡಿ ಸಾವಯವ ಕೃಷಿಯಡಿ ಕಾಫಿ, ಸಿಲ್ವರ್, ಬಾಳೆಯನ್ನು ಪ್ರಮುಖ ಬೆಳೆಯಾಗಿ ಮತ್ತು ವಿವಿಧ ತರಕಾರಿಗಳನ್ನು ಉಪ ಬೆಳೆಗಳಾಗಿ ಬೆಳೆದಿದ್ದೇನೆ. ತರಕಾರಿ ಮಾರಾಟಕ್ಕೆ ಪಟ್ಟಣದಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದ್ದರಿಂದ ಅಲ್ಪ ಬೆಲೆಗೆ ಮಾರುವ ಸ್ಥಿತಿ ಇದ್ದರೂ ತರಕಾರಿಯಿಂದ ಲಾಭ ಬಂದಿದೆ. ಸೂಕ್ತ ಮಾರುಕಟ್ಟೆ ಒದಗಿಸಿದರೆ  ತರಕಾರಿ ಬೆಳೆಯಲು ತಾಲ್ಲೂಕಿನ ರೈತರಿಗೆ ನೆರವಾಗುತ್ತದೆ~ ಎನ್ನುತ್ತಾರೆ ಪ್ರಗತಿ ಪರ ರೈತ ಧರ್ಮಪಾಲ್. “ಲಾಭ ಎಂಬುದು ಸಾಧಕನ ಸ್ವತ್ತು; ನಷ್ಟ ಸೋಮಾರಿಯ ಸ್ವತ್ತು ಎಂಬ ಮಾತನ್ನು ಎಲ್ಲಾ ರೈತರು ಮನಗಂಡರೆ ಕೃಷಿ ಕ್ಷೇತ್ರದಲ್ಲಿ ನಷ್ಟ ಎಂಬ ಮಾತೇ ಬರುವುದಿಲ್ಲ~ ಎನ್ನುತ್ತಾರೆ ಗಾಯತ್ರಿ ಧರ್ಮಪಾಲ್.

ಸುತ್ತಮುತ್ತಲಿನ ಹಲವಾರು ರೈತರು, ಕೃಷಿಕ ಸಮಾಜದ ಒಡನಾಡಿಗಳು, ಸಂಘಸಂಸ್ಥೆಗಳು ಭೇಟಿ ನೀಡಿ ಮಾದರಿ ಬೆಳೆಗೆ ಪ್ರಶಂಸೆ ವ್ಯಕ್ತಪಡಿಸುತ್ತಿರುವುದು ಇತರೆ ರೈತರಿಗೆ ಕೃಷಿಯಲ್ಲಿ ತೊಡಗಲು ಆತ್ಮ ವಿಶ್ವಾಸ ಮೂಡಿಸಿದೆ. ಸಂಪರ್ಕ ಸಂಖ್ಯೆ: 9449996664

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry